ADVERTISEMENT

65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ !

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 10:05 IST
Last Updated 28 ಜನವರಿ 2026, 10:05 IST
<div class="paragraphs"><p>ಯಾಸುಕೊ ತಮಕಿ</p></div>

ಯಾಸುಕೊ ತಮಕಿ

   

ಚಿತ್ರ ಕೃಪೆ: @ThePageZ_

ಜಪಾನ್‌ನ ‘ಯಾಸುಕೊ ತಮಕಿ’ ಎಂಬ ಮಹಿಳೆ 1956ರಿಂದ 2020ರವರೆಗೆ ಬರೋಬ್ಬರಿ 65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕಚೇರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುವ ಮೂಲಕ ವಿಶ್ವದ ಅತ್ಯಂತ ‘ಹಿರಿಯ ಕಚೇರಿ ವ್ಯವಸ್ಥಾಪಕಿ’ ಎಂಬ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಇವರ ವೃತ್ತಿಯಲ್ಲಿನ ಚಲನಶೀಲತೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಸಾಮಾನ್ಯವಾಗಿ 60 ವರ್ಷ ಆದಮೇಲೆ ಸರ್ಕಾರಿ ಕೆಲಸದಿಂದ ನಿವೃತ್ತಿಯನ್ನು ಪಡೆಯುತ್ತೇವೆ. ಇದು ಸರ್ಕಾರದ ನಿಯಮವೂ ಆಗಿದೆ. ಒಂದು ವೇಳೆ ಖಾಸಗಿ ಕೆಲಸದಲ್ಲಿದ್ದರೂ ಹೆಚ್ಚೆಂದರೆ, ಐದಾರು ವರ್ಷ ಸ್ವ–ಆಸಕ್ತಿಯಿಂದ ಕೆಲಸ ಮಾಡಬಹುದು. ಕೆಲವೊಮ್ಮೆ ಕಂಪನಿಯನ್ನು ಬದಲಿಸುತ್ತೇವೆ. ಆದರೆ 90 ವರ್ಷವಾದರೂ ಒಂದೇ ಕಚೇರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸಿದ ಜಪಾನಿನ ತಮಕಿ ಎನ್ನುವ ಮಹಿಳೆಯ ವೃತ್ತಿ ಜೀವನದ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ADVERTISEMENT

ತಮಕಿ ಅವರು ಒಸಾಕಾದಲ್ಲಿರುವ ‘ಸನ್‌ಕೊ ಇಂಡಸ್ಟ್ರೀಸ್‌’ನಲ್ಲಿ 65 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ತಮ್ಮ 26ನೇ ವಯಸ್ಸಿನಲ್ಲಿ ಈ ಕಂಪನಿಯಲ್ಲಿ ಕೆಲಸ ಆರಂಭಿಸಿ 91ನೇ ವಯಸ್ಸಿನವರೆಗೂ ಕೆಲಸ ಮಾಡಿದ್ದಾರೆ. ಅವರು ಪ್ರತಿದಿನ ಬೆಳಿಗ್ಗೆ 5:30ರಿಂದ ಸಂಜೆ 5:30ರ ವರೆಗೆ ಕೆಲಸ ಮಾಡುತ್ತಿದ್ದರು. 

ಗಿನ್ನೆಸ್‌ನ ವರದಿಯಂತೆ, ‘ತಮಕಿ ಅವರಿಗೆ ನಿವೃತ್ತಿ ಹೊಂದುವ ಬಗ್ಗೆ ಯೋಜನೆ ಇಲ್ಲ. ಅವರು ಸನ್‌ಕೋ ಇಂಡಸ್ಟ್ರೀಸ್‌ನಲ್ಲಿ ವಾರದಲ್ಲಿ ಐದು ದಿನ ಕೆಲಸ ಮಾಡುತ್ತಾರೆ. ಪ್ರತಿದಿನ 7.5 ಗಂಟೆ ಕೆಲಸ ಮಾಡುತ್ತಾರೆ. ಅವರು ತಮ್ಮ ಸಹೋದ್ಯೋಗಿಗಳಿಗೆ ‘ನೀವು ಈ ದಿನವನ್ನು ವ್ಯರ್ಥ ಮಾಡಿದರೆ, ನಾಳೆ ಇರುವುದಿಲ್ಲ’ ಎಂದು ಸಲಹೆ ನೀಡುತ್ತಾರೆ.

ವರದಿಗಳ ಪ್ರಕಾರ ತಮಕಿ ತಮ್ಮ ಅಧಿಕಾರವಧಿಯಲ್ಲಿ ತಮ್ಮ ಸಹೋದ್ಯೋಗಿಗಳ ಹಿತವನ್ನು ಬಯಸುತ್ತಿದ್ದರು. ಸಾಧ್ಯವಾದಷ್ಟು ಎಲ್ಲರೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ ಅವರನ್ನು ಖುಷಿ ಪಡಿಸುತ್ತಿದ್ದರು. ಇದು ಅವರ ಜೀವಮಾನದ ಗುರಿಯಾಗಿದೆ. ‘ಒಂದು ವರ್ಷ ಮುಗಿದ ನಂತರ ಇನ್ನೊಂದು ವರ್ಷ ಆರಂಭವಾಗುತ್ತದೆ. ಹಾಗೆಯೇ ನಾನು ನನ್ನ ಕೆಲಸವನ್ನು ಮುಂದುವರಿಸಲು ಬಯಸುತ್ತೇನೆ’ ಎಂದು ಅವರು ಹೇಳುತ್ತಿದ್ದರು.

ತಮಕಿ ಅವರು ಕಚೇರಿಯ ಲೆಕ್ಕಪತ್ರ, ಉದ್ಯೋಗಿಗಳ ಸಂಬಳ, ಬೋನಸ್‌ ಮತ್ತು ತೆರಿಗೆ ಕಡಿತಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳನ್ನು ನಿರ್ವಹಿಸುತ್ತಿದ್ದರು. ಅವರಿಗೆ ಸ್ಪ್ರೆಡ್‌ಶೀಟ್‌ ಹಾಗೂ ಅಪ್ಲಿಕೇಶನ್‌ಗಳ ಬಳಕೆಯ ಪರಿಚಯವಿತ್ತು. 

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು, ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ‘ಒಂದೇ ಕುರ್ಚಿಯಲ್ಲಿ 65 ವರ್ಷಗಳು, ಒಂದೇ ಸಮಯ, ಒಂದೇ ಕಂಪನಿ. ಇದು ಸಮರ್ಪಣೆಯಲ್ಲ, ದಾಖಲೆಯ ವೇಷದಲ್ಲಿರುವ ಜೀವಾವಧಿ ಶಿಕ್ಷೆ’, ‘ನಿಮ್ಮ ಕೆಲಸ ಪ್ರೀತಿಸುವುದು ಒಂದು ವಿಷಯ. ಆದರೆ ಬಡ್ತಿ ಅಥವಾ ಬದಲಾವಣೆಗಳಿಲ್ಲದೆ ದಶಕಗಳ ಕಾಲ ಒಂದೇ ಸ್ಥಾನದಲ್ಲಿ ಉಳಿಯುವುದು ಕಠಿಣ ವ್ಯವಸ್ಥೆಯನ್ನು ಸೂಚಿಸುತ್ತದೆ’ ಎಂದು ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.