ADVERTISEMENT

ಮಹಿಳೆ | ಮದುವೆಯ ಬಳಿಕ ಹೆಸರು ಬದಲಿಸುವ ಮುನ್ನ!

ಮಂಜುಶ್ರೀ ಎಂ.ಕಡಕೋಳ
Published 20 ಡಿಸೆಂಬರ್ 2024, 22:52 IST
Last Updated 20 ಡಿಸೆಂಬರ್ 2024, 22:52 IST
   

ಮಗುವೊಂದು ಹೆಣ್ಣಿನ ಒಡಲಲ್ಲಿ ಕುಡಿಯೊಡೆದ ಕ್ಷಣ... ಅದು ಹೆಣ್ಣಾದರೆ ಇಂಥ ಹೆಸರು, ಗಂಡಾದರೆ ಇಂಥ ಹೆಸರು ಇಡಬೇಕೆಂದು ಹೆತ್ತವರು ನೂರಾರು ಬಾರಿ ಯೋಚಿಸಿರುತ್ತಾರೆ, ಚರ್ಚಿಸಿರುತ್ತಾರೆ. ಅದರಲ್ಲೂ ಹೆಣ್ಣು ಮಗು ಹುಟ್ಟಿದರೆ ದೇವತೆಗಳ ಹೆಸರಿನಿಂದ ಹಿಡಿದು ಹುಟ್ಟಿದ ಸಮಯಕ್ಕೆ ತಕ್ಕ ರಾಶಿ, ನಕ್ಷತ್ರ, ಅಕ್ಷರಕ್ಕೆ ಹೊಂದುವಂಥ ನೂರಾರು ಹೆಸರುಗಳನ್ನು ಹುಡುಕಲಾಗುತ್ತದೆ. ಹತ್ತಾರು ಜನರಿಗೆ ತಮ್ಮ ಮಗಳಿಗೆ ಇಂಥ ಅಕ್ಷರ ಬಂದಿದೆ, ಒಳ್ಳೆಯದೊಂದು ಹೆಸರು ಸೂಚಿಸಿ ಅಂತಲೋ, ಹಿರಿಯರು, ಆತ್ಮೀಯರು, ದೇವಸ್ಥಾನದ ಅರ್ಚಕರೋ, ಸ್ವಾಮೀಜಿಗಳೋ ಸೂಚಿಸಿದ ಅಥವಾ ತಾವೇ ವಿಭಿನ್ನವಾದ ಹೆಸರೊಂದನ್ನು ಹುಡುಕಿ ಹೆತ್ತವರು ತಮ್ಮ ಮಗಳಿಗೆ ಮುದ್ದಾದ ಹೆಸರಿಡುತ್ತಾರೆ.

ನಾಮಕರಣ ಮಾಡಿದ ಹೆಸರು ಒಂದಾದರೆ, ಮಗಳಿಗೆ ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರುಗಳು ಹತ್ತಾರು. ಚಿನ್ನು, ಪುಟ್ಟಿ, ಕಂದಾ, ಅವ್ವಿ, ಮುನ್ನಿ, ಬೇಬಿ, ಬೇಟಿ, ಸ್ವೀಟಿ... ಹೀಗೆ ಮನೆ–ಮನ ತುಂಬುವ ಮಗಳಿಗೆ ಪ್ರೀತಿಯ ಹೂಮಳೆಯನ್ನೇ ಸುರಿಸಿ ಬೆಳೆಸುತ್ತಾರೆ.

ಆದರೆ, ಮಗಳಿಗೆ ಮದುವೆ ನಿಶ್ಚಯವಾಗುವುದೇ ತಡ ಬಹುತೇಕ ವರನ ಕುಟುಂಬಗಳಲ್ಲಿ ‘ಜಾತಕ ಕೂಡಿ ಬಂದಿಲ್ಲ, ಈ ಹೆಸರು ನಮ್ಮ ಹುಡುಗನಿಗೆ ಹೊಂದುತ್ತಿಲ್ಲ... ಸಂಖ್ಯಾಶಾಸ್ತ್ರದ ಪ್ರಕಾರ ಈ ಹೆಸರಿಟ್ಟರೆ ಒಳ್ಳೆಯದಂತೆ...’ ಹೀಗೆ ಹತ್ತುಹಲವು ನೆಪವೊಡ್ಡಿ ಹೆಣ್ಣಿನ ಹೆಸರು ಬದಲಿಸಲಾಗುತ್ತದೆ. ತವರುಮನೆಯಲ್ಲಿ ಅಪ್ಪ–ಅಮ್ಮ ಅಷ್ಟೊಂದು ಮುದ್ದಿನಿಂದ ಇಟ್ಟ ಹೆಸರು ಒಂದೇ ಘಳಿಗೆಯಲ್ಲಿ ಬದಲಾಗಿಬಿಡುವುದು ಸೋಜಿಗವೇ ಸೈ. ಹೆಣ್ಣಿನ ಹೆಸರನ್ನು ಬದಲಾಯಿಸಿದಂತೆ ಗಂಡು ಮಕ್ಕಳ ಹೆಸರು ಬದಲಾಗಿರುವ ಒಂದೇ ಒಂದು ಪ್ರಕರಣವೂ ಅರಿವಿಗೆ ಬಾರದು. ಹೆಣ್ಣು ಹೆತ್ತವರು ಇದುವರೆಗೂ ತಮ್ಮ ಅಳಿಯನ ಹೆಸರು ತಮ್ಮ ಮಗಳಿಗೆ ಸರಿಹೊಂದುವುದಿಲ್ಲವೆಂದೋ, ಜಾತಕ ಕೂಡಿಬರುವುದಿಲ್ಲವೆಂದೋ ಆತನ ಹೆಸರು ಬದಲಿಸಿದ ನಿದರ್ಶನಗಳೂ ಸಿಗುವುದಿಲ್ಲ.

ADVERTISEMENT

ಹುಟ್ಟಿದಾಗಿನಿಂದಲೂ ಅಪ್ಪ–ಅಮ್ಮ ಇಟ್ಟ ಹೆಸರಿನಿಂದ ಗುರುತಾಗಿದ್ದ ಅವಳೀಗ ತನ್ನ ಹೆಸರಿನ ಅಸ್ಮಿತೆಯನ್ನು ಗಂಡನಿಗಾಗಿ, ಗಂಡನ ಮನೆಯವರಿಗಾಗಿ ಒಂದೇ ಮಾತಿಗೆ ಬಿಟ್ಟುಕೊಡಲು ಸಿದ್ಧಳಾಗಬೇಕು. ಶಾಲಾ–ಕಾಲೇಜು, ಕಚೇರಿಯ ದಾಖಲಾತಿಗಳು, ಹೆತ್ತವರು, ಗೆಳತಿಯರು ಹೀಗೆ ತನ್ನ ಬಂಧು–ಬಳಗದವರಿಂದ ಕರೆಸಿಕೊಳ್ಳುತ್ತಿದ್ದ ಹೆಸರು ವಿವಾಹದ ಆಮಂತ್ರಣ ಪತ್ರಿಕೆಯ ಮೂಲಕ ದಿಢೀರ್ ಅಂತ ಬದಲಾಗುವ ಪ್ರಕ್ರಿಯೆಗೆ ಆಕೆ ಒಡ್ಡಿಕೊಳ್ಳದೇ ವಿಧಿಯಿಲ್ಲ ಎನ್ನುವಂಥ ವಾತಾವರಣ ಸೃಷ್ಟಿಸಲಾಗುತ್ತದೆ ಇಲ್ಲವೇ ಅದು ಸಹಜ ಪ್ರಕ್ರಿಯೆ ಎಂಬಂತೆ ಹೆಣ್ಣನ್ನು, ಹೆಣ್ಣಿನ ಮನೆಯವರನ್ನು ಒಪ್ಪಿಸಲಾಗುತ್ತದೆ.

ನಮ್ಮ ದೇಶದಲ್ಲಿ ಬಹುತೇಕ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ತಮ್ಮ ಹೆಸರು ಬದಲಾಯಿಸುವುದು ಮೇಲ್ನೋಟಕ್ಕೆ ಸರಳವೆನಿಸಿದರೂ, ಆ ಬದಲಾವಣೆ ಪ್ರಕ್ರಿಯೆ ಕೆಲವೊಮ್ಮೆ ಅವಳ ‘ಅಸ್ಮಿತೆ’ಯನ್ನೇ ಪ್ರಶ್ನಿಸುವಂತಿರುತ್ತಿದೆ. ಮದುವೆಯಾಗುವ, ಗಂಡನ ಮನೆಗೆ ಹೋಗುವ ಹೆಣ್ಣಿನ ಹೆಸರಷ್ಟೇ ಬದಲಾಗದು. ಹೆಸರು ಬದಲಾವಣೆಯ ನೆಪದಲ್ಲಿ ಈ ಹಿಂದಿದ್ದ ತನ್ನ ವ್ಯಕ್ತಿತ್ವ, ಸ್ವಭಾವ, ಅಭಿರುಚಿ ಇತ್ಯಾದಿಗಳನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆಗೆ ವಿವಾಹಿತೆ ಅಣಿಯಾಗಬೇಕಾಗುತ್ತದೆ. ಈಗ ಕಾಲ ಬದಲಾಗಿದೆ ಆ ಥರ ಏನಿಲ್ಲ ಎಂದು ನೀವೆಷ್ಟೇ ವಾದಿಸಿದರೂ, ಕೆಲ ಬದಲಾವಣೆಗಳಿಗೆ ಗಂಡಿಗಿಂತ ಹೆಣ್ಣೇ ಹೆಚ್ಚು ಒಡ್ಡಿಕೊಳ್ಳಬೇಕಿರುವಂಥದ್ದು ಸತ್ಯ.

ಮದುವೆ ಎಂಬುದು ಎರಡು ಮನಸುಗಳ ಮೌನ ಬೆಸುಗೆಯಷ್ಟೇ ಅಲ್ಲ, ಎರಡು ಕುಟುಂಬಗಳ ಸಮ್ಮಿಲನವಾಗಬೇಕೆಂಬ ಆಶಯಕ್ಕೆ ವಿರುದ್ಧವಾದ ನಡೆ ಮಗಳ ಹೆಸರು ಬದಲಾವಣೆಯಿಂದಲೇ ಮುನ್ನುಡಿ ಬರೆಯಲಾಗುತ್ತದೆ. ಅದು ಪ್ರೇಮ ವಿವಾಹವೇ ಇರಲಿ, ಮನೆಯವರು ನೋಡಿ ಮಾಡಿದ ಮದುವೆಯೇ ಇರಲಿ, ಇಲ್ಲಿ ಬದಲಾಗಬೇಕಿರುವುದು ಅವಳ ಹೆಸರು ಮತ್ತು ವಿಳಾಸವಷ್ಟೇ!

ತಾಳಿ, ಕಾಲುಂಗುರ, ಬೈತಲೆಯಲಿ ಸಿಂಧೂರ... ಅವಳನ್ನು ನೀನಿನ್ನು ವಿವಾಹಿತೆ ಅನ್ನುವುದನ್ನು ಪದೇಪದೇ ನೆನಪಿಸುವ ಸಂಕೇತಗಳಾದರೆ, ಅವನಿಗೆ ಮಾತ್ರ ಇದ್ಯಾವುದರ ಹಂಗಿಲ್ಲ. ಕೆಲವೊಮ್ಮೆ ಅವನಾಗಿಯೇ ಹೇಳಿಕೊಂಡರೆ, ಕೈಬೆರಳಿನಲ್ಲಿ ನಿಶ್ಚಿತಾರ್ಥ ಉಂಗುರವಿದ್ದರೆ ಇಲ್ಲವೇ ಸೋಷಿಯಲ್ ಮೀಡಿಯಾದ ತನ್ನ ಪ್ರೊಫೈಲ್‌ನಲ್ಲಿ ‘ಮ್ಯಾರೀಡ್’ ಅಂತ ನಮೂದಿಸಿದರೆ ಮಾತ್ರ ಅವನು ವಿವಾಹಿತ ಎಂಬುದು ತಿಳಿಯುತ್ತದೆ! (ಗಮನಿಸಿ ಎಫ್‌ಬಿ, ಇನ್‌ಸ್ಟಾಗ್ರಾಂಗಳಲ್ಲಿ ಬಹುತೇಕ ಗಂಡಸರ ಪ್ರೊಫೈಲ್‌ನಲ್ಲಿ ಸಿಂಗಲ್ ಅಂತಲೇ ಇರುತ್ತದೆ)

ವಿವಾಹವಾದ ನಂತರ ಹೆಣ್ಣಿನ ಹೆಸರಷ್ಟೇ ಅಲ್ಲ ಅವಳ ಸರ್‌ನೇಮ್ (ಉಪನಾಮ) ಕೂಡಾ ಬದಲಾಗಬೇಕಾಗುತ್ತದೆ. ಆ ಮೂಲಕ ಅವಳು ಇಂಥ ಕುಟುಂಬಕ್ಕೆ ಸೇರಿದವಳು ಅನ್ನುವುದು ಅವಳ ಗುರುತಾಗುತ್ತದೆ.

ಆಕೆ ಎಂಥದ್ದೇ ಉನ್ನತ ಹುದ್ದೆಯಲ್ಲಿದ್ದರೂ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರದಲ್ಲಿದ್ದರೂ ಮದುವೆಯಾದ ಮೇಲೆ ತನ್ನ ಹೆಸರಿನೊಂದಿಗಿನ ಸರ್‌ನೇಮ್ ಅನ್ನಾದರೂ ಬದಲಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಒಂದು ವೇಳೆ ಬದಲಿಸಿಕೊಳ್ಳದಿದ್ದಲ್ಲಿ ಅವಳನ್ನು ಅಹಂನ ಕೋಟೆಯಲ್ಲಿರಿಸಲಾಗುತ್ತದೆಯೋ ಹೊರತು, ಅದು ಅವಳ ಸ್ವಾಭಿಮಾನ, ಆತ್ಮಾಭಿಮಾನ ಎಂದು ಗೌರವಿಸುವುದು ಅಷ್ಟಕಷ್ಟೇ. ಇದಕ್ಕೆ ಹೊರತುಪಡಿಸಿದ ನಿದರ್ಶನಗಳು ಇದ್ದರೂ ಅವುಗಳ ಸಂಖ್ಯೆ ತೀರಾ ಕಮ್ಮಿ.

ಬಹುತೇಕ ಹೆಣ್ಣು ಮಕ್ಕಳು ತಮ್ಮ ಗಂಡನ ಮೇಲಿನ ಪ್ರೀತಿಗಾಗಿ ತನ್ನ ಹೆಸರಿನೊಂದಿಗೆ ಅವನ ಹೆಸರನ್ನು ಸೇರಿಸಿಕೊಂಡಿದ್ದೇವೆ ಎನ್ನುತ್ತಾರೆ. ಹಾಗಿದ್ದರೆ ಗಂಡನೂ ಅವಳ ಮೇಲಿನ ಪ್ರೀತಿಗಾಗಿ ತನ್ನ ಹೆಸರಿನ ಮುಂದೆ ಹೆಂಡತಿ ಹೆಸರು ಹಾಕಿಕೊಳ್ಳಬಹುದಲ್ಲ ಅಂತ ಪ್ರಶ್ನಿಸಿದರೆ ಅದಕ್ಕೆ ಬಹುತೇಕ ನೀರೆಯರು ‘ನಿರುತ್ತರೆಯರು’!. ಈ ಪ್ರಶ್ನೆ ಬರೀ ಗಂಡನ ಹೆಸರನ್ನು ತನ್ನ ಹೆಸರಿನೊಂದಿಗೆ ಬಳಸಿಕೊಳ್ಳುವ ಪ್ರಶ್ನೆಗೆ ಮಾತ್ರ ಸೀಮಿತವಲ್ಲ. ತಂದೆಯ ಹೆಸರನ್ನು ಮಗಳ ಹೆಸರಿನೊಂದಿಗೆ ಜೋಡಿಸುವಲ್ಲೂ ಏಳುತ್ತದೆ. ನಾವ್ಯಾಕೆ ಅಪ್ಪನ ಹೆಸರನ್ನೇ ನಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತೇವೆ. ಮನೆಯೊಳಗೂ, ಮನೆಹೊರಗೂ ದುಡಿಯುವ ಅಮ್ಮನ ಹೆಸರನ್ನೇಕೆ ಇಟ್ಟುಕೊಳ್ಳುವುದಿಲ್ಲ? ಉತ್ತರ ಮಾತ್ರ ನಮ್ಮ ಮನಸುಗಳಲ್ಲಿ ಜೋಪಾನವಾಗಿದೆ!

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಆಸ್ತಿಯ ಭಾಗವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ಗಂಡಿನ ಆಸೆ–ಆಕಾಂಕ್ಷೆಗಳಿಗೆ ತಕ್ಕಂತೆ ಆಕೆಯ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಈ ರೀತಿ ಹಾಸುಹೊಕ್ಕಾಗಿರುವ ಸಿಕ್ಕುಗಳಲ್ಲಿ ಸಿಲುಕಿರುವ ಹೆಣ್ಣು, ತನಗೆ ಅರಿವಿಲ್ಲದಂತೆ ಪಿತೃಪ್ರಧಾನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿರುತ್ತಾಳೆ. 

ಹಾಗಿದ್ದರೆ ಮದುವೆಯಾದ ಬಳಿಕ ಹೆಣ್ಣು ಗಂಡ, ಗಂಡನ ಮನೆಯ ಸ್ವತ್ತೇ? ಅನ್ನುವ ಪ್ರಶ್ನೆಗೆ ಉತ್ತರವೆಂಬಂತೆ ಕೆಲವರ್ಷಗಳ ಹಿಂದೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ‘ಮಗಳು ಸದಾ ಮಗಳಾಗಿಯೇ ಇರುತ್ತಾಳೆ. ಆದರೆ, ಮಗ ಮದುವೆ ಆಗುವವರೆಗೆ ಮಾತ್ರ ಮಗನಾಗಿ ಇರುತ್ತಾನೆ’ ಎನ್ನುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರ ತೀರ್ಪು ತುಸು ಸಮಾಧಾನ ತಂದಿತ್ತು. ಅಂತೆಯೇ ಪುರಾಣಗಳಲ್ಲಿರುವ ದೇವರ ಹೆಸರುಗಳನ್ನು ಗಮನಿಸಿದಾಗ ಶಿವಪಾರ್ವತಿ, ಲಕ್ಷ್ಮಿನರಸಿಂಹ, ರಾಧಾಕೃಷ್ಣ, ಸೀತಾರಾಮ, ಸೀತಾಪತಿ ಹೀಗೆ ಅನೇಕ ದೇವರ ಹೆಸರುಗಳ ಜತೆಗೆ ದೇವತೆಯರ ಹೆಸರೂ ಥಳುಕು ಹಾಕಿಕೊಂಡಿವೆ. ಶಿವನಿಗೆ ತಾನು ಅರ್ಧನಾರೀಶ್ವರ ಎಂದು ಹೇಳಿಕೊಳ್ಳಲು ಯಾವುದೇ ಅಳುಕಿಲ್ಲ.

ಹೆಣ್ಣು–ಗಂಡು ಇಬ್ಬರ ದೇಹವಷ್ಟೇ ಅಲ್ಲ ಮನಸುಗಳೂ ಒಂದಾದಲ್ಲಿ ಮಾತ್ರ ಅರ್ಧನಾರೀಶ್ವರನ ಪರಿಕಲ್ಪನೆ ಸಾಕಾರವಾಗಲು ಸಾಧ್ಯ. ಆಗ ನಾನು ಇಂಥವರಿಗೇ ಸೇರಿದವಳು, ಸೇರಿದವನು ಅನ್ನುವ ಪ್ರಶ್ನೆಯೇ ಇಬ್ಬರಿಗೂ ಬಾರದು. ಆ ಸ್ಥಿತಿ ತಲುಪಲು ಅನೇಕ ವರ್ಷಗಳು ಬೇಕಾಗುತ್ತವೆ ಅನ್ನುವುದೂ ನಿಜ. 

‘ಅಷ್ಟಕ್ಕೂ ಈ ಹೆಸರಿನಲ್ಲೇನಿದೆ ಬಿಡಿ’ ಅನ್ನುವ ಶೇಕ್ಸ್‌ಪಿಯರ್‌ನ ಪ್ರಶ್ನೆ ನಿಮ್ಮದೂ ಆಗಿದ್ದರೆ, ‘ಹೆಸರಿನಲ್ಲಿ ನಮ್ಮ ಗುರುತಿದೆ, ಅಸ್ತಿತ್ವವಿದೆ’ ಅನ್ನುವ ಉತ್ತರ ಈಗಿನ ಹೆಣ್ಣುಮಕ್ಕಳದ್ದು. ಹಾಗಾಗಿ, ಅವಳ ಹೆಸರು ಬದಲಿಸುವ ಮುನ್ನ ಅವಳ ಸಮ್ಮತಿ ಇದೆಯೇ ಎಂದು ಒಮ್ಮೆ ಕೇಳುವುದೊಳಿತು. ಅಷ್ಟಕ್ಕೂ ನಮ್ಮ ರಾಷ್ಟ್ರಕವಿ, ರಸಋಷಿ ಕುವೆಂಪು ಅವರು ತಮ್ಮ ‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ’ ಕವಿತೆಯಲ್ಲಿ ಹೇಳಿಕೊಂಡಿರುವಂತೆ ಅವರಿಗೆ ಸ್ವರ್ಗದ ಬಾಗಿಲು ತೆಗೆದದ್ದು ನಾನು ‘ಹೇಮಿಯ ಗಂಡ!’ ಎಂದು ಹೆಂಡತಿಯ ಹೆಸರು ಹೇಳಿಕೊಂಡ ಮೇಲೆಯೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.