ADVERTISEMENT

ಜನರಲ್ ನರವಣೆ ಪುಸ್ತಕ ಬಿಡುಗಡೆಯಾಗಿತ್ತೆ?: ಸಾಮಾಜಿಕ ಮಾಧ್ಯಮದಲ್ಲಿ ಹೀಗೊಂದು ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 11:46 IST
Last Updated 11 ಫೆಬ್ರುವರಿ 2026, 11:46 IST
<div class="paragraphs"><p>ಜನರಲ್ ಮುಕುಂದ ಮನೋಹರ ನರವಣೆ ಅವರದ್ದು ಎನ್ನಲಾದ ಪುಸ್ತಕ ಪ್ರದರ್ಶಿಸಿದ ರಾಹುಲ್ ಗಾಂಧಿ</p></div>

ಜನರಲ್ ಮುಕುಂದ ಮನೋಹರ ನರವಣೆ ಅವರದ್ದು ಎನ್ನಲಾದ ಪುಸ್ತಕ ಪ್ರದರ್ಶಿಸಿದ ರಾಹುಲ್ ಗಾಂಧಿ

   

ನವದೆಹಲಿ: ವಿವಾದ ಸ್ವರೂಪ ಪಡೆದಿರುವ ಸೇನೆಯ ಮಾಜಿ ಮುಖ್ಯಸ್ಥ ಮನೋಜ್ ಮುಕುಂದ ನರವಣೆ ಅವರ ‘ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿ’ ಎಂಬ ಕೃತಿಯನ್ನು ನಾವು ಮುದ್ರಿಸಿಯೇ ಇಲ್ಲ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ಹೇಳಿರುವ ಬೆನ್ನಲ್ಲೇ, 2023ರ ನರವಣೆಯವರ ಹಳೆಯ ಟ್ವೀಟ್‌ ಒಂದು ಈಗ ಮತ್ತೆ ಸುದ್ದಿಯಲ್ಲಿದೆ.

2023ರ ಡಿ. 15ರಂದು ಸ್ವತಃ ನರವಣೆ ಅವರೇ ಟ್ವೀಟ್‌ ಮಾಡಿ, ‘ನನ್ನ ಪುಸ್ತಕ ಲಭ್ಯವಿದೆ, ಲಿಂಕ್‌ ಅನ್ನು ಫಾಲೊ ಮಾಡಿ. ಜೈಹಿಂದ್‌’ ಎಂದು ಹೇಳಿರುವುದು ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.

ADVERTISEMENT

‘ನರವಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್‌ ಆಫ್‌ ಡೆಸ್ಟಿನಿ’ ಪುಸ್ತಕ ಪ್ರಕಟಣೆಗೊಂಡಿಲ್ಲ’ ಎಂದು ಮಂಗಳವಾರ ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ ನೀಡಿತ್ತು. 

ತಮ್ಮ ಪುಸ್ತಕದ ಕುರಿತು ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ನರವಣೆ, ಪ್ರಕಾಶನ ಸಂಸ್ಥೆ ‘ಪೆಂಗ್ವಿನ್‌ ಇಂಡಿಯಾ’ದ ಹೇಳಿಕೆಯನ್ನು ಮರು ಹಂಚಿಕೊಂಡು, 'ಇದು ಪುಸ್ತಕದ ಸದ್ಯದ ಸ್ಥಿತಿ’ ಎಂದಿದ್ದರು.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಪುಸ್ತಕವನ್ನು ಖರೀದಿಸಿ ಎಂದು ನರವಣೆ ಅವರು 2023ರಲ್ಲಿ ಟ್ವೀಟ್ ಮಾಡಿದ್ದರು. ಪುಸ್ತಕ ಪ್ರಕಟಗೊಂಡಿಲ್ಲ ಎಂದು ಪೆಂಗ್ವಿನ್‌ ಇಂಡಿಯಾ ಈಗ ಹೇಳುತ್ತಿದೆ. ಯಾರು ಸುಳ್ಳು ಹೇಳುತ್ತಿರುವುದು’ ಎಂದು ಪ್ರಶ್ನಿಸಿದ್ದರು.

ಇದೀಗ ನೆಟ್ಟಿಗರು ಇದಕ್ಕೆ ವ್ಯಾಪಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಏ.ಕೆ.ಕುಕ್ಕಿಲ ಎಂಬುವವರು ಪ್ರತಿಕ್ರಿಯಿಸಿ, ‘ದೆಹಲಿಯ ಪುಸ್ತಕ ಅಂಗಡಿಯಲ್ಲಿ ಈ ಪುಸ್ತಕಗಳು ಇದ್ದವು. ಇದೀಗ ಅವನ್ನೆಲ್ಲಾ ಹಿಂದಕ್ಕೆ ಪಡೆಯಲಾಗಿದೆ ಎಂದು ಮಳಿಗೆಯ ಮಾಲೀಕ ಹೇಳಿರುವುದು ವರದಿಯಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳ ಮೂಲಕ ಪುಸ್ತಕದ ಪಿಡಿಎಫ್‌ ಪ್ರತಿಗಳು ಹಂಚಿಕೊಳ್ಳಲಾಗುತ್ತಿದೆ. ಕೃತಿಯ ಕುರಿತು ಹಿಂದೆ ಹಲವರು ಹೊಗಳಿದ್ದೂ ಇದೆ’ ಎಂದು ಬರೆದುಕೊಂಡಿದ್ದಾರೆ.

ದೀಪಕ್ ಬನ್ಸಲ್ ಎಂಬುವವರು, ‘ಇಲ್ಲಿ ಪದಗಳ ಬಳಕೆಯಿಂದ ಗೊಂದಲ ಉಂಟಾಗಿದೆ. ಪೆಂಗ್ವಿನ್‌ ಸಂಸ್ಥೆಯು, ಮುಂಗಡ ಬುಕ್ಕಿಂಗ್ ತೆರೆದಿದೆ ಎಂದಿದ್ದರೆ, ಜನರಲ್ ನರವಣೆ ಅವರು, ಕೃತಿ ಲಭ್ಯವಿದೆ ಎಂದು ಬರೆದುಕೊಂಡಿದ್ದು ಸಮಸ್ಯೆ ಸೃಷ್ಟಿಸಿದೆ’ ಎಂದಿದ್ದಾರೆ.

‘ಫೋರ್ ಸ್ಟಾರ್‌ ಆಫ್ ಡೆಸ್ಟಿನಿ’ ಎಂಬ ಆತ್ಮಚರಿತ್ರೆಯನ್ನು ಜನರಲ್ ಮನೋಜ್ ಮುಕುಂದ ನರವಣೆ ಅವರು ರಚಿಸಿದ್ದಾರೆ. ಆದರೆ ಇದು ಪ್ರಕಟಗೊಂಡಿಲ್ಲ. 2020ರಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಚೀನಾದೊಂದಿಗೆ ನಡೆದ ಭಾರತೀಯ ಸೇನೆಯ ಸಂಘರ್ಷದ ಸನ್ನಿವೇಶ ಈ ಪುಸ್ತಕದಲ್ಲಿದೆ. ಲೇಖಕರೂ ಆಗಿರುವ ಜನರಲ್ ನರವಣೆ ಹಾಗೂ ಕೇಂದ್ರ ಸರ್ಕಾರದ ನಾಯಕರೊಂದಿಗೆ ನಡೆದ ಮಾತುಕತೆಗಳಿವೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಮಾಲೋಚನೆಯ ನಂತರ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ತಮಗೆ ಸರಿಯೆನ್ನಿಸಿದ್ದನ್ನು ಮಾಡಿ’ ಎಂಬ ಹೇಳಿಕೆ ಇರುವ ವಿವರಗಳು ಪುಸ್ತಕದಲ್ಲಿ ಇವೆ ಎಂದು ಹೇಳಲಾಗಿದ್ದು, ಆ ವಿವರಗಳೇ ವಿವಾದಕ್ಕೆ ಕಾರಣವಾಗಿವೆ.

ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ ಹಾಗೂ ಭಾರತದಲ್ಲಿ ಪ್ರಕಟಣೆಗೆ ಈವರೆಗೆ ಯಾಕೆ ಅನುಮತಿ ನೀಡಲಾಗಿಲ್ಲ ಎನ್ನುವುದಕ್ಕೆ ಉತ್ತರ ದೊರೆತಿಲ್ಲ.  ‘ಅಪ್ರಕಟಿತ ಪುಸ್ತಕ’ದ ಆಯ್ದ ಭಾಗಗಳನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಪ್ರಸ್ತಾಪಿಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಇದೇ ವಿಚಾರಕ್ಕಾಗಿ ಸದನದಲ್ಲಿ ಅಡಚಣೆ ಉಂಟುಮಾಡಿದ ಆರೋಪದಲ್ಲಿ 8 ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದು ವಿವಾದವನ್ನು ಮಾತ್ರವಲ್ಲ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.