ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ
ಬೆಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹಾಗೂ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳು ತೊಂದರೆಗೆ ಸಿಲುಕುವುದನ್ನು ನೋಡುತ್ತಿರುತ್ತೇವೆ. ಇದೀಗ ಇಂತಹದ್ದೇ ಘಟನೆ ಈಚೆಗೆ ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು ನೋಡುಗರ ಮೈಜುಂ ಎನ್ನುವಂತೆ ಮಾಡುತ್ತದೆ.
ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಡಾಲ್ ಹೌಸಿ ಬಳಿ ಪ್ರವಾಸಿಗರನ್ನು ಕರೆ ತಂದಿದ್ದ ಟೆಂಪೊ ಟ್ರಾವೆಲರ್ ಒಂದನ್ನು ಅದರ ಚಾಲಕ ದಿಬ್ಬದ ಮೇಲೆ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದಾನೆ. ಇದೇ ವೇಳೆ ಕೆಳಗೆ ಇಳಿದಿದ್ದ ಆ ವಾಹನದ ಪ್ರವಾಸಿಗರು ವಾಹನ ಹತ್ತುತ್ತಿದ್ದರು. ಕೆಲವರು ಆಗಲೇ ಅದರಲ್ಲಿ ಹತ್ತಿ ಕೂತಿದ್ದರು.
ಆಗ ಇದ್ದಕ್ಕಿದ್ದಂತೆ ಟೆಂಪೊ ಟ್ರಾವೆಲರ್ ಹಿಮ್ಮುಖವಾಗಿ ಚಲಿಸಿ ಕಣಿವೆಗೆ ಉರುಳಿ ಬೀಳಲು ಹೊರಟಿತ್ತು. ವಾಹನದೊಳಗೆ ಇದ್ದ ಪ್ರವಾಸಿಗರು ಗಾಬರಿಯಿಂದ ಪ್ರಾಣವನ್ನೂ ಲೆಕ್ಕಿಸದೇ ಟೆಂಪೊದಿಂದ ಕೆಳಗೆ ಜಿಗಿದರು. ಆದರೆ, ಅದೃಷ್ಟವಶಾತ್ ಕಣಿವೆಗೆ ಬೀಳುವ ಸಮಯದಲ್ಲಿ ಮರವೊಂದಕ್ಕೆ ತಾಗಿದ ಟೆಂಪೊ ಅಲ್ಲಿಯೇ ನಿಂತಿತು.
ಈ ಘಟನೆ ಅಲ್ಲಿಯೇ ಇದ್ದ ಟವರ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪಿಟಿಐ ವಿಡಿಯೊ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.