ADVERTISEMENT

ಸೌದಿ ಅರೇಬಿಯಾದ ರಾಯಭಾರಿಯನ್ನು ಹನಿಟ್ರ್ಯಾಪ್ ಮಾಡಿದರೇ ಬಾಂಗ್ಲಾದ ಈ ಮಾಡೆಲ್?

ಏಜೆನ್ಸೀಸ್
Published 14 ಏಪ್ರಿಲ್ 2025, 12:45 IST
Last Updated 14 ಏಪ್ರಿಲ್ 2025, 12:45 IST
<div class="paragraphs"><p>ಮೇಘನಾ ಅಲಂ</p></div>

ಮೇಘನಾ ಅಲಂ

   

ಬೆಂಗಳೂರು: ಬಾಂಗ್ಲಾದೇಶದ ಖ್ಯಾತ ಮಾಡೆಲ್ ಹಾಗೂ ನಟಿ ಮೇಘನಾ ಅಲಂ ಅವರು ಬಾಂಗ್ಲಾದೇಶದಲ್ಲಿನ ಸೌದಿ ಅರೇಬಿಯಾದ ರಾಯಭಾರಿಯನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಡಾಕಾ ಮೆಟ್ರೊಪಾಲಿಟಿನ್ ಪೊಲೀಸರು, ‘ಅವರು ಬಾಂಗ್ಲಾದೇಶದ ರಾಜತಾಂತ್ರಿಕ ಸಂಬಂಧಗಳಿಗೆ ಅಡ್ಡಿಯನ್ನುಂಟುಮಾಡಿದ್ದಾರೆ, ಸುಳ್ಳುಗಳನ್ನು ಹರಡಿದ್ದಾರೆ’ ಎಂಬ ಆರೋಪದ ಮೇಲೆ ಮೇಘನಾ ಅಲಂ ಅವರನ್ನು ಬಂಧಿಸಿದ್ದಾರೆ. ಈ ವಿಚಾರ ಇದೀಗ ಬಾಂಗ್ಲಾದೇಶದಲ್ಲಿ ಸದ್ದು ಮಾಡಿದೆ.

ADVERTISEMENT

ಏಪ್ರಿಲ್ 9 ರಂದು ನಟಿಯ ಬಂಧನವಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರಂಭದಲ್ಲಿ ಮೇಘನಾ ಅವರು ಈ ವಿಚಾರದ ಕುರಿತು ಸ್ಪಷ್ಟನೆ ನೀಡಿ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೊ ಮಾಡಿದ್ದರು. ಆದರೆ, ಆ ವಿಡಿಯೊವನ್ನು ಕೆಲಹೊತ್ತಿನ ನಂತರ ಅಳಿಸಿಹಾಕಲಾಗಿದೆ ಎಂದು ವರದಿಗಳು ಹೇಳಿವೆ.

ಮೇಘನಾ ಅವರ ತಂದೆ ಭದ್ರುಲ್ ಅಲಂ ಅವರು ಈ ವಿಚಾರವಾಗಿ ಮಾಧ್ಯಮಗಳಿಗೆ ಮಾತನಾಡಿದ್ದು, ‘ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಸೌದಿ ಅರೇಬಿಯಾದ ರಾಯಭಾರಿ ಅವರೇ ನನ್ನ ಮಗಳ ಜೊತೆ ಸಂಬಂಧದಲ್ಲಿದ್ದರು. ಆದರೆ, ಆ ರಾಯಭಾರಿಗೆ ಈಗಾಗಲೇ ಮದುವೆ ಆಗಿ ಎರಡು ಮಕ್ಕಳಿವೆ ಎಂದು ಕೆಲದಿನಗಳ ಹಿಂದೆ ಮಗಳಿಗೆ ಗೊತ್ತಾಗಿತ್ತು. ಹೀಗಾಗಿ ಮಗಳು ಮೇಘನಾ ರಾಯಭಾರಿ ಅಧಿಕಾರಿಯಿಂದ ದೂರವಾಗಿದ್ದಾಳೆ’ ಎಂದು ಹೇಳಿದ್ದಾರೆ.

‘ಸೌದಿ ಅರೇಬಿಯಾದ ರಾಯಭಾರಿಯ ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗಿ ಪೊಲೀಸರು ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಮೇಘನಾ ಅಲಂ ಬಂಧನದ ವಿರುದ್ಧ ಹಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಹಣಕಾಸಿನ ನೆರವು ಹಾಗೂ ಮಾನವೀಯ ನೆರವನ್ನು ನೀಡುವಲ್ಲಿ ಸೌದಿ ಅರೇಬಿಯಾ ಪ್ರಮುಖ ಸ್ಥಾನದಲ್ಲಿದೆ. ಅಲ್ಲದೇ ಸುಮಾರು 20 ಲಕ್ಷ ಬಾಂಗ್ಲಾದೇಶದ ಜನ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್‌ ಸಹ ಆಗಿರುವ ಮೇಘನಾ ಅಲಂ, 2020 ರಲ್ಲಿ ‘ಮಿಸ್ ಅರ್ಥ್ ಬಾಂಗ್ಲಾದೇಶ’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಅವರು ‘ಮಿಸ್ ಬಾಂಗ್ಲಾದೇಶ’ ಫೌಂಡೇಶನ್‌ನ ಅಧ್ಯಕ್ಷೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.