ADVERTISEMENT

ಮದುವೆ | ಗಂಡು–ಹೆಣ್ಣಿನ ವಯಸ್ಸಿನ ಅಂತರ ಎಷ್ಟಿದ್ದರೆ ಚಂದ?

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 22:53 IST
Last Updated 5 ಸೆಪ್ಟೆಂಬರ್ 2025, 22:53 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ದಂಪತಿಯು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಲೈಂಗಿಕವಾಗಿ ಸಕ್ರಿಯರಾಗಿ ಇರಲು, ದಾಂಪತ್ಯದಲ್ಲಿ ಅನ್ಯೋನ್ಯತೆ ಕಾಯ್ದುಕೊಳ್ಳಲು ಇಬ್ಬರ ನಡುವಿನ ವಯಸ್ಸಿನ ಅಂತರ ಒಂದು ಮಾನದಂಡವೇ ಹೌದು. ಈ ಸಂಬಂಧದ ಅಧ್ಯಯನ ಆಧಾರಿತ ಲೇಖನ ಇದು

ಭಾರತೀಯರಲ್ಲಿ ಮದುವೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಹಾಗಾಗಿ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಗಂಡು, ಹೆಣ್ಣಿನ ನಡುವಿನ ವಯಸ್ಸಿನ ಅಂತರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ, ವೈಜ್ಞಾನಿಕ ದೃಷ್ಟಿಕೋನದಿಂದ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಒಳಿತು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಹಲವಾರು ಆಯಾಮಗಳಿಂದ ಉತ್ತರವನ್ನು ಪಡೆಯಬಹುದಾಗಿದೆ.

ಮೊದಲನೆಯದಾಗಿ, ಮಾನವನ ವಿಕಾಸದ ಹಂತಗಳನ್ನು ನೋಡುತ್ತಾ ಬಂದರೆ, ಹಿಂದೆಲ್ಲ ಗಂಡ– ಹೆಂಡತಿಯ ನಡುವೆ ಸಾಮಾನ್ಯವಾಗಿ 10 ವರ್ಷಕ್ಕಿಂತ ಹೆಚ್ಚಿನ ಅಂತರ ಇದ್ದುದು ತಿಳಿದುಬರುತ್ತದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಫಲವತ್ತತೆ ಹೆಚ್ಚು ಎಂಬ ಕಾರಣಕ್ಕೆ ಅವರನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳುವ ವಾಡಿಕೆಯಿತ್ತು. ಹಾಗೆಯೇ ವಯಸ್ಸಾದ ಗಂಡಸರು ಆರ್ಥಿಕವಾಗಿ ಸಬಲರಾಗಿದ್ದು, ಕುಟುಂಬದ ಹಲವು ಜವಾಬ್ದಾರಿಗಳನ್ನು ಪೂರೈಸಿ ಪ್ರೌಢರಾಗಿರುತ್ತಾರೆ ಎಂಬ ಕಾರಣಕ್ಕೆ ಮಧ್ಯವಯಸ್ಸಿನ ಗಂಡಸರಿಗೆ ಬೇಡಿಕೆ ಹೆಚ್ಚಾಯಿತು. ಬಳಿಕ ಈ ಅಂತರ ತಗ್ಗುತ್ತಾ ಬಂದು, ಎರಡರಿಂದ ಐದು ವರ್ಷಗಳ ಅಂತರ ಸೂಕ್ತ ಎಂಬ ಭಾವನೆ ಬಲವಾಯಿತು.

ADVERTISEMENT

ಸಂಗಾತಿಗಳ ನಡುವಿನ ವಯಸ್ಸಿನ ಅಂತರದ ಬಗ್ಗೆ ನೂರಾರು ಸಂಶೋಧನೆಗಳು ನಡೆದಿವೆ. ಇವುಗಳಲ್ಲಿ ಬಹುತೇಕ ಸಂಶೋಧನೆಗಳಿಂದ ಹೊರಬಂದ ಅಭಿಪ್ರಾಯದಂತೆ, ಒಂದರಿಂದ ಮೂರು ವರ್ಷದ ಅಂತರವಿರುವ ದಂಪತಿಗಳಲ್ಲಿ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇವರ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ದಾಂಪತ್ಯವನ್ನು ಪರಿಪೂರ್ಣವಾಗಿ ಅನುಭವಿಸುವ ಮನೋಭಾವವನ್ನು ಇವರು ಹೊಂದಿರುತ್ತಾರೆ. ಹೀಗಾಗಿ, ದೀರ್ಘಕಾಲದವರೆಗೂ ಇವರು ಸಂತೋಷವಾಗಿ ಇರುತ್ತಾರೆ. ಇವರ ನಡುವೆ ವೈಮನಸ್ಸು ಕಡಿಮೆ. ಸಾಂಸಾರಿಕ ಆಗುಹೋಗುಗಳು, ಸುಖ-ದುಃಖ, ಕಷ್ಟ–ನಷ್ಟ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾ ಸರಿದೂಗಿಸಿಕೊಂಡು ಹೋಗುತ್ತಾರೆ. ಈ ಮೂಲಕ ಸಂಸಾರದ ಸುಖವನ್ನು ಅನುಭವಿಸುತ್ತಾರೆ.

ಹಾಗೆಯೇ ದಂಪತಿಯ ನಡುವಿನ ವಯಸ್ಸಿನ ಅಂತರ 10 ವರ್ಷಕ್ಕಿಂತ ಹೆಚ್ಚಾಗಿದ್ದಲ್ಲಿ,  ಆರಂಭದಲ್ಲಿ ಅವರು ಸಂತೋಷವಾಗಿ ಇರುವಂತೆ ಕಂಡರೂ ಕಾಲಕ್ರಮೇಣ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮುಖ್ಯವಾಗಿ, ಹೆಣ್ಣಿಗೆ ಜೀವನವನ್ನು ಸಂಪೂರ್ಣವಾಗಿ ಅನುಭವಿಸುವ ಆಸೆ ಇದ್ದರೆ, ಗಂಡಸಿನ ದೇಹ ಮತ್ತು ಮನಸ್ಸು ಅದಕ್ಕೆ ಪೂರಕವಾಗಿ ಸ್ಪಂದಿಸುವುದಿಲ್ಲ. ವಯಸ್ಸಾದಂತೆ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ವಯೋಸಹಜವಾದ ಮಧುಮೇಹ, ಬೊಜ್ಜು, ರಕ್ತದೊತ್ತಡ, ಹೃದ್ರೋಗ, ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಲೈಂಗಿಕತೆಗೆ ಸಂಬಂಧಿಸಿದ ತೊಂದರೆಗಳು ಸಹ ಹೆಚ್ಚಾಗಿರು‌ತ್ತವೆ.

ಅತಿಯಾದ ವಯಸ್ಸಿನ ಅಂತರ ಇದ್ದಾಗ ಸಾಮಾನ್ಯವಾಗಿ ಇಬ್ಬರ ನಡುವಿನ ಅಭಿರುಚಿಯೂ ಭಿನ್ನವಾಗಿಯೇ ಇರುತ್ತದೆ. ಅಂದರೆ, ಪತಿಗೆ ರೇಖಾ, ಜಯಾಬಾದುರಿ ಕಾಲದ ಚಿತ್ರನಟ–ನಟಿಯರು ಇಷ್ಟವಾದರೆ, ಪತ್ನಿಗೆ ಜಾಹ್ನವಿ ಕಪೂರ್‌, ರಶ್ಮಿಕಾ ಮಂದಣ್ಣ ಅಂತಹವರು ಹೆಚ್ಚು ಪ್ರಿಯವಾಗಬಹುದು! ಹೆಂಡತಿಗೆ ವಾರಾಂತ್ಯದಲ್ಲಿ ಸಿನಿಮಾ, ಮಾಲ್‌ ಸುತ್ತುತ್ತಾ ಹೋಟೆಲ್‌ ಊಟದ ರುಚಿ ನೋಡುವ ಬಯಕೆಯಾದರೆ, ಗಂಡನಿಗೆ ವಿಶ್ರಾಂತಿ ಮುಖ್ಯವಾಗಿ, ಮನೆಯ ಊಟವೇ ಹೆಚ್ಚು ರುಚಿಸಬಹುದು.

ಅದರಲ್ಲೂ ಸಣ್ಣ ವಯಸ್ಸಿನ ಹೆಂಡತಿಗೆ ಬಯಕೆಗಳು ಹೆಚ್ಚು. ಆದರೆ ವಯಸ್ಸಾದ ಗಂಡಸರಿಗೆ ಆ ಬಯಕೆಗಳನ್ನು ಪೂರೈಸುವ ಚೈತನ್ಯ ಇರುವುದಿಲ್ಲ. ಲೈಂಗಿಕ ಕಾಮನೆಯು ಒಡಲನ್ನು ಸುಡುವ ಬೆಂಕಿಯಿದ್ದಂತೆ. ದೀರ್ಘಕಾಲದ ಈ ಕಾಮನೆಯು ಅವರನ್ನು ಅಡ್ಡದಾರಿ ಹಿಡಿಯುವಂತೆ ಪ್ರೇರೇಪಿಸಬಹುದು. ಆದರೆ ವಯಸ್ಸಾದಂತೆ ಗಂಡನಿಗೆ ಜೀವನದಲ್ಲಿ ನಿರಾಸಕ್ತಿ ಮೂಡಬಹುದು. ದುರದೃಷ್ಟವಶಾತ್‌, ಆಗತಾನೇ ಸಂಸಾರದಲ್ಲಿ ಸುಖ ಕಾಣತೊಡಗುವ ಹೆಂಡತಿಗೆ ಅಷ್ಟು ಬೇಗ ಆ ಸುಖವನ್ನು ಕಳೆದುಕೊಳ್ಳುವ ಮನಸ್ಸಿರುವುದಿಲ್ಲ.

ಹತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಂತರವಿರುವ ದಂಪತಿಗಳಲ್ಲಿ ವಿವಾಹ ವಿಚ್ಛೇದನದ ಪ್ರಮಾಣ ಅಧಿಕ ಎಂಬುದನ್ನು ಕೆಲವು ಸಂಶೋಧನಾ ವರದಿಗಳು ದೃಢಪಡಿಸಿವೆ. ಅಮೆರಿಕದ ಎಮೋರಿ ವಿಶ್ವವಿದ್ಯಾಲಯವು ಸುಮಾರು 3,000 ದಂಪತಿಗಳ ವಯಸ್ಸಿನ ಅಂತರವನ್ನು ಮಾನದಂಡವಾಗಿರಿಸಿ ಅಧ್ಯಯನವೊಂದನ್ನು ನಡೆಸಿದೆ. ಅದರಿಂದ ಈ ವಿಚಾರ ತಿಳಿದುಬಂದಿದೆ.

ಜಗತ್ತಿನ ಪೂರ್ವ ಭಾಗದ ರಾಷ್ಟ್ರಗಳಲ್ಲಿ ಹಿಂದೆಲ್ಲ ದಂಪತಿಗಳ ಮಧ್ಯೆ ವಯಸ್ಸಿನ ಅಂತರ ಹೆಚ್ಚಾಗಿರುವುದು ಸಾಮಾನ್ಯ ಸಂಗತಿ ಆಗಿತ್ತಾದರೂ ಅವರ ದಾಂಪತ್ಯವು ಸಂಸ್ಕೃತಿ ಮತ್ತು ಸಂಪ್ರದಾಯದ ಆಧಾರದ ಮೇಲೆ ನಿಂತಿದ್ದರಿಂದ ಬದುಕು ಸುಖಮಯವಾಗಿಯೇ ಇರುತ್ತಿತ್ತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಗಂಡು– ಹೆಣ್ಣಿನ ನಡುವೆ ವಯಸ್ಸಿನ ಅಂತರ ಕಡಿಮೆ. ಆದರೆ ವೈಜ್ಞಾನಿಕವಾಗಿ ಪ್ರಜನನಶಾಸ್ತ್ರದ ಪ್ರಕಾರ, ದಂಪತಿಯ ಮಧ್ಯೆ ಎರಡರಿಂದ ಐದು ವರ್ಷ ವಯಸ್ಸಿನ ಅಂತರ ಸೂಕ್ತವಾದದ್ದು. ಇದನ್ನು ಪುಷ್ಟೀಕರಿಸಬಹುದಾದ ಕಾರಣಗಳು ಅನೇಕ. ಮೊದಲನೆಯದಾಗಿ, 20ರ ಆಸುಪಾಸಿನಲ್ಲಿ ಹೆಣ್ಣುಮಕ್ಕಳಲ್ಲಿ ಫಲವತ್ತತೆ ಮಟ್ಟ ಅತ್ಯುತ್ತಮವಾಗಿರುತ್ತದೆ. 30ರ ನಂತರ ಅದು ಕ್ಷೀಣಿಸುತ್ತಾ ಮುಂದುವರಿಯುತ್ತದೆ. ಆದರೆ ಪುರುಷರಲ್ಲಿ ಫಲವತ್ತತೆಯು 50 ವರ್ಷಗಳವರೆಗೂ ಹಾಗೆಯೇ ಮುಂದುವರಿಯುತ್ತದೆ. ನಂತರ ವೀರ್ಯಾಣುವಿನ ಕಾರ್ಯಕ್ಷಮತೆ ಕ್ಷೀಣಿಸಿದರೂ ಪ್ರಜನನ ಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಬಹುದಾಗಿದೆ.

ಭಾವನಾತ್ಮಕ ಪ್ರೌಢಿಮೆ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪುರುಷ ತೆಗೆದುಕೊಳ್ಳುವ ಸಮಯ ಹೆಚ್ಚು. ಆದರೆ ಮಹಿಳೆಯರು ಶೀಘ್ರಗತಿಯಲ್ಲಿ ಇವುಗಳ ಮೇಲೆ ಪ್ರೌಢಿಮೆ ಸಾಧಿಸುತ್ತಾರೆ. ಹಾಗಾಗಿ, ಎರಡರಿಂದ ಐದು ವರ್ಷ ಅಂತರವಿರುವ ದಂಪತಿಯು ಪೋಷಕರಾಗಿ ತೆಗೆದುಕೊಳ್ಳಬಹುದಾದ ಜವಾಬ್ದಾರಿ ಉತ್ತಮವಾಗಿರುತ್ತದೆ. ಇಬ್ಬರೂ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧರಾಗಿರುವುದರಿಂದ, ಮಕ್ಕಳನ್ನು ಪಡೆಯುವ, ಪೋಷಿಸುವ ಕೆಲಸ ಸುಗಮವಾಗುತ್ತದೆ.

ವಯಸ್ಸಿನ ಅಂತರ ಅತಿಯಾಗಿದ್ದಾಗ, ಮಕ್ಕಳನ್ನು ಪಡೆಯುವುದು ಹಾಗೂ ಅವರ ಪಾಲನೆ, ಪೋಷಣೆ ಕಷ್ಟಕರ. ದಂಪತಿಗಳ ಭಿನ್ನ ಅಭಿರುಚಿ, ಹವ್ಯಾಸಗಳಿಂದಾಗಿ ಮುಂದಿನ ದಿನಗಳಲ್ಲಿ ಸಂಸಾರದಲ್ಲಿ ಅಪಸ್ವರ ಉಂಟಾಗಬಹುದು. ವಯಸ್ಸಿನ ಅಂತರ ಸೂಕ್ತವಾಗಿದ್ದಾಗ ಅವರು ದೈಹಿಕ, ಮಾನಸಿಕ, ಸಾಮಾಜಿಕ, ಲೈಂಗಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿ ಇರುತ್ತಾರೆ.

ಇದೆಲ್ಲದರ ನಡುವೆಯೂ ಕೆಲವು ಅಪವಾದಗಳು ಇದ್ದೇ ಇರುತ್ತವೆ ಎಂಬುದನ್ನು ನಾವು ಮರೆಯಬಾರದು. ಎಷ್ಟೇ ವಯಸ್ಸಿನ ಅಂತರ ಇದ್ದರೂ, ಗಂಡಿನಿಗಿಂತ ಹೆಂಡತಿಯ ವಯಸ್ಸು ಹೆಚ್ಚಾಗಿ ಇದ್ದಾಗಲೂ ಅಂತಹವರು ವಯಸ್ಸಿನ ಅಂತರ ಕಡಿಮೆ ಇರುವ ದಂಪತಿಗಳಿಗಿಂತಲೂ ಅತ್ಯುತ್ತಮವಾಗಿ ಬದುಕುತ್ತಿರುವುದನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ.

ಯುವಜನರ ಆಯ್ಕೆ ಯಾವುದು?

ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ದಂಪತಿಯ ನಡುವೆ ವಯಸ್ಸಿನ ಅಂತರ ಕಡಿಮೆ ಇದ್ದಾಗ ಅವರಲ್ಲಿ ಲೈಂಗಿಕ ಸಂತೃಪ್ತಿಯ ಭಾವನೆ ಹೆಚ್ಚಿರುತ್ತದೆ. ಆದರೆ ವಯಸ್ಸಿನ ಅಂತರ ಅಧಿಕವಾಗಿದ್ದಾಗ ಮದುವೆಯಾದ ಆರರಿಂದ ಹತ್ತು ವರ್ಷಗಳ ಬಳಿಕ ಅಂತಹ ಭಾವನೆ ಕಡಿಮೆಯಾಗುತ್ತಾ ಬಂದು ದಾಂಪತ್ಯದಲ್ಲಿ ಬಿರುಕು ಮೂಡಬಹುದು. ವಿವಿಧ ಬಗೆಯ ಸಂಸ್ಕೃತಿ ಹೊಂದಿರುವ 37 ಜನಾಂಗಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಕಂಡುಬಂದ ವಿಚಾರವೊಂದು ಕುತೂ‌ಹಲಕಾರಿಯಾಗಿದೆ. ಅದೆಂದರೆ ಯುವಕರು ತಮಗಿಂತ ಎರಡು ಅಥವಾ ಮೂರು ವರ್ಷ ಸಣ್ಣವರಾದ ಯುವತಿಯರನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದರೆ ಯುವತಿಯರು ತಮಗಿಂತ ಮೂರ್ನಾಲ್ಕು ವರ್ಷ ದೊಡ್ಡವರನ್ನು ಮದುವೆಯಾಗಲು ಇಚ್ಛೆಪಟ್ಟಿದ್ದರು.

ಹಿರಿ ಹಿರಿ ಹೆಂಡತಿ

ಕೊರಿಯಾದಲ್ಲಿ ನಡೆದ ಅಧ್ಯಯನವೊಂದು ಪುರುಷನಿಗಿಂತ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಹಿರಿಯರಾದ ಮಹಿಳೆಯರ ಮನಃಸ್ಥಿತಿ ಕುರಿತದ್ದಾಗಿದೆ. ಇದು ಪುರುಷ ಮತ್ತು ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ. ಹೆಣ್ಣಿನ ವಯಸ್ಸು ಗಂಡಿಗಿಂತ ಅತ್ಯಂತ ಹೆಚ್ಚಾಗಿದ್ದಾಗ ದಾಂಪತ್ಯದಲ್ಲಿ ಅಪಸ್ವರ ಮೂಡಬಹುದು ಮತ್ತು ಆ ಮಹಿಳೆ ನಂತರದ ದಿನಗಳಲ್ಲಿ ಖಿನ್ನತೆಗೆ ಒಳಗಾಗಬಹುದು. ಅಲ್ಲದೆ ಆಕೆಯಲ್ಲಿ ಒತ್ತಡ ನಕಾರಾತ್ಮಕ ಧೋರಣೆ ಕಾಣಿಸಿಕೊಂಡು ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಯಾವಾಗಲೂ ಹಿಂದೆ ಉಳಿಯುತ್ತಾಳೆ. ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಸಂಗಾತಿಯೊಂದಿಗಿನ ಅತಿಯಾದ ವಯಸ್ಸಿನ ಅಂತರವು ಮಹಿಳೆಯ ಪ್ರಜನನ ಪ್ರಕ್ರಿಯೆಯ ಮೇಲೂ ನೇರ ಪರಿಣಾಮ ಬೀರುತ್ತದೆ.

ಗಂಡನಿಗೆ 29 ಹೆಂಡತಿಗೆ 54!

ವಿದೇಶ ಪ್ರವಾಸ ಕೈಗೊಂಡಿದ್ದ ವೇಳೆ ವಿಮಾನದಿಂದ ಕೆಳಗಿಳಿಯುವಾಗ ಪತ್ನಿಯಿಂದ ಸೋಟೆಗೆ ತಿವಿಸಿಕೊಂಡು ಇತ್ತೀಚೆಗೆ ಜಗತ್ತಿನಾದ್ಯಂತ ಸುದ್ದಿಯಾದವರು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್. ಆಗ ಅವರು ಮೂತಿಗೆ ತಿವಿಸಿಕೊಂಡದ್ದಕ್ಕಿಂತ ಹೆಚ್ಚಾಗಿ ಎಲ್ಲರ ಗಮನಸೆಳೆದದ್ದು ಅವರಿಬ್ಬರ ನಡುವಿನ ವಯಸ್ಸಿನ ಅಂತರ. ಮ್ಯಾಕ್ರನ್‌ ಅವರಿಗಿಂತ ಅವರ ಪತ್ನಿ ಬ್ರಿಜೆಟ್‌ ಬರೋಬ್ಬರಿ 25 ವರ್ಷ ದೊಡ್ಡವರು! ಹೈಸ್ಕೂಲ್‌ನಲ್ಲಿದ್ದಾಗ ತಮಗೆ ಫ್ರೆಂಚ್‌ ಕಲಿಸುತ್ತಾ ಶಾಲೆಯ ಆವರಣದಲ್ಲಿ ಸಂಜೆ ನಾಟಕಾಭ್ಯಾಸ ಮಾಡಿಸುತ್ತಿದ್ದ 39 ವರ್ಷದ ಶಿಕ್ಷಕಿ ಬ್ರಿಜೆಟ್‌ ಅವರೊಂದಿಗೆ ಪ್ರೇಮಾಂಕುರವಾದಾಗ ಮ್ಯಾಕ್ರನ್‌ ಅವರ ವಯಸ್ಸು 15. ಮದುವೆಯಾಗಿ ಮೂವರು ಮಕ್ಕಳ ತಾಯಿಯಾಗಿದ್ದ ಬ್ರಿಜೆಟ್‌ ಜೊತೆಗಿನ ಒಡನಾಟ ಮಿತಿಮೀರಿದಾಗ ವಿಷಯ ಮ್ಯಾಕ್ರನ್‌ ಮನೆಯವರ ಕಿವಿ ಮುಟ್ಟಲು ತಡವಾಗಲಿಲ್ಲ. ಮೊದಲಿಗೆ ಮಗ ಪ್ರೀತಿಯಲ್ಲಿ ಬಿದ್ದಿರುವುದು ಆತನ ಸಹಪಾಠಿಯಾಗಿದ್ದ ಬ್ರಿಜೆಟ್‌ ಪುತ್ರಿಯ ಜೊತೆ ಎಂದೇ ಪೋಷಕರು ಭಾವಿಸಿದ್ದರು. ನಿಜ ಅರಿತಾಗ ಆಘಾತಕ್ಕೊಳಗಾದ ಅವರು ಮಗನನ್ನು ದೂರದ ಪ್ಯಾರಿಸ್‌ಗೆ ಓದಲು ಕಳಿಸಿ ಇಬ್ಬರನ್ನೂ ದೂರ ಮಾಡಲು ನೋಡಿದರು. ಆದರೆ ಅದನ್ನು ಲೆಕ್ಕಿಸದ ಈ ಜೋಡಿ ಪತ್ರದ ಮೂಲಕ ಒಲವು ನಿವೇದಿಸಿಕೊಳ್ಳುತ್ತಾ ಎಂದಿನಂತೆ ಪ್ರೇಮಲೋಕದಲ್ಲಿ ತೇಲಿತು. ‘ಮತ್ತೆ ಊರಿಗೆ ಬಂದು ನಿನ್ನನ್ನು ವರಿಸುವೆ’ ಎಂದು ಆಗ ಕೊಟ್ಟ ಮಾತಿಗೆ ತಪ್ಪದೆ ವಾಪಸ್‌ ಬಂದು ಮದುವೆಯಾದಾಗ ಮ್ಯಾಕ್ರನ್‌ಗೆ 29 ಬ್ರಿಜೆಟ್‌ಗೆ 54 ವರ್ಷವಾಗಿತ್ತು. ಮೊದಲ ಬಾರಿ ಬ್ರಿಜೆಟ್‌ ಅವರನ್ನು ಭೇಟಿಯಾದಾಗ ಮ್ಯಾಕ್ರನ್‌ 39 ವರ್ಷದವರು. ಅದೇ 39 ವರ್ಷಕ್ಕೆ ಫ್ರಾನ್ಸ್‌ ಅಧ್ಯಕ್ಷರಾಗುವ ಮೂಲಕ ದೇಶದ ಅತಿ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹಿರಿಮೆಗೆ ಮ್ಯಾಕ್ರನ್‌ ಪಾತ್ರರಾದರು. ಈಗ ಮ್ಯಾಕ್ರನ್‌ಗೆ 47 ವರ್ಷವಾಗಿದ್ದು ಅವರ ಮಲಮಕ್ಕಳು ಕ್ರಮವಾಗಿ 52, 50 ಮತ್ತು 48 ವರ್ಷ ಪ್ರಾಯದವರು. ಸಾರ್ವಜನಿಕವಾಗಿ ಪರಸ್ಪರ ಒಳ್ಳೆಯ ಅಭಿಪ್ರಾಯಗಳನ್ನೇ ವ್ಯಕ್ತಪಡಿಸುತ್ತ ಬಂದಿದ್ದರೂ ರಾಜಕೀಯ ವಿವಾದ ಸಾರ್ವಜನಿಕರ ಅವಹೇಳನ ಮತ್ತು ತಾವಿಬ್ಬರೂ ಜೊತೆಗಿದ್ದಾಗಿನ ವಿಡಿಯೊಗಳು ಬೇಡದ ಕಾರಣಕ್ಕೆ ಆಗಾಗ ವೈರಲ್‌ ಆಗುವುದರಿಂದ ತಪ್ಪಿಸಿಕೊಳ್ಳಲು ಈ ಜೋಡಿಗೆ ಸಾಧ್ಯವಾಗಿಲ್ಲ. ದುರ್ವರ್ತನೆ ತೋರಿದರೆ ವಿದ್ಯಾರ್ಥಿ ಎಷ್ಟೇ ದೊಡ್ಡವನಾಗಿದ್ದರೂ ಎಂತಹ ಹುದ್ದೆಯಲ್ಲೇ ಇದ್ದರೂ ಶಿಕ್ಷಕಿಯಿಂದ ಹೊಡೆತ ತಪ್ಪಿದ್ದಲ್ಲ ಎಂಬ ಕುಹಕದ ಮಾತೂ ಈ ಸಂದರ್ಭದಲ್ಲಿ ಕೇಳಿಬಂತು!

ಲೇಖಕಿ: ಮುಖ್ಯಸ್ಥೆ, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.