
ರೈಲಿನಲ್ಲಿ ಮ್ಯಾಗಿ ತಯಾರಿಸಿದ ಮಹಿಳೆ
ಚಿತ್ರ ಕೃಪೆ: ಎಕ್ಸ್
ನವದೆಹಲಿ: ಭಾರತೀಯರ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆ ಇಲಾಖೆ ಸಾರ್ವಜನಕರಿಗೆ ಅನುಕೂಲಕರ ಸೇವೆ ಒದಗಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಸಾರ್ವಜನಿಕರು ಕೆಲವೊಮ್ಮೆ ಸೌಲಭ್ಯಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ಕಾಣಬಹುದು.
ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ, ರೈಲಿನಲ್ಲಿ ಸಂಚರಿಸುವಾಗ ಸಮಯ ಕಳೆಯಲು ಮತ್ತು ಹಸಿವು ನಿವಾರಿಸಿಕೊಳ್ಳಲು ವಿವಿಧ ಬಗೆಯ ತಿಂಡಿ–ತಿನಿಸುಗಳು, ಕಾಫಿ, ಟೀ ಹಾಗೂ ನೀರಿನ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಿದೆ. ಮಾತ್ರವಲ್ಲ, ಮನೆಯಿಂದ ತರುವಂತ ಆಹಾರ ಸೇವಿಸುವುದಕ್ಕೂ ಅವಕಾಶ ಕಲ್ಪಿಸಿದೆ.
ಆದರೆ, ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ಮನೆಯಿಂದ ತಂದಿರುವ ಮ್ಯಾಗಿಯನ್ನು ಕೆಟಲ್ ಬಳಸಿ ಬೇಯಿಸಿ, ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯ ಈ ವಿಡಿಯೋಗೆ ಸಂಬಂಧಿಸಿದಂತೆ ಎಕ್ಸ್ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿರುವ ಕೇಂದ್ರ ರೈಲ್ವೆ, ‘ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈಲಿನ ಒಳಗೆ ಎಲೆಕ್ಟ್ರಾನಿಕ್ ಕೆಟಲ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’.
‘ಆದರೂ, ರೈಲಿನ ಒಳಗೆ ಕೆಟಲ್ ಬಳಸಿ ಮ್ಯಾಗಿ ತಯಾರಿಸಿರುವುದು ಅಸುರಕ್ಷಿತ, ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಮಹಿಳೆಯ ಈ ವರ್ತನೆ ಬೆಂಕಿ ಅವಘಡಕ್ಕೆ ಕಾರಣವಾಗಬಹುದು ಮತ್ತು ಇತರ ಪ್ರಯಾಣಿಕರಿಗೂ ಹಾನಿಕಾರಕ’ ಎಂದು ಎಚ್ಚರಿಕೆ ನೀಡಿದೆ.
ಮತ್ತೊಂದು ಪೋಸ್ಟ್‌ನಲ್ಲಿ ‘ಜಾಗರೂಕತೆಯಿಂದ ಪ್ರಯಾಣಿಸಿ, ಸುರಕ್ಷಿತವಾಗಿರಿ. ವಿದ್ಯುತ್ ಕೆಟಲ್‌ಗಳಂತಹ ಹೈ-ವೋಲ್ಟೇಜ್ ಉಪಕರಣಗಳು ರೈಲು ಬೋಗಿಗಳ ಒಳಗೆ ಬೆಂಕಿಯ ಅಪಾಯ ಮತ್ತು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ದಯವಿಟ್ಟು ಅಂತಹ ಸಾಧನಗಳನ್ನು ಬಳಸಬೇಡಿ’ ಎಂದು ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.