ADVERTISEMENT

ತೀವ್ರ ಮುಟ್ಟಿನ ನೋವು: ಅಸಡ್ಡೆ ಬೇಡ, ಎಚ್ಚರವಹಿಸಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:41 IST
Last Updated 20 ಸೆಪ್ಟೆಂಬರ್ 2025, 5:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ಒಂದು ವಯಸ್ಸಿನ ನಂತರ ಮುಟ್ಟು ಎನ್ನುವುದು ಮಹಿಳೆಗೆ ಪ್ರಾಕೃತಿಕವಾಗಿ ಕಾಣಿಸಿಕೊಳ್ಳುವ ದೈಹಿಕ ಪ್ರಕ್ರಿಯೆ. ಹಲವರಿಗೆ ಈ ಸಂದರ್ಭವು ತೀರಾ ಕಿರಿಕಿರಿಯನ್ನೇನೂ ಉಂಟುಮಾಡದು. ಆದರೆ ಮತ್ತೆ ಕೆಲವರಿಗೆ ಈ ಸಮಯದಲ್ಲಿ ಹೇಳಲಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಇದು ಎಂಡೊಮೆಟ್ರಿಯೋಸಿಸ್‌ನ ಸೂಚನೆಯೂ ಆಗಿರಬಹುದು. ಭಾರತದಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಎಂಡೊಮೆಟ್ರಿಯೋಸಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅತಿಯಾದ ನೋವು ಕಂಡುಬಂದಲ್ಲಿ ಅಸಡ್ಡೆ ತೋರಬಾರದು.

ಏನಿದು ಎಂಡೊಮೆಟ್ರಿಯೋಸಿಸ್?

ಎಂಡೊಮೆಟ್ರಿಯೋಸಿಸ್ ಎನ್ನುವುದು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಗರ್ಭಾಶಯದ ಒಳಪದರದಂತಹ ಅಂಗಾಂಶವು ಗರ್ಭಾಶಯದ ಹೊರಗೆ ಬೆಳವಣಿಗೆಯಾಗುವ ಸ್ಥಿತಿ ಇದು. ಈ ಅಂಗಾಂಶವು ಅಂಡಾಶಯ, ಫಾಲೋಪಿಯನ್ ಟ್ಯೂಬ್, ಗರ್ಭಾಶಯದ ಹೊರಭಾಗ ಸೇರಿದಂತೆ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಮುಟ್ಟಿನ ಸಮಯದಲ್ಲಿ ಗರ್ಭಾಶಯದ ಒಳಪದರದಲ್ಲಿ ರಕ್ತಸ್ರಾವ ಆಗುವಂತೆಯೇ ಹೊರಗಿನ ಅಂಗಾಂಶದಲ್ಲೂ ರಕ್ತಸ್ರಾವವಾಗುತ್ತದೆ. ಆದರೆ ಈ ರಕ್ತಕ್ಕೆ ಹೊರಹೋಗಲು ದಾರಿಯಿಲ್ಲದ ಕಾರಣ ಅದು ನೋವು, ಉರಿಯೂತ ಮತ್ತು ಗಡ್ಡೆಗಳ ರಚನೆಗೆ ಕಾರಣವಾಗುತ್ತದೆ. ಒಂದು ವೇಳೆ ಇದನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ ಗರ್ಭಧಾರಣೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಇಂಥದ್ದೇ ಒಂದು ಪ್ರಕರಣದಲ್ಲಿ, 39 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹಲವಾರು ತಿಂಗಳುಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಮಹಿಳೆಗೆ ಪೋರ್ಟಲ್ ವೇನ್ ಥ್ರೊಂಬೋಸಿಸ್ ಇದ್ದುದು ಗಮನಕ್ಕೆ ಬಂತು. ಆಕೆಗೆ ಸಿ.ಟಿ ಸ್ಕ್ಯಾನ್‌, ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಹೊಟ್ಟೆಯ ಒಳಗೆ ರಕ್ತಸ್ರಾವ ಆಗಿರುವುದು ಕಂಡುಬಂದಿತು.

ADVERTISEMENT

ಇಷ್ಟೆ ಅಲ್ಲದೆ, ದೊಡ್ಡದಾದ ಎಂಡೊಮೆಟ್ರಿಯೋಟಿಕ್ ಸಿಸ್ಟ್‌ಗಳು ಒಡೆದುಹೋಗಿರುವುದು ಅಥವಾ ಹರಿದುಹೋಗಿರುವುದು ಕಂಡುಬಂತು. ಇದು ಎಂಡೊಮೆಟ್ರಿಯೋಸಿಸ್‌ನ ತೀವ್ರವಾದ ಸ್ವರೂಪವಾಗಿದೆ. ಅಂಡಾಶಯದ ಸಿಸ್ಟ್ ಒಡೆದುಹೋಗಿ, ಗುದನಾಳ ಮತ್ತು ಮೂತ್ರನಾಳಕ್ಕೆ ಅಂಟಿಕೊಂಡಿತ್ತು. ಇದೊಂದು ದೀರ್ಘಕಾಲದ ರೋಗಲಕ್ಷಣವಾಗಿದ್ದು, ಲ್ಯಾಪ್ರೊಸ್ಕೋಪಿಕ್ (ಕೀ ಹೋಲ್ ಸರ್ಜರಿ) ಮೂಲಕ ರಕ್ತಸ್ರಾವವನ್ನು ನಿಲ್ಲಿಸಿ, ಅಂಗಾಂಶವನ್ನು ತೆಗೆದುಹಾಕಲಾಯಿತು.

‌ಈ ಮುಂಚೆ 20ರಿಂದ 30ರ ವಯಸ್ಸಿನ ಮಹಿಳೆಯರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ 40ರ ಹರೆಯದವರಲ್ಲಿಯೂ ಇಂಥ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ಆರೋಗ್ಯ ಸಮಸ್ಯೆಗೆ ನಿಖರ ಕಾರಣ ತಿಳಿದಿಲ್ಲ. ಆದರೆ ಆನುವಂಶಿಕವಾಗಿಯೂ ಬರುವ ಸಾಧ್ಯತೆ ಇರುತ್ತದೆ. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ಪ್ರದೇಶಗಳಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, ಭಾರತದಾದ್ಯಂದ ಪ್ರಕರಣಗಳು ವರದಿಯಾಗುತ್ತಿವೆ. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಬಂಜೆತನ, ಫಲವತ್ತತೆ, ಕಡಿಮೆ ಎಎಮ್‌ಎಚ್‌ ಮಟ್ಟ ಮತ್ತು ಫಾಲೋಪಿಯನ್ ಟ್ಯೂಬ್‌ಗಳು ಬ್ಲಾಕ್ ಆಗುವಂತಹ ಸಂದರ್ಭಗಳು ಎದುರಾಗುತ್ತವೆ. ಇದರಿಂದ ಸಹಜವಾದ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ.

ಚಿಕಿತ್ಸೆಯಲ್ಲಿ ರೊಬೋಟಿಕ್ ತಂತ್ರಜ್ಞಾನ 


ಕೆಲವೊಂದು ಸಂಕೀರ್ಣವಾದ ಸಂದರ್ಭಗಳಿದ್ದಲ್ಲಿ ರೊಬೋಟಿಕ್ ಶಸ್ತ್ರಚಿಕಿತ್ಸೆಯು ಅತ್ಯಂತ ಸುಲಭ ಮತ್ತು ನಿಖರವಾದ ಚಿಕಿತ್ಸಾ ವಿಧಾನವಾಗಿದೆ. 3ಡಿ ವಿಷನ್ ಮತ್ತು ರೊಟೇಟಿಂಗ್ ಸಾಧನಗಳೊಂದಿಗೆ ಡಾ. ವಿನ್ಸಿ ರೊಬೋಟಿಕ್ ವ್ಯವಸ್ಥೆಯ ಮೂಲಕ ಪ್ರಮುಖ ಅಂಗಗಳಿಗೆ  ಶಸ್ತ್ರಚಿಕಿತ್ಸೆ ಮಾಡಲು ಮತ್ತು ರೋಗಿಯು ವೇಗವಾಗಿ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ.


ಲೇಖಕಿ: ಸ್ತ್ರೀರೋಗತಜ್ಞೆ, ವಾಸವಿ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.