ADVERTISEMENT

‘ಚೋಕ್ರಿ’ಯ ಮನ ಗೆಲ್ಲುವ ಚೋಕರ್

ವಿದ್ಯಾಶ್ರೀ ಗಾಣಿಗೇರ
Published 22 ನವೆಂಬರ್ 2019, 19:30 IST
Last Updated 22 ನವೆಂಬರ್ 2019, 19:30 IST
   

ಕತ್ತನ್ನು ಬಿಗಿಯಾಗಿ ಅಪ್ಪಿ ಅಂದ ನೀಡುವ ಚೋಕರ್‌ ಈಗ ಆಭರಣದ ಲೋಕದಲ್ಲಿ ಟ್ರೆಂಡ್‌ ಎನಿಸಿಕೊಂಡಿದೆ. ಚಿನ್ನಕ್ಕೆ ಮುತ್ತು, ಹವಳ ಹೆಣೆದ ಚೋಕರ್‌ಗಳು, ಫ್ಯಾನ್ಸಿ ಚೋಕರ್‌ಗಳು ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ.

ಒಂದು ಕಡೆ ಸಾಲು ಸಾಲು ಮದುವೆಯಂತಹ ಸಮಾರಂಭಗಳು ನಡೆಯುತ್ತಿವೆ. ಇನ್ನೊಂದು ಕಡೆ ಆಭರಣಪ್ರಿಯರ ಕಣ್ಣು ಹೊಸ ವಿನ್ಯಾಸದ ಒಡವೆಗಳು ಏನೇನಿವೆ ಎನ್ನುವ ಹುಡುಕಾಟದಲ್ಲಿ ನಿರತವಾಗಿದ್ದರೆ ಅದರಲ್ಲಿ ಅಚ್ಚರಿಪಡುವುಂತದ್ದೇನಿಲ್ಲ. ಅಂತಹ ಆಭರಣಾಸಕ್ತರಿಗೆ ಒಂದು ಆಯ್ಕೆ ಚೋಕರ್ ನೆಕ್ಲೇಸ್‌.

ಅಷ್ಟಕ್ಕೂ ಈ ಚೋಕರ್ ಹೇಗಿರುತ್ತದೆ ಎನ್ನುವ ಕುತೂಹಲ ಆಭರಣ ಆಸಕ್ತರಿಗೆ ಇರಬಹುದು. 8–10 ತಿಂಗಳ ಹಿಂದೆ ತೆರೆ ಕಂಡ ‘ಕಲಂಕ್’ ಹಿಂದಿ ಸಿನಿಮಾದಲ್ಲಿ ಮದುವೆ ದೃಶ್ಯದಲ್ಲಿ ಆಲಿಯಾ ಭಟ್ ತೊಟ್ಟ ಮುತ್ತು, ರತ್ನ, ಮಣಿಗಳ ಭರ್ಜರಿ ನೆಕ್‌ಪೀಸ್ ನೆನಪಿಸಿಕೊಳ್ಳಿ, ಅದೇ ಚೋಕರ್. ನಮ್ಮ ಅಮ್ಮ, ಅಜ್ಜಿಯರು ತೊಡುತ್ತಿದ್ದ ವೈಭವಯುತ ನೆಕ್ಲೇಸ್‌ ಅನ್ನೇ ಇದು ಹೋಲುತ್ತದೆ. ಬಾಲಿವುಡ್‌ನಲ್ಲೂ 70ರ ದಶಕದಲ್ಲಿ ಇದು ಟ್ರೆಂಡ್ ಆಗಿತ್ತು. ಆಮೇಲೆ ಕೊಂಚ ಕಾಲ ಸುದ್ದಿ ಇರಲಿಲ್ಲ. 90ರ ದಶಕದಿಂದ ಈಚೆಗೆ ಬದಲಾದ ವಿನ್ಯಾಸದಲ್ಲಿ ಆಗಾಗ ಫ್ಯಾಷನ್‌ಪ್ರಿಯರ ಕೊರಳನ್ನು ಅಲಂಕರಿಸಿ ಮಿಂಚುತ್ತಿದೆ. ಈಗಂತೂ ಮತ್ತೆ ಈ ಚೋಕರ್‌ನದೇ ಟ್ರೆಂಡ್.

ADVERTISEMENT

ವೈವಿಧ್ಯ ಚೋಕರ್‌ ಕತ್ತಿಗಿರಲಿ

ಒಂದಲ್ಲ ಎರಡಲ್ಲ, ಕ್ಷಣಕ್ಕೊಮ್ಮೆ ಬದಲಾಗುವ ಹೆಣ್ಣುಮಕ್ಕಳ ಅಭಿರುಚಿಗೆ ತಕ್ಕಂಥ ಹಲವು ಬಗೆಯ ಚೋಕರ್‌ಗಳಿವೆ. ಆದರೆ ಪುರಾತನ ವಿನ್ಯಾಸದ ಚೋಕರ್‌ನ ಚಂದವೇ ಚಂದ. ಅದಕ್ಕೆ ಬೇರೆ ಯಾವುದೂ ಸಾಟಿಯಲ್ಲ ಎನ್ನುತ್ತಾರೆ ಯುವ ಆಭರಣ ವಿನ್ಯಾಸಕಿ ಸುಹಾನಿ. ಅವರ ಪ್ರಕಾರ ನಮ್ಮ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಚೋಕರ್‌ಗಳು ಎಲ್ಲ ಕಾಲದಲ್ಲೂ ಆಕರ್ಷಣೆಯ ಕೇಂದ್ರಬಿಂದು. ಅವುಗಳ ಫ್ಯಾಷನ್‌ ಮಾಸುವ ಮಾತೇ ಇಲ್ಲ. ‘ಕಲಂಕ್’ ಸಿನಿಮಾದಲ್ಲಿ ಆಲಿಯಾ ಭಟ್ ಧರಿಸಿದ ಚೋಕರ್ ಚಿನ್ನದ್ದು. ಮುತ್ತು ಮತ್ತು ಹವಳಗಳ ಶ್ರೀಮಂತಿಕೆಯನ್ನು ಇದರಲ್ಲಿ ಕಾಣಬಹುದು. ‘ಪದ್ಮಾವತ್‌’ನಲ್ಲಿ ‘ಗೂಮರ್’ ಹಾಡಿಗೆ ಹೆಜ್ಜೆ ಹಾಕಿದ ದೀಪಿಕಾ ತೊಟ್ಟ ಆಭರಣ ಕೂಡಾ ಆ್ಯಂಟಿಕ್‌ ಚೋಕರ್.

ಆಧುನಿಕ ವಿನ್ಯಾಸ

ಆಧುನಿಕ ವಿನ್ಯಾಸದ ಚೋಕರ್‌ಗಳಲ್ಲಿ ಸೃಜನಶೀಲತೆ ಬಹಳ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯ ಒಡವೆ ಎಂದರೆ ಇದೇ ಮಾದರಿಯ ಚೋಕರ್‌. ಈಗ ಟ್ರೆಂಡ್ ಒಂಚೂರು ಬದಲಾಗಿದೆ. ಲೋಹದ ಚೋಕರ್‌ಗಳು ಇಡೀ ಸೆಟ್‌ನೊಂದಿಗೆ ವಿಜೃಂಭಿಸುತ್ತಿವೆ. ಎಲಾಸ್ಟಿಕ್ ಮಾದರಿಯ ಲೇಸ್‌ನಲ್ಲಿ ಗೆಜ್ಜೆಯ ರೀತಿಯ ಚೋಕರ್‌ ಧರಿಸಿಯೇ ಆಲಿಯಾ ಕಾಲೇಜ್ ಹುಡುಗಿಯರ ಮನ ಗೆದ್ದಿದ್ದು. ಇಲಿಯಾನಾ ಡಿಕ್ರೂಜ್ ಕೂಡ ಲೋಹದ ಚೋಕರ್ ಧರಿಸಿದ ಚೋಕ್ರಿಯಾಗಿ ಫೋಟೊ ಶೂಟ್ ಮಾಡಿಸಿಕೊಂಡು ಯುವತಿಯರಲ್ಲಿ ಚೋಕರ್‌ ಬಗ್ಗೆ ಆಕರ್ಷಣೆ ಹುಟ್ಟಿಸಿದರು. ಹಾಗೆ ನೋಡಿದರೆ ಬಾಲಿವುಡ್ ಅಂಗಳದಲ್ಲಿ ಚೋಕರ್ ಧರಿಸಿದ ನಟಿಯರ ದೊಡ್ಡ ಹಿಂಡೇ ಇದೆ. ಪ್ರತೀ ಆಧುನಿಕ ಚೋಕರ್‌ನಲ್ಲೂ ಹೊಸ ವಿನ್ಯಾಸ, ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಬಳಸಿದ ಲೋಹ, ಮಣಿ, ಹರಳು, ವಿನ್ಯಾಸಗಳಲ್ಲಿ ಅನನ್ಯತೆ ಇದೆ.

ನೆಕ್ಲೇಸ್‌ಗೂ ಚೋಕರ್‌ಗೂ ವ್ಯತ್ಯಾಸ

ಸಾಂಪ್ರದಾಯಕ ನೆಕ್ಲೇಸ್‌ಗೂ, ಚೋಕರ್‌ಗೂ ಹೆಚ್ಚಿನ ವ್ಯತ್ಯಾಸ ಏನಿಲ್ಲ. ಚೋಕರ್ ಕತ್ತಿಗೆ ಬಿಗಿಯಾಗಿ ನಿಲ್ಲುವ ಆಭರಣ. ಕತ್ತಿನ ಆಕಾರಕ್ಕೆ ಸರಿಯಾಗಿ ಹಾಕಿಕೊಳ್ಳುವಂತಹ ಒಡವೆ. ನೆಕ್ಲೇಸ್ ಅನ್ನು ಕೊಂಚ ಇಳಿಬಿಟ್ಟು ಹಾಕಿಕೊಳ್ಳುತ್ತಾರೆ. ಚೋಕರ್ 14– 15 ಇಂಚುಗಳಷ್ಟು ಉದ್ದವಿದ್ದರೆ ನೆಕ್ಲೇಸ್ ಇಷ್ಟೇ ಉದ್ದ ಇರಬೇಕು ಅಂತೇನಿಲ್ಲ. ಚೋಕರ್ ಕತ್ತಿನ ಮೇಲ್ಭಾಗದಲ್ಲಿ ನಿಂತರೆ, ನೆಕ್ಲೇಸ್ ಕತ್ತಿನ ಕೆಳಭಾಗದಲ್ಲಿರುತ್ತದೆ. ನೆಕ್ಲೇಸ್‌ಗೆ ಕೆಲವೊಮ್ಮೆ ಪೆಂಡೆಂಟ್ ಇರುತ್ತೆ, ಆದರೆ ಚೋಕರ್‌ಗೆ ಪೆಂಡೆಂಟ್ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.