
ಮೆಜೆಸ್ಟಿಕ್
‘ಮೆಜೆಸ್ಟಿಕ್‌ಗೆ ಹೋಗುತ್ತಾ’ ಎಂದು ಕೂಗುತ್ತಲೇ ಓಡಿಬಂದು ಬಸ್ ಹತ್ತಿದ ಅವಳ ಸೊಂಟದಲ್ಲಿ ಸಣ್ಣ ಮಗು, ಕೈಗಳಲ್ಲಿ ಎರಡು ದೊಡ್ಡ ದೊಡ್ಡ ಬ್ಯಾಗುಗಳಿದ್ದವು. ಏದುಸಿರು ಬಿಡುತ್ತಿದ್ದ ಅವಳು, ಅಲ್ಲೇ ಖಾಲಿ ಇದ್ದ ಸೀಟಿನತ್ತ ಮಗಳನ್ನು ತಳ್ಳಿ, ‘ಹೋಗಿ ಕುತ್ಕೊ, ಖಾಲಿ ಇದೆ’ ಎಂದಳು. ಅದನ್ನು ನೋಡಿದ ಯಾರಿಗೇ ಆದರೂ ಇವಳು ಬೆಂಗಳೂರಿಗೆ ಹೊಸಬಳು ಎಂಬುದು ತಿಳಿಯುತ್ತಿತ್ತು. ಏಕೆಂದರೆ, ಅದು ಕಂಡಕ್ಟರ್‌ಗೆ ಮೀಸಲಾದ ಸೀಟಾಗಿತ್ತು.
ಆಗ ತಕ್ಷಣ ಡ್ರೈವರ್ ‘ಏ ಹೋಗಿ ಬೇರೆ ಸೀಟಲ್ಲಿ ಕೂತ್ಕೊ, ಇದು ಕಂಡಕ್ಟರ್ ಸೀಟು’ ಎಂದು ಗದರಿದಾಗ ಅವಳು, ‘ಹೋಗ್ಲಿ ಬಾ, ಇಲ್ಲಿ ಕೂತ್ಕೊ ಎನ್ನುತ್ತಾ’ ಡ್ರೈವರ್ ಕ್ಯಾಬಿನ್ ಒಳಗೆ ಎತ್ತರಕ್ಕೆ ಇದ್ದ ಜಾಗದ ಮೇಲೆ ಮಗಳನ್ನು ಕೂರಿಸಿದಳು. ಅವಳು ಸುಮಾರು 20 ವರ್ಷದ ಒಳಗಿನವಳೇ ಆಗಿದ್ದಿರಬಹುದು. ಹಳ್ಳಿಯವಳಂತಿದ್ದ ಅವಳು ಬಡತನದಿಂದ ಅಥವಾ ಮನೆಯವರ ಒತ್ತಾಯಕ್ಕೆ ಬೇಗ ಮದುವೆಯಾಗಿರಬಹುದು ಅನ್ನಿಸಿತು.
ಮತ್ತೆ ಅವಳು ಮಗಳನ್ನು ನೋಡಿ, ‘ಸರಿ ಕುತ್ಕೊ, ಬೀಳ್ತೀಯ’ ಎಂದು ಕೂಗಿದಳು. ಆಗ ಡ್ರೈವರ್ ‘ಏಯ್, ಮೆಲ್ಲಗ್ ಮಾತಾಡು, ಏನ್ ಅಷ್ಟು ಜೋರಾಗಿ ಕಿರುಚ್ತೀಯ?’ ಎಂದರು. ಅವಳಿಗೆ ಎಲ್ಲಿತ್ತೋ ಕೋಪ, ‘ಹೋಯ್, ಏನು ಹಂಗ್ ಮಾತಾಡ್ತೀಯ? ಈ ಬಸ್ಸೇನು ನಿಮ್ಮಪ್ಪಂದಾ?’ ಅಂದಳು. ಅದಕ್ಕೆ ಅವರು, ‘ಏನು ಅಪ್ಪ ಅಂತೆಲ್ಲ ಮಾತಾಡ್ತೀಯ’ ಎಂದು ಜೋರು ಮಾಡಿದರು. ಅದಕ್ಕೇನೂ ಹೆದರದ ಅವಳು ‘ಈ ಬಸ್ಸು, ನಿಮ್ಮಪ್ಪಂದೂ ಅಲ್ಲ, ನಮ್ಮಪ್ಪಂದೂ ಅಲ್ಲ, ಸರ್ಕಾರದ್ದು. ಸುಮ್ನೆ ಮುಂದೆ ನೋಡ್ಕೊಂಡು ಗಾಡಿ ಓಡ್ಸು. ಹೆಣ್ಣುಮಕ್ಳಿಗೆ ಫ್ರೀ ಕೊಟ್ರವ್ರೆ ಅಂತ ಇವ್ರಿಗೆಲ್ಲಾ ಉರಿ. ನಮ್ಮಂತೋರು ಬರೋದ್ರಿಂದ್ಲೇ ನಿಮ್ಗೆ ಕೆಲಸ’ ಎಂದು, ಮೊದಲೇ ಜೋರಾಗಿದ್ದ ದನಿಯಲ್ಲಿ ಇನ್ನಷ್ಟು ಜೋರಾಗಿ ಹೇಳಿದಾಗ, ಬಸ್ಸಿನಲ್ಲಿ ಇದ್ದವರೆಲ್ಲರೂ ಅವಳತ್ತ ತಿರುಗಿ ನೋಡಿದರು.
ಅಷ್ಟೇಅಲ್ಲ ಮಹಿಳಾ ಕಂಡಕ್ಟರ್ ಕಡೆ ನೋಡುತ್ತಾ ‘ಬುದ್ಧಿ ಹೇಳಿ ಮೇಡಂನವ್ರೆ ನಿಮ್ ಡ್ರೈವರ್‌ಗೆ, ಹ್ಯಾಂಗ್ ಮಾತಾಡ್ತಾನೆ ನೋಡಿ’ ಅಂದ್ಲು. ಆಗ ಕಂಡಕ್ಟರ್ ‘ಸುಮ್ನೆ ಇರಣ್ಣ ನೀನು, ಹೋಗಿ ಹೋಗಿ ಆ ಹುಡುಗೀಗೆ ಏನೇನೋ ಹೇಳ್ತೀಯಲ್ಲ. ಅವರ ಸ್ಟಾಪ್ ಬಂದ್ರೆ ಇಳಿದು ಹೋಗ್ತಾರೆ’ ಅಂದ ಮೇಲೆ ಪರಿಸ್ಥಿತಿ ತಣ್ಣಗಾಯಿತು. ಇದ್ಯಾವುದರ ಪರಿವೆಯೇ ಇಲ್ಲದ ಅವಳ ಮಗು ಮಾತ್ರ, ಅಮ್ಮ ಬಸ್‌ನಲ್ಲಿ ಎಲ್ಲಿಗೋ ಕರ್ಕೊಂಡು ಹೋಗ್ತಾ ಇದ್ದಾಳೆ ಅನ್ನುವ ಖುಷಿಯಲ್ಲಿ ನಸುನಗುತ್ತಿತ್ತು.
ಇಲ್ಲಿ ನನ್ನ ಗಮನ ಸೆಳೆದದ್ದು, ಅದೇ ಬಸ್ಸಿನಲ್ಲಿ ಅವಳದೇ ವಯಸ್ಸಿನ ಹೆಣ್ಣುಮಕ್ಕಳು ಕಾಲೇಜಿಗೆ ಹೋಗುತ್ತಿದ್ದುದು. ಅವರೆಲ್ಲ ಇವಳನ್ನೇ ನೋಡುತ್ತಿದ್ದರು. ಓರಗೆಯವರಾಗಿದ್ದರೂ ಅವರ ಸ್ಥಿತಿ ಮಾತ್ರ ಭಿನ್ನವಾಗಿತ್ತು. ಓದು ಕಲಿತು, ಆಡಿ ನಲಿಯುವ ವಯಸ್ಸಿನಲ್ಲಿ ಈ ಹುಡುಗಿಗೆ ಸಂಸಾರದ ಭಾರ ಹೆಗಲೇರಿತ್ತು.
ಸ್ವಲ್ಪ ಹೊತ್ತಿನಲ್ಲೇ ಅವಳ ಮೊಬೈಲ್‌ಗೆ ಒಂದು ಕರೆ ಬಂತು. ಬಹುಶಃ ಅವಳು ಸ್ಪೀಕರ್ ಒತ್ತಿದ್ದಳೇನೊ. ಅತ್ತಲಿದ್ದ ಹೆಣ್ಣುದನಿ ಜೋರಾಗಿ ಚೀರುತ್ತಾ ‘ಎಲ್ಲೇ ಇದ್ದೀಯಾ? ಬಾರೆ ಮನೆಗೆ. ಎಲ್ಲೂ ಹೋಗ್ಬೇಡ’ ಎಂದು ಒತ್ತಾಯಿಸುತ್ತಿತ್ತು. ಇವಳು, ‘ನಾನು ನಮ್ಮೂರಿಗೆ ಹೋಗ್ತಾ ಇದ್ದೀನಿ. ಮತ್ತೆ ನಾನು ಅವನತ್ರ ಹೋಗಲ್ಲ, ಅವನು ನಂಗೆ ಅವಮಾನ ಮಾಡ್ದ, ಕೇಳಿದ್ದಕ್ಕೆ ಜಗಳ ಆಡ್ದ. ನಾನು ಯಾರನ್ನೂ ನಂಬಲ್ಲ. ನೀವೆಲ್ಲ ಮತ್ತೆ ಅವನತ್ರ ಕಳಿಸ್ತೀರ. ನಂಗೆ ಅದೆಲ್ಲ ಬೇಕಾಗಿಲ್ಲ. ಏನಾದ್ರೂ ಕೆಲಸ ಮಾಡ್ಕೊಂಡು ನಾನು ನನ್ನ ಮಗಳು ಬದುಕ್ತೀವಿ. ಮತ್ತೆ ಫೋನ್ ಮಾಡ್ಬೇಡ’ ಎನ್ನುತ್ತಾ ಫೋನ್ ಕಟ್ ಮಾಡಿದಳು.
ಏನು ಕಷ್ಟವೋ ಏನೋ, ಅವಳ ಬಳಿ ದುಡ್ಡಿದೆಯೋ ಇಲ್ಲವೋ. ಫ್ರೀ ಬಸ್ ಇರೋದ್ರಿಂದ, ಊರಿಗೆ ಹೋಗಿ ಸೇರಲು ಅನುಕೂಲ ಆಗಿದೆ ಅನ್ನಿಸಿತು. ಆದರೂ ಅವಳ ಮುಖದಲ್ಲಿ ಸೋಲಿನ ಭಾವನೆ ಇರಲಿಲ್ಲ. ಅವಳು ಅಳುತ್ತಲೂ ಇರಲಿಲ್ಲ. ಬಿಡುಗಡೆಯ ಭಾವನೆ ಇತ್ತು.
ದುಷ್ಟ ಗಂಡನಿಂದ ದಿನಾ ಬೈಸಿಕೊಂಡು, ಹೊಡೆಸಿಕೊಂಡು ಬದುಕುತ್ತಿರುವ ಎಷ್ಟೋ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಆದರೆ ಈ ಚಿಕ್ಕ ವಯಸ್ಸಿನ ಹೆಣ್ಣುಮಗಳು, ಅಷ್ಟೇನೂ ಓದಿರದಿದ್ದರೂ ಜೊತೆಗೊಂದು ಹೆಣ್ಣುಮಗು ಇದ್ದರೂ, ಸರಿಯಿಲ್ಲದ ಗಂಡನೊಟ್ಟಿಗೆ ಬಾಳಲಾರೆ, ಹೇಗಾದರೂ ದುಡಿದು ಬದುಕುವೆ ಎನ್ನುವ ಆತ್ಮವಿಶ್ವಾಸ ದಿಂದ ತನ್ನ ಊರಿಗೆ ಹೊರಟಿದ್ದುದನ್ನು ನೋಡಿ ಅಚ್ಚರಿಯಾಯಿತು. ಈ ಕಾಲದಲ್ಲಿ, ಓದಿ ಸಂಪಾದನೆ ಮಾಡುವ ಹೆಣ್ಣುಮಕ್ಕಳಿಗೆ ಇರುವಷ್ಟು ಧೈರ್ಯ ಈಕೆಗೆ ಹೇಗೆ ಬಂದಿರಬಹುದು ಎನ್ನಿಸಿತು.
ಪ್ರಪಂಚ ಬಹಳಷ್ಟು ಬದಲಾಗಿದೆ. ಸಂತೋಷವಾಗಿ ಬದುಕಲು ಎಲ್ಲರಿಗೂ ಹಕ್ಕಿದೆ. ಆದರೆ ಕೆಲವು ಹೆಣ್ಣುಮಕ್ಕಳು ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಭಯದಿಂದಲೋ ಇಷ್ಟೇ ನನ್ನ ಬದುಕು ಎಂದುಕೊಂಡೋ ದುಃಖದ ಭಾರವನ್ನು ಹೊತ್ತುಕೊಂಡೇ ಬದುಕುತ್ತಿರುತ್ತಾರೆ, ಅಲ್ಲವೇ?
ಅವಳಿಗೆ ಗೆಲುವಾಗಲಿ, ಜಯ ಸಿಗಲಿ, ಮುಂದೆ ಧೈರ್ಯವಾಗಿ ಬದುಕಲು ಆ ದೇವರು ದಾರಿ ತೋರಲಿ ಎಂದು ಹಾರೈಸಿತು ನನ್ನ ಮನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.