ADVERTISEMENT

ನಿಲ್ಲಿ... ಕ್ರಾಪ್‌ಟಾಪ್‌ ಧರಿಸುತ್ತಿದ್ದೀರಾ?

ಸುಶೀಲಾ ಡೋಣೂರ
Published 12 ಸೆಪ್ಟೆಂಬರ್ 2025, 23:30 IST
Last Updated 12 ಸೆಪ್ಟೆಂಬರ್ 2025, 23:30 IST
<div class="paragraphs"><p>ಕ್ರಾಪ್‌ಟಾಪ್‌</p></div>

ಕ್ರಾಪ್‌ಟಾಪ್‌

   

ಟ್ರೆಂಡಿ, ಫ್ಯಾಷನಬಲ್ ಕ್ರಾಪ್‌ಟಾಪ್‌ ಈಗ ಹದಿಹರೆಯದ ಹುಡುಗಿಯರ ಅತ್ಯಾಪ್ತ ದಿರಿಸು. ಸುಮ್ಮನೇ ಸ್ಟ್ರೀಟ್‌ನಲ್ಲಿ ಒಂದು ಸುತ್ತು ಹಾಕಿ ಬರುವುದೇ ಇರಲಿ, ಸಣ್ಣದೊಂದು ಶಾಪಿಂಗ್ ರೌಂಡ್ ಆದರೂ ಸರಿ, ಸ್ನೇಹಿತರೊಂದಿಗೆ ಸಿನಿಮಾ-ಸುತ್ತಾಟವೂ ಆಗಿರಬಹುದು... ಎಲ್ಲೆಡೆ, ಹುಡುಗಿಯರ ಮೊದಲ ಆಯ್ಕೆ ಆಕರ್ಷಕವಾದ ಕ್ರಾಪ್‌ಟಾಪ್.

‘ಯಾಕಿಷ್ಟ?’ ಎಂದು ಅವರನ್ನು ಕೇಳಿ ನೋಡಿ. ‘ಆರಾಮದಾಯಕ’,  ‘ಆಧುನಿಕ ಲುಕ್‌’ ಎಂದೆಲ್ಲ ಸಿದ್ಧ ಉತ್ತರಗಳು ನಿಮಗೆ ಸಿಗುತ್ತವೆ. ಆದರೆ, ಈ ದಿರಿಸಿಗೆ ಕೆಲವು ಪೋಷಕರ ವಿರೋಧವೂ ಇದೆ. ಏಕೆಂದರೆ, ಅದೀಗ ದಿರಿಸು ಮಾತ್ರವೇ ಆಗಿ ಉಳಿದಿಲ್ಲ. ಮಾನಸಿಕ, ದೈಹಿಕ ಸ್ವಾಸ್ಥ್ಯವನ್ನು ಪ್ರಭಾವಿಸುತ್ತಿರುವ ಆತಂಕಕಾರಿ ಬೆಳವಣಿಗೆಯಾಗಿದೆ. ಮೈಕಾಣಿಸುವ ಬಟ್ಟೆ ಧರಿಸುವುದರಿಂದ ಸೋಂಕು, ಶೀತದಂತಹ ವ್ಯತಿರಿಕ್ತ ಪರಿಣಾಮಗಳಿಗೆ ಒಡ್ಡಿಕೊಳ್ಳಬಹುದಾದ ಅಪಾಯ ಹೆಚ್ಚು ಎನ್ನುವುದು ತಜ್ಞರ ಎಚ್ಚರಿಕೆ.

ADVERTISEMENT

ದೇಹದ ಉಷ್ಣತೆಯಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಆಗುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಪಬ್, ಬಾರ್‌ನಂತಹ ಒಳಾಂಗಣ ವಾತಾವರಣ ಹಾಗೂ ಅಲ್ಲಿ ಸೇವಿಸುವ ಆಹಾರ, ಪಾನೀಯವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಅಲ್ಲಿಂದ ಇದ್ದಕ್ಕಿದ್ದಂತೆ ಹೊರಗಿನ ವಾತಾವರಣಕ್ಕೆ ಒಡ್ಡಿಕೊಂಡಾಗ, ಹೈಪೋಥರ್ಮಿಯಾದಂತಹ ಅಪಾಯಕ್ಕೆ ಗುರಿಯಾಗಬಹುದು. ಅಂದರೆ, ದೇಹದ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದಾಗ ಸಂಭವಿಸುವ ಅಪಾಯಕಾರಿ ಸ್ಥಿತಿ ಎನ್ನುವುದು ವೈದ್ಯರ ಎಚ್ಚರಿಕೆ.

ಆದರೆ, ಇದು ಇಲ್ಲಿಗೇ ನಿಲ್ಲುವುದಿಲ್ಲ. ಕ್ರಾಪ್‌ಟಾಪ್ ತೊಡಲು ನಡೆಸುವ ಪಡಿಪಾಟಲು ಇದೆಯಲ್ಲ, ಅದು ಮಕ್ಕಳಲ್ಲಿ ಆರೋಗ್ಯ ಹಾಗೂ ವರ್ತನೆಯ ಸಮಸ್ಯೆ
ಗಳನ್ನು ಸಹ ಹುಟ್ಟುಹಾಕುತ್ತಿದೆ. ಅದರಲ್ಲಿ ಹೊಕ್ಕಳಿನ ಅಂದ ಹೆಚ್ಚಿಸುವ ಕ್ರಮಗಳದ್ದೇ ಮೇಲುಗೈ. ಇಂತಹ ಟಾಪ್‌ಗಳನ್ನು ಧರಿಸಲು 12- 13ರ ವಯೋಮಾನದಲ್ಲಿಯೇ ಮಕ್ಕಳು ಹೊಕ್ಕಳಿನ ಸುತ್ತ ವ್ಯಾಕ್ಸಿಂಗ್ ಮಾಡಲು ಆರಂಭಿಸುತ್ತಾರೆ. ಹೊಟ್ಟೆಗೆ ಟ್ಯಾಟೂ ಹಾಕಿಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಜೊತೆಗೆ ಬೆಲ್ಲಿ ಬಟನ್ ಅಂದ ಹೆಚ್ಚಿಸುವ ಆಭರಣಗಳನ್ನು ಧರಿಸುವ ಹುಕಿ ಬೇರೆ.

ಮಕ್ಕಳು ಟ್ಯಾಟೂ ಹಾಕಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಾರೆ ಎನ್ನುವ ಖಾತರಿ ಇಲ್ಲ. ಟ್ಯಾಟೂ ಹಾಕುವ ಮಷೀನು, ಸೂಜಿ, ಇಂಕ್ ಹಾಗೂ ಡಿಸೈನ್ ಸ್ಟಿಕರ್‌ಗಳನ್ನು ಹೊಸವೇ ಬಳಸುತ್ತಿದ್ದಾರೆಯೇ ಎನ್ನುವುದನ್ನೂ ಅವರು ಗಮನಿಸದೇ ಹೋಗಬಹುದು. ವಿಧವಿಧದ ರಿಂಗ್, ಪಿನ್, ಬಟನ್‌ಗಳು (ಚಿನ್ನ, ಬೆಳ್ಳಿ, ಪ್ಲಾಟಿನಂ ಹಾಗೂ ಇಮಿಟೇಶನ್ ಆಭರಣ) ಹೊಕ್ಕಳನ್ನು ಅಲಂಕರಿಸುವುದಿದೆ. ಇವುಗಳಲ್ಲೂ ಸುರಕ್ಷಾ ಮಾನದಂಡಗಳನ್ನು ಯಾರೂ ನೋಡುವುದಿಲ್ಲವಾದ್ದರಿಂದ ಸೋಂಕುಗಳಿಗೆ ಒಡ್ಡಿಕೊಳ್ಳಬಹುದಾದ ಅಪಾಯಗಳನ್ನು ಕಡೆಗಣಿಸುವ ಹಾಗಿಲ್ಲ. ಈ ಬಟ್ಟೆ ತೊಡಲು ದೇಹ ಸಣ್ಣಗಿದ್ದರೆ ಚಂದ ಎನ್ನುವ ಒತ್ತಡವು ಅವರ ಊಟ-ತಿಂಡಿಯನ್ನು ನಿಯಂತ್ರಿಸುತ್ತದೆ. ಇದರಿಂದ, ಬೆಳೆಯುವ ಹಂತದಲ್ಲಿ ಮಕ್ಕಳು ಪೋಷಕಾಂಶಗಳ ಕೊರತೆ ಎದುರಿಸುವಂತೆ ಆಗಬಹುದು. ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎನ್ನುವುದನ್ನು ಪದೇ ಪದೇ ಗಮನಿಸುವುದು, ಫೋಟೊ ತೆಗೆದುಕೊಳ್ಳುವುದು, ತಮ್ಮ ನೋಟ-ನಿಲುವನ್ನು ತಾವೇ ಒಪ್ಪದೇ ಇರುವಂತಹ ವರ್ತನೆಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ.

ಡ್ರೆಸ್‌ಕೋಡ್ ಬಗ್ಗೆ ಮಾತನಾಡುವುದು ಮಾತ್ರವಲ್ಲ, ದಿರಿಸನ್ನು ಜವಾಬ್ದಾರಿಯಿಂದ ನೋಡುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಲು ಶಾಲಾ ಕಾಲೇಜುಗಳೂ ಪ್ರಯತ್ನಿಸಬೇಕು. ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ಈ ಬಗ್ಗೆ ಅರಿವು ಮೂಡಿಸಬೇಕು. ಬೆಳವಣಿಗೆಯ ಹಂತದಲ್ಲಿ ಅತಿ ಬಿಗಿಯಾದ, ಮೈ ಕಾಣುವಂತಹ ಬಟ್ಟೆಗಳನ್ನು ಏಕೆ ತೊಡಬಾರದು ಎನ್ನುವುದನ್ನು ವೈಜ್ಞಾನಿಕ ಕಾರಣಗಳ ಸಮೇತ ಮನವರಿಕೆ ಮಾಡಬೇಕು. ಮಾಧ್ಯಮ ಸಾಕ್ಷರತೆ, ಸೌಂದರ್ಯದ ಸಾಮಾಜಿಕ ಚಿತ್ರಣ, ಆರೋಗ್ಯಕರ ತೂಕ ನಿರ್ವಹಣೆ, ನಿಯಂತ್ರಣದಂತಹ ವಿಷಯಗಳ ಬಗ್ಗೆ ಇಂತಹ ವೇದಿಕೆಗಳಲ್ಲಿ ಚರ್ಚಿಸಬೇಕು.
ಇದರಲ್ಲಿ ಪೋಷಕರ ಪಾತ್ರ ಪ್ರಧಾನವಾಗಿರುತ್ತದೆ.

•ಫ್ಯಾಶನ್, ಟ್ರೆಂಡ್, ಎಲ್ಲರೂ ಹಾಕುತ್ತಾರೆ ಎನ್ನುವ ಕಾರಣಗಳಿಗೆ ಯಾವುದೋ ಒಂದು ಶೈಲಿಯನ್ನು ಅನುಸರಿಸದೆ, ತಮ್ಮ ದೇಹ, ನೋಟ-ನಿಲುವಿಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಲು ಮಕ್ಕಳಿಗೆ ಕಲಿಸಿ.

•18 ವರ್ಷದ ಒಳಗಿನವರು ಆಭರಣ ಧರಿಸುವ ಸಲುವಾಗಿ ಹೊಕ್ಕಳಿಗೆ ಚುಚ್ಚಿಸಿಕೊಳ್ಳುವುದನ್ನು, ಟ್ಯಾಟೂ ಹಾಕಿಸಿಕೊಳ್ಳುವುದನ್ನು ತಡೆಯಿರಿ. ಇಲ್ಲವೇ ನೀವೇ ಜೊತೆಗೆ ನಿಂತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ.

• ಕ್ರಾಪ್‌ಟಾಪ್ ತೊಟ್ಟು ಹೊರಗೆ ಹೋಗುವಾಗ ಹೊರಗಿನ ವಾತಾವರಣವನ್ನು ಗಮನಿಸಿ. ಸಂಜೆಯ ಸುಳಿಗಾಳಿಗೆ, ರಾತ್ರಿಯ ಚಳಿಗೆ ಧರಿಸಲು ಓವರ್‌ಕೋಟ್, ಜಾಕೆಟ್ ಜೊತೆಗಿರಲಿ.

•ಕ್ರಾ‍ಪ್‌ಟಾಪ್ ಲುಕ್‌ಗೆ ಪೂರಕವಾಗಿ ಹೈವೇಸ್ಟ್ ಪ್ಯಾಂಟ್- ಸ್ಕರ್ಟ್ ಹೊಂದಿಸಿಕೊಳ್ಳಿ.

•ಕ್ರಾಪ್‌ಟಾಪ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಧರಿಸಲು ಸೂಚಿಸಿ.

•ಕ್ರಾಪ್‌ಟಾಪ್‌ಗಳು ಸಾಧ್ಯವಾದಷ್ಟೂ ದಪ್ಪ ಫ್ಯಾಬ್ರಿಕ್‌ನಿಂದ ಕೂಡಿರಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.