ADVERTISEMENT

ಸ್ಪಂದನ ಅಂಕಣ: ಕೃತಕ ಗರ್ಭಧಾರಣೆ ಚಿಕಿತ್ಸೆ ಸುರಕ್ಷಿತವೇ?

ಡಾ.ವೀಣಾ ಎಸ್‌ ಭಟ್ಟ‌
Published 2 ಜನವರಿ 2026, 23:30 IST
Last Updated 2 ಜನವರಿ 2026, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾನು 33 ವರ್ಷದ  ಶಿಕ್ಷಕಿ. ಮದುವೆಯಾಗಿ ಮೂರೂವರೆ ವರ್ಷವಾದರೂ ಮಕ್ಕಳಾಗಿಲ್ಲ. ವೈದ್ಯರು ತೊಂದರೆಯಿಲ್ಲ ಎಂದಿದ್ದಾರೆ. ಆದರೆ, ವಯಸ್ಸಾಗುತ್ತಿದೆ, ಕೃತಕ ಗರ್ಭಧಾರಣೆ  ಚಿಕಿತ್ಸೆ ಪಡೆದುಕೋ ಎಂದು ಮನೆಯಲ್ಲಿ ಸಲಹೆ ನೀಡುತ್ತಿದ್ದಾರೆ. ಮಾತ್ರೆ, ಇಂಜೆಕ್ಷನ್ ಪಡೆಯಲು ಹೆದರಿಕೆ. ಈ ಚಿಕಿತ್ಸೆ ಸುರಕ್ಷಿತವೇ?

ಸರಿತಾ, ಶಿವಮೊಗ್ಗ 

ಉ: ಋತು ಫಲಪ್ರದ ದಿನಗಳಲ್ಲಿ ನಿರಂತರವಾಗಿ ಲೈಂಗಿಕ ಸಂಪರ್ಕ ಮಾಡಿಯೂ ಪ್ರಯತ್ನ ಫಲಿಸದಿದ್ದರೆ, ಅಂಡಾಣು ಉತ್ಪಾದನೆಯ ಪ್ರಚೋದನೆಗೆ ಮಾತ್ರೆ ಬಳಸಿದ್ದರೂ ಗರ್ಭಧಾರಣೆ ಆಗಿಲ್ಲವೆಂದರೆ, ಐವಿಎಫ್‌ ತಜ್ಞರ ಸಲಹೆ ಪಡೆದು, ಸಂತಾನ ಪಡೆಯಬಹುದು. ಕೃತಕ ಗರ್ಭಧಾರಣೆ ಚಿಕಿತ್ಸೆಯು ತಜ್ಞರ ಮೇಲ್ವಿಚಾರಣೆಯಲ್ಲಿ ಇದ್ದಾಗ ಸುರಕ್ಷಿತವಾಗಿರುತ್ತದೆ. ಹಾಗಾಗಿ, ಭಯ ಬೇಡ. ಇನ್ನು ಎಲ್ಲ ಚಿಕಿತ್ಸೆಗಳಲ್ಲಿಯೂ ಅದರದ್ದೇ ಆದ ತೊಂದರೆಗಳಿರುತ್ತವೆ.

ADVERTISEMENT

ಅಂಡೋತ್ಪತ್ತಿ ಪ್ರಚೋದಕ ಔಷಧಗಳನ್ನು ಬಳಸಿದಾಗ ಕೆಲವು ಬಾರಿ ಬಹುಗರ್ಭಧಾರಣೆ ಅಂದರೆ ಅವಳಿ, ತ್ರಿವಳಿಗಳಾಗಬಹುದು. ಯಾಕೆಂದರೆ ಈ ಸಂಬಂಧದ ಮಾತ್ರೆಗಳು ಒಂದಕ್ಕಿಂತ ಹೆಚ್ಚು ಕೋಶಿಕೆಗಳನ್ನು ಅಂದರೆ ಫಾಲಿಕಲ್‌ಗಳನ್ನು ಉತ್ತೇಜಿಸುವುದರಿಂದ ಈ ಅಪಾಯ ಹೆಚ್ಚು.

ಇನ್ನು ಐವಿಎಫ್‌ನಲ್ಲಿ ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ಗರ್ಭಕ್ಕೆ ವರ್ಗಾಯಿಸಬೇಕಾಗಬಹುದು. ಆಗ ಅತಿಯಾದ ಕಾಳಜಿ ಅಗತ್ಯ. ಇವುಗಳಲ್ಲಿ ಗರ್ಭಪಾತ, ಅಕಾಲಿಕ ಶಿಶು ಜನನ, ಕಡಿಮೆ ತೂಕದ ಶಿಶು ಹುಟ್ಟುವುದು ಸೇರಿದಂತೆ ಹಲವು ಸವಾಲುಗಳು ಎದುರಾಗಬಹುದು. ಇದಕ್ಕೆ ತಜ್ಞರು ಸೂಕ್ತ ಚಿಕಿತ್ಸೆ ನೀಡುತ್ತಾರೆ.

ಅಪರೂಪಕ್ಕೊಮ್ಮೆ ಅಂಡಾಶಯ ಅತಿಯಾಗಿ ಉತ್ತೇಜನಗೊಂಡು (ಹೈಪರ್ ಸ್ಟಿಮ್ಯುಲೇಷನ್) ಹೊಟ್ಟೆನೋವು, ಅಂಡಾಶಯ ಊದಿಕೊಳ್ಳುವುದು ಇತ್ಯಾದಿ ಆದಾಗ ತುರ್ತಾಗಿ ಚಿಕಿತ್ಸೆ ಕೊಡಬೇಕಾಗಬಹುದು. ಅದನ್ನು ತಜ್ಞವೈದ್ಯರು ನಾಜೂಕಾಗಿ ನಿರ್ವಹಿಸುತ್ತಾರೆ.

ಇನ್ನು ಕೆಲವು ಬಾರಿ ಎಟ್ರೋಪಿಕ್ ಗರ್ಭಧಾರಣೆ ಅಂದರೆ ಗರ್ಭನಾಳದಲ್ಲಿಯೇ ಭ್ರೂಣ ನೆಲಸುತ್ತದೆ. ಇದು ಸಹಜ ಗರ್ಭಧಾರಣೆಯಲ್ಲೂ ಆಗಬಹುದು. ಆದರೆ ಐವಿಎಫ್‌ನಲ್ಲಿ ಈ ಅಪಾಯ ಹೆಚ್ಚು. ಇನ್ನು ಐವಿಎಫ್‌ ಚಿಕಿತ್ಸೆ ತೆಗೆದುಕೊಂಡರೂ ಯಶಸ್ಸು ಸಿಗದೇ ಇರಬಹುದು. ಪ್ರತಿ ಋತುಚಕ್ರದಲ್ಲಿ ಐವಿಎಫ್ ಯಶಸ್ಸು ಶೇ 35ರಿಂದ 40ರಷ್ಟು ಮಾತ್ರ. 35ರ ವಯಸ್ಸಿನ ನಂತರ ಈ ಫಲಿತಾಂಶದ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ.

ಭಯ, ಆತಂಕ, ಕೋಪ, ದುಃಖ ಎಲ್ಲವನ್ನೂ ಆಪ್ತಸಮಾಲೋಚನೆ ಮೂಲಕ ನಿವಾರಿಸಿಕೊಳ್ಳಿ. ಭಾವನಾತ್ಮಕವಾಗಿ ದೃಢವಾಗಿ. ಸಹಜವಾಗಿ ಮಗು ಪಡೆಯಲು ಪ್ರಯತ್ನಿಸಿ. ಅವಶ್ಯವಿದ್ದಲ್ಲಿ ಮಾತ್ರ ಐವಿಎಫ್‌ ಮೊರೆ ಹೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.