ADVERTISEMENT

ದೀಪಾವಳಿ: ನೌಕರರಿಗೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ

ಪಿಟಿಐ
Published 17 ಅಕ್ಟೋಬರ್ 2025, 10:54 IST
Last Updated 17 ಅಕ್ಟೋಬರ್ 2025, 10:54 IST
<div class="paragraphs"><p>ಹರಿಯಾಣದ ಪಂಚಕುಲಾದ ಫಾರ್ಮಾ ಕಂಪನಿ&nbsp;ಮಿಟ್ಸ್‌ಕಾರ್ಟ್‌ನ ಮಾಲೀಕರ ಭಾಟಿಯಾ ಅವರು ನೌಕರರಿಗೆ ಕಾರುಗಳ ಕೀಲಿ ಹಸ್ತಾಂತರಿಸಿದರು</p></div>

ಹರಿಯಾಣದ ಪಂಚಕುಲಾದ ಫಾರ್ಮಾ ಕಂಪನಿ ಮಿಟ್ಸ್‌ಕಾರ್ಟ್‌ನ ಮಾಲೀಕರ ಭಾಟಿಯಾ ಅವರು ನೌಕರರಿಗೆ ಕಾರುಗಳ ಕೀಲಿ ಹಸ್ತಾಂತರಿಸಿದರು

   

ಎಕ್ಸ್ ಚಿತ್ರ

ಚಂಡೀಗಡ: ಉದ್ಯೋಗಿಗಳ ಕಾರ್ಯಗಳನ್ನು ಗುರುತಿಸುವ ವಿನೂತನ ಮಾದರಿಯನ್ನು ಕಳೆದ ಕೆಲ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಔಷಧ ತಯಾರಿಕಾ ಕಂಪನಿಯ ಮಾಲೀಕ ಎಂ.ಕೆ. ಭಾಟಿಯಾ, ಈ ದೀಪಾವಳಿಗೂ ಕಂಪನಿ ನೌಕರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 

ADVERTISEMENT

ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ಭಾಟಿಯಾ ಅವರು, ಹರಿಯಾಣದ ಪಂಚಕುಲಾದಲ್ಲಿ ಮಿಟ್ಸ್‌ಕಾರ್ಟ್‌ ಎಂಬ ಕಂಪನಿ ಹೊಂದಿದ್ದಾರೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ನೌಕರರಿಗೆ ದುಬಾರಿ ಉಡುಗೊರೆ ನೀಡುವ ಪರಿಪಾಠವನ್ನು ನಡೆಸಿಕೊಂಡು ಬಂದಿರುವ ಅವರು, ಈ ಬಾರಿಯೂ 12 ನೌಕರರಿಗೆ ಟಾಟಾ ಪಂಚ್ ಕಾರನ್ನು ಉಡೊಗರೆಯಾಗಿ ನೀಡಿದ್ದಾರೆ. ಆ ಮೂಲಕ ಈವರೆಗೂ 51 ಕಾರುಗಳನ್ನು ಅವರು ಉಡುಗೊರೆಯಾಗಿ ನೀಡಿದ್ದಾರೆ.

ಕಾರನ್ನು ಉಡುಗೊರೆಯಾಗಿ ನೀಡುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬಣ್ಣ ಬಣ್ಣದ ಟಾಟಾ ಪಂಚ್‌ ಕಾರುಗಳನ್ನು ಸ್ವೀಕರಿಸಿದ ಹೆಮ್ಮೆಯ ನೌಕರರು ಮಳಿಗೆಯಿಂದ ಕಂಪನಿವರೆಗೂ ಜಾಥಾ ನಡೆಸಿದ್ದಾರೆ.  ಹೀಗೆ ಉಡುಗೊರೆ ಪಡೆದ ತಂಡದಲ್ಲಿ ವ್ಯವಸ್ಥಾಪಕರಿಂದ ಹಿಡಿದು ಕಚೇರಿ ಸ್ವಚ್ಛಗೊಳಿಸುವ ನೌಕರರೂ ಇರುವುದು ವಿಶೇಷ.

‘ಫಾರ್ಮಾ ಕಂಪನಿಯ ಬೆನ್ನುಲುಬೇ ನನ್ನ ನೌಕರರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯೇ ನಮ್ಮ ಯಶಸ್ಸಿನ ಅಡಿಪಾಯ. ಹೀಗಾಗಿ ಅವರ ಶ್ರಮವನ್ನು ಗುರುತಿಸಿ, ಅವರನ್ನು ಉತ್ತೇಜಿಸುವುದೇ ನನ್ನ ಗುರಿ. ಇದರ ಮೂಲಕ ಅವರನ್ನು ವೃತ್ತಿ ಜೀವನದ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸವಿದೆ’ ಎಂದು ಭಾಟಿಯಾ ಹೇಳಿದ್ದಾರೆ.

‘ಕಾರು ಉಡುಗೊರೆಯಾಗಿ ನೀಡುತ್ತಿರುವುದು ಪ್ರಚಾರದ ಉದ್ದೇಶವಲ್ಲ. ತಂಡವನ್ನು ಇನ್ನಷ್ಟು ಸದೃಢಗೊಳಿಸುವ ಹಾಗೂ ಕುಟುಂಬ ರೀತಿಯ ಬಾಂಧವ್ಯ ವೃದ್ಧಿಸುವ ಕ್ರಮ ಇದಾಗಿದೆ. ತಂಡ ಸಂತುಷ್ಟವಾಗಿದ್ದರೆ, ಕಂಪನಿಯು ಸಹಜವಾಗಿ ಬೆಳವಣಿಗೆ ಕಾಣಲಿದೆ’ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಎಂ.ಕೆ. ಭಾಟಿಯಾ ಅವರ ದೀಪಾವಳಿ ಉಡುಗೊರೆಯ ವಿಡಿಯೊಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಆಧುನಿಕ ಕಾರ್ಪೊರೇಟ್ ಸಂಸ್ಕೃತಿಯ ಮೈಲಿಗಲ್ಲಿದು’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.