ADVERTISEMENT

ಓ ಗೆಳತಿ ಇರಲಿ ಸೆಲ್ಫ್‌ ಲವ್‌

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
   
ಹೆಣ್ಣುಮಕ್ಕಳೇ, ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದರಿಂದ ನಿಮಗಷ್ಟೇ ಅಲ್ಲ, ನಿಮ್ಮ ಆಪ್ತೇಷ್ಟರಿಗೂ ಲಾಭ ಇದೆ ಎಂಬುದು ನಿಮಗೆ ಗೊತ್ತೇ?

‘ಸೆಲ್ಫ್ ಲವ್ ಅಥವಾ ಸ್ವಯಂ ಪ್ರೀತಿ ಬಹಳ ಮುಖ್ಯ’ ಎಂದು ಯಾರಾದರೂ ಹೇಳಿದರೆ, ‘ಹಾಗಿದ್ದರೆ ಅದು ಸ್ವಾರ್ಥ ಅಲ್ಲವೇ?’ ಎಂಬ ಪ್ರಶ್ನೆ ಮರುಕ್ಷಣವೇ ಎದುರಾಗುತ್ತದೆ. ಹೌದು, ಅವರು ಹೀಗೆ ಕೇಳುವುದಕ್ಕೂ ಕಾರಣ ಇದೆ. ಏಕೆಂದರೆ ನಾವು ಹೆಣ್ಣುಮಕ್ಕಳು ಬೆಳೆದುಬಂದಿರುವುದೇ ಹಾಗೆ. ಒಂದು ಹೆಣ್ಣು ಬೇರೆಯವರ ಮನೆಗೆ ಮದುವೆಯಾಗಿ ಹೋಗಿ, ಅತ್ತೆ, ಮಾವ, ಅತ್ತಿಗೆ, ನಾದಿನಿ, ಮೈದುನ... ಹೀಗೆ ಅಲ್ಲಿರುವ ಎಲ್ಲರನ್ನೂ ತನ್ನವರೆಂದು ತಿಳಿದು ಪ್ರೀತಿಸಬೇಕು. ಅಂದರೆ, ಇಲ್ಲಿ ಅವಳಿಗೇ ಅರಿವಿಲ್ಲದಂತೆ ಅವಳಲ್ಲಿ ಮಾತೃತ್ವದ ಭಾವನೆಯನ್ನು ತುಂಬಲಾಗಿರುತ್ತದೆ. ಇದು ಖಂಡಿತ ತಪ್ಪಲ್ಲ. ಆದರೆ ಅವಳು ತನ್ನನ್ನೂ ಪ್ರೀತಿಸಿಕೊಳ್ಳಬೇಕಾದುದು ಅಷ್ಟೇ ಮುಖ್ಯ. ತನ್ನೊಳಗೆ ಏನಿದೆಯೊ ಅದನ್ನೇ ಅವಳು ಹೊರಗಿನವರಿಗೂ ಕೊಡುತ್ತಾಳೆ; ಹಾಗಾಗಿ, ತನ್ನೊಳಗೆ ಪ್ರೀತಿಯನ್ನು ತುಂಬಿಕೊಳ್ಳಲು ಮತ್ತು ಆ ಮೂಲಕ ಇತರರನ್ನು ಇನ್ನಷ್ಟು ಚೆನ್ನಾಗಿ ಪ್ರೀತಿಸಲು ಅವಳಿಗೆ ಸೆಲ್ಫ್‌ ಲವ್‌ನ ಅಗತ್ಯ ಇರುತ್ತದೆ.

ಸೆಲ್ಫ್ ಲವ್ ಅಂದರೆ ನಮ್ಮ ಬೇಕು– ಬೇಡಗಳ ಬಗ್ಗೆ ನಮಗೆ ಗೊತ್ತಾಗುವುದು, ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದು ಎಂದೆಲ್ಲ ಬಹುತೇಕರು ಭಾವಿಸಿರುತ್ತಾರೆ. ಆದರೆ ಸ್ವಯಂ ಪ್ರೀತಿ ಇವೆಲ್ಲವನ್ನೂ ಮೀರಿದ್ದು. ವಾಸ್ತವದಲ್ಲಿ ಅದು ನಮ್ಮ ಅಸ್ಮಿತೆಯೇ ಆಗಿರುತ್ತದೆ. ಅದಿಲ್ಲದೇ ಇದ್ದಾಗ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ, ಈ ಪರಿಕಲ್ಪನೆ ಇನ್ನಷ್ಟು ಸರಿಯಾಗಿ ಅರ್ಥವಾಗುತ್ತದೆ.

ನಾವು ಸ್ವಯಂ ಪ್ರೀತಿಯನ್ನು ಹೊಂದಿದ್ದಾಗ ನಮ್ಮೊಳಗೆ ಅಭದ್ರತೆಯ ಭಾವನೆ ಇರುವುದಿಲ್ಲ. ಅದೇ ಸ್ವಯಂ ಪ್ರೀತಿಯ ಕೊರತೆ ಇದ್ದಾಗ ಅಭದ್ರತೆಯ ಭಾವನೆ ನಮ್ಮನ್ನು ಕಾಡುತ್ತದೆ. ಆಗ ನಾವು ಯಾವಾಗಲೂ ಇತರರ ಮೆಚ್ಚುಗೆಯನ್ನು ಬಯಸುತ್ತೇವೆ. ಇತರರ ದೃಷ್ಟಿಕೋನದಿಂದ ನಮ್ಮನ್ನು ನೋಡತೊಡಗುತ್ತೇವೆ. ಬೇರೆಯವರ ಎದುರು ನಾನು ಚೆನ್ನಾಗಿ ಕಾಣಬೇಕು, ಸುಖವಾಗಿ ಇದ್ದೇನೆಂದು ತೋರಿಸಿಕೊಳ್ಳಬೇಕು ಎಂದೆಲ್ಲ. ಅಂದರೆ, ನಮಗೆ ನಮಗಿಂತ ಬೇರೆಯವರ ಅಭಿಪ್ರಾಯವೇ ಮುಖ್ಯವಾಗಿ ಬಿಡುತ್ತದೆ.

ADVERTISEMENT

ಇತರರು ನಮ್ಮನ್ನು ಪ್ರೀತಿಸಬೇಕು, ಗೌರವಿಸಬೇಕು, ನಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂಬ ಒತ್ತಾಸೆಗಳೆಲ್ಲ ಹುಟ್ಟಿಕೊಳ್ಳುತ್ತವೆ. ಹೀಗೆ ನಮ್ಮ ಸಂತೋಷ, ನೆಮ್ಮದಿ ಇತರರ ಮೇಲೆ ಅವಲಂಬಿತವಾಗಿರುತ್ತದೆ. ಆಗ ಅನ್ಯರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡು ಕುಗ್ಗುತ್ತೇವೆ. ಮುಖ್ಯವಾದ ವಿಷಯಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಎಲ್ಲದಕ್ಕೂ ಹಿಂಜರಿಯುತ್ತೇವೆ. ಸಂಕಷ್ಟದ ಸಮಯದಲ್ಲಿ ಅಧೀರರಾಗುತ್ತೇವೆ. ಯಾವುದೇ ಸವಾಲಿನ ಸನ್ನಿವೇಶವನ್ನು ಎದುರಿಸಲಾರದವರಾಗುತ್ತೇವೆ.

ಮುಖ್ಯವಾಗಿ, ನಮ್ಮ ಬಗೆಗೆ ನಾವು ನಕಾರಾತ್ಮಕವಾದ ಮಾತುಗಳನ್ನು ಹೇಳಿಕೊಳ್ಳುತ್ತೇವೆ. ನನ್ನ ಹಣೆಬರಹವೇ ಇಷ್ಟು, ನಾನು ಯಾವುದಕ್ಕೂ ಪ್ರಯೋಜನ ಇಲ್ಲ, ನಾನು ಪಡೆದುಕೊಂಡು ಬಂದಿರುವ ಪ್ರಾರಬ್ಧಕರ್ಮ ಇದು, ನನ್ನ ಯೋಗ್ಯತೆಗೆ ಇದೇ ಹೆಚ್ಚು, ನನ್ನಿಂದ ಇದು ಸಾಧ್ಯ ಇಲ್ಲ, ಎಲ್ಲರೂ ನನ್ನನ್ನು ಬಳಸಿಕೊಳ್ಳುತ್ತಾರೆ... ಹೀಗೆ ನಮಗೆ ನಾವೇ ಹೇಳಿಕೊಳ್ಳುವ ನಕಾರಾತ್ಮಕವಾದ ಮಾತುಗಳಿಂದ ಅಥವಾ ಸೆಲ್ಫ್‌ ಟಾಕ್‌ ಮೂಲಕ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ನಾವು ಮಿತಿಗೆ ಒಳಪಡಿಸಿ‌ಕೊಳ್ಳುತ್ತೇವೆ.

ಆಗ ನಮ್ಮ ಆದ್ಯತೆಗಳು ನಮ್ಮ ಅರಿವಿಗೇ ಬರುವುದಿಲ್ಲ. ಉದಾಹರಣೆಗೆ, ಒಬ್ಬ ಗೃಹಿಣಿಯು ಮನೆಯಲ್ಲಿ ಗಂಡ, ಮಕ್ಕಳು, ವಯಸ್ಸಾದವರು ಸೇರಿದಂತೆ ಎಲ್ಲರ ಆದ್ಯತೆಗಳಿಗೂ ಗಮನ ಕೊಡುತ್ತಾಳೆ. ಆದರೆ ಆಕೆಗೆ ತನ್ನ ಅಗತ್ಯಗಳೇ ಅರ್ಥವಾಗುವುದಿಲ್ಲ. ಸರಿಯಾದ ಸಮಯಕ್ಕೆ ಊಟ ಮಾಡುವುದು, ತನಗಾಗಿ ಸಮಯ ಕೊಟ್ಟುಕೊಳ್ಳುವುದು, ತನ್ನನ್ನು ತಾನು ಉಲ್ಲಾಸದಿಂದ ಇಟ್ಟುಕೊಳ್ಳಲು ಪ್ರಯತ್ನಿಸುವುದು ಇವೆಲ್ಲವೂ ತನಗೆ ಮುಖ್ಯ ಎಂದು ಆಕೆ ಪರಿಗಣಿಸುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ನಮ್ಮ ಬೇಕು– ಬೇಡಗಳ ಕುರಿತು ನಮಗೆ ಖಚಿತವಾದ ನಿಲುವು ಅಥವಾ ಸ್ಪಷ್ಟತೆ ಇರುವುದಿಲ್ಲ. ‘ಎಸ್’ ಎನ್ನುವ ಕಡೆ ‘ನೋ’ ಎನ್ನುತ್ತೇವೆ, ‘ನೋ’ ಎನ್ನಬೇಕಾದಾಗ ‘ಎಸ್’ ಎಂದಿರುತ್ತೇವೆ. ಹೀಗಿದ್ದಾಗ ನಾವು ಎಲ್ಲದಕ್ಕೂ ಬೇರೆಯವರನ್ನು ಹೊಣೆ ಮಾಡತೊಡಗುತ್ತೇವೆ.

ನಮಗೆ ನಾವೇ ವಿಧಿಸಿಕೊಳ್ಳಬೇಕಾದ ಚೌಕಟ್ಟು ಮುಖ್ಯವಾದಾಗ ಇತರರ ಚೌಕಟ್ಟನ್ನೂ ನಾವು ಗೌರವಿಸುತ್ತೇವೆ. ಮನೆಯಲ್ಲಿ ಗಂಡ, ಮಕ್ಕಳು, ಜೊತೆಗಿರುವವರ ಬಗೆಗೆ ನಮ್ಮ ನಿಲುವಿನಲ್ಲಿ ಬದ್ಧತೆ ಇರುತ್ತದೆ. ಯಾರ ಜೊತೆಗೆ ಹೇಗೆ ವರ್ತಿಸಬೇಕು ಎನ್ನುವುದರ ಅರಿವಿರುತ್ತದೆ. ಅಭದ್ರತೆಯ ಭಾವನೆ ಇದ್ದಾಗ ನಮ್ಮದೇ ಆದ ಮೌಲ್ಯದ ಕೊರತೆಯೂ ನಮ್ಮನ್ನು ಕಾಡುತ್ತದೆ. ಅಂದರೆ ಅದೊಂದು ಬದ್ಧತೆಯ ಕೊರತೆಯೂ ಹೌದು. ಇಲ್ಲಿ ಮೌಲ್ಯ ಎಂದರೆ ನೈತಿಕ ನೆಲೆ ಮಾತ್ರವಲ್ಲ, ವ್ಯಕ್ತಿತ್ವದ ನೆಲೆಯೂ ಅನ್ವಯವಾಗುತ್ತದೆ. ಉದಾಹರಣೆಗೆ, ನಾನು ಯಾರನ್ನೂ ಕಾಯಿಸುವುದಿಲ್ಲ, ಸರಿಯಾದ ಸಮಯಕ್ಕೇ ಹೋಗುತ್ತೇನೆ, ಮನೆಗೆ ಬಂದವರು ಯಾರೇ ಆಗಿರಲಿ ಅವರನ್ನು ಉಪಚರಿಸದೇ ಇರುವುದಿಲ್ಲ, ಬೇರೆಯವರ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವುದಿಲ್ಲ ಎನ್ನುವಂತಹ ಮೌಲ್ಯಗಳ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಅದೇ ಸ್ವಯಂ ಪ್ರೀತಿ ಇರುವವರ ವ್ಯಕ್ತಿತ್ವದಲ್ಲಿ ಅವರದೇ ಆದ ಮೌಲ್ಯಗಳು ನಿಚ್ಚಳವಾಗಿರುತ್ತವೆ. ಹಾಗಾಗಿಯೇ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಅದು ಬೇರೆಯವರಿಗೆ ಕೊಟ್ಟ ಮಾತಲ್ಲ, ತಮಗೆ ತಾವೇ ಕೊಟ್ಟುಕೊಳ್ಳುವ ಮಾತು. ಅಂದರೆ, ನಾನು ಡಯಟ್ ಮಾಡಬೇಕು, ತೂಕ ಇಳಿಸಬೇಕು, ಬೇಗ ಏಳಬೇಕು, ಉತ್ತಮ ದಿನಚರಿ ಹೊಂದಬೇಕು ಎಂಬಂತಹ ಯಾವುದೇ ಬದ್ಧತೆ ಆಗಿರಬಹುದು.

ಸ್ವಯಂ ಪ್ರೀತಿ ಇಲ್ಲದೇ ಇರುವವರು ತಮ್ಮನ್ನೇ ತಾವು ನಂಬುವುದಿಲ್ಲ. ಆಗ ಯಾವುದಾದರೂ ಒಂದು ಕಾರ್ಯವನ್ನು ‘ನಾನು ಮಾಡುತ್ತೇನೆ’ ಎಂದು ಬಾಯಿಯಲ್ಲಿ ಹೇಳುತ್ತಿದ್ದರೂ ಮನಸ್ಸು ಮಾತ್ರ ‘ಇದು ನಿನ್ನಿಂದ ಸಾಧ್ಯವಿಲ್ಲ ಬಿಡು’ ಎನ್ನುತ್ತಿರುತ್ತದೆ. ಇದಕ್ಕೆ ಅತ್ಯಂತ ಸರಳ ಉದಾಹರಣೆಯೆಂದರೆ, ಬೆಳಿಗ್ಗೆ ಬೇಗ ಏಳಬೇಕು ಎಂದು ನಿರ್ಧರಿಸುತ್ತೇವೆ. ಆದರೆ ಅದನ್ನು ಕೃತಿಗೆ ಇಳಿಸುವುದಿಲ್ಲ. ಏಕೆಂದರೆ ಹೀಗೆ ಹೇಳುತ್ತಿರುವಾಗಲೇ ‘ಇದು ಎಷ್ಟನೇ ಸಲ ನೀನು ಹೀಗೆ ಹೇಳುತ್ತಿರುವುದು?’ ಎಂದು ಮನಸ್ಸು ಲೆಕ್ಕ ಹಾಕಿರುತ್ತದೆ. ಸ್ವಯಂ ಪ್ರೀತಿ ಇದ್ದಾಗ, ನಮಗಾಗಿ ನಾವು ಏನನ್ನು ಬೇಕಾದರೂ ಮಾಡಬಲ್ಲೆವು ಎನ್ನುವಂತಹ ಆತ್ಮವಿಶ್ವಾಸ ಇರುತ್ತದೆ. ಆಗ ನಾವು ನಮಗಾಗಿ ಕೊಟ್ಟುಕೊಂಡ ಮಾತನ್ನು ಉಳಿಸಿಕೊಂಡೇ ತೀರುತ್ತೇವೆ.

ಹಾಗಿದ್ದರೆ ಸ್ವಯಂ ಪ್ರೀತಿ ಹೊಂದುವುದಾದರೂ ಹೇಗೆ? ಮೊದಲಿಗೆ, ಸ್ವಯಂ ಅರಿವು ಹೆಚ್ಚಾಗಬೇಕು. ಅಂದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು. ಈ ಮೂಲಕ, ನಮ್ಮ ಶಕ್ತಿ, ದೌರ್ಬಲ್ಯ ಎರಡನ್ನೂ ಅರಿಯಬೇಕು. ನಮ್ಮ ಬಗೆಗೆ ನಾವೇ ನಕಾರಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಿ, ಸಕಾರಾತ್ಮಕವಾಗಿ ಯೋಚಿಸುವುದು, ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಬಗ್ಗೆ ನಮಗೆ ಮೆಚ್ಚುಗೆ ಇರಬೇಕು. ನಾವು ಕುಳ್ಳಗೆ, ದಪ್ಪಗೆ ಹೇಗೇ ಇದ್ದರೂ ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಅಂದರೆ, ನಮಗೆ ನಮ್ಮ ಮಿತಿಯೂ ಗೊತ್ತಿರಬೇಕು, ಶಕ್ತಿಯೂ ಗೊತ್ತಿರಬೇಕು.

ನಾವು ಹೊಂದಿರುವ ಎಲ್ಲದರ ಬಗೆಗೂ ನಮ್ಮಲ್ಲಿ ಕೃತಜ್ಞತೆಯ ಭಾವನೆ ಇರಲೇಬೇಕು. ಆಗ, ಇಷ್ಟೆಲ್ಲ ಹೊಂದಿದ್ದೇವೆ ಎನ್ನುವ ಧನ್ಯತೆಯ ಭಾವನೆ ನಮ್ಮಲ್ಲಿ ಮೂಡುತ್ತದೆ. ‘ಇಲ್ಲ’ ಎನ್ನುವುದರ ಬದಲು ‘ಇಷ್ಟೆಲ್ಲ ಇದೆ’ ಎನ್ನುವುದು ಎದ್ದು ಕಾಣತೊಡಗುತ್ತದೆ. 

ನಮ್ಮನ್ನು ನಾವು ಪ್ರೀತಿಸುವಾಗ...

1. ಬೇರೆಯವರು ನಮ್ಮ ಬಗ್ಗೆ ಅನಗತ್ಯವಾಗಿ ಏನು ಹೇಳಿದರೂ ನಾವು ಅದರತ್ತ ಜಾಸ್ತಿ ಗಮನ ಕೊಡುವುದಿಲ್ಲ.

2. ನಿಂದನೆಗಳು ನಮಗೆ ನೋವು ಕೊಡುವುದಿಲ್ಲ. ನಾವು ಏನು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿರುತ್ತ‌ದೆ.

3. ನಮ್ಮ ಸಂತೋಷ, ನೆಮ್ಮದಿ ನಮ್ಮ ಕೈಯಲ್ಲಿದೆ ಎನ್ನುವುದು ತಿಳಿಯುತ್ತದೆ. ಆಗ ಬೇರೆಯವರ ಜೊತೆ ನಮ್ಮನ್ನು ಹೋಲಿಸಿಕೊಂಡು ಕೊರಗುವುದು ನಿಲ್ಲುತ್ತದೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವುದರತ್ತ, ಬದಲಾಗುವುದರತ್ತ ಗಮನ ಕೇಂದ್ರೀಕರಿಸುತ್ತೇವೆ.

ವ್ಯತ್ಯಾಸ ತಿಳಿದಿರಲಿ

1. ಸ್ವಯಂ ಪ್ರೀತಿಗೂ ಅಹಂಕಾರಕ್ಕೂ ಕೂದಲೆಳೆಯಷ್ಟು ಅಂತರವಿದೆ. ನಮ್ಮ ಬಗೆಗೆ ನಾವು ಹೊಂದಿರುವ ಅಭಿಮಾನ, ಪ್ರೀತಿ ಬೇರೆಯವರಿಗೆ ಅಹಂಕಾರದಂತೆ ಕಾಣಬಹುದು. ಆದರೆ ನಮಗೆ ಮಾತ್ರ ಅಹಂಕಾರಕ್ಕೂ ಸ್ವಯಂ ಪ್ರೀತಿಗೂ ನಡುವಿನ ವ್ಯತ್ಯಾಸ ಗೊತ್ತಿರಬೇಕು.

2. ಯಾವಾಗಲೂ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದು ಸ್ವಯಂ ಪ್ರೀತಿ ಅಲ್ಲ. ಸ್ವಯಂ ಪ್ರೀತಿ ಹೆಚ್ಚಾದಷ್ಟೂ ನಾವು ತಪ್ಪುಗಳಿಂದ ಕಲಿಯುತ್ತೇವೆ.

3. ಸ್ವಯಂ ಪ್ರೀತಿ ಇದ್ದಾಗ ನಾವು ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ಪರಸ್ಪರ ನಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ. ನಮ್ಮ ಒಳಗೆ ಇರುವ ಒಳ್ಳೆಯ ಭಾವನೆ ಹೊರಗೂ ವ್ಯಕ್ತವಾಗುತ್ತದೆ.

4. ಅಹಂಕಾರವು ಹಟಕ್ಕೆ ಕಾರಣ ಆಗಬಹುದು. ಅದೇ ಸ್ವಯಂ ಪ್ರೀತಿ ನಮ್ಮನ್ನು ಹೆಚ್ಚು ಮೃದುವಾಗಿಸುತ್ತದೆ.

5. ಅಹಂಕಾರ ಇದ್ದಾಗ ಇತರರೊಂದಿಗೆ ನಮ್ಮ ಸಂವಹನ ಉತ್ತಮವಾಗಿ ಇರುವುದಿಲ್ಲ. ಸ್ವಯಂ ಪ್ರೀತಿಯು ನಮ್ಮ ಸಂವಹನವನ್ನು, ಆಲೋಚನೆಗಳನ್ನು ಸ್ಪಷ್ಟಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.