ADVERTISEMENT

ವೈರಲ್ ವಿಡಿಯೊ: ಗುಂಡಿ ಬಿದ್ದ ರಸ್ತೆ– ವರದಿಗಾರ್ತಿಯಾದ ಕಾಶ್ಮೀರದ ಪುಟ್ಟ ಬಾಲಕಿ!

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 6:32 IST
Last Updated 11 ಜನವರಿ 2022, 6:32 IST
ಸಾಜಿದ್ ಯೂಸುಫ್ ಶಾ ಟ್ವಿಟರ್‌ ಚಿತ್ರ
ಸಾಜಿದ್ ಯೂಸುಫ್ ಶಾ ಟ್ವಿಟರ್‌ ಚಿತ್ರ   

ನವದೆಹಲಿ: ಕಾಶ್ಮೀರದಲ್ಲಿ ಹದಗೆಟ್ಟಿರುವ ರಸ್ತೆಯ ಶೋಚನೀಯ ಸ್ಥಿತಿಯನ್ನು ವಿವರಿಸಲು ಪುಟ್ಟ ಬಾಲಕಿಯೊಬ್ಬಳು ವರದಿಗಾರ್ತಿಯಾಗಿದ್ದಾಳೆ. ಅಲ್ಲಿನ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಗಮನ ಸೆಳೆದಿದ್ದಾಳೆ.

ಸದ್ಯ, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಾಲಕಿಯ ನಿರೂಪಣೆ ಶೈಲಿಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಬಾಲಕಿಗೆ ತನ್ನ ಹೆಸರು ಮತ್ತು ವಿಡಿಯೊ ಚಿತ್ರೀಕರಿಸುತ್ತಿರುವ ಸ್ಥಳದ ಹೆಸರನ್ನು ತಕ್ಷಣಕ್ಕೆ ಖಚಿತಪಡಿಸಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಕೆಸರು ತುಂಬಿಕೊಂಡು ಗದ್ದೆಯಂತಾಗಿರುವ ಕಾರಣಕ್ಕೆ ಅತಿಥಿಗಳು ನಾವು ನೆಲೆಸಿರುವ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಬಾಲಕಿ ಕೆಸರು ತುಂಬಿರುವ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವ ಮೂಲಕ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಜತೆಗೆ, ಸ್ಥಳೀಯರು ರಸ್ತೆಯಲ್ಲಿ ಕಸವನ್ನು ಎಸೆದಿರುವುದು ಪರಿಸರ ಹಾನಿ ಕಾರಣವಾಗುತ್ತದೆ ಎಂದಿದ್ದಾಳೆ. 2.08 ನಿಮಿಷದ ಈ ವಿಡಿಯೊವನ್ನು ಆಕೆಯ ತಾಯಿ ಚಿತ್ರೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ಕಣಿವೆಯಲ್ಲಿ ಇತ್ತೀಚೆಗೆ ವಿಪರೀತ ಹಿಮ ಮತ್ತು ಮಳೆ ಸುರಿಯುತ್ತಿದ್ದು, ಪ್ರಮುಖ ರಸ್ತೆಗಳು ಬಂದ್‌ ಆಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.