ADVERTISEMENT

ವೈರಲ್ ವಿಡಿಯೊ | ಬೇಟೆಯಾಡಿದ ಜಿಂಕೆಯ ಹೊತ್ತು ಮರ ಹತ್ತಿದ ಚಿರತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಏಪ್ರಿಲ್ 2020, 10:13 IST
Last Updated 15 ಏಪ್ರಿಲ್ 2020, 10:13 IST
   
""

ಚಿರತೆಯೊಂದು ತಾನು ಬೇಟೆಯಾಡಿದ ಜಿಂಕೆಯ ಕಳೇಬರ ಹೊತ್ತು ಮರ ಹತ್ತಿದ ವಿಡಿಯೊ ತುಣುಕು ವೈರಲ್ ಆಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಮಾರ್ಚ್ 28ರಂದು ಟ್ವಿಟರ್‌ನಲ್ಲಿ ಮೊದಲ ಬಾರಿಗೆ ಈವಿಡಿಯೊ ಹಂಚಿಕೊಂಡಿದ್ದರು. ಏಪ್ರಿಲ್ 9ರಂದು ಅದೇ ದೃಶ್ಯವನ್ನು ಮತ್ತೊಂದು ಆಂಗಲ್‌ನಿಂದ ಸೆರೆಹಿಡಿದಿದ್ದ ವಿಡಿಯೊ ತುಣುಕು ಶೇರ್ ಮಾಡಿದ್ದರು.

43 ಸೆಕೆಂಡ್‌ಗಳ ಈ ವಿಡಿಯೊ ಕ್ಲಿಪ್‌ನಲ್ಲಿ ಚಿರತೆಯೊಂದು ಜಿಂಕೆಯ ಕಳೇಬರ ಹೊತ್ತು ಮರವೇರುತ್ತದೆ. ದಕ್ಷಿಣ ಆಫ್ರಿಕಾದ ಕ್ರುಂಗರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾರ್ಚ್ 24ರಂದು ಸಂಜೆ 6 ಗಂಟೆಗೆ ತೆಗೆದ ವಿಡಿಯೊ ಇದು ಎಂದು ಕಾಸ್ವನ್ ಒಕ್ಕಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ವಿಡಿಯೊ ತುಣುಕನ್ನು ಈವರೆಗೆ 25.6 ಸಾವಿರ ಮಂದಿ ನೋಡಿದ್ದಾರೆ. 430 ಮಂದಿ ರಿಟ್ವೀಟ್ ಮಾಡಿದ್ದರೆ, 1800 ಮಂದಿ ಲೈಕ್ ಮಾಡಿದ್ದಾರೆ. 'ಅಬ್ಬಾ! ಚಿರತೆಯ ಶಕ್ತಿಯೇ' ಎಂಬುದು ಹಲವರ ಉದ್ಗಾರವಾಗಿದೆ.

'ಚಿರತೆಗಳು ತಮ್ಮ ದೇಹತೂಕದ ಮೂರುಪಟ್ಟು ಇರುವ ಬೇಟೆಯ ಕಳೇಬರ ಹೊತ್ತು ಮರ ಹತ್ತಬಲ್ಲವು. ಚಿರತೆಗಳ ಆವಾಸಸ್ಥಾನದಲ್ಲಿ ಬೇಟೆಯ ಕಳೇಬರಗಳು ಎಷ್ಟೋ ಸಲ ಮರಗಳ ಮೇಲೆಯೂ ಪತ್ತೆಯಾಗಿವೆ' ಎಂದು ಪರ್ವೀನ್ ಕಾಸ್ವಾನ್ ಹೇಳಿದ್ದಾರೆ.

ಪರಿಸರ ಪ್ರಿಯರ ಆಕ್ಷೇಪ

ಚಿರತೆಯು ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಹತ್ತುವುದು ಕ್ಯಾಮೆರಾ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಲಿ ಎಂಬ ಉದ್ದೇಶದಿಂದ ಮರ ಹತ್ತುತ್ತಿರುವ ಚಿರತೆಯ ಮೇಲೆ ಟಾರ್ಚ್‌ ಲೈಟ್ ಹಾಕಿರುವುದು ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

'ನೀವು ಅದೇ ಕಾಡು ಎಂದು ಉಲ್ಲೇಖಿಸಬೇಕಿರಲಿಲ್ಲ. ಜನರು ಟಾರ್ಚ್‌ ಲೈಟ್ ಹಾಕುತ್ತಿರುವುದನ್ನು ನೋಡಿದಾಗಲೇ ಅದು ಗೊತ್ತಾಯಿತು' ಎಂದು ಅನ್ಷುಲ್ ಭಾರದ್ವಾಜ್ ವ್ಯಂಗ್ಯವಾಡಿದ್ದಾರೆ.

'ಕಾಡುಪ್ರಾಣಿಗಳಿಗೆ ಟಾರ್ಚ್ ಲೈಟ್ ಹಾಕಿ ತೊಂದರೆ ಕೊಡಬಾರದು. ಭಾರತದ ಕಾಡುಗಳಲ್ಲಿ ಕ್ಯಾಮೆರಾ ಫ್ಲಾಷ್‌ಗಳನ್ನೂ ಬಳಸುವಂತಿಲ್ಲ' ಎಂದು ಶ್ವೇತಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.