ಅವನು, ಅವಳು ಎಂಬ ಪ್ರಜ್ಞೆಯಾಚೆಗೆ ದಾರಿದೀಪವಾಗಬೇಕಾದ ಉಡುಪು, ಲೈಂಗಿಕತೆಯ ದ್ಯೋತಕವೋ, ಲಿಂಗ ತಾರತಮ್ಯದ ನೆಲೆಯೋ ಆದಾಗ ಅವಳ ಬಗೆಗಿನ ದೃಷ್ಟಿಕೋನ, ಕಣ್ಣೋಟ ಬದಲಿಸಿ ಕೊಳ್ಳಬೇಕಾಗಿರುವುದು ಯಾರು ಎಂಬುದು ಮುಖ್ಯವಾದೀತು.
ಇನ್ನೇನು ಬೇಸಿಗೆಯ ದಿನಗಳು ಮುಗಿದು, ಮುಂಗಾರಿನ ದಿನಗಳಿಗೆ ಮುನ್ನುಡಿ ಬರೆಯುತ್ತಿರುವ ಕಾಲವಿದು. ರಣಬಿಸಿಲು, ಸೆಕೆಯ ದಿನಗಳ ಬಾಗಿಲು ಅರ್ಧ ಮುಚ್ಚಿ, ಮಳೆಗಾಲದ ತಂಪಿನ ಸಂಭ್ರಮದ ಕಾಲ ಬಾಗಿಲು ತಟ್ಟುತ್ತಿರುವ ಹೊತ್ತಲ್ಲೂ ನಿತ್ಯದ ಉಡುಗೆ–ತೊಡುಗೆಯ ಸಿಕ್ಕುಗಳಲ್ಲಿ ಅವಳ ಮನಸು ಸಿಲುಕಿ ಒದ್ದಾಡುವುದು ನಿಂತಿಲ್ಲ.
ಸೆಕೆಗಾಲದಲ್ಲಿ ಗಂಡುಮಕ್ಕಳು ರಾಜಾರೋಷವಾಗಿ ಪ್ಯಾಂಟು, ಶರ್ಟು, ಬನಿಯನ್ ಕಳಚಿ ಬರೀ ಬರ್ಮುಡಾದಲ್ಲಿ ಹಾಯಾಗಿ ಇರುವಂಥ ಸ್ವಾತಂತ್ರ್ಯ ಅವಳಿಗಿನ್ನೂ ದೂರವಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿನ್ನೂ ಸಿಕ್ಕಿಲ್ಲ. ಸೆಕೆ ಎಂಥಲೋ, ಉಟ್ಟ ಉಡುಗೆ ಆರಾಮದಾಯಕ ಅನಿಸುತ್ತಿಲ್ಲ ಎಂತಲೋ ಗಂಡೊಬ್ಬ ರಾಜಾರೋಷವಾಗಿ ಉಡುಗೆಯನ್ನು ಕಳಚಿಬಿಡುವಷ್ಟು ‘ಧೈರ್ಯ’ ಹೆಣ್ಣಿಗೆ ಮರೀಚಿಕೆಯೇ. ಮನೆಯ ಮಾಳಿಗೆಯ ಮೇಲೋ, ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲೋ, ಮನೆಯ ಅಂಗಳದಲ್ಲೋ ಆರಾಮವಾಗಿ ಹೇಗೆಂದರೆ ಹಾಗೆ ಮಲಗುವ ಸ್ವಾತಂತ್ರ್ಯವೂ ಅವಳಿಗೆ ಒಡ್ಡಿದ ನಿಷಿದ್ಧದ ಪಟ್ಟಿಯಲ್ಲಿದೆ.
‘ಅಮ್ಮಾ ತುಂಬಾ ಸೆಕೆ ಅಣ್ಣನಂತೆ ನಾನೂ ಶಾರ್ಟ್ಸ್, ಸ್ಲೀವ್‌ಲೆಸ್ ಟಾಪ್ ಹಾಕಿಕೊಳ್ತೀನಿ’ ಅಂತ ಆಗಷ್ಟೇ ಹದಿಹರೆಯಕ್ಕೆ ಕಾಲಿಡುತ್ತಿರುವ ಮಗಳು ಇನ್ನೂ ಬೇಡಿಕೆಯೋ, ಕೋರಿಕೆಯ ಪತ್ರ ಸಲ್ಲಿಸುತ್ತಿದ್ದಾಳೆ. ‘ಅಪ್ಪ ನೋಡಿದ್ರೆ ಏನಂದುಕೊಳ್ತಾರೆ? ನೀನು ಹಾಗೆಲ್ಲ ಬಟ್ಟೆ ಹಾಕ್ಕೋಬೇಡ. ಬೇಕಿದ್ದರೆ ಮಂಡಿತನಕದ ಪ್ಯಾಂಟ್ ಹಾಕ್ಕೊ’ ಅನ್ನುವ ಸಿದ್ಧ ಉತ್ತರವೇ ಅವಳಿಗೆ ಕಟ್ಟಿಟ್ಟದ್ದು. ‘ಅಪ್ಪ, ಅಣ್ಣ ಮಾತ್ರ ಬರೀ ಬರ್ಮುಡಾದಲ್ಲಿ ಎಲ್ಲೆಂದರಲ್ಲಿ ತಿರುಗಬಹುದಾ? ನಾನ್ಯಾಕೆ ಹಾಕ್ಕೊಬಾರದು, ಕಾಲ ಬದಲಾಗಿದೆ’ ಅನ್ನುವ ಮಾತು ಅವಳ ಗಂಟಲಲ್ಲಿಯೇ ಉಳಿಯುತ್ತಿದೆ. ‘ಅಯ್ಯೋ ಹೋಗಮ್ಮಾ, ಗಂಡಸರು ಹೇಗೆ ಬೇಕೋ ಹಾಗಿರಬಹುದಾ? ಅವರಿಗೆ ಆಗುವ ಸೆಕೆ ನಮಗೆ ಆಗಲ್ವಾ? ಅದರಲ್ಲೇ ತಾರತಮ್ಯ? ನಾನಂತೂ ಶಾರ್ಟ್ಸ್, ಸ್ಲೀವ್‌ಲೆಸ್ ಟಾಪ್ ಹಾಕ್ಕೊತೀನಿ...’ ಅನ್ನುವ ಧೀರೆಯರಿನ್ನೂ ಕಡಿಮೆ ಸಂಖ್ಯೆಯಲ್ಲಿದ್ದಾರೆ.
‘ಮಗಳಿಗೆ ಹೊಕ್ಕಳು ಕಾಣುವಂತೆ ಲಂಗದಾವಣಿಯೋ, ಲೆಹಾಂಗವನ್ನೋ ಹಾಕಬೇಡ. ಅವಳಿಗೆ ಸರಿಯಾಗಿ ಇರಲು ಹೇಳು. ಸರಿಯಾಗಿ ಕೂರೋಕೆ ಹೇಳು. ಮಲಗಿದಾಗ ಡ್ರೆಸ್ ಸರಿಯಾಗಿರುವಂತೆ ನೋಡಿಕೋ...’ ಹೀಗೆ ಹೆಣ್ಣುಮಕ್ಕಳ ದೇಹಪ್ರಜ್ಞೆಯನ್ನು ಪದೇಪದೇ ಎಚ್ಚರವಾಗುವಂತೆ ಮಾಡುವ ನುಡಿಗಳಿಗೆ ವಿರಾಮವೇ ಇಲ್ಲ. ಅದರಲ್ಲೂ ಆಕೆ ತುಸು ಮೈಕೈ ತುಂಬಿಕೊಂಡ ಹೆಣ್ಣುಮಗಳಾದರೆ ಅವಳಿಗೆ ವಿಧಿಸುವ ನಿಷಿದ್ಧಗಳ ಪಟ್ಟಿಯಂತೂ ಮತ್ತಷ್ಟು ಉದ್ದವಾಗುತ್ತಲೇ ಹೋಗುತ್ತದೆ. ಬೇಸಿಗೆ ಕಾಲದಲ್ಲಿ ಮುಟ್ಟಾದಾಗ ಗಾಳಿಯಾಡದೇ ತೊಡೆಸಂದಿಯಲ್ಲಿ ಉಂಟಾಗುವ ಗಾಯಗಳಿಗೆ ಮುಲಾಮು ಹಚ್ಚಿಕೊಂಡರೂ, ಗಾಳಿಯಾಡುವಂತೆ ಕಾಲು ಅಗಲಸಿ ಮಲಗುವುದುಂಟೇ? ತೌಬಾ ತೌಬಾ...! ಸ್ವಲ್ಪ ಹೆಣ್ಣಿನಂತೆ ಇರೋದು ಕಲಿ. ನೀನೇನೂ ಗಂಡಸಾ ಹೇಗೆ ಬೇಕೇ ಹಾಗೆ ಮಲಗಲು? ಒಂಚೂರು ನಾಚಿಕೆಯೇ ಇಲ್ಲವಲ್ಲ ಅನ್ನುವಾಗ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಗೋಯ್ತಾ ಅನ್ನುವ ಕೀಳರಿಮೆ ಆಕೆಯನ್ನು ಕಾಡದಿರದು.
ಮುಚ್ಚಿಟ್ಟ ಮೈ, ಚರ್ಮದ ಕಾರಣಕ್ಕಾಗಿಯೇ ವಿಟಮಿನ್ ಡಿ ಕೊರತೆಯಾಗಿ, ಸೂರ್ಯನ ಕಿರಣ ತಾಗದೇ ಚರ್ಮಕೋಶಗಳು ಗಾಳಿಯಾಡದೇ ಒಳಗೊಳಗೇ ಅವಳು ಅನುಭವಿಸುವ ಪಾಡು ಅವಳಿಗಷ್ಟೇ ಗೊತ್ತು. ಬೇಸಿಗೆ, ಮಳೆ, ಚಳಿಗಾಲ ಕಾಲ ಯಾವುದೇ ಇರಲಿ ಒಳಉಡುಪುಗಳಿಗಂತೂ ಸದಾ ಮುಚ್ಚಟ್ಟೆಕಾಲವೇ!. ಬೇಸಿಗೆಯಲ್ಲಾದರೂ ಹೇಗೋ ಒಣಗುವ ಒಳಉಡುಪುಗಳು ಚಳಿ–ಮಳೆಗಾಲದಲ್ಲಿ ಸರಿಯಾಗಿ ಒಣಗದಿರುವಾಗ ಅವನ್ನೇ ಧರಿಸಿ ತುರಿಕೆಯೋ, ಶಿಲೀಂಧ್ರ ಸೋಂಕೋ ತಗುಲಿ ಅವಳ ಆತ್ಮವಿಶ್ವಾಸದ ಜತೆಗೆ ಆರೋಗ್ಯವನ್ನೂ ಸದ್ದಿಲ್ಲದೇ ಕಸಿಯುತ್ತದೆ.
ಏನೇ ಆಗಲಿ ಹೆಣ್ಣಿಗೆ ಸೀರೆಯೇ ಚಂದ ಕಣ್ರೀ. ಸೀರೆಯಲ್ಲಿ ಅವಳ ಅಂದ ದುಪ್ಪಟ್ಟು. ಅದರಷ್ಟು ಘನತೆಯ, ಮಾದಕತೆಯ ಉಡುಪು ಮತ್ತೊಂದಿಲ್ಲ ಅನ್ನುವ ಮಾತುಗಳನ್ನು ಹೆಣ್ಣು–ಗಂಡು ಇಬ್ಬರೂ ಸದ್ದಿಲ್ಲದೇ ಸ್ವೀಕರಿಸಿರುವಾಗ, ಗಂಡಿನ ಉಡುಪಿನ ಘನತೆ, ಮಾದಕತೆಯ ಪ್ರಶ್ನೆಗಳು ಅಪ್ರಸ್ತುತವಾಗುವುದು ಸಹಜ. ಹೆಣ್ಣಿನ ಉಡುಪು ಗಂಡನ್ನು ಕಾಮಕ್ಕೆ ಉದ್ರೇಕಿಸುವಾಗ ಗಂಡಿನ ಶರ್ಟ್‌ನ ಮೊದಲೆರಡು ಗುಂಡಿ ತೆರೆದಿರುವುದು, ಟೈಟ್ ಜೀನ್ಸ್, ತೋಳ್ಬಲ ತೋರಿಸುವ ಟೈಟ್ ಟೀ ಶರ್ಟು, ಶರ್ಟ್ ತೊಡದ ದೇಹ, ಬರೀ ಬರ್ಮುಡಾ ತೊಟ್ಟು ಅಡ್ಡಾಡುವ ಅವನ ದೇಹ ಹೆಣ್ಣಿನ ಮನವನ್ನು ಕೆಣಕದಿರದೇ? ಎಂದರೆ ಇವಳು ನಡತೆಗೆಟ್ಟವಳೋ ಅಥವಾ ಕೈಗೆ ಸುಲಭವಾಗಿ ಸಿಗುವವಳೋ ಎಂದು ಪರಿಭಾವಿಸುವವರೇ ಹೆಚ್ಚು. ಉಡುಪೊಂದು ಹೆಣ್ಣು ಮತ್ತು ಗಂಡಿನ ಕಾಮನೆಗಳನ್ನು ಬೇರೆಬೇರೆಯಾಗಿಸುವ ಹಿಂದಿನ ರಾಜಕಾರಣದ ಮರ್ಮ ಅಷ್ಟು ಸುಲಭವಾಗಿ ಬಗೆಹರಿಯದು.
ಉದ್ಯೋಗಸ್ಥೆಯರು, ಶಾಲಾ–ಕಾಲೇಜು ಹುಡುಗಿಯರು, ಗೃಹಿಣಿಯರು, ಕೂಲಿಕೆಲಸ ಕಟ್ಟಡ ಕಾರ್ಮಿಕ ಮಹಿಳೆಯರು, ಮನೆಗೆಲಸದವರು ಹೀಗೆ ಮಹಿಳೆ ಯಾವ ಸ್ಥಳದಲ್ಲಿದ್ದರೂ ಆಕೆ ಸದಾ ದೇಹಪ್ರಜ್ಞೆಯೊಳಗೇ ಗಿರಕಿ ಹೊಡೆಯಬೇಕಿದೆ. ಇದೊಂಥರಾ ವೃತ್ತಾಕರದ ಸರಪಳಿ. ಭೂಮಿಯಷ್ಟೇ ಅಲ್ಲ, ಬಾಹ್ಯಾಕಾಶಕ್ಕೆ ಹೋದರೂ ಅವಳ ಸಾಧನೆಯಾಚೆಗೆ ಶೀಲ, ಪಾವಿತ್ರ್ಯ, ಉಡುಪಿನತ್ತ ಸಮಾಜದ ಕಿಂಚಿತ್ತಾದರೂ ಚಿತ್ತ ಚಲಿಸದೇ ಇರದು. ಜಗತ್ತೇ ಮೆಚ್ಚುವಂಥ ಸಾಧನೆ ಮಾಡಿದಾಗಲೂ ಅವಳು ಧರಿಸಿದ ಉಡುಪು ಧರ್ಮ–ಸಂಸ್ಕೃತಿಯ ಪ್ರತೀಕವಾಗಿ ಗೋಚರಿಸಿದಷ್ಟು ಗಂಡಸಿನ ಉಡುಪು ಗೋಚರಿಸದು. ಪುರುಷ ರಾಜಕಾರಣದ ಯಶಸ್ಸಿನ ಮೂಲಮಂತ್ರವೇ ಇದಾಗಿರುವಾಗ, ಪ್ರಜ್ಞೆಯೋ, ಅಪ್ರಜ್ಞಾಪೂರ್ವಕವಾಗಿಯೋ ಅವನೂ, ಅವಳೂ ಇಬ್ಬರೂ ಇದರಲ್ಲಿ ಬಂಧಿಗಳೇ. ಅವನು, ಅವಳು ಎಂಬ ಪ್ರಜ್ಞೆಯಾಚೆಗೆ ದಾರಿದೀಪವಾಗಬೇಕಾದ ಉಡುಪು, ಲೈಂಗಿಕತೆಯ ದ್ಯೋತಕವೋ, ಲಿಂಗ ತಾರತಮ್ಯದ ನೆಲೆಯೋ ಆದಾಗ ಅವಳ ಬಗೆಗಿನ ದೃಷ್ಟಿಕೋನ, ಕಣ್ಣೋಟ ಬದಲಿಸಿಕೊಳ್ಳಬೇಕಾಗಿರುವುದು ಯಾರು ಎಂಬುದು ಮುಖ್ಯವಾದೀತು.
‘ಊಟ ತನ್ನಿಚ್ಛೆ, ನೋಟ ಪರರಿಚ್ಛೆ’, ‘ಬೇಸಿಗೆ ಮಾನಗೇಡಿ, ಚಳಿಗಾಲ ಮರ್ಯಾದಸ್ಥ’ ಅನ್ನುವ ಜನಜನಿತ ಮಾತುಗಳಲ್ಲೂ ಹೆಣ್ಣು–ಗಂಡಿನ ನಡುವಿನ ತಾರತಮ್ಯದ ಧೋರಣೆಗಳು ಢಾಳಾಗಿವೆ. ಸ್ಲೀವ್ ಲೆಸ್ ರವಿಕೆ ಧರಿಸುವ ಹೆಣ್ಣು ಆಧುನಿಕಳೂ, ಮೈತುಂಬಾ ಸೆರಗು ಹೊದೆಯುವ ಹೆಣ್ಣು ಸೌಮ್ಯ ಸ್ವಭಾವದವಳೂ ಎನ್ನುವ ಕ್ಲೀಷೆಯ ಮನೋಭಾವವಿನ್ನೂ ಬದಲಾಗಿಲ್ಲ. ಹೆಣ್ಣಿನ ಮಾನವನ್ನು ಮುಚ್ಚಲು ಎಷ್ಟೊಂದು ಪದರಪದರಗಳ ಬಟ್ಟೆಗಳು? ಅದೇ ಗಂಡಸಿನ ಮಾನ ಮುಚ್ಚಲು ಬಟ್ಟೆಯ ತುಣುಕೊಂದು ಸಾಕೇ?
ಗಂಡಿನ ಮಾನ ಹೆಣ್ಣನ್ನು ಗೌರವಿಸುವ, ಆಕೆಯನ್ನು ತನ್ನಂತೆಯೇ ಸಹಜೀವಿಯೆಂದು ಪರಿಗಣಿಸುವಲ್ಲಿ ಇದೆಯೆಂದು ಮನವರಿಕೆ ಮಾಡಿಕೊಡುವ ಕಾಲ ಬರುವುದಾದರೂ ಯಾವಾಗ?
ಆಯ್ಕೆ ಅವಳದ್ದೇ ಆಗಿರಲಿ...
ಮನೆ, ಕಚೇರಿ, ಕಾಲೇಜು, ಪಾರ್ಟಿ, ಶುಭ ಸಮಾರಂಭ ಸಂದರ್ಭ ಯಾವುದೇ ಇರಲಿ ಧರಿಸುವ ಉಡುಪಿನ ಆಯ್ಕೆಯ ಹಕ್ಕು ಅವಳದ್ದೇ ಆಗಿರಲಿ. ದೇಹದ ಆಕಾರಕ್ಕೆ ತಕ್ಕ, ಆರಾಮದಾಯಕ ಉಡುಪು ಆಕೆಯ ಆತ್ಮವಿಶ್ವಾಸವನ್ನು ಹೆಚ್ಚು ಮಾಡಬಲ್ಲದು.
ಋತುಮಾನಕ್ಕೆ ತಕ್ಕ ಉಡುಪು ಧರಿಸುವುದು ಅಗತ್ಯ. ಮುಖ್ಯವಾಗಿ ಸ್ವಚ್ಛವಾದ, ಚೆನ್ನಾಗಿ ಒಣಗಿರುವ ಒಳಉಡುಪು ಧರಿಸುವುದು ಆರೋಗ್ಯಕರ. ಕಂಫರ್ಟ್ ಅನಿಸದ ಉಡುಪನ್ನು ಬಲವಂತವಾಗಿ ಧರಿಸಬೇಡಿ. ಧರಿಸುವ ಉಡುಪಿಗಿಂತ ನಿಮ್ಮ ಆತ್ಮವಿಶ್ವಾಸವೇ ವ್ಯಕ್ತಿತ್ವದ ಪ್ರತಿಬಿಂಬ ಅನ್ನುವುದನ್ನು ಮರೆಯದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.