ADVERTISEMENT

Maisie Williams: ಅವಳ್ಯಾರು ಎಂದು ಗೊತ್ತಿಲ್ಲದೇ ಪಕ್ಕ ಕೂತವನ ಲಕ್ಕೇ ಬದಲಾಯ್ತು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 6:44 IST
Last Updated 6 ಡಿಸೆಂಬರ್ 2025, 6:44 IST
<div class="paragraphs"><p>ಮೆಟ್ರೊದಲ್ಲಿ ಮೇಝೀ ವಿಲಿಯಮ್ಸ್ ಜತೆ ಭಾರತದ ಯುವಕ</p></div>

ಮೆಟ್ರೊದಲ್ಲಿ ಮೇಝೀ ವಿಲಿಯಮ್ಸ್ ಜತೆ ಭಾರತದ ಯುವಕ

   

ಎಕ್ಸ್ ಚಿತ್ರ

ಬರ್ಲಿನ್‌: ತುತ್ತು ಅನ್ನಕ್ಕೂ ಪರದಾಟ, ಬದುಕಿಗಾಗಿ ಹೋರಾಟ... ಬದುಕಿನ ಕರಾಳ ಸತ್ಯವೇ ಹಾಗೆ. ಆದರೆ ಸತ್ಯ ಮಾರ್ಗದಲ್ಲಿ ನಡೆದಾಗ ಎಂದಾದರೂ ಒಳ್ಳೆಯದಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೊಂದು ತಾಜಾ ಉದಾಹರಣೆ ಜರ್ಮನಿಯಲ್ಲಿ ನಡೆದಿದೆ. 

ADVERTISEMENT

ಜರ್ಮನಿಯ ಮೆಟ್ರೊದಲ್ಲಿ ಭಾರತದ ಯುವಕನೊಬ್ಬ ಪ್ರಯಾಣಿಸುತ್ತಿದ್ದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಇದಷ್ಟೇ ಈ ಚಿತ್ರ ಮಹತ್ವ ಪಡೆಯಲು ಕಾರಣವಲ್ಲ. ಆ ಯುವಕನ ಪಕ್ಕದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ‘ಗೇಮ್‌ ಆಫ್‌ ಥ್ರೋನ್ಸ್‌’ನ ನಟಿ ಮೇಝೀ ವಿಲಿಯಮ್ಸ್ ಕುಳಿತಿದ್ದರು. ಅವರೊಂದಿಗಿನ ಒಂದು ಸೆಲ್ಫಿಗಾಗಿ ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿರುವಾಗ, ಪಕ್ಕದಲ್ಲೇ ಇದ್ದರೂ ಯಾವುದೇ ಭಾವನೆಗಳಿಲ್ಲದೆ ಕುಳಿತಿದ್ದ ಯುವಕ ಜರ್ಮನಿಯಲ್ಲಿ ಸದ್ಯ ಸುದ್ದಿಯಲ್ಲಿದ್ದಾರೆ. 

ಮೆಟ್ರೊದಲ್ಲಿ ಎದುರಿಗೆ ಕುಳಿತಿದ್ದ ವ್ಯಕ್ತಿ ಈ ಚಿತ್ರ ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು. ಜರ್ಮನಿಯ ‘ದೆರ್‌ ಸ್ಪಿಗೆಲ್‌’ ಎಂಬ ಮಾಧ್ಯಮ ಆ ಯುವಕನಿಗಾಗಿ ವ್ಯಾಪಕ ಹುಡುಕಾಟ ನಡೆಸಿತು. ಅಂತಿಮವಾಗಿ ಭಾರತ ಮೂಲದ ಈ ಯುವಕ ಪತ್ತೆಯಾಗಿದ್ದು ಮ್ಯುನಿಕ್‌ನಲ್ಲಿ. 

ಭಾರತದಿಂದ ಜರ್ಮನಿಗೆ ಅಕ್ರಮವಾಗಿ ತೆರಳಿರುವ ಈ ಯುವಕನ ಕುರಿತು ವರದಿಗಾರ, ‘ಮೆಟ್ರೊದಲ್ಲಿ ನಿಮ್ಮ ಪಕ್ಕ ಕುಳಿತ ಯುವತಿ ಮೇಝೀ ವಿಲಿಯಮ್ಸ್ ಎಂಬುದು ನಿಮಗೆ ಗೊತ್ತೇ? ಅವರು ಜನಪ್ರಿಯ ‘ಗೇಮ್‌ ಆಫ್ ಥ್ರೋನ್ಸ್‌’ನ ನಾಯಕಿ ಎಂಬುದು ತಿಳಿದಿದೆಯೇ? ಅವರೊಂದಿಗಿನ ಒಂದು ಸೆಲ್ಫಿಗಾಗಿ ಇಡೀ ಜಗತ್ತೇ ಕಾದಿರುವಾಗ, ನೀವು ಯಾವುದೇ ಪ್ರತಿಕ್ರಿಯೆ ನೀಡದೆ ಕುಳಿತಿದ್ದಿರಲ್ಲ.. ಏಕೆ?’ ಎಂದು ಕೇಳಿದ್ದಾರೆ.

ಆ ಪ್ರಶ್ನೆಗೆ ಆ ಯುವಕನ ಪ್ರಾಮಾಣಿಕ ಉತ್ತರ ಲಕ್ಷಾಂತರ ಹೃದಯವನ್ನು ಗೆದ್ದಿದೆ. ‘ನನ್ನ ಬಳಿ ಜರ್ಮನಿಯಲ್ಲಿ ವಾಸಿಸಲು ಪರವಾನಗಿ ಇಲ್ಲ. ಜೇಬಿನಲ್ಲಿ ಒಂದು ಯೂರೊ (ಕರೆನ್ಸಿ) ಕೂಡಾ ಇಲ್ಲ. ರೈಲಿನಲ್ಲಿ ನಿತ್ಯ ಅಕ್ರಮವಾಗಿಯೇ ಸಂಚರಿಸುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ಪಕ್ಕದಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನು ಗಮನಿಸಲು ಸಾಧ್ಯವೇ?’ ಎಂದಿದ್ದಾರೆ.

ಈ ಪ್ರಾಮಾಣಿಕ ಉತ್ತರಕ್ಕೆ ಮಾರು ಹೋದ ‘ದೆರ್‌ ಸ್ಪಿಗೆಲ್‌’ ಸಂಸ್ಥೆಯು, ತಕ್ಷಣ ಅವರಿಗೆ ಪೋಸ್ಟ್‌ಮ್ಯಾನ್ ಕೆಲಸ ನೀಡಿದ್ದಾರೆ. ಮಾಸಿಕ 800 ಯೂರೊ (₹83 ಸಾವಿರ) ವೇತನ. ಈ ಕೆಲಸದಿಂದ ಯುವಕನಿಗೆ ಜರ್ಮನಿಯಲ್ಲಿ ನೆಲೆಸಲು ಸುಲಭವಾಗಿ ಪರವಾನಗಿಯೂ ದೊರೆಯಿತು. 

‘ವಿಧಿ ಆಟವೇ ಹೀಗೆ. ಮುಂದೆ ನಡೆಯುವ ಪ್ರತಿಯೊಂದು ಘಟನೆಯ ಹಿಂದೆಯೂ ಒಂದೊಂದು ಸನ್ನಿವೇಶ ಹೊಂದಿಕೊಂಡಿರುತ್ತದೆ. ಸದ್ಯ ನಡೆಯುತ್ತಿರುವ ಪ್ರತಿಯೊಂದೂ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹೀಗಾಗಿ ಮುಂದಿನ ಹಣೆಬರಹವೇನೋ ಯಾರಿಗೂ ತಿಳಿಯದು’ ಎಂಬ ಒಕ್ಕಣೆಯೊಂದಿಗೆ ಈ ಚಿತ್ರವನ್ನು ಪ್ರೀತಿಂ ಕೊತಾಡಿಯಾ ಎಂಬುವವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ಚಿತ್ರವನ್ನು ಹಲವರು ಹಂಚಿಕೊಂಡು ಇಡೀ ಸನ್ನಿವೇಶವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.