
ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ
ಬೆಂಗಳೂರು: ವೈದ್ಯರೊಬ್ಬರು ರೊಚ್ಚಿಗೆದ್ದು ರೋಗಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಐಜಿಎಂಸಿ) ಈಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವೈದ್ಯರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪರ–ವಿರೋಧದ ದೂರುಗಳು ದಾಖಲಾಗಿವೆ.
ಆಗಿದ್ದೇನು?
ಶಿಮ್ಲಾದಲ್ಲಿ ವಸತಿ ಶಾಲೆಯೊಂದರ ಕ್ಯಾಂಟೀನ್ ನಡೆಸುತ್ತಿರುವ ಶಿಮ್ಲಾ ಜಿಲ್ಲೆಯ ಖುಪ್ವಿ ಎಂಬ ಪ್ರದೇಶದ ಅರ್ಜುನ್ ಸಿಂಗ್ (36) ಶ್ವಾಸಕೋಶದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಐಜಿಎಂಸಿಗೆ ಇತ್ತೀಚೆಗೆ ದಾಖಲಾಗಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು ಬ್ರಾಂಕೋಸ್ಕೋಪಿಗಾಗಿ ವಾರ್ಡ್‌ಗೆ ದಾಖಲಿಸಿದ್ದರು. ಆದರೆ, ಅರ್ಜುನ್ ಸಿಂಗ್ ತನಗೆ ನೀಡಿದ್ದ ಹಾಸಿಗೆ ಬಿಟ್ಟು ಬೇರೆ ಹಾಸಿಗೆ ಬಳಸಿದ್ದ. ಇದನ್ನು ಪ್ರಶ್ನಿಸಿದ್ದ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದ.
ಆಗ ಸ್ಥಳಕ್ಕೆ ಬಂದಿದ್ದ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಹಾಗೂ ತಜ್ಞ ವೈದ್ಯ ಡಾ. ರಾಘವ್ ನರುಲಾ ಅವರಿಗೂ ಅರ್ಜುನ್ ಸಿಂಗ್ ನಿಂದಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ರಾಘವ್, ರೋಗಿ ಅರ್ಜುನ್ ಸಿಂಗ್‌ನನ್ನು ಮನಬಂದಂತೆ ಹಾಸಿಗೆಯೇ ಮೇಲೆಯೇ ಥಳಿಸಿದ್ದಾರೆ. ಇದಕ್ಕೆ ಅಲ್ಲಿಯೇ ಇದ್ದ ಇನ್ನೊಬ್ಬ ವೈದ್ಯ ಸಿಬ್ಬಂದಿಯೂ ಕಾಲು ಹಿಡಿದು ಸಾಥ್ ಕೊಟ್ಟಿದ್ದಾರೆ.
ರೋಗಿ ಅರ್ಜುನ್ ಸಿಂಗ್‌ನೂ ಪ್ರತಿರೋಧ ತೋರಿಸಿ ವೈದ್ಯರ ಮೇಲೆ ಪ್ರತಿದಾಳಿ ಮಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಕಡೆಗೆ ಆಸ್ಪತ್ರೆಯ ಹಿರಿಯ ವೈದ್ಯರು ಹಾಗೂ ಭದ್ರತಾ ಅಧಿಕಾರಿಗಳ ಮಧ್ಯಪ್ರವೇಶದಿಂದ ಗಲಾಟೆ ನಿಂತಿದೆ.
ಆದರೆ, ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ಅರ್ಜುನ್ ಸಿಂಗ್ ಸಂಬಂಧಿಗಳು ವೈದ್ಯನನ್ನು ಥಳಿಸಲು ಮುಂದಾಗಿದ್ದರು. ಅಷ್ಟರಲ್ಲೇ ಪೊಲೀಸರು ಮಧ್ಯಪ್ರವೇಶಿಸಿ ಸಂಭವನೀಯ ಅಪಾಯವನ್ನು ತಡೆದಿದ್ದಾರೆ.
ಹಲ್ಲೆ ವಿಷಯವಾಗಿ ದೂರು–ಪ್ರತಿದೂರು ದಾಖಲಾಗಿವೆ. ಈ ಘಟನೆ ಹಿಮಾಚಲ ಪ್ರದೇಶದಲ್ಲಿ ಜನರ ಗಮನ ಸೆಳೆದಿದ್ದು ಆರೋಗ್ಯ ಸಚಿವರು ಡಾ. ರಾಘವ್ ನರುಲಾ ಅವರನ್ನು ಅಮಾನತು ಮಾಡಿ ವಿವರವಾದ ವರದಿ ನೀಡುವಂತೆ ಆಸ್ಪತ್ರೆಯ ಅಧೀಕ್ಷಕರಿಗೆ ತಾಕೀತು ಮಾಡಿದ್ದಾರೆ.
ಡಾ. ರಾಘವ್ ನರುಲಾ ಅವರು, ರೋಗಿ ಅರ್ಜುನ್ ಸಿಂಗ್ ಮಧ್ಯಪಾನ ಮಾಡಿ ಆಸ್ಪತ್ರೆಯ ನಿಯಮಗಳನ್ನು ಮುರಿದಿದ್ದಾನೆ. ಅಲ್ಲದೇ ನಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದೇ ಘಟನೆಗೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಈ ಕುರಿತು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.