ADVERTISEMENT

ಅಮ್ಮನ ಪುನರ್‌ವಿವಾಹಕ್ಕೆ ಶುಭಾಶಯ ಕೋರಿದ ಮಗನ ಫೇಸ್‌ಬುಕ್ ಪೋಸ್ಟ್ ವೈರಲ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:24 IST
Last Updated 12 ಜೂನ್ 2019, 14:24 IST
   

ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಗೋಕುಲ್ ಶ್ರೀಧರ್ ಎಂಬ ಯುವಕ ತನ್ನ ಅಮ್ಮನ ಪುನರ್‌ವಿವಾಹಕ್ಕೆ ಶುಭಕೋರಿ ಫೇಸ್‌ಬುಕ್‌ನಲ್ಲಿ ಬರೆದ ಬರಹವೊಂದು ವೈರಲ್ ಆಗಿದೆ.

ತನ್ನ ಅಮ್ಮನ ತ್ಯಾಗದ ಬಗ್ಗೆ ನೆನೆದ ಗೋಕುಲ್, ಆಕೆಯ ಮುಂದಿನ ಬದುಕು ಸಂಭ್ರಮದಿಂದ ಸಾಗಲಿ ಎಂದು ಬಯಸಿ, ಹಾರೈಸಿದ ಪೋಸ್ಟ್ ಇದಾಗಿದೆ.

ಫೇಸ್‌ಬುಕ್ ಬರಹದಲ್ಲಿ ಏನಿದೆ?
ನನ್ನಮ್ಮನ ಮದುವೆ ಮುಗೀತು
ಹೀಗೊಂದು ಬರಹ ಬರೆಯಬೇಕೋ ಎಂದು ನಾನು ತುಂಬಾ ಆಲೋಚಿಸಿದ್ದೆ.ಪುನರ್‌ವಿವಾಹ ಎಂಬುದನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಇರುವ ಜನರು ಈ ಕಾಲದಲ್ಲಿದ್ದಾರೆ.

ADVERTISEMENT

ಸಂದೇಹ, ತುಚ್ಛ ಭಾವ, ಅಸಹ್ಯದ ನೋಟಗಳಿಂದ ಯಾರೂ ನೋಡುವುದು ಬೇಡ. ಹಾಗೊಮ್ಮೆ ನೋಡಿದರೂ ಯಾರೂ ಇಲ್ಲಿ ಬಗ್ಗುವುದಿಲ್ಲ.

ನನಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಿಳೆ ಆಕೆ.ಹಳೆಯ ದಾಂಪತ್ಯದಿಂದ ಹಲವಾರು ನೋವುಂಡಿದ್ದಳು. ಹೊಡೆತದಿಂದಆಕೆಯ ನೆತ್ತಿ ಒಡೆದುರಕ್ತ ಹರಿಯುವಾಗ ನಾನು ಆಕೆಯಲ್ಲಿ ಕೇಳಿದ್ದೆ, ಯಾಕೆ ಇಷ್ಟೊಂದು ಸಹಿಸುತ್ತಿದ್ದೀಯಾ? ಆಗ ಅಮ್ಮ ''ನಿನಗಾಗಿ ನಾನು ಬದುಕುತ್ತಿದ್ದೇನೆ. ನಾನು ಇದನ್ನು ಸಹಿಸಿಕೊಳ್ಳುತ್ತಿರುವುದು ಅದಕ್ಕಾಗಿಯೇ'' ಎಂದು ಹೇಳಿದ್ದು ನೆನಪಿದೆ.

ಅಂದು ನಾನು ಅಮ್ಮನ ಕೈ ಹಿಡಿದು ಮನೆಯಿಂದ ಹೊರನಡೆದಾಗ ನಿರ್ಧಾರವೊಂದನ್ನು ಕೈಗೊಂಡಿದ್ದೆ.ಈ ಗಳಿಗೆಬಗ್ಗೆ, ಇದು ಸಫಲವಾಗಬೇಕೆಂಬ ನಿರ್ಧಾರದ ಬಗ್ಗೆ.

ತನ್ನ ಯೌವನವನ್ನು ನನಗಾಗಿ ಮೀಸಲಿಟ್ಟ ನನ್ನ ಅಮ್ಮನಿಗೆ ಹಲವಾರು ಕನಸುಗಳನ್ನು ಪೂರೈಸುವುದಕ್ಕೆ, ಸಾಧನೆಗಳನ್ನು ಮಾಡುವುದಕ್ಕಿದೆ. ಇದರ ಬಗ್ಗೆ ಹೆಚ್ಚೇನೂ ಹೇಳಲಾರೆ, ಈ ಮದುವೆಯನ್ನು ಗುಟ್ಟಾಗಿ ಇಡುವುದು ಬೇಡ ಎಂದು ಅನಿಸಿತು.
ಅಮ್ಮಹ್ಯಾಪಿ ಮ್ಯಾರೀಡ್ ಲೈಫ್.

ಇದೀಗ ಇಂಜಿನಿಯರ್ ಆಗಿರುವ ಗೋಕುಲ್‌ಗೆ 23 ವರ್ಷ. ದಾಂಪತ್ಯದಲ್ಲಿ ನೋವುಂಡು ಆ ಸಂಬಂಧ ತೊರೆದು ಹೊರನಡೆದಾಗ ಗೋಕುಲ್‌ 10ನೇ ತರಗತಿಯಲ್ಲಿದ್ದ, ಶಿಕ್ಷಕಿಯಾಗಿದ್ದ ಅಮ್ಮ, ಈಗ ಕೆಲಸ ಬಿಟ್ಟಿದ್ದಾರೆ.

ಎಸ್‌ಎಫ್ಐ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿರುವ ಗೋಕುಲ್ ಮನೋರಮಾ ಆನ್‌ಲೈನ್ ಜತೆ ಮಾತನಾಡಿದ್ದು, ತಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಹಾಗಾಗಿ ನಾನು ಪುನರ್‌ವಿವಾಹದ ಬಗ್ಗೆ ಆಕೆಯಲ್ಲಿ ಹೇಳುತ್ತಿದ್ದೆ. ಆಕೆ ಬೇಡ ಎನ್ನುತ್ತಿದ್ದಳು.ಆಕೆಯ ಸಹೋದ್ಯೋಗಿಗಳ ಕಡೆಯಿಂದಲೇ ಈ ವಿವಾಹ ಸಂಬಂಧ ಬಂದಿತ್ತು.ಆಕೆ ಮೊದಲು ಬೇಡ ಎಂದು ನಿರಾಕರಿಸಿದ್ದರೂ, ಆಮೇಲೆ ಒಪ್ಪಿಕೊಂಡಳು ಎಂದಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ಗೆ ನೆಟ್ಟಿಗರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.ವೈರಲ್ ಪೋಸ್ಟ್‌ ನಂತರ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡಿರುವ ಗೋಕುಲ್, ಈ ನಾಡುಮತ್ತು ನಾಡಿನಜನರನ್ನು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಜತೆಗೆ ನಿಂತವರಿಗೂ, ಹಾರೈಸಿದವರಿಗೂ ಧನ್ಯವಾದಗಳು, ಅಮ್ಮ ಖುಷಿಯಾಗಿದ್ದಾರೆ ನಾನೂ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.