ಪದ್ಮಿನಿ
ಅಸ್ಸಾಂ ಹುಡುಗಿ ಸಿಮು ದಾಸ್‌ಗೆ ಹುಟ್ಟಿದಾಗಲೇ ಅಂಧತ್ವ. ಈ ಸುದ್ದಿ ತಿಳಿದ ಅಪ್ಪ ಕುಟುಂಬವನ್ನೇ ತೊರೆದುಹೋದ. ಮನೆಯಲ್ಲಿ ಕಡುಬಡತನ. ಸಿಮುಗೆ ಅದಾಗಲೇ ಒಬ್ಬ ಅಂಗವಿಕಲ ಅಣ್ಣನೂ ಇದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮ , ಕೂಲಿ ಮಾಡಿ ಮಕ್ಕಳನ್ನು ಸಲಹಿದರು. ಆದರೆ ಕನಸಿಗೆ ಬಡತನ, ಕುರುಡುತನ ಯಾವುದೂ ಇಲ್ಲವಲ್ಲ. ಹಾಗಾಗಿಯೇ ಸಿಮು ಮನದಲ್ಲಿ ಕ್ರಿಕೆಟ್ ಆಟಗಾರ್ತಿಯಾಗುವ ಕನಸು ಚಿಗುರೊಡೆಯಿತು. ಶಾಲೆ, ಹೊಲ ಎಲ್ಲೆಂದರಲ್ಲಿ ಕೈಯನ್ನೇ ಕ್ರಿಕೆಟ್ ಬ್ಯಾಟ್‌ನಂತೆ ಬೀಸುತ್ತಿದ್ದ ಈ ಹುಡುಗಿಯನ್ನು ಕಂಡ ಸ್ವಯಂ ಸೇವಾ ಸಂಸ್ಥೆಯೊಂದು ತರಬೇತಿಗೆ ವ್ಯವಸ್ಥೆ ಕಲ್ಪಿಸಿತು. ಇದು ಸಿಮು ಜೀವನಕ್ಕೆ ಹೊಸ ತಿರುವು ನೀಡಿತು. ಆಕೆ ಈಗ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್. ಎರಡು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್‌ನ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದ ಮಹಿಳಾ ಕ್ರಿಕೆಟ್‌ನಲ್ಲಿ ಭಾರತವು ಚಿನ್ನದ ಪದಕ ಜಯಿಸುವಲ್ಲಿ ಸಿಮು ಪಾತ್ರ ಮಹತ್ವದ್ದಾಗಿತ್ತು. ಅದರಲ್ಲೂ ಫೈನಲ್ ಪಂದ್ಯದಲ್ಲಿ ವಿಜಯದ ಹೊಡೆತ ಬಾರಿಸಿದ್ದೇ ಈ ಸಿಮು.
ಒಡಿಶಾದ ಗ್ರಾಮವೊಂದರ ಪದ್ಮಿನಿಗೆ ಬಾಲ್ಯದಲ್ಲಿ ಭಾಗಶಃ ದೃಷ್ಟಿದೋಷ ಇತ್ತು. ಅದೊಂದು ದಿನ ಊರಿಗೆ ಬಂದಿದ್ದ ಮಿನಿ ಲಾರಿಯೊಂದು ಮರಳಿ ಹೋಗುವಾಗ ಮಕ್ಕಳೂ ಅದರ ಹಿಂದೆ ಓಡತೊಡಗಿದರು. ಕೆಲವರಂತೂ ಚಲಿಸುತ್ತಿದ್ದ ವಾಹನವನ್ನೇ ಹತ್ತಿ ಸಂಭ್ರಮಿಸುತ್ತಿದ್ದರು. ಪದ್ಮಿನಿ ಸಹ ಗಾಡಿ ಹತ್ತಲು ಪ್ರಯತ್ನಿಸಿದಾಗ ವಾಹನದ ಒಂದು ಬದಿಗೆ ತಲೆ ಬಡಿಯಿತು. ಬವಳಿ ಬಂದು ಬಿದ್ದ ಹುಡುಗಿಗೆ ಎಚ್ಚರವಾದಾಗ ಜಗವೆಲ್ಲ ಕತ್ತಲಾಗಿತ್ತು. ಸಂಪೂರ್ಣ ಅಂಧತ್ವ ಆವರಿಸಿಕೊಂಡಿತ್ತು.
ಆಂಧ್ರಪ್ರದೇಶದ ರಂಗ ಸಿಂಗಪುಡು ಗ್ರಾಮದ ಕೂಲಿ ಕಾರ್ಮಿಕ ದಂಪತಿಗೆ ಐವರು ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡುಮಗ ಅಂಧರು. ಅವರಲ್ಲಿ ಒಬ್ಬಾಕೆ ವಿ.ರಾವಣ್ಣಿ. ಯಾರಿಗೂ ಹೊರೆಯಾಗಬಾರದು, ಕಷ್ಟಪಟ್ಟು ಸಂಸಾರ ನಿಭಾಯಿಸುತ್ತಿರುವ ಅಪ್ಪನಿಗೆ ಆಸರೆಯಾಗಿ ನಿಲ್ಲಬೇಕು, ನೌಕರಿ ಪಡೆಯಬೇಕು ಎಂಬ ದೃಢನಿಶ್ಚಯವೇ ರಾವಣ್ಣಿಯನ್ನು ಕ್ರಿಕೆಟ್‌ನತ್ತ ಸೆಳೆಯಿತು.
ಇನ್ನು ಇವರೆಲ್ಲರೂ ಆಡಿದ ಭಾರತ ತಂಡದ ನಾಯಕಿ, ಚಿತ್ರದುರ್ಗ ಜಿಲ್ಲೆಯ ವರ್ಷಾ ಉಮಾಪತಿ ಅವರದ್ದು ಮತ್ತೊಂದು ಬಗೆಯ ಕಥೆ. ಬಾಲ್ಯದಿಂದಲೂ ಭಾಗಶಃ ದೃಷ್ಟಿದೋಷ ಇತ್ತಾದರೂ ಸೈಕಲ್ ಓಡಿಸುವ, ಆಟವಾಡುವ ಆಕೆಯ ಬಯಕೆಯನ್ನು ಕುಂದಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಆದರೆ ನಿಧಾನವಾಗಿ ದೃಷ್ಟಿ ಕುಂದುತ್ತಾ ಬಂದು, 16ರ ಹರೆಯದಲ್ಲಿ ಸಂಪೂರ್ಣ ಅಂಧತ್ವ ಆವರಿಸಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲೂ ಕಷ್ಟವಾಯಿತು. ಆದರೂ ಆಕೆ ಛಲ ಬಿಡಲಿಲ್ಲ. ಚಿಕ್ಕಪ್ಪ, ಚಿಕ್ಕಮ್ಮನ ಸಹಾಯದಿಂದ ಬೆಂಗಳೂರಿನಲ್ಲಿ ಓದಿನ ಜೊತೆಗೆ ಕ್ರಿಕೆಟ್ ಆಟಗಾರ್ತಿಯಾಗಿಯೂ ಬೆಳೆದರು.
ಅಂದು ಇಂಗ್ಲೆಂಡ್‌ನಲ್ಲಿ ವರ್ಷಾ ಅವರೊಂದಿಗೆ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದ ತಂಡದಲ್ಲಿ ಭಾಗಶಃ ಅಂಧತ್ವದಿಂದ ಬಳಲುತ್ತಿರುವ ಸಾಂದ್ರಾ ಡೇವಿಸ್, ಬಸಂತಿ ಹನ್ಸಡಾ, ಸಿಮ್ರನ್‌ಜೀತ್ ಕೌರ್, ಸುನೀತಾ, ಸುಷ್ಮಾ ಪಟೇಲ್, ಎಂ.ಸತ್ಯವತಿ, ಫೂಲಾ ಸರೆನ್, ಝಿಲಿ ಬರುವಾ, ಗಂಗಾ ಸಂಭಾಜಿ ಕದಂ, ಗೀತಾ ಮಹತೊ,
ಎನ್.ಆರ್.ಕಾವ್ಯ, ಗಂಗವ್ವ ಹರಿಜನ ಕೂಡ ಇದ್ದರು. ಈ ಎಲ್ಲ ಹುಡುಗಿಯರದು ಕೌಟುಂಬಿಕ, ಸಾಮಾಜಿಕ, ಆರ್ಥಿಕ ಮತ್ತು ಪ್ರಾದೇಶಿಕ ವೈವಿಧ್ಯವಷ್ಟೇ ಅಲ್ಲ ಇವರಿಗಿರುವ ಸವಾಲುಗಳು ಸಹ ಭಿನ್ನ. ಆದರೂ ಇವರೆಲ್ಲರನ್ನೂ ಒಂದು ತಂಡವಾಗಿ ರೂಪಿಸಿದ್ದು ಕೂಡ ಇನ್ನೊಂದು ಛಲದ ಅಧ್ಯಾಯವೇ ಸರಿ.
ಸಾಮಾನ್ಯ ಆಟಗಾರರ ಕ್ರಿಕೆಟ್ ತರಬೇತಿಗೂ ಅಂಧ ಆಟಗಾರರ ತರಬೇತಿಗೂ ಅಜಗಜಾಂತರವಿದೆ. ಗಿಲಿ ಗಿಲಿ ಸದ್ದು ಹೊರಡಿಸುತ್ತಾ ಬರುವ ಚೆಂಡಿನ ಜಾಡು ಹಿಡಿದು ಬ್ಯಾಟ್ ಬೀಸುವ ಅಂಧ ಆಟಗಾರರನ್ನು ನೋಡಿದಾಗ
ಅಚ್ಚರಿಯಾಗುತ್ತದೆ. ಆದರೆ ಅವರನ್ನು ಆ ಮಟ್ಟಕ್ಕೆ ಸಜ್ಜುಗೊಳಿಸುವ ಪ್ರಕ್ರಿಯೆ ಮಾತ್ರ ಕಡುಕಠಿಣ ಸಾಹಸವೇ ಸರಿ. ಭಾರತ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಕೃತಿಕಾ ಚಾರ್ವಿ, ಮ್ಯಾನೇಜರ್ ಶಿಖಾ ಶೆಟ್ಟಿ ಹಾಗೂ ನೆರವು ಸಿಬ್ಬಂದಿ ಈ ಸವಾಲನ್ನು ಗೆದ್ದು ನಿಂತರು. ಕಡಿಮೆ ಅವಧಿಯಲ್ಲೇ ಉನ್ನತ ಸಾಧನೆ ಮಾಡುವ ಮಟ್ಟಕ್ಕೆ ತಂಡವನ್ನು ರೂಪಿಸಿದರು.
ಆ ತಂಡದ ಹುಡುಗಿಯರ ಈ ಎಲ್ಲ ಸಾಧನೆ, ಕೋಚಿಂಗ್ ಸಾಹಸಗಳನ್ನು ಇದೀಗ ‘ದೇಖ್ ಲೇ ಇಂಡಿಯಾ’ ಎಂಬ ಸಾಕ್ಷ್ಯಚಿತ್ರವೊಂದು ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಇದೇ 22ರಿಂದ 27ರವರೆಗೆ ತಿರುವನಂತ
ಪುರದಲ್ಲಿ ನಡೆಯಲಿರುವ ‘ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ಹಬ್ಬ’ದಲ್ಲಿ (ಐಡಿಎಸ್‌ಎಫ್‌ಎಫ್‌ಕೆ) ಚಿತ್ರವು ಪ್ರದರ್ಶನಗೊಳ್ಳಲಿದೆ. ನಂತರ ಅದು ಓಟಿಟಿಗೂ ಬರಲಿದೆ.
ಬಿ1– ಪೂರ್ಣ ಅಂಧತ್ವ ಇರುವ ಆಟಗಾರ್ತಿಯರು
ಬಿ2– ಸುಮಾರು 2 ಮೀಟರ್ ದೂರದವರೆಗೆ ನೋಡಬಲ್ಲವರು
ಬಿ3– 6ರಿಂದ 8 ಮೀಟರ್‌ವರೆಗೆ ದೃಷ್ಟಿ ಹಾಯಿಸಬಲ್ಲವರು
ನಿಯಮದ ಪ್ರಕಾರ, ಈ ಮೂರು ಬಗೆಯ ಆಟಗಾರ್ತಿಯರೂ ತಂಡದಲ್ಲಿ ಇರಬೇಕು. ಭಾಗಶಃ ಅಂಧತ್ವ ಇರುವವರು ಪೂರ್ಣ ಅಂಧರಿಗೆ ಸಹಾಯ ಮಾಡುತ್ತಾ ಪರಸ್ಪರ ತಂಡವಾಗಿ ರೂಪುಗೊಳ್ಳುವುದು, ತಮಗೇ ಅರಿವಿಲ್ಲದೆ ಪರಸ್ಪರ ಉತ್ತಮ ಸ್ನೇಹಿತರಾಗಿ, ಜೀವನ ಮತ್ತು ವ್ಯಕ್ತಿತ್ವವನ್ನು ಕ್ರಿಕೆಟ್ ಮೂಲಕ ಕಟ್ಟಿಕೊಳ್ಳುವ ಬಗೆ ಆಪ್ತವಾದುದು.
‘ದೇಖ್ ಲೇ ಇಂಡಿಯಾ’ ಸಾಕ್ಷ್ಯಚಿತ್ರವನ್ನು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಮುಕುಂದಮೂರ್ತಿ ಮತ್ತು ಮುಂಬೈನ ಚಿತ್ರ ನಿರ್ಮಾಪಕಿ ಶಾಂತಿ ಮೋಹನ್ ನಿರ್ಮಿಸಿದ್ದಾರೆ.
‘ಪ್ರತಿಯೊಂದರಲ್ಲೂ ನಾವು ತಾರತಮ್ಯ ಮಾಡುತ್ತೇವೆ, ಬಣ್ಣ, ಗಾತ್ರದಂತಹ ಕಾರಣಗಳಿಗಾಗಿ ಮನುಷ್ಯರನ್ನು ಜರಿಯುತ್ತೇವೆ. ನಾವು ಹೀಗೆಲ್ಲಾ ಮಾಡುತ್ತಿರುವುದು ನಮಗೆ ಅವನ್ನೆಲ್ಲಾ ನೋಡಲು ಸಾಧ್ಯವಿರುವುದರಿಂದ ತಾನೇ. ಆದರೆ ದೃಷ್ಟಿಯೇ ಇಲ್ಲದವರು ಜಗತ್ತನ್ನು ಹೇಗೆ ನೋಡಬಹುದು? ಅವರ ಮನದಲ್ಲಿ ತರತಮದ ಭಾವವಾದರೂ ಹೇಗೆ ಬರಲು ಸಾಧ್ಯ ಎಂಬ ಯೋಚನೆ ಬಂತು. ಆಗ, ಅಂಧರ ಜಗತ್ತಿನ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಬೇಕು ಎನಿಸಿತು. ವಿವಿಧ ಕ್ಷೇತ್ರಗಳಲ್ಲಿನ ಅಂಧರ ಕುರಿತು ಅಧ್ಯಯನ ಮಾಡುತ್ತಾ ಸಾಗಿದೆ. ಕೊನೆಗೆ ನನ್ನನ್ನು ಗಟ್ಟಿಯಾಗಿ ಸೆಳೆದಿದ್ದು ಅಂಧ ಹುಡುಗಿಯರ ಕ್ರಿಕೆಟ್ ತಂಡ’ ಎಂದು ಮುಕುಂದಮೂರ್ತಿ ಹೇಳುತ್ತಾರೆ.
‘ಈ ಹುಡುಗಿಯರ ಸಾಧನೆಯನ್ನು ನೋಡಿ ನಿಬ್ಬೆರಗಾದೆ. ಅದರಲ್ಲೂ ಹಳ್ಳಿಗಾಡಿನ ಬಡ ಕುಟುಂಬಗಳಿಂದ ಬಂದಿರುವವರು ಇವರು. ಸಾಮಾನ್ಯ ಹೆಣ್ಣುಮಕ್ಕಳೇ ಜೀವನದಲ್ಲಿ ಸಾಧನೆ ಮಾಡಲು ಹತ್ತಾರು
ಸವಾಲುಗಳನ್ನು ಎದುರಿಸಬೇಕು. ಅಂತಹುದರಲ್ಲಿ ಇವರು ಎಷ್ಟು ಕಷ್ಟ ಅನುಭವಿಸಬೇಕಾಗಬಹುದು ಎಂಬ ಯೋಚನೆ ಇನ್ನಿಲ್ಲದಂತೆ ಕಾಡಿತು. ಅದರ ನಡುವೆಯೂ ಇವರಲ್ಲಿ ಇರುವ ಛಲ ನನ್ನ ಮನಸ್ಸನ್ನು ಮುಟ್ಟಿತು.
ಅಲ್ಲಿಂದ ಶುರುವಾಯಿತು ನಮ್ಮ ಪಯಣ’ ಎನ್ನುತ್ತಾರೆ.
ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ (ಸಿಎಬಿಐ) ಸಂಸ್ಥಾಪಕ ಹಾಗೂ ಸಂಚಾಲಕ ಮಹಾಂತೇಶ್ ಕಿವುಡಸಣ್ಣವರ ಅವರಿಗೆ ಮುಕುಂದ ತಮ್ಮ ಯೋಜನೆಯನ್ನು ವಿವರಿಸಿದರು. ಆಗ ಮಹಾಂತೇಶ್, ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಮ್ಮ ತಂಡ ತೆರಳುತ್ತಿದ್ದು, ಆ ಸಾಧನೆಯನ್ನು ಆಧರಿಸಿ ಸಾಕ್ಷ್ಯಚಿತ್ರ ಮಾಡಬಹುದು ಎಂದು ಸಲಹೆಯಿತ್ತರು.
‘ನಾನು ಅತ್ಯಂತ ಸಣ್ಣ ಬಜೆಟ್‌ನಲ್ಲಿ ಚಿಕ್ಕ ಸಾಕ್ಷ್ಯಚಿತ್ರ ಮಾಡಲು ಯೋಜಿಸಿದ್ದೆ. ಶಾಂತಿ ಮೋಹನ್ ನನ್ನ ಜೊತೆಗೂಡಿದರು. ಸಿನಿಮಾಟೊಗ್ರಾಫರ್‌ಗಳಾದ ಖುಷಿ ಹಾಗೂ ಸುಪ್ರಿಯಾ ಅವರೂ ಕೈಜೋಡಿಸಿದರು. ಎಲ್ಲರೂ ಸೇರಿ ಕ್ರಿಕೆಟ್ ತಂಡದೊಂದಿಗೆ ಟೂರ್ನಿ ನಡೆಯಲಿದ್ದ ಸ್ಥಳಕ್ಕೆ ತೆರಳಿದೆವು. ಅಲ್ಲಿ ಪಂದ್ಯಗಳು, ಆಟಗಾರ್ತಿಯರ ಕ್ರೀಡಾಭ್ಯಾಸ ಎಲ್ಲವನ್ನೂ ಚಿತ್ರೀಕರಿಸಿದೆವು’.
‘ಎಲ್ಲ ಮುಗಿದು ಎಡಿಟಿಂಗ್‌ಗೆ ಮುಂಬೈನ ‘ಸೋಲ್ ಪ್ರೊಡಕ್ಷನ್’ ಎಂಬ ವಿಡಿಯೊ ಪ್ರೊಡಕ್ಷನ್ ಸಂಸ್ಥೆಗೆ ಹೋಗಿದ್ದೆವು. ಅದು ‘ಕಪಿಲ್ ಶೋ’ದಂತಹ ದೊಡ್ಡ ಕಾರ್ಯಕ್ರಮದ ದೃಶ್ಯಗಳ ಎಡಿಟಿಂಗ್ ಮಾಡುತ್ತದೆ. ನಮ್ಮ ಡಾಕ್ಯುಮೆಂಟರಿ ನೋಡಿದ ಸಂಸ್ಥೆಯು ಬಹಳ ಪ್ರೇರಣೆಗೊಂಡಿತು. ಇನ್ನಷ್ಟು ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ಸಿದ್ಧಗೊಳಿಸಲು ಉತ್ಸಾಹ ತೋರಿತು’ ಎಂದು ಮುಕುಂದ ಸ್ಮರಿಸಿದರು.
ಆನಂತರ ಎಲ್ಲ ಆಟಗಾರ್ತಿಯರ ಊರುಗಳಿಗೆ ತೆರಳಿ, ಅವರ ಮನೆ, ಬೆಳೆದುಬಂದ ಪರಿಸರವನ್ನು ಚಿತ್ರೀಕರಿಸಿಕೊಂಡು ಬರಲಾಯಿತು. 70 ನಿಮಿಷಗಳ ಈ ಡಾಕ್ಯುಮೆಂಟರಿಯ ಪ್ರೀಮಿಯರ್ ಶೋವನ್ನು ಬೆಂಗಳೂರಿನ ಸಮರ್ಥನಂ ಆರ್ಟ್ ಗ್ಯಾಲರಿಯಲ್ಲಿ ಆಯ್ದ ಪ್ರೇಕ್ಷಕರೆದುರು ಇತ್ತೀಚೆಗೆ ಆಯೋಜಿಸಲಾಗಿತ್ತು. ಅದನ್ನು ನೋಡಿದ ಹಲವರ ಕಂಗಳು ಜಿನುಗಿದವು.
‘ಹಾಡು, ಸಂಗೀತ ಎಲ್ಲವೂ ಇರುವುದು ನಮ್ಮ ಡಾಕ್ಯುಮೆಂಟರಿಯ ವಿಶೇಷ. ಆದ್ದರಿಂದ ಏಕತಾನತೆ ಕಾಡುವುದಿಲ್ಲ. ‘ಚಕ್ ದೇ ಇಂಡಿಯಾ’ ಎಂಬ ಬಾಲಿವುಡ್ ಹಿಟ್ ಸಿನಿಮಾ ಮಾದರಿಯಲ್ಲಿಯೇ ಇದಕ್ಕೆ ಹೆಸರಿಟ್ಟಿದ್ದೇವೆ. ಆ ಸಿನಿಮಾದಂತೆ ಇದು ಕೂಡ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಬಾಳಿನಲ್ಲಿ ಹಲವು ಸವಾಲುಗಳನ್ನು ಎದುರಿಸುವ ಎಲ್ಲರಿಗೂ ಸ್ಫೂರ್ತಿಯಾಗಲಿದೆ’ ಎನ್ನುವ ವಿಶ್ವಾಸ ಹೊಂದಿದ್ದಾರೆ ಮುಕುಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.