ಗಾಂಧಿನಗರ: ‘ತಿನ್ನು, ಎಷ್ಟು ಹಣ ತಿಂತೀಯೋ ತಗೋ ತಿನ್ನು...’ ಹೀಗೆ ಸುತ್ತಲೂ ನಿಂತ ನಾಗರಿಕರು ಎದುರಿಗೆ ಕೈಮುಗಿದ ಕುಳಿತಿದ್ದ ಅಧಿಕಾರಿ ಮೇಲೆ ನೋಟುಗಳ ಮಳೆಗರೆದ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜತೆಗೆ, ಇದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ಗುಜರಾತ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ನಾಗರಿಕರು ಫಲಕಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡು ಅಧಿಕಾರಿ ಎದುರು ನಿಂತಿದ್ದಾರೆ. ಗರಿ ಗರಿ ನೋಟುಗಳನ್ನು ಅಧಿಕಾರಿಯ ಮೇಲೆ ಚೆಲ್ಲುತ್ತಿದ್ದಾರೆ. ಜತೆಗೆ, ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನ ‘ಕಲಂ ಕಿ ಚೋಟಿ’ ಎಂಬ ಖಾತೆ ಮೂಲಕ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ನೌಕರಿಗಾಗಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಇದಾಗಿದ್ದು, ಮೇಲಧಿಕಾರಿಗಳಿಗೆ ಹಣ ಕಳುಹಿಸಬೇಕು ಎಂಬ ಅಧಿಕಾರಿಯ ಮಾತುಗಳನ್ನು ಅಲ್ಲಿ ಸುತ್ತುವರಿದಿದ್ದ ಜನರು ಅವರಿಗೆ ನೆನಪಿಸಿ ನೋಟುಗಳನ್ನು ಅವರತ್ತ ತೂರುತ್ತಾರೆ.
ಈ ವಿಡಿಯೊವನ್ನು ಸುಮಾರು 5 ಲಕ್ಷ ಜನ ವೀಕ್ಷಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
‘ಲಂಚಗುಳಿತನ ಹಾಗೂ ಭ್ರಷ್ಟಾಚಾರ ಎಂಬುದು ಕ್ಯಾನ್ಸರ್ ಇದ್ದಂತೆ. ಇದನ್ನು ಬೇರು ಸಮೇತ ಕಿತ್ತೊಗೆಯುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ಈ ಕ್ಯಾನ್ಸರ್ ಎಂಬುದು ಸಾಂಕ್ರಾಮಿಕವಾಗಿ ಎಲ್ಲೆಡೆ ವ್ಯಾಪಿಸಿದೆ. ಆದರೆ ಪ್ರಧಾನಿ ಅವರು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ’ ಎಂದು ಬರೆದಿದ್ದಾರೆ.
‘ದೇಶದಲ್ಲಿ ಬಿಜೆಪಿ ಸರ್ಕಾರವಿರಲಿ ಅಥವಾ ಬೇರೆ ಪಕ್ಷಗಳು ಸರ್ಕಾರ ನಡೆಸಲಿ ಸರ್ಕಾರಿ ನೌಕರರಲ್ಲಿ ಸಹಾಯಕನಿಂದ ಮೇಲಧಿಕಾರಿಗಳವರೆಗೂ ಪ್ರತಿಯೊಬ್ಬರೂ ಭ್ರಷ್ಟರಾಗಿದ್ದಾರೆ. ಇವರ ಆಸ್ತಿಗಳು ಹಲವು ಪಟ್ಟು ಏರಿಕೆಯಾಗಿವೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ದೇಶದಲ್ಲಿ ಭ್ರಷ್ಟಾಚಾರ ಎಂಬುದು ಸಾಮಾನ್ಯ ಎಂಬಂತಾಗಿದೆ. ಇಂಥವುಗಳನ್ನು ಕಂಡೂ ಸುಮ್ಮನಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಮತ್ತೊಬ್ಬರು ವಾಗ್ದಾಳಿ ನಡೆಸಿದ್ದಾರೆ.
‘ಈ ವಿಡಿಯೊವನ್ನು ಲೋಕಸೇವಾ ಆಯೋಗ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವವರಿಗೆ ತೋರಿಸಬೇಕು. ಪ್ರಧಾನಿ ಮನಸ್ಸು ಮಾಡಿದರೂ ಸರ್ಕಾರಿ ನೌಕರಿಯಿಂದ ಯಾರನ್ನೂ ತೆಗೆಯಲಾಗದು. ಎಂಥದ್ದೇ ಅಪರಾಧ ಕೃತ್ಯ ಎಸಗಿದರೂ ಸರ್ಕಾರಿ ನೌಕರರು ಕಾಯಂ ಆಗಿಯೇ ಉಳಿಯುತ್ತಾರೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.