
ಸ್ನೇಹಿತೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೊ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ವಿಭಿನ್ನ ಗೆಟಪ್‌ಗಳಲ್ಲಿ, ವೃತ್ತಿಪರ ವಿಡಿಯೊಗ್ರಾಫರ್‌ಗಳಿಂದ ವಿಡಿಯೊ ಶೂಟ್ ಮಾಡಿಸಿಕೊಳ್ಳುವುದು ಇದೀಗ ಹೊಸ ಟ್ರೆಂಡ್. ನಿತ್ಯ ಬದುಕಿನ ಜಂಜಡಗಳನ್ನೆಲ್ಲಾ ಮರೆತು, ಕೆಲ ಹೊತ್ತಾದರೂ ಸ್ನೇಹ ಸಿಂಚನದಲ್ಲಿ ಮೀಯಲು ಇದಕ್ಕಿಂತ ಬೇರೆ ನೆಪ ಇನ್ನೇನು ಬೇಕು?
ಅಜ್ಜಿ ಮನೆಯಲ್ಲಿ ಅಟ್ಟ ಸೇರಿ ದೂಳು ಹಿಡಿದು ಕೂತಿದ್ದ ಟ್ರಂಕಿನಲ್ಲಿ ಹಳೆಯ ಫೋಟೊ ಆಲ್ಬಂ ನೋಡಿದ್ದೇ ಮನಸ್ಸು ಎಷ್ಟೋ ವರ್ಷಗಳ ಹಿಂದಕ್ಕೆ ಓಡಿತ್ತು. ಶಾಲೆಯಲ್ಲಿ ಸಹಪಾಠಿಗೆ ಕೀಟಲೆ ಮಾಡುವಾಗಲೇ ಅಚಾನಕ್ಕಾಗಿ ಕ್ಲಿಕ್ಕಿಸಲಾಗಿದ್ದ ಫೋಟೊವೊಂದು ನಗು ಉಕ್ಕಿಸಿ ಬಾಲ್ಯದ ಸುಮಧುರ ಕ್ಷಣಗಳ ಮೆರವಣಿಗೆ ಹೊರಡಿಸಿತ್ತು. ಹಾಗೆ ಒಂದೊಂದಾಗಿ ಚಿತ್ರಗಳನ್ನು ನೋಡುತ್ತಲೇ ಆ ನೆನಪುಗಳ ಆಲ್ಬಂ ಮನಸ್ಸನ್ನಾವರಿಸಿ ತುಟಿಯಲ್ಲಿ ಮಂದಹಾಸ ಮೂಡಿಸಿತ್ತು.
ನೆನಪುಗಳೇ ಹಾಗೆ, ಅವುಗಳಿಗೆ ನಗಿಸುವ, ನಗಿಸುತ್ತಲೇ ಅಳಿಸುವ ಶಕ್ತಿಯಿದೆ. ಇಂಥ ಅಮೂಲ್ಯ ನೆನಪುಗಳನ್ನು ಚಿರಕಾಲ ದಾಖಲಿಸಲಲ್ಲವೇ ಛಾಯಾಗ್ರಹಣವೆಂಬ ಅದ್ಭುತ ಅನ್ವೇಷಣೆ ಒದಗಿಬಂದದ್ದು? ಜೀವನದ ಸುಂದರ ಗಳಿಗೆಗಳನ್ನು ಸವಿ ನೆನಪುಗಳಾಗಿ ಉಳಿಸುವ ಹಾದಿಯಲ್ಲಿ ಛಾಯಾಚಿತ್ರಗಳೊಂದಿಗೆ ದೃಶ್ಯಗಳನ್ನೂ ದಾಖಲಿಸುವ ವಿಡಿಯೊ ಚಿತ್ರೀಕರಣ ಜೊತೆಯಾಯಿತು. ಧ್ವನಿ, ದೃಶ್ಯಗಳ ಸಮೇತ ಸುಂದರ ಸಮಯದ ಜೀವಂತಿಕೆಯನ್ನೂ ಸೆರೆಹಿಡಿದಂತಿದ್ದ ವಿಡಿಯೊಗಳು ನೆನಪುಗಳಿಗೂ ಜೀವ ತುಂಬಿದವು. ಸಮಯದ ಜೊತೆಜೊತೆಗೆ ಛಾಯಾಗ್ರಹಣ, ವಿಡಿಯೊಗ್ರಫಿಯಲ್ಲಿ ಸಾಕಷ್ಟು ಸುಧಾರಣೆ, ಮಾರ್ಪಾಡುಗಳಾದವು. ತಾಂತ್ರಿಕತೆಯಲ್ಲಿ ಮಾತ್ರವಲ್ಲ, ಪರಿಕಲ್ಪನೆಯಲ್ಲಿಯೂ ಹೊಸತನ ಮೇಳೈಸಿದವು. ಕ್ರಿಯಾಶೀಲತೆಯೂ ಸೇರಿ ನೂತನ ಪರಿಕಲ್ಪನೆಗಳು ಹುಟ್ಟಿಕೊಂಡವು.
ಹಾಫ್ ಸ್ಯಾರಿ, ಬ್ಯಾಚುಲರ್ ಪಾರ್ಟಿ, ಬ್ರೈಡ್ ಟು ಬಿ, ಪ್ರಿ ವೆಡಿಂಗ್, ವೆಡಿಂಗ್, ಮೆಟರ್ನಿಟಿ, ಬೇಬಿ ಷೌಅರ್, ನ್ಯೂ ಬಾರ್ನ್ ವಿಡಿಯೊಗ್ರಫಿ... ಹೀಗೆ ಜೀವನದ ಪ್ರಮುಖ ಘಟ್ಟಗಳಲ್ಲಿನ ಸುಮಧುರ ಕ್ಷಣಗಳನ್ನು ಕ್ಯಾಂಡಿಡ್ ಆಗಿ ದಾಖಲಿಸುವ ವಿವಿಧ ಧಾಟಿಯ ವಿಡಿಯೊಗ್ರಫಿಗಳು ಸದ್ದು ಮಾಡಿದವು. ಇದೀಗ ಸ್ನೇಹಿತರ ಸರದಿ.
ಗೆಳೆಯರೊಡನೆ ಕೂಡಿ, ಹಾಡಿ, ನಲಿದು, ಆ ಖುಷಿಯನ್ನು ದಾಖಲಿಸುವ ‘ಬೆಸ್ಟ್ ಫ್ರೆಂಡ್ಸ್ ವಿಡಿಯೊಗ್ರಫಿ’ ಈಗ ಯುವಜನರಿಗೆ ಅಚ್ಚುಮೆಚ್ಚು. ಸ್ನೇಹದ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ದಾರಿಯಂತೆ ಈ ಪರಿಕಲ್ಪನೆ ಗಮನಸೆಳೆಯುತ್ತಿದೆ. ಸ್ನೇಹಿತರು ತಮ್ಮ ಸಂತಸದ ಸಮಯವನ್ನು ದಾಖಲಿಸಿ ಸವಿ ನೆನಪಾಗಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ವೃತ್ತಿಪರರಿಂದ ವಿಡಿಯೊ ಶೂಟ್ ಮಾಡಿಸಿಕೊಳ್ಳುವ ಈ ಪರಿಪಾಟ ಗೆಳೆತನದ ಅಭಿವ್ಯಕ್ತಿಗೆ ಒಂದು ನೆಪವಾಗಿಯೂ ಒದಗಿಬರುತ್ತಿದೆ.
ಸ್ನೇಹಿತರ ಈ ವಿಡಿಯೊಗ್ರಫಿಯಲ್ಲಿಯೂ ಹಲವು ನಮೂನೆಗಳಿವೆ. ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ರೀತಿಯ ವಿಡಿಯೊಗಳದ್ದು ಒಂದು ವಿಧ. ಹಳೆಯ ಫೋಟೊ, ವಿಡಿಯೊಗಳನ್ನು ಇಂದಿನ ವಿಡಿಯೊ, ಫೋಟೊಗಳೊಂದಿಗೆ ಸೇರಿಸಿ, ಅದಕ್ಕೆ ಸಂಗೀತ ಸಂಯೋಜಿಸಿ ಹೊಸ ವಿಡಿಯೊ ಮಾಡುವುದು. ಎರಡನೆಯದಾಗಿ, ಪ್ರಸ್ತುತ ಚಾಲ್ತಿಯಲ್ಲಿರುವ ಹಾಡಿನೊಂದಿಗೆ ತಮ್ಮ ಛಾಯಾಚಿತ್ರಗಳನ್ನು ಪೋಣಿಸಿ ವಿಡಿಯೊ ಮಾಡುವುದು.
ಮೂರನೆಯದಾಗಿ, ‘ನಮ್ಮ ಜೀವನದಲ್ಲಿನ ಒಂದು ದಿನ’ (ಎ ಡೇ ಇನ್ ಅವರ್ ಲೈಫ್) ಎಂಬ ಪರಿಕಲ್ಪನೆಯೊಂದಿಗೆ ತಮ್ಮ ಹಾಗೂ ತಮ್ಮ ಸ್ನೇಹಿತರ ದೈನಂದಿನ ಚಿಕ್ಕಪುಟ್ಟ ಚಟುವಟಿಕೆಗಳನ್ನೇ ದಾಖಲಿಸಿ ವಿಡಿಯೊ ಮಾಡಿ ತಮ್ಮ ನಡುವಿನ ನಂಟನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದು. ನಾಲ್ಕನೆಯದಾಗಿ, ನೆನಪುಗಳನ್ನು ಮರುಸೃಷ್ಟಿಸುವುದು. ಹಿಂದಿನ ಕೆಲವು ನೆನಪುಗಳನ್ನೇ, ತಮ್ಮಿಷ್ಟದ ಸಂಗತಿಗಳನ್ನೇ ಮರುಸೃಷ್ಟಿಸಿ ವಿಡಿಯೊ ಮಾಡುವುದು. ಭಾವನಾತ್ಮಕ, ತಮಾಷೆ, ಸ್ಫೂರ್ತಿದಾಯಕ ಯಾವುದೇ ಸಂಗತಿಯಾಗಿರಬಹುದು.
ಈ ವಿಡಿಯೊಗ್ರಫಿಯಲ್ಲಿ ಮತ್ತೊಂದು ವಿಧಾನ, ಪಾತ್ರಾಧಾರಿತ ವಿಡಿಯೊ ಸೃಷ್ಟಿ. ತಮ್ಮ ಗೆಳೆಯರ ಗುಂಪಿನ ಸ್ನೇಹಿತರ ನಿರ್ದಿಷ್ಟ ನಡವಳಿಕೆಗೆ ತಕ್ಕಂತೆ ತಮಾಷೆಯಾಗಿ ವಿಡಿಯೊ ಮಾಡುವುದು. ಮತ್ತೊಂದು, ಸಣ್ಣ ರೂಪದಲ್ಲಿ ಕಥೆ ಹೇಳುವ ವಿಡಿಯೊ ರೂಪಿಸುವುದು. ಸ್ನೇಹಿತರು ಸೇರಿ ತಮ್ಮ ಸ್ನೇಹದ ಕುರಿತಂತೆ ಚಿಕ್ಕ ಟಿಪ್ಪಣಿ ಮಾಡಿ ಜನಪ್ರಿಯ ಸಂಗೀತವನ್ನು ಸೇರಿಸಿ ವಿಡಿಯೊ ರೂಪಿಸುವುದು.
ಇವುಗಳ ಹೊರತಾಗಿ, ಬೆಸ್ಟ್ ಫ್ರೆಂಡ್ಸ್ ವಿಡಿಯೊಗ್ರಫಿಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಥೀಮ್ ಆಧಾರಿತ ವಿಡಿಯೊ ಶೂಟ್. ಸ್ನೇಹಿತರು ಕೂಡಿ ನಿರ್ದಿಷ್ಟ ಬಣ್ಣದ, ಒಂದೇ ರೀತಿಯ ಉಡುಪು ಧರಿಸಿ ತಮ್ಮ ನೆಚ್ಚಿನ ಹಾಡಿಗೆ ಹೆಜ್ಜೆ ಹಾಕುವುದು, ಇಲ್ಲವೇ ಒಟ್ಟಾಗಿ ಕಾಲ ಕಳೆಯುತ್ತಲೇ ಆ ಕ್ಯಾಂಡಿಡ್ ಕ್ಷಣಗಳನ್ನು ವಿಡಿಯೊ ಮೂಲಕ ದಾಖಲಿಸುವುದು. ಒಬ್ಬರಿಗೊಬ್ಬರು ಜೊತೆಯಾಗಿರುವ, ನೋವು ನಲಿವಿನಲ್ಲಿ ಹೆಗಲಾಗಿ ನಿಲ್ಲುವಂಥ ಭಾವ ಸ್ಫುರಿಸುವ ಈ ವಿಡಿಯೊ ಪ್ರಕಾರವು ಸ್ನೇಹವನ್ನು, ಗೆಳೆತನದ ಐಕ್ಯತೆಯನ್ನು ಎಂದಿಗೂ ಅಚ್ಚಳಿಯದೆ ಮನದಲ್ಲಿ ಉಳಿಸುವ ಒಂದು ಭಾವುಕ ಯಾನವೆನಿಸಿದೆ.
ಸ್ನೇಹವನ್ನು, ಅದರ ಭಾವುಕತೆಯನ್ನು ಅಭಿವ್ಯಕ್ತಪಡಿಸಲು ಕಾಲಕ್ಕೆ ತಕ್ಕಂತೆ ದಾರಿ, ಆಯ್ಕೆಗಳೂ ವಿಸ್ತಾರವಾಗುತ್ತಿವೆ. ತರ್ಕ– ಕಾರಣಗಳನ್ನು, ಉದ್ದೇಶ– ವ್ಯಾಖ್ಯಾನಗಳನ್ನು, ಗಡಿ– ಗೋಜಲುಗಳನ್ನು, ಎಲ್ಲ ಬೇಲಿಗಳನ್ನೂ ಮೀರಿ ಹಬ್ಬುವಂಥ, ನಮ್ಮೊಳಗನ್ನು ಅರಳಿಸುವಂಥ ಸ್ನೇಹವೆಂಬ ಈ ಬಳ್ಳಿಗೆ ನೀರೆರೆಯಲು ನೆಪ ಯಾವುದಾದರೇನು?
ಮಮತಾ ಶೆಟ್ಟಿ
ಸಂಭ್ರಮ ಸೆರೆಹಿಡಿಯುವ ಖುಷಿ
ಸುಮಾರು ಒಂದು ವರ್ಷದಿಂದೀಚೆಗೆ ಫ್ರೆಂಡ್ಸ್ ಫೋಟೊಗ್ರಫಿ/ವಿಡಿಯೊಗ್ರಫಿಗೆ ಬೇಡಿಕೆ ಬರುತ್ತಿದೆ. ಸ್ನೇಹಿತರೆಲ್ಲಾ ಸೇರಿದಾಗ ಸಹಜವಾಗಿ ಯಾವ ರೀತಿ ಇರುತ್ತಾರೋ ಆ ಕ್ಯಾಂಡಿಡ್ ಕ್ಷಣಗಳನ್ನು ಸೇರಿಸಿ ವಿಡಿಯೊ ಮಾಡಬೇಕೆಂದು ಬಯಸುವವರು ಕೆಲವರಾದರೆ, ಒಂದೇ ಥರ ಉಡುಪುಗಳನ್ನು ಧರಿಸಿ ಅವರಿಗೆ ಏನು ಕ್ರೇಜ್ ಇರುತ್ತದೋ ಅದರೊಂದಿಗೆ ವಿಡಿಯೊಗ್ರಫಿ ಮಾಡಿಸಿ ಕೊಳ್ಳುವುದು ಮತ್ತೊಂದು ರೀತಿ. ಕೆಲವು ಸ್ನೇಹಿತೆಯರು ಒಟ್ಟಿಗೆ ಬೈಕ್ ಓಡಿಸುತ್ತಾ, ಕಾರು ಓಡಿಸುತ್ತಾ ಒಟ್ಟಿನಲ್ಲಿ ತಮ್ಮ ಹವ್ಯಾಸ ಗಳನ್ನೇ ಇಟ್ಟುಕೊಂಡು ಶೂಟ್ ಮಾಡಿಸಿಕೊಳ್ಳುತ್ತಾರೆ. ಅವರ ಖುಷಿಯನ್ನು ಸೆರೆಹಿಡಿಯುವುದು ನಮಗೂ ಖುಷಿ.ದಿಲೀಪ್, ಛಾಯಾಗ್ರಾಹಕ
ದಿಲೀಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.