ADVERTISEMENT

ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 15:56 IST
Last Updated 15 ಜನವರಿ 2026, 15:56 IST
   

ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಚಾಣಕ್ಯಪುರಿ ಕಾಲೋನಿಯ ನಿವಾಸಿ 75 ವರ್ಷದ ಮೋಹನ್ ಲಾಲ್ ದ್ವಿವೇದಿ ಎಂಬುವವರು ಸುಮಾರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಷ್ಟು ದೀರ್ಘಾವಧಿಯ ನಿದ್ರಾಹೀನತೆಯ ನಡುವೆಯೂ ಅವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ. ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ದೀರ್ಘಕಾಲದ ನಿದ್ರಾಹೀನತೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತೀವ್ರ ಹಾನಿಕಾರಕ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಆದಾಗ್ಯೂ, ಈ ವ್ಯಕ್ತಿ ಸುಮಾರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂಬುವುದು ವೈದ್ಯರನ್ನು ಅಚ್ಚರಿಗೆ ದೂಡಿದೆ.

ADVERTISEMENT

ಮೋಹನ್ ಲಾಲ್ ಅವರು ಆರಂಭದಲ್ಲಿ, ತಮ್ಮ ಸಮಸ್ಯೆಯ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಅವರು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು. ಆದರೂ ಅವರ ಕಣ್ಣುಗಳು ಉರಿಯುತ್ತಿರಲಿಲ್ಲ. ಅಲ್ಲದೇ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದಿದ್ದಾರೆ.

ನಂತರ ಅವರು ತಮ್ಮ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಅವರು ಮೊದಲು ಕೆಲ ಸಾಂಪ್ರದಾಯಿಕ ಚಿಕಿಕ್ಸೆ ಪಡೆದಿದ್ದಾರೆ. ಬಳಿಕ ಅವರನ್ನು ದೆಹಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಆದಾಗ್ಯೂ, ಅವರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ವೃತ್ತಿಜೀವನ

ಮೋಹನ್ ಲಾಲ್ ದ್ವಿವೇದಿ ಅವರು ಒಬ್ಬ ಸಾಮಾನ್ಯ ವ್ಯಕ್ತಿಯೇನಲ್ಲ. ಅವರು 1973ರಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1974ಲ್ಲಿ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ (MPPSC ) ಉತ್ತೀರ್ಣರಾಗಿ ಉಪ ತಹಶೀಲ್ದಾರ್(deputy tehsildar,) ಆದರು. 2001 ರಲ್ಲಿ ಜಂಟಿ ಕಲೆಕ್ಟರ್( joint collector) ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.

1973ರ ಸುಮಾರಿಗೆ ಅವರಿಗೆ ಈ ಸಮಸ್ಯೆ ಪ್ರಾರಂಭವಾಗಿದ್ದು, ಅಂದಿನಿಂದ ಅವರು ನಿದ್ರಾಹೀನತೆಯನ್ನು ಅನುಭವಿಸುತ್ತಲೇ ಇದ್ದಾರೆ.

ಪುಸ್ತಕ ಓದುವುದು, ನಡೆಯುವುದು ದಿನಚರಿ

ದ್ವಿವೇದಿ ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ತಡರಾತ್ರಿಯಲ್ಲಿ ಟೆರೇಸ್‌ನಲ್ಲಿ ಲ್ಲಿ ನಡೆದಾಡುತ್ತಾರೆ. ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ ಅವರ ಪತ್ನಿ ಕೂಡ ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ.

ನಂಬಲಸಾಧ್ಯವಾದ ಪ್ರಕರಣ
ರೇವಾ ಸಂಜಯ್ ಗಾಂಧಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಾಹುಲ್ ಮಿಶ್ರಾ, ಈ ಪ್ರಕರಣ ವೈದ್ಯಕೀಯ ವಿಜ್ಞಾನಕ್ಕೆ ಸವಾಲು ಎಂದೇ ಕರೆದಿದ್ದಾರೆ. ನಿದ್ದೆಯಿಲ್ಲದೆ ಬದುಕುವುದು ಬಹುತೇಕ ಅಸಾಧ್ಯ ಎಂದು ಅವರು ಹೇಳಿದ್ದಾರೆ. ಮನೋವಿಜ್ಞಾನದಲ್ಲಿ ಹೊಸ ಹೊಸ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗಾಗಿ ಮೋಹನ್ ಲಾಲ್ ಅವರು ಮತ್ತೊಮ್ಮೆ ಮನೋವಿಜ್ಞಾನ ವಿಭಾಗದ ತಜ್ಞರನ್ನು ಸಂಪರ್ಕಿಸುವಂತೆ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.