ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಮಹಿಳೆಯರು ತಮ್ಮ ಪಾಲಿನ ‘ಎವರ್‌ಗ್ರೀನ್ ಹೀರೊ’ ಅಪ್ಪನೊಂದಿಗಿನ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪ ಒಂದು ದೊಡ್ಡ ಮರವಿದ್ದಂತೆ. ಆ ಮರದ ನೆರಳಿನಾಸರೆಯಲ್ಲಿ ಬೆಳೆಯುವ ಮಗಳಿಗೆ ಅಪ್ಪ ಕಲಿಸುವ ಜೀವನಪಾಠ ಅಗಾಧವಾದ ಶಕ್ತಿ ನೀಡುತ್ತದೆ, ಬದುಕಿನುದ್ದಕ್ಕೂ ಕೈಹಿಡಿದು ಮುನ್ನಡೆಸುತ್ತದೆ. ಅಂತಹ ಪ್ರೀತಿಪಾತ್ರನಿಗೊಂದು ಖುಷಿಯ ಅಪ್ಪುಗೆ ನೀಡಲು ‘ಫಾದರ್ಸ್ ಡೇ’ (ಜೂನ್ 15) ಸುಸಂದರ್ಭವಾಗಿ ಒದಗಿಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಮಹಿಳೆಯರು ತಮ್ಮ ಪಾಲಿನ ‘ಎವರ್‌ಗ್ರೀನ್ ಹೀರೊ’ ಅಪ್ಪನೊಂದಿಗಿನ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪ ಕೊಟ್ಟ ಪೆನ್ನು ಜೊತೆಗಿದೆ
-ಎಚ್.ಎಸ್.ಮುಕ್ತಾಯಕ್ಕ
ನನ್ನ ಅಪ್ಪ ದಿ. ಶಾಂತರಸರೆಂಬ ಆಕಾಶದ ಅಡಿಯಲ್ಲಿ, ತಾರೆಯಂತೆ ಹೊಳೆಯುವ ಆತನ ಮಾಸದ ನಗೆಯ, ಭರವಸೆಯ ಬೆಳಕಿನಲ್ಲಿ ನಾನು ಬೆಳೆದೆ. ಆತ ನನ್ನ ಕಾವ್ಯ ಗುರುವಷ್ಟೇ ಅಲ್ಲ ನನ್ನ ಮಾರ್ಗದರ್ಶಕನೂ ಸ್ನೇಹಿತನೂ ಆಪ್ತ ಸಲಹೆಗಾರನೂ ಆಗಿದ್ದ. ನಾನು ಚಿಕ್ಕವಳಿದ್ದಾಗ ಕತೆ ಪುಸ್ತಕಗಳನ್ನು ತಂದುಕೊಟ್ಟು, ಓದುವ ಅಭಿರುಚಿಯನ್ನು ಬೆಳೆಸಿದ. ಮುಂದೆ ಆ ಪುಸ್ತಕಗಳೇ ನನ್ನ ಅನುದಿನದ ಸ್ನೇಹಿತರಾಗುವಂತೆ ಮಾಡಿದ ಅಪ್ಪನಿಗೆ ನಾನೆಷ್ಟು ಋಣಿಯಾಗಿದ್ದರೂ ಸಾಲದು.
ನಾನು ಬರೆಯುತ್ತಾ ಹೋದಂತೆ ಎಂದೂ ಆತ ನನ್ನ ಕವಿತೆಗಳನ್ನು ತಿದ್ದಲಿಲ್ಲ. ಚೆನ್ನಾಗಿದೆಯೊ, ಇಲ್ಲವೊ ಎಂದು ಮಾತ್ರ ಹೇಳುತ್ತಿದ್ದ. ಕನ್ನಡಕ್ಕೆ ಮೊತ್ತಮೊದಲು ಗಜಲ್ ಕಾವ್ಯ ಪ್ರಕಾರವನ್ನು ತಂದ ಅಪ್ಪ, ಆ ಸಮಯದಲ್ಲಿ ಗಜಲ್ ಮತ್ತು ಉರ್ದು ಸಾಹಿತ್ಯದ ಬಗೆಗೆ ಸವಿಸ್ತಾರವಾಗಿ ತಿಳಿಸಿ ಹೇಳಿದ. ಹಾಗಾಗಿ, ನಾನು ಆನಂತರ ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ‘ಶುದ್ಧ ಗಜಲ್’ ಸಂಕಲನ ಕೊಡಲು ಸಾಧ್ಯವಾಯಿತು. ನನ್ನ ಕಾವ್ಯ ಯಾಾನಕ್ಕೆ ಆತನೇ ಪ್ರೇರಣೆಯಾಗಿದ್ದಾನೆ. ನನ್ನ ಸಾಹಿತ್ಯಿಕ ಬೆಳವಣಿಗೆಯಲ್ಲಿ ಆತನ ಪಾತ್ರ ಬಹುದೊಡ್ಡದು. ನಾನು ಮತ್ತು ಅಪ್ಪ ಎಷ್ಟೋ ಪುಸ್ತಕಗಳನ್ನು ಓದಿ, ಚರ್ಚಿಸಿ, ಆನಂದಿಸಿದ ರಸಗಳಿಗೆಗಳು ಒಂದೆರಡಲ್ಲ. ಆತನ ನೆರಳಿನಲ್ಲಿ ನಾನು ಬೆಳೆಯಬಾರದೆಂಬುದೇ ಅವನ ಆಶಯವಾಗಿತ್ತು. ತನ್ನ ಹೆಸರನ್ನು ನಾನು ಎಲ್ಲಿಯೂ ಉಪಯೋಗಿಸಬಾರದು ಎಂಬ ಕಟ್ಟಪ್ಪಣೆಯೂ ಇತ್ತು. ಹೀಗಾಗಿ, ನಾನು ಸ್ವತಂತ್ರವಾಗಿಯೇ ಬೆಳೆದೆ. ಸಾಹಿತ್ಯಿಕವಾಗಿ ಅಷ್ಟೇ ಅಲ್ಲ ಆತನ ವ್ಯಕ್ತಿತ್ವದ ಪ್ರಭಾವವೂ ನನ್ನ ಮೇಲಿದೆ. ಆತನ ಸರಳ ಸಜ್ಜನಿಕೆ, ಮಾತೃ ಹೃದಯ, ಅಧಿಕಾರ, ಹಣಕ್ಕಾಗಿ ಆಸೆ ಪಡದೇ ಇದ್ದುದು, ಜಾತೀಯತೆಯನ್ನು ಧಿಕ್ಕರಿಸಿದ್ದು, ಅನ್ಯಾಯದ ವಿರುದ್ಧದ ಹೋರಾಟ, ಶಿಸ್ತುಬದ್ಧ ಅಧ್ಯಯನ, ಬದುಕಿನ ಬಗೆಗೆ ಅದಮ್ಯ ಉತ್ಸಾಹ... ಇಂತಹ ಹಲವಾರು ಕಾರಣಗಳಿಂದ ಅಪ್ಪ ನನ್ನ ಬದುಕಿನ ಚೇತನವಾಗಿದ್ದ. ಭರವಸೆಯ ಕನಸಿನ, ಹಣ್ಣಿನಬುಟ್ಟಿಯನ್ನು ನನಗಾಗಿ ಹೊತ್ತು ತಂದ. ನನ್ನ ನೋವುಗಳನ್ನು ಮನೋಬಲವಾಗಿ ಬದಲಾಯಿಸಿ ಬದುಕಲು ಕಲಿಸಿದ ನನ್ನ ಅಪ್ಪ ಭೌತಿಕವಾಗಿ ನನ್ನ ಜೊತೆಗೆ ಇಂದು ಇರದಿದ್ದರೂ ಆತ ಕೊಟ್ಟ ‘ಮನೋಬಲ’ ಮತ್ತು ‘ಪೆನ್ನು’ ಸದಾ ನನ್ನ ಜೊತೆಗಿವೆ.
ಮೌನದ ಹಿಂದೆ ನೂರಾರು ಭಾವ
-ಧನ್ಯಾ ರಾಮ್‌ಕುಮಾರ್ ನಟಿ, ನಟ ರಾಮ್‌ಕುಮಾರ್ ಪುತ್ರಿ,
ನನ್ನಪ್ಪ ಸರಳ ಜೀವಿ. ತುಂಬಾ ಶಾಂತ ಸ್ವಭಾವದವರಾದರೂ ಅಷ್ಟೇ ಶಿಸ್ತಿನ ವ್ಯಕ್ತಿ. ಹಾಗೆಂದು ನಮ್ಮೊಂದಿಗೆ ಬೆರೆತು ಸಂಭ್ರಮಿಸುವ ಅವಕಾಶವನ್ನು ಅವರು ಕಳೆದುಕೊಳ್ಳುವುದಿಲ್ಲ. ಹೀಗೇ ಇರು, ಇದನ್ನೇ ಮಾಡು ಎಂದೆಲ್ಲ ಆಜ್ಞೆ ಮಾಡುವವರಲ್ಲ. ಶಾಲಾ ಕಾಲೇಜು ದಿನಗಳಲ್ಲಿ ನಮ್ಮನ್ನು ಶಿಸ್ತಿನಿಂದ ಬೆಳೆಸಿದರು. ಸ್ನೇಹಿತರ ಜೊತೆ ಪ್ರವಾಸ ಹೋಗುವಂತಹ ವಿಷಯಕ್ಕೆಲ್ಲ ಹಟ ಮಾಡಿದರೂ ಅವರಿಂದ ಗ್ರೀನ್ ಸಿಗ್ನಲ್ಲೇನೂ ಸಿಗುತ್ತಿರಲಿಲ್ಲ. ಆಗೆಲ್ಲ ಅವರನ್ನು ತುಂಬಾ ಬೈದುಕೊಳ್ಳುತ್ತಿದ್ದೆ. ಆದರೆ ಈಗ ಅದರ ಹಿಂದಿನ ಕಾಳಜಿಯ ಅರಿವಾಗಿದೆ.
ನನಗೇ ತಿಳಿಯದಂತೆ ಅಪ್ಪನ ಕೆಲವು ಗುಣಗಳನ್ನು ಅಳವಡಿಸಿಕೊಂಡಿದ್ದೇನೆ. ಚಿತ್ರರಂಗಕ್ಕೆ ಬರುವ ನನ್ನ ಅಪೇಕ್ಷೆಯನ್ನು ಅಪ್ಪ ಅಷ್ಟೇನೂ ಉತ್ಸಾಹದಿಂದ ಸ್ವೀಕರಿಸಲಿಲ್ಲ. ‘ಕಲಾವಿದರ ಜೀವನ ತೆರೆದ ಪುಸ್ತಕವಿದ್ದಂತೆ. ಅವರ ಜೀವನದ ಪ್ರತಿ ಆಗುಹೋಗೂ ಜನರೆದುರು ಅನಾವರಣ ಆಗುತ್ತಲೇ ಇರುತ್ತದೆ. ನಮ್ಮನ್ನು ಸದಾಕಾಲ ಎಲ್ಲರೂ ಗಮನಿಸುತ್ತಿರುತ್ತಾರೆ. ಯಶಸ್ಸು ಮಾತ್ರವಲ್ಲದೆ ನಮ್ಮ ಎಲ್ಲ ಹಿನ್ನಡೆ, ಸಂಕಷ್ಟಗಳೂ ಜನರೆದುರು ಬಯಲಾಗುತ್ತಿರುತ್ತವೆ. ಇಲ್ಲಿ ಖಾಸಗಿತನ ಅನ್ನುವುದು ಕಡಿಮೆ. ಅದಕ್ಕೆಲ್ಲ ಸಿದ್ಧಳಾಗಿದ್ದರೆ ಮಾತ್ರ ಹೋಗು’ ಅಂದಿದ್ದರು. ಅವರ ಆ ಮಾತಿನ ಅರ್ಥ ಕೂಡ ಆ ಕ್ಷಣಕ್ಕಿಂತ ಈಗ ಚೆನ್ನಾಗಿ ಆಗುತ್ತಿದೆ.
ಮೊದಲಿನಿಂದಲೂ ತಂದೆಯೊಂದಿಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಇದೆ. ಹಾಗಾಗಿ, ನಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ಅವರು ಯಾವಾಗಲೂ ನನಗೆ ಬೆಂಬಲವಾಗಿ ನಿಲ್ಲುತ್ತಾರೆ.
ಅಪ್ಪಂದಿರ ದಿನವನ್ನು ಬಹಳ ವಿಶೇಷವಾಗಿಯೇನೂ ಆಚರಿಸುವುದಿಲ್ಲ. ತಂದೆಗೆ ಇಷ್ಟವಾದ ಹೋಟೆಲ್‌ನಲ್ಲಿ ಮನೆಯವರೆಲ್ಲ ಒಟ್ಟಾಗಿ ಊಟ ಮಾಡುತ್ತೇವೆ. ಜೊತೆಯಾಗಿ ಕಾಲ ಕಳೆಯುವುದೇ ನಮಗೆ ಖುಷಿ, ಒಟ್ಟಾಗಿರುವುದೇ ನಮಗೆ ಉಡುಗೊರೆ, ಸಂಭ್ರಮ ಎಲ್ಲವೂ.
ಮಕ್ಕಳ ವಿಷಯದಲ್ಲಿ ತಂದೆ–ತಾಯಿ ಕೆಲವೊಮ್ಮೆ ಮೌನ ಕಾಯ್ದುಕೊಳ್ಳಬಹುದು. ಆದರೆ ಆ ಮೌನದ ಹಿಂದೆ ನೂರಾರು ಭಾವನೆಗಳು ಮತ್ತು ಹೇಳಿಕೊಳ್ಳಲಾಗದಂತಹ ವಿಷಯಗಳಿರುತ್ತವೆ. ಆ ಮೌನ ಸಾವಿರ ಮಾತುಗಳನ್ನು ಹೇಳುತ್ತದೆ. ಮಕ್ಕಳಾದ ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಜನ ನನ್ನನ್ನು ರಾಜ್‌ಕುಮಾರ್ ಅವರ ಮೊಮ್ಮಗಳು ಎಂದು ನೋಡುವಷ್ಟೇ ಗೌರವದಿಂದ ನಟ ರಾಮ್‌ಕುಮಾರ್ ಮಗಳು ಎಂದೂ ಗೌರವಿಸುತ್ತಾರೆ. ಒಬ್ಬಳು ಮಗಳಾಗಿ ನನಗೆ ಇದಕ್ಕಿಂತ ಖುಷಿ ನೀಡುವ ಸಂಗತಿ ಇನ್ನೇನಿರಲು ಸಾಧ್ಯ?
ಕರ್ತವ್ಯಕ್ಕೆ ಅಡ್ಡಿಯಾಗದ ಕಾಳಜಿ
-ಸೌಮ್ಯಾ ರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ
ಎಂಥ ಸಂದರ್ಭದಲ್ಲಿಯೂ ಜನರ ಒಳಿತಿನ ಬಗ್ಗೆಯೇ ಯೋಚಿಸುವ ಅಪ್ಪ, ನಾವು ಬದುಕಿರುವ ನಾಲ್ಕು ದಿನಗಳಲ್ಲಿ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಬೇಕು ಎನ್ನುವವರು. ಅವರ ಈ ಧೋರಣೆ ನನಗೆ ಸದಾ ಸ್ಫೂರ್ತಿ ನೀಡುತ್ತದೆ. ಇಲ್ಲಿಯವರೆಗೆ ಏನೇ ಕಲಿತಿದ್ದರೂ, ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದರೂ ಅದಕ್ಕೆ ಅವರ ಗುಣಗಳಿಂದ ಪ್ರಭಾವಿತಳಾಗಿರುವುದೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳಿಗೆ ಓದಿನ ವಿಷಯದಲ್ಲಿ ಹೆಚ್ಚು ಒತ್ತಡ ಇದ್ದೇ ಇರುತ್ತದೆ. ಈ ವಿಚಾರದಲ್ಲಿ ನನ್ನ ಅಪ್ಪ ತದ್ವಿರುದ್ಧ. ಇಂಥದ್ದನ್ನೇ ಓದು ಎಂದು ಎಂದಿಗೂ ಹೇಳಲಿಲ್ಲ. ಯಾವ ವಿಚಾರದಲ್ಲಿಯೂ ಹೇರಿಕೆ ಇರಲಿಲ್ಲ. ಏನು ಬೇಕಾದರೂ ಮಾಡು, ಆದರೆ ಅದು ಪ್ರಾಮಾಣಿಕವಾಗಿರಬೇಕು ಎಂಬುದಷ್ಟೇ ಅವರ ತತ್ವವಾಗಿತ್ತು. ಎಂಜಿನಿಯರಿಂಗ್ ಓದುವಾಗ ಒಂದು ವಿಷಯದಲ್ಲಿ ಫೇಲಾಗಿದ್ದೆ. ಫೋನ್ ಮಾಡಿ ಫೇಲಾಗಿರುವ ವಿಷಯ ತಿಳಿಸಿ ಜೋರಾಗಿ ಅಳಲು ಶುರು ಮಾಡಿದೆ. ಆಗ ಅಪ್ಪ ‘ಇದು ಬರೀ ಪರೀಕ್ಷೆಯಷ್ಟೆ. ಮತ್ತೆ ಬರೆಯಲು ಅವಕಾಶವಿದೆ. ನಾನು ನನ್ನ ಕಾಲೇಜು ದಿನಗಳಲ್ಲಿ ಟಾಪರ್ ಏನೂ ಆಗಿರಲಿಲ್ಲ’ ಎಂದು ಸಮಾಧಾನ ಮಾಡಿದ್ದರು.
ಮೊದಲಿನಿಂದಲೂ ಅಪ್ಪನಂತೆ ಜನರೊಂದಿಗೆ ನನ್ನ ಒಡನಾಟ ಹೆಚ್ಚಾಗಿಯೇ ಇತ್ತು. ಶಾಲಾ ಕಾಲೇಜು ದಿನಗಳಲ್ಲೇ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಸಂಘ ಸಂಸ್ಥೆಗಳ ಜತೆ ಒಡನಾಟ ಇಟ್ಟುಕೊಂಡಿದ್ದೆ. ಒಮ್ಮೆಯಂತೂ ಒಳಗೆ ಅಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದರು. ಹೊರಗೆ ನಾನು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದೆ. ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವಾಗ, ಜನರೊಂದಿಗೆ ಬೆರೆತು ಕೆಲಸ ಮಾಡುವಾಗ ‘ಬೇಡ’ ಎಂದು ಹೇಳಿದವರಲ್ಲ. ಮಗಳ ಬಗೆಗಿನ ಕಾಳಜಿ ಮತ್ತು ತಂದೆಯ ಕರ್ತವ್ಯದ ನಡುವೆ ಅಪ್ಪನಿಗೆ ಸ್ಪಷ್ಟತೆ ಇತ್ತು. ಹಾಗಾಗಿ, ಅವರು ನನ್ನ ಕೆಲಸಗಳಿಗೆ ಸದಾ ಪ್ರೋತ್ಸಾಹ ನೀಡಿದರು.
ಅಪ್ಪನ ತಾಳ್ಮೆಯದ್ದೇ ಒಂದು ತೂಕ. ಕಲಿಯಲೇಬೇಕು ಎಂದು ಪಣ ತೊಟ್ಟರೂ ಆ ಮಟ್ಟಿಗಿನ ತಾಳ್ಮೆಯನ್ನು ನನಗಿನ್ನೂ ರೂಢಿಸಿಕೊಳ್ಳಲು ಆಗಿಲ್ಲ. ಅವರು ನೀಡಿದ ಸ್ವಾತಂತ್ರ್ಯ ಮತ್ತು ಪ್ರೋತ್ಸಾಹ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿವೆ.
ದಾರಿ ಕಂಡುಕೊಳ್ಳಲು ಬಿಟ್ಟರು
-ಪ್ರಜ್ಞಾ ಚೌಟ, ವನ್ಯಜೀವಿತಜ್ಞೆ. ರಂಗಕರ್ಮಿ ಡಿ.ಕೆ.ಚೌಟ ಪುತ್ರಿ
‘ಯಯಾತಿ’ ನಾಟಕದಲ್ಲಿ ಬರುವ ಯಯಾತಿ ರಾಜ ಶಾಪದಿಂದಾಗಿ ವೃದ್ಧನಾಗುತ್ತಾನೆ. ಪುತ್ರ ಪುರು ತನ್ನ ಯೌವ್ವನವನ್ನು ತಂದೆಗೆ ಧಾರೆ ಎರೆದು ಶಾಪ ವಿಮೋಚನೆ ಮಾಡಿ ತಾನು ವೃದ್ಧಾಪ್ಯ ಸ್ವೀಕರಿಸುತ್ತಾನೆ. ಅಂಥ ಅವಕಾಶ ನನಗೆ ಸಿಕ್ಕಿದ್ದರೆ ಅಪ್ಪನಿಗೆ ನನ್ನ ಯೌವ್ವನವನ್ನು ಧಾರೆ ಎರೆಯುತ್ತಿದ್ದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿದ್ದ ಅಪ್ಪನಿಗೆ ಪದೇಪದೇ ಈ ಮಾತು ಹೇಳುತ್ತಿದ್ದೆ.
ನನ್ನಪ್ಪ ನಡೆದಾಡುವ ಎನ್‌ಸೈಕ್ಲೋಪಿಡಿಯಾದಂತಿದ್ದರು. ನನಗೆ ಯಾವುದೇ ರೀತಿಯ ಅನುಮಾನ ಬಂದರೆ, ಯಾವುದೇ ಪ್ರಶ್ನೆ ಮನಸ್ಸಲ್ಲಿ ಮೂಡಿದರೆ ಅದಕ್ಕೆ ಪರಿಹಾರ ನೀಡುತ್ತಿದ್ದವರು ನನ್ನಪ್ಪ. ಆದರೆ, ಲೆಕ್ಚರ್ ಕೊಡುತ್ತಿರಲಿಲ್ಲ. ಹೊರಗೆ ಹೋಗಿ ಬರುವಾಗಲೆಲ್ಲಾ ಪುಸ್ತಕ ತಂದುಕೊಡುತ್ತಿದ್ದರು. ಅವರು ಅಂದು ಕಲಿಸಿದ ಪುಸ್ತಕಪ್ರೀತಿಯಿಂದ ಇಂದು ಪುಸ್ತಕ ಓದದೆ ದಿನದೂಡುವುದೇ ಕಷ್ಟ ಎಂಬಂತಾಗಿದೆ. ಜೀವನ ಪಾಠ, ಬದುಕಿನ ವಾಸ್ತವ ಕಲಿಸಿದರು. ಜೊತೆಗೆ ದೇಶ ವಿದೇಶ ಸುತ್ತಿಸಿದರು. ‘ನನಗೆ ಅಪ್ಪ ಕೊಟ್ಟಿದ್ದು ಚೌಟ ಎಂಬ ಹೆಸರು ಮಾತ್ರ, ಉಳಿದ ಎಲ್ಲವನ್ನೂ ನಾನೇ ದುಡಿದು ಗಳಿಸಿದೆ. ನೀವೂ ಹಾಗೆಯೇ ಮಾಡಬೇಕು’ ಎಂದು ನಮಗೆ ಹೇಳುತ್ತಿದ್ದರು.
ನಾನು ಹಾಗೂ ಸಹೋದರ ಸಂದೀಪ್ ಚೌಟ (ಸಂಗೀತ ನಿರ್ದೇಶಕ) ಇಬ್ಬರೂ ನಮ್ಮ ದಾರಿ ಕಂಡುಕೊಳ್ಳಲು ಬಿಟ್ಟರು. ನಾವಿಬ್ಬರೂ ಜನಿಸಿದ್ದು ಆಫ್ರಿಕಾದ ಘಾನಾದಲ್ಲಿ. ಆಗ ಅಪ್ಪ ಅಲ್ಲಿ ಬ್ರಿಟಿಷ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಮುಂಬೈನಲ್ಲಿ ನೆಲಸಿದ್ದಾಗ ಆಗಾಗ್ಗೆ ಅಂಬಾಸಿಡರ್ ಕಾರಿನಲ್ಲಿ ಮಂಗಳೂರಿಗೆ ಕರೆತರುತ್ತಿದ್ದರು. ಅದೊಂದು ದೊಡ್ಡ ಅನುಭವ. ಪಶ್ಚಿಮ ಘಟ್ಟದ ಆ ಸೊಬಗು ಸವಿಯುವುದೇ ಪರಮಾನಂದ. ಊರಿನಲ್ಲಿ ಯಕ್ಷಗಾನ, ಭೂತಕೋಲ ತೋರಿಸುತ್ತಿದ್ದರು. ರಾತ್ರಿ ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪರಂಪರೆ, ಸಂಪ್ರದಾಯ ಕಲಿಸಿಕೊಟ್ಟರು. ಆಮೇಲೆ ನಮ್ಮನ್ನು ಬೆಂಗಳೂರಿನಲ್ಲಿ ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿದರು. ರಜಾ ಅವಧಿಯಲ್ಲಿ ನೈಜೀರಿಯಾಕ್ಕೆ ಹೋಗುತ್ತಿದ್ದೆವು. ಅಲ್ಲಿ ಅಪ್ಪ ಬ್ಯುಸಿನೆಸ್ ನಡೆಸುತ್ತಿದ್ದರು.
ನಾನು ಆನೆಗಳನ್ನು ನೋಡಿಕೊಳ್ಳಲು ಕಾಡಿಗೆ ಹೊರಟಿದ್ದು ಅಪ್ಪನಿಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಮಗಳು ಯಾವುದಾದರೂ ಸುಲಭದ ಕೆಲಸದಲ್ಲಿ ತೊಡಗಿಕೊಳ್ಳಬೇಕು, ತೊಂದರೆ ಏಕೆ ತೆಗೆದುಕೊಳ್ಳಬೇಕು ಎಂಬ ವಾದ ಅವರದಾಗಿತ್ತು. ಆದರೆ, ಸುಲಭದ ಕೆಲಸದಲ್ಲಿ ಸವಾಲು ಇರದು, ಆಸಕ್ತಿ ಇದ್ದರೆ ಯಾವುದೇ ಕೆಲಸ ಸುಲಭವಾಗುತ್ತದೆ ಎಂಬುದು ನನ್ನ ವಾದವಾಗಿತ್ತು. ‘ಇಲ್ಲಿಯೇ ಇದ್ದು ಬಿಳಿಯಾನೆ ನೋಡಿಕೊಳ್ಳುವುದು ಬಿಟ್ಟು, ಆ ಕಪ್ಪು ಆನೆ ಸಾಕಲು ಹೋಗುತ್ತೀಯಾ’ ಎಂದು ಜೋಕ್ ಮಾಡುತ್ತಿದ್ದರು. ನಂತರ ನನ್ನ ಕೆಲಸ ಒಪ್ಪಿಕೊಂಡು ಕಾಡಿಗೆ ಬಂದು ನೋಡುತ್ತಿದ್ದರು.
ನಾನು ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದೆ. ನನ್ನ ಪತಿ ಫ್ರಾನ್ಸ್ ದೇಶದವರು. ಅವರನ್ನು ಮದುವೆಯಾಗುವುದು ಮೊದಲು ಅಪ್ಪನಿಗೆ ಇಷ್ಟವಿರಲಿಲ್ಲ. ವರ್ಷದ ಬಳಿಕ ಪೋಷಕರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸಂಪ್ರದಾಯದಂತೆ ವಿವಾಹ ನಡೆಯಿತು. ಮದುವೆಯಾಗಿ 33 ವರ್ಷಗಳೇ ಕಳೆದಿವೆ. ಪತಿ ಹಾಗೂ ಮಗಳೊಂದಿಗೆ ಅಪ್ಪನ ನೆನಪಿನಲ್ಲಿ ಬದುಕು ಸಾಗಿದೆ.
ಸಂಗೀತಾಸಕ್ತಿಗೆ ನೀರೆರೆದ ಸಂಸ್ಕಾರವಂತ
-ಸಂಗೀತಾ ಕಟ್ಟಿ, ಹಿಂದೂಸ್ತಾನಿ ಗಾಯಕಿ
‘ಅವಕಾಶ ಎನ್ನೋದು ತಾನಾಗಿಯೇ ಸಿಗೋದಿಲ್ಲ, ನಾವಾಗಿಯೇ ಸಾಧನೆ ಮಾಡಬೇಕು, ಹುಡುಕಿಕೊಳ್ತಾ ಹೋಗಬೇಕು, ಸಾಧನೆಯ ಹಾದಿಯಲ್ಲಿ ಪರಿಶ್ರಮ ಪಡಬೇಕು. ಸಿದ್ಧಿಸಿಕೊಂಡ ವಿದ್ಯೆಗೆ ಆಗ ತಕ್ಕ ಪ್ರತಿಫಲ ಸಿಗುತ್ತದೆ’ ಇದು ನನ್ನ ತಂದೆ ನನಗೆ ಹೇಳಿಕೊಟ್ಟ ಜೀವನಪಾಠ. ನಾನು ಈಗ ಹಾಡುತ್ತಿದ್ದೇನೆ, ಸಂಗೀತಗಾರ್ತಿ ಆಗಿದ್ದೇನೆ ಅಂದರೆ ಅದರ ಕ್ರೆಡಿಟ್ ನಮ್ಮ ತಂದೆಗೇ ಹೋಗಬೇಕು. ಈಗಿನ ಜನರೇಶನ್ ತುಂಬಾ ಮುಂದುವರಿದಿದೆ. ಮನೆಯಲ್ಲೋ ಶಾಲೆಯಲ್ಲೋ ಮಕ್ಕಳನ್ನು ‘ನೀನು ಮುಂದೆ ಏನಾಗುತ್ತೀ?’ ಎಂದು ಕೇಳಿದ ತಕ್ಷಣ ಅವರು ಆ್ಯಕ್ಟರ್, ಸಿಂಗರ್, ಎಂಜಿನಿಯರ್, ಡಾಕ್ಟರ್... ಎಂದೆಲ್ಲ ಪಟಪಟನೆ ಹೇಳಿಬಿಡುತ್ತಾರೆ. ನಮ್ಮ ಕಾಲದಲ್ಲಿ ಆಗ ನಮಗೆ ಇವೆಲ್ಲ ಗೊತ್ತೇ ಇರಲಿಲ್ಲ. ಹೇಳಿಕೊಡುವವರೂ ಇರಲಿಲ್ಲ.
ಸಂಗೀತದಲ್ಲಿ ನಾನು ಇಷ್ಟೆಲ್ಲ ಹೆಸರು ಮಾಡಿದ್ದೇನೆ ಅಂದರೆ ಅದಕ್ಕೆ ಕಾರಣ, ಅತಿ ಚಿಕ್ಕ ವಯಸ್ಸಿನಲ್ಲೇ ಅಪ್ಪ ಮನೆಯಲ್ಲಿ ಹುಟ್ಟುಹಾಕಿದ ಸಂಗೀತ ಕೇಳುವ ಅಭ್ಯಾಸ. ಮಕ್ಕಳಿಗೆ ಶ್ರವಣ ಸಂಸ್ಕಾರ ಮುಖ್ಯ ಎನ್ನುತ್ತಿದ್ದ ಅವರು, ಎಳವೆಯಲ್ಲೇ ನನಗೆ ಅದನ್ನು ರೂಢಿಸಿದ್ದರು.
ನಮ್ಮ ತಂದೆ ಪ್ರೊ. ಹನುಮಂತಾಚಾರ್ ಕಟ್ಟಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದವರು. ಮನೆಯಲ್ಲಿ ಸಂಗೀತಗಾರರೇನೂ ಇರಲಿಲ್ಲ. ಸರಸ್ವತಿ ಹಬ್ಬದ ದಿನ ನಾನು ಹುಟ್ಟಿದ್ದರಿಂದ ನನಗೆ ‘ಸಂಗೀತಾ’ ಎಂದು ಹೆಸರಿಟ್ಟರು. ಆದರೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಬಗ್ಗೆ ನನಗಿದ್ದ ಆಸಕ್ತಿಯನ್ನು ಗಮನಿಸಿದ ಅಪ್ಪ ಸಂಗೀತ ಅಭ್ಯಾಸಕ್ಕೆ ಸೇರಿಸಿದರು. ಬಾಲಿವುಡ್ ಸಂಗೀತ ನಿರ್ದೇಶಕ ನೌಷಾದ್ ಅಲಿ ಅವರನ್ನು ಮನೆಗೆ ಕರೆಸಿದ್ದರು. ಅವರಿಂದ ಸಂಗೀತದ ಆರಂಭಿಕ ಪಾಠ ಕಲಿಯುವ ಸೌಭಾಗ್ಯ ನನ್ನದಾಯಿತು. ಬಳಿಕ ಶೇಷಗಿರಿ ದಂಡಾಪುರ ಅವರ ಗುರುಕುಲಕ್ಕೆ ಸಂಗೀತಾಭ್ಯಾಸಕ್ಕಾಗಿ ಹೋಗುವಾಗ ನನ್ನಪ್ಪ ನನ್ನನ್ನು ದಿನಾ ಸೈಕಲ್‌ನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದರು. ಸಂಗೀತ ಪಾಠದ ನೋಟ್ಸ್ ಸೇರಿದಂತೆ ಬಂದೀಶ್, ಖಯಾಲ್ ಎಲ್ಲವನ್ನೂ ಅಪ್ಪನೇ ಬರೆದುಕೊಡುತ್ತಿದ್ದರು.
ಸಂಗೀತ ಕೇಳ್ಮೆಯಿಂದಲೂ ಬರುತ್ತದೆ ಎಂಬ ಮಾತಿನ ಮೇಲೆ ಅಪ್ಪ ಬಹಳ ವಿಶ್ವಾಸವಿಟ್ಟಿದ್ದರು. ಧಾರವಾಡ ಸುತ್ತಮುತ್ತ ಎಲ್ಲಿಯೇ ಸಂಗೀತ ಕಛೇರಿ ನಡೆದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಪಂ. ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಅವರಂತಹ ದಿಗ್ಗಜರ ಸಂಗೀತವನ್ನು ತಪ್ಪದೇ ಕೇಳುವ ಅವಕಾಶ ನನಗೆ ಸಿಕ್ಕಿತು, ಶಾಸ್ತ್ರೀಯ ಸಂಗೀತ ಕಲಿಯಲು ಪ್ರೇರಣೆಯೂ ಆಯಿತು. ಹೀಗೆ ನನ್ನ ಸಂಗೀತ ಪಯಣದುದ್ದಕ್ಕೂ ಅಪ್ಪನ ಪ್ರೋತ್ಸಾಹ ಇರುತ್ತಲೇ ಇತ್ತು. ಹೀಗಾಗಿ, ‘ಮೈ ಫಾದರ್ ಈಸ್ ದ ಮೇಕರ್ ಆಫ್ ಸಂಗೀತಾ ಕಟ್ಟಿ’ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
ಸಂಸ್ಕಾರವೂ ಆನುವಂಶಿಕ
–ರೇವತಿ ಕಾಮತ್ ಉದ್ಯಮಿ, ಪರಿಸರವಾದಿ
ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು, ಬದುಕಿನಲ್ಲಿ ಬರುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅದು ಅವರಿಗೆ ಅಪಾರವಾದ ಬಲ ತಂದುಕೊಡುತ್ತದೆ ಎಂದು ನಂಬಿದ್ದವರು ನನ್ನಪ್ಪ. ಅದೇ ಕಾರಣಕ್ಕೆ, ಮಧ್ಯಮವರ್ಗದ, 8 ಮಕ್ಕಳ ತುಂಬು ಕುಟುಂಬದಲ್ಲೂ ತನ್ನ ಆರೂ ಹೆಣ್ಣುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿದರು. ಅದ್ಯಾಕೋ ಹೆಣ್ಣುಮಕ್ಕಳು ಹೊರಗೆ ಕೆಲಸಕ್ಕೆ ಹೋಗುವುದು ಮಾತ್ರ ಅಪ್ಪನಿಗೆ ಸುತರಾಂ ಇಷ್ಟವಿರಲಿಲ್ಲ. ಮನೆಕೆಲಸ, ಹೊರಗಿನ ಕೆಲಸ ಎರಡೆರಡು ಒತ್ತಡ ಅವರ ಮೇಲೆ ಬೀಳುತ್ತದೆ ಎನ್ನುವ ಕಳಕಳಿ ಇದ್ದಿರಬಹುದು. ಆದರೆ ಅಷ್ಟೊಂದು ಅಕ್ಕರಾಸ್ಥೆಯಿಂದ ಅಪ್ಪ ಬಿತ್ತಿದ್ದ ವಿದ್ಯೆಯ ಬೀಜ ಹೆಮ್ಮರವಾಗಿ ಫಲ ಕೊಡದೇ ಬಿಟ್ಟೀತೆ? ನಾವೆಲ್ಲ ಹೆಣ್ಣುಮಕ್ಕಳೂ ಒಬ್ಬರಿಗಿಂತ ಒಬ್ಬರು ಉತ್ತಮವಾದ ಕೆಲಸಗಳಲ್ಲೇ ತೊಡಗಿಕೊಂಡೆವು.
ಅತ್ಯಂತ ಜಾಲಿ ಸ್ವಭಾವದವರಾಗಿದ್ದ ಅಪ್ಪ ಜೋಕ್‌ಗಳನ್ನು ಹೇಳಿಕೊಂಡು ಮಕ್ಕಳನ್ನು ನಗಿಸುತ್ತಾ ಇರುತ್ತಿದ್ದರು. ಹಾಗಾಗಿ, ನನ್ನ ಬಾಲ್ಯದ ನೆನಪುಗಳು ಯಾವಾಗಲೂ ನನ್ನಲ್ಲಿ ಮಂದಹಾಸವನ್ನೇ ಮೂಡಿಸುತ್ತವೆ. ನನ್ನ ಬದುಕನ್ನು ಇನ್ನಿಲ್ಲದಂತೆ ಆವರಿಸಿಕೊಂಡಿರುವ ವೀಣಾಭ್ಯಾಸ, ಅಪ್ಪನಿಂದ ನನಗೆ ದೊರೆತ ವರದಾನ. ಈಗಲೂ ದಿನಾ ರಾತ್ರಿ ಕನಿಷ್ಠ ಒಂದು ತಾಸಾದರೂ ವೀಣೆ ನುಡಿಸದೇ ಮಲಗುವುದಿಲ್ಲ. ಅಪ್ಪ– ಅಮ್ಮನ ನೆನಪಿನಲ್ಲಿ ‘ಶ್ಯಾಮಲಾ ಕೃಷ್ಣ ಸಂಗೀತ ಸಭಾ’ ಎಂಬ ಸಂಸ್ಥೆ ಸ್ಥಾಪಿಸಿ ಸಂಗೀತ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದ್ದೇನೆ. ಶೃಂಗೇರಿ ಶಾರದೆಯ ಸನ್ನಿಧಿಯಲ್ಲಿ ಪ್ರತಿ ಶುಕ್ರವಾರ ಸಂಗೀತ ಸೇವೆ ನೀಡಲು ವೀಣೆ ಹಿಡಿದು ಹೊರಡುತ್ತಿದ್ದ ಅಪ್ಪ, ದೇಗುಲದ ಎದುರಿನ ಕಲ್ಲಿನ ಕಟ್ಟೆಯಲ್ಲಿ ವಿಭೂತಿ ಹಚ್ಚಿಕೊಂಡು ವೀಣೆ ನುಡಿಸುತ್ತಾ ಕುಳಿತಿರುತ್ತಿದ್ದ ಭಂಗಿ, ಅಲ್ಲಿ ಕೇಳಿಬರುತ್ತಿದ್ದ ನಗಾರಿಯ ಸದ್ದು ಎಲ್ಲವೂ ಮೂರ್ನಾಲ್ಕು ದಶಕಗಳಾದರೂ ನನ್ನ ಮನದಲ್ಲಿ ಅಚ್ಚೊತ್ತಿದಂತಿವೆ.
ಯಾವುದೇ ಮನೆಯಲ್ಲಿ ಅಪ್ಪನ ವ್ಯಕ್ತಿತ್ವ ಗಟ್ಟಿಯಾಗಿದ್ದರೆ ಆ ಮನೆಯ ಮಕ್ಕಳ ಆತ್ಮಬಲ ತಾನೇತಾನಾಗಿ ವರ್ಧಿಸುತ್ತದೆ. ಮನೆಯಲ್ಲಿ ಮಗು ಸಂತೋಷದಿಂದ, ನೆಮ್ಮದಿಯಿಂದ ಇರುವಂತಾದರೆ ಅದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತೆಯೇ ಸರಿ. ಅಂತಹದ್ದೊಂದು ವಾತಾವರಣವನ್ನು ಅಪ್ಪ ನಮಗೆ ಕಲ್ಪಿಸಿದರು. ಅನಿಸಿದ್ದನ್ನು ಮುಕ್ತವಾಗಿ ಹೇಳುವ ಸ್ವಭಾವ ಅಪ್ಪನಿಂದ ನನಗೆ ಬಳುವಳಿಯಾಗಿ ಬಂದಿದೆ. ಆಸ್ತಿ ಅಂತಸ್ತಿನ ಗೀಳು ಹತ್ತಿಸಿಕೊಳ್ಳಬಾರದು ಎನ್ನುತ್ತಿದ್ದ ಅವರ ಮಾತು, ಅತ್ಯಂತ ಸರಳವಾದ ಬದುಕಿಗೆ ಯಾವಾಗ ಬೇಕಾದರೂ ಒಗ್ಗಿಕೊಂಡುಬಿಡಬಹುದಾದಷ್ಟು ಆಳವಾಗಿ ನನ್ನೊಳಗೆ ಬೇರುಬಿಟ್ಟಿದೆ. ಎಷ್ಟು ದುಡ್ಡಿದೆಯೋ ಅಷ್ಟರಲ್ಲೇ ಬದುಕಬೇಕು, ಎಂದಿಗೂ ಸಾಲಕ್ಕಾಗಿ ಕೈಚಾಚಬಾರದು ಎಂಬ ಅವರ ಬದುಕಿನ ಮೂಲಮಂತ್ರ ನನ್ನಿಂದ ನನ್ನ ಮಕ್ಕಳವರೆಗೂ ಸಾಗಿ ಬಂದಿದೆ. ಝೆರೋದಾದಂತಹ ಸಂಸ್ಥೆಯನ್ನು ಪೈಸೆ ಸಾಲವೂ ಇಲ್ಲದೆ ಕಟ್ಟುವುದಕ್ಕೆ ಅವರಿಗೆ ಸಾಧ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರಕ್ಕಿಂತ ಹೆಚ್ಚಿನದಾಗಿ ಕೊಡಬಹುದಾದ ಆಸ್ತಿ ಬೇರೆನು ತಾನೇ ಇರಲು ಸಾಧ್ಯ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.