ADVERTISEMENT

ಬಕ್ರೀದ್‌ಗೆ ಮಾರಾಟವಾದ ಮೇಕೆ: ಮಾಲೀಕನನ್ನು ತಬ್ಬಿ ಕಣ್ಣೀರಿಟ್ಟ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2022, 2:18 IST
Last Updated 20 ಜುಲೈ 2022, 2:18 IST
ಮೇಕೆ ಮಾಲೀಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)
ಮೇಕೆ ಮಾಲೀಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)   

ನವದೆಹಲಿ: ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿರುವುದು ಸಹಜ. ನಾಯಿ, ಬೆಕ್ಕು, ಕುರಿ, ಕೋಳಿ, ಎಮ್ಮೆ, ಹಸು, ಎತ್ತು, ಮೇಕೆ ಮುಂತಾದ ಪ್ರಾಣಿಗಳು ತಮ್ಮ ಮಾಲೀಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತವೆ. ಮನುಷ್ಯರಂತೆ ಮಾತನಾಡಲು ಬರುವುದಿಲ್ಲ ಎಂಬುದನ್ನೊಂದು ಬಿಟ್ಟರೆ ಮತ್ತೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.

ಸಾಮಾನ್ಯವಾಗಿ ಸಂತೆ, ಜಾತ್ರೆಗಳಲ್ಲಿ ಸಾಕು ಪ್ರಾಣಿಗಳ ವ್ಯಾಪಾರ ಸರ್ವೇ ಸಾಮಾನ್ಯ. ಹಾಗೆಯೇ ಅವುಗಳ ಗಾತ್ರ, ಎತ್ತರ, ವಯಸ್ಸಿನ ಆಧಾರದ ಮೇಲೆ ದಲ್ಲಾಳಿಗಳು ಅಥವಾ ನೇರ ವ್ಯಾಪಾರಸ್ಥರು ಮಾರಾಟ ಮಾಡುವುದು, ಕೊಂಡುಕೊಳ್ಳುವುದನ್ನು ಮಾಡುತ್ತಾರೆ. ಆದರೆ, ಹೀಗೆ ವ್ಯಾಪಾರ ನಡೆಯುವ ಸ್ಥಳದಲ್ಲಿ ಒಂದು ವಿಶೇಷತೆ ಹಾಗೂ ಮನಕಲಕುವ ಘಟನೆಯೊಂದು ನಡೆದಿದೆ.

ಇತ್ತೀಚೆಗಷ್ಟೇ ಬಕ್ರೀದ್ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಮಾಲೀಕರೊಬ್ಬರು ಮೇಕೆಯೊಂದನ್ನು ಮಾರಾಟ ಮಾಡಲು ಮುಂದಾದ ಸಂದರ್ಭದಲ್ಲಿ ಮೇಕೆಮಾಲೀಕನನ್ನು ಬಿಟ್ಟು ಹೋಗದೆ, ಆತನನ್ನು ತಬ್ಬಿಕೊಂಡು ಜೋರಾಗಿ ಕೂಗಿದೆ.

ADVERTISEMENT

ವ್ಯಕ್ತಿಯೊಬ್ಬರು ಮೇಕೆಯನ್ನು ಖರೀದಿಸಲು ಮುಂದೆ ಬಂದಾಗ ಈ ಘಟನೆ ನಡೆದು ನೆರೆದಿದ್ದವರ ಮನಕಲಕುವಂತೆ ಮಾಡಿದೆ. ಮೇಕೆಯನ್ನು ಎಷ್ಟೇ ಸಮಾಧಾನ ಪಡಿಸಿದರೂ ಮಾಲೀಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಾ ಕೂಗುವುದನ್ನು ನಿಲ್ಲಿಸಲೇ ಇಲ್ಲ.

ಮನುಷ್ಯರಂತೆಯೇ ಮೇಕೆ ಅಳುತ್ತಿದ್ದುದನ್ನು ಕಂಡು ಮಾರುಕಟ್ಟೆಯಲ್ಲಿದ್ದವರು ಬೆರಗಾಗಿದ್ದಾರೆ. ಮೇಕೆಯ ಪ್ರೀತಿಯನ್ನು ಕಂಡ ಮಾಲೀಕಕೂಡ ಕಣ್ಣೀರು ಸುರಿಸಿದ್ದಾರೆ.

ಮೇಕೆ ಅಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕಣ್ಣೀರು ಒರೆಸಲು ಮುಂದಾಗುತ್ತಾರೆ. ಆದರೆ, ಮೇಕೆ ಅಳುತ್ತಲೇ ಇತ್ತು. ಸ್ವಲ್ಪ ಸಮಯದ ನಂತರ ಮಾಲೀಕರು ಹಣವನ್ನು ತೆಗೆದುಕೊಂಡು ಭಾರವಾದ ಹೃದಯದಿಂದ ಮೇಕೆಯನ್ನು ಬಿಟ್ಟುಕೊಟ್ಟಿದ್ದಾರೆ. ಈ ಸನ್ನಿವೇಶ ಮಾರುಕಟ್ಟೆಯಲ್ಲಿದ್ದವರನ್ನು ಭಾವನಾತ್ಮಕವಾಗಿಸಿದೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಮನುಷ್ಯ –ಪ್ರಾಣಿಗಳ ನಡುವಿನ ಬಾಂಧವ್ಯದ ಕುರಿತು ಕಾಮೆಂಟ್ ಮಾಡುತ್ತಿದ್ದಾರೆ.

ರಾಮಸುಬ್ರಮಣಿಯನ್ ವಿ. ಹರಿಕುಮಾರ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಮಾರಾಟ ಮಾಡಲು ತಂದ ಮೇಕೆ ಮಾಲೀಕನನ್ನು ಅಪ್ಪಿಕೊಂಡು ಮನುಷ್ಯರಂತೆ ಅಳುತ್ತಿರುವ ದೃಶ್ಯ ಮನಕಲುಕುವಂತಿದೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.