ADVERTISEMENT

ಪೌರತ್ವ ಕಾಯ್ದೆ ಟೀಕಿಸಿದ ಐಎಎಸ್‌ ಅಧಿಕಾರಿ ಟಿನಾ ಡಾಬಿ; ಇದು 'ಫೇಕ್‌' ಪೇಜ್‌ ಕೆಲಸ

ಏಜೆನ್ಸೀಸ್
Published 18 ಡಿಸೆಂಬರ್ 2019, 7:03 IST
Last Updated 18 ಡಿಸೆಂಬರ್ 2019, 7:03 IST
ಐಎಎಸ್ ಅಧಿಕಾರಿ ಟಿನಾ ಡಾಬಿ – ಚಿತ್ರ ಕೃಪೆ: ಫೇಸ್‌ಬುಕ್‌ ಪುಟ
ಐಎಎಸ್ ಅಧಿಕಾರಿ ಟಿನಾ ಡಾಬಿ – ಚಿತ್ರ ಕೃಪೆ: ಫೇಸ್‌ಬುಕ್‌ ಪುಟ   

ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸುವ ಬಗ್ಗೆ ದೇಶದಾದ್ಯಂತ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಫೇಸ್‌ಬುಕ್‌ನಲ್ಲಿ ಐಎಎಸ್‌ ಅಧಿಕಾರಿ ಟಿನಾ ಡಾಬಿ ಅವರ ಹೆಸರಿನಲ್ಲಿ ನಕಲಿ ಪುಟ ತೆರೆದಿರುವ ದುಷ್ಕರ್ಮಿಗಳು ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

'ಐಎಎಸ್‌ ಟಿನಾ ಡಾಬಿ (IAS Teena Dabi)' ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸಲಾಗಿದೆ. 'ಮಗಳು ಓದುವುದಕ್ಕಾಗಿ ಬಂದಿದ್ದಳು, ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಬಂದಿತು, ಹಾಗೂ ಮಗಳುಮನೆಗೆ ಮರಳುತ್ತಿದ್ದಾಳೆ...' ಹೀಗೆ ಹಿಂದಿ ಭಾಷೆಯಲ್ಲಿ ಟೀಕೆ ಮಾಡಿರುವ ಫೋಸ್ಟ್‌ ಮಂಗಳವಾರ ವೈರಲ್‌ ಆಗಿತ್ತು. ಟಿನಾ ಅವರ ಪೋಸ್ಟ್‌ ಎಂದೇ ಭಾವಿಸಿರುವ ನೂರಾರು ಜನರಹಲವು ರೀತಿ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.

ಟಿನಾ ಡಾಬಿ ಅವರ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಪುಟ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಐಎಎಸ್‌ ಆಯ್ಕೆ ಮಾಡಿಕೊಂಡು ಸೇವೆಯಲ್ಲಿರುವ ಟಿನಾ ಅವರಲ್ಲಿ ಫೇಸ್‌ಬುಕ್‌ ಪುಟದ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವಿಚಾರಿಸಿದ್ದು, ಅದೊಂದು ನಕಲಿ ಪುಟವೆಂದು ಪ್ರತಿಕ್ರಿಯಿಸಿದ್ದಾರೆ. ಫೇಕ್‌ ಪೇಜ್‌ ಕುರಿತು ಪೊಲೀಸರಿಗೆ ದೂರು ದಾಖಲಿಸುವುದಾಗಿಯೂ ತಿಳಿಸಿದ್ದಾರೆ.

ADVERTISEMENT

ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಣ್ಯರ ಹೆಸರಿನಲ್ಲಿ 'ಫೇಕ್‌ ಪೇಜ್‌'ಗಳನ್ನು ತೆರೆದು ಸರ್ಕಾರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಟೀಕಿಸುತ್ತಿದ್ದಾರೆ.

1955ರಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಈಗಿನ ಮಸೂದೆ ರೂಪಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಅಡಿಯಲ್ಲಿ, ಇವರೆಲ್ಲಾಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿನಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇತರ ರಾಷ್ಟ್ರಗಳ ಮುಸ್ಲಿಮರಿಗೆ ಈ ಮಸೂದೆ ಅಡಿಯಲ್ಲಿ ಭಾರತ ಪೌರತ್ವ ನೀಡಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.