ADVERTISEMENT

ಮಗಳು ಸನ್ನಿಧಿ ಜೊತೆ ಅಮ್ಮ ಚೈತನ್ಯಾ ರಂಗಪ್ರವೇಶ

ಕೃಷ್ಣಿ ಶಿರೂರ
Published 8 ಮಾರ್ಚ್ 2025, 0:30 IST
Last Updated 8 ಮಾರ್ಚ್ 2025, 0:30 IST
<div class="paragraphs"><p>ರಂಗಪ್ರವೇಶದಲ್ಲಿ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್‌&nbsp;</p></div>

ರಂಗಪ್ರವೇಶದಲ್ಲಿ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್‌ 

   
ಇಷ್ಟಪಟ್ಟು ಮಾಡಿದರೆ ಕಷ್ಟವೊಂದಿಷ್ಟಿರದು. ಮನಸ್ಸು ಮಾಡಿದರೆ ಸಾಧನೆ ಸುಲಭ ಎಂಬ ಮಾತಿಗೆ ಚೈತನ್ಯಾ ಉಪಾಧ್ಯಾಯರು ಉದಾಹರಣೆಯಾಗುತ್ತಾರೆ. ಮಗಳು ಸನ್ನಿಧಿ ಜೊತೆಗೆ ರಂಗಪ್ರವೇಶವನ್ನೂ ಮಾಡಿ ಭೇಷ್‌ ಎನಿಸಿಕೊಂಡರು

ಕೋವಿಡ್‌ ಸಮಯದಲ್ಲಿ ಮಗಳು ಮನೆಯಲ್ಲೇ ಇದ್ದು ಸ್ವಲ್ಪ ಆಲಸಿಯಾಗಿದ್ಲು. ಕೋವಿಡ್‌ ತಿಳಿಯಾದ ನಂತ್ರ ಅವಳನ್ನ ಭರತನಾಟ್ಯ ಕ್ಲಾಸಿಗೆ ಸೇರಿಸಿದೆ. ಸೇರಿಸಿದ ಮೇಲೆ ಕರ್ಕೊಂಡು ಹೋಗಿ, ಬರೋದು ನಾನೇ. ಬ್ಯಾಂಕ್‌ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ಮೇಲೆ ಮಗಳನ್ನ ಭರತನಾಟ್ಯ ಕಲಿಕೆಗಾಗಿ ಕಲಾಸುಜಯಕ್ಕೆ ಕರೆದೊಯ್ಯುತ್ತಿದ್ದೆ. ಅಲ್ಲಿ ಮಕ್ಕಳು ಪ್ರಾಕ್ಟೀಸ್‌ ಮಾಡೋದನ್ನೇ ನೋಡ್ತಾನೋಡ್ತಾ ನನ್ನ ಪಾದಗಳು ನಿಂತಲ್ಲಿ ನಿಲ್ಲದಾದವು. ಬಾಲ್ಯದಲ್ಲಿ ಅಕ್ಕನ ಜೊತೆ ಕಲಿತು ಬಿಟ್ಟ ಭರತನಾಟ್ಯದ ಹೆಜ್ಜೆಗಳು ಮನದಲ್ಲಿ ಮೂಡಿ ನನ್ನನ್ನೂ ಗೆಜ್ಜೆ ಕಟ್ಟಿ ಹೆಜ್ಜೆ ಇಡಲು ಪ್ರೇರೇಪಿಸಿತು. ಇಷ್ಟಾದ ನಂತರ ನೀವೇ ನೋಡಿದಿರಲ್ಲ..? ಮಗಳು ನಾನೂ ಒಂದೇ ವೇದಿಕೆಯಲ್ಲಿ ರಂಗಪ್ರವೇಶವನ್ನೂ ಮಾಡಿದೆವು....

ಹೀಗೆಂದು ಹೇಳುವಾಗ ಬ್ಯಾಂಕ್‌ ಉದ್ಯೋಗಿ ಚೈತನ್ಯಾ ಉಪಾಧ್ಯಾಯ ಅವರ ಮೊಗದಲ್ಲಿ ಏನೋ ಸಾಧಿಸಿದ ಸಂತೃಪ್ತಭಾವ ಮೂಡಿತ್ತು. ಆತ್ಮವಿಶ್ವಾಸ ತೋರುತ್ತಿತ್ತು. ಪಕ್ಕದಲ್ಲಿದ್ದ ಮಗಳ ಸನ್ನಿಧಿ ಅಮ್ಮನ ಮುಖ ನೋಡಿ ನಸುನಕ್ಕಳು.

ADVERTISEMENT

ಒಂದೇ ವೇದಿಕೆಯಲ್ಲಿ ಅಮ್ಮ–ಮಗಳು ಭರತನಾಟ್ಯ ರಂಗಪ್ರವೇಶ ಮಾಡಿದ್ದು ವಿರಳ. ಆದರೆ ಮಗಳಿಗೆ ಕ್ಲಾಸಿಗೆ ಸೇರಿಸಿ, ನಂತರದಲ್ಲಿ ತಾನೂ ಸೇರಿ ಕಲಿತು ಚೈತನ್ಯಾ ಉಪಾಧ್ಯಾಯ ಹಾಗೂ ಮಗಳು ಸನ್ನಿಧಿ ಪಿ.ರಾವ್‌ ರಂಗಪ್ರವೇಶ ಮಾಡಿದ್ದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಇತ್ತೀಚೆಗಷ್ಟೆ. 

ವಯಸ್ಸಿನ ಅಡ್ಡಿ ಆತಂಕವನ್ನು ಮೀರಿ, ಅನಾರೋಗ್ಯವನ್ನೂ ಮೆಟ್ಟಿನಿಂತು ಮಗಳೊಂದಿಗೆ ಸರಿಸಮಾನವಾಗಿ ಹೆಜ್ಜೆ ಇಟ್ಟು ಸೈ ಎನಿಸಿಕೊಂಡರು ಚೈತನ್ಯಾ. ಅದಕ್ಕಿಂತ ಹೆಚ್ಚಾಗಿ ಭರತನಾಟ್ಯಕ್ಕೆಂದು ಸಮಯವನ್ನು ಹೊಂದಿಸಿಕೊಂಡಿದ್ದು ದೊಡ್ಡ ವಿಷಯವೇ ಸರಿ.

‘ಪತಿ, ಕಾಲೇಜಿಗೆ ಹೋಗುವ ಮಗ, ಪ್ರೈಮರಿ ಸ್ಕೂಲ್‌ಗೆ ಹೋಗುವ ಮಗಳು, ಅತ್ತೆ ಇವರೆಲ್ಲರಿಗೂ ಬೆಳಗಿನ ನಾಸ್ಟಾ, ಅಡುಗೆ ಸಿದ್ಧಪಡಿಸಿಟ್ಟು ಬ್ಯಾಂಕಿಗೆ ಹೊರಟರೆ ಬ್ಯಾಂಕ್‌ನಲ್ಲಿ ಕೆಲಸ ಮುಗಿಸಿ ವಾಪಸ್‌ ಹೊರಡುವುದು 5.30ರ ನಂತರ. ಬ್ಯಾಂಕಿನಿಂದಲೇ ನೇರವಾಗಿ ಭರತನಾಟ್ಯ ತರಗತಿಗೆ ಹೋಗಿ ಪ್ರಾಕ್ಟೀಸ್‌ ಮುಗಿಸಿ ಮನೆ ಸೇರೋದು ರಾತ್ರಿ 9.30ಕ್ಕೆ. ಗಂಡ, ಅತ್ತೆ, ಅಮ್ಮ, ಮಗ, ಮಗಳ ಪ್ರೋತ್ಸಾಹ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದ್ದು. ಅದರಲ್ಲೂ ರಂಗಪ್ರವೇಶಕ್ಕಾಗಿ ಹೆಚ್ಚಿನ ಸಮಯವನ್ನು ನೀಡಲೇ ಬೇಕಿತ್ತು. ಕಳೆದ ಜನವರಿಯಿಂದ ಈ ಜನವರಿವರೆಗೆ ನನ್ನ ಪಾಲಿನ ಸಂಕ್ರಮಣಕಾಲವೇನಿಸಿದ್ದು ಸುಳ್ಳಲ್ಲ. ಗುರು ಸುಜಯ ಶಾನಭಾಗ ಅವರ ಪ್ರೋತ್ಸಾಹ, ಸಹಕಾರ ಅಪಾರ. ವಯಸ್ಸಿನ ಕಾರಣಕ್ಕೆ ನೆನಪಿನಿಂದ ಮರೆಯಾಗುವ ಹೆಜ್ಜೆಗಳನ್ನು ನೆನಪಿಸುತ್ತ ಮಗಳೂ ಗುರುವಾದಳು..’ ಹೀಗೆನ್ನುವಾಗ ಚೈತನ್ಯಾ ಅವರ ಮೊಗದಲ್ಲಿ ಮಂದಹಾಸ ಮನೆಮಾಡಿತ್ತು.

ರಂಗಪ್ರವೇಶದಲ್ಲಿ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್‌ 

‘ಒಮ್ಮೊಮ್ಮೆ ಮನಸ್ಸು ಖಾಲಿ ಆಗ್ತಿತ್ತು. ಆಗ ಅನ್ನಿಸೋದು.. ಇದೆಲ್ಲ ಈ ವಯಸ್ಸಲ್ಲಿ ಬೇಕಿತ್ತ ಅಂತಾ. ರಣರಂಗದಲ್ಲಿ ಯುದ್ಧ ಬೇಕಿತ್ತಾ ಎಂದು ಅರ್ಜುನನಿಗೆ ಅನ್ನಿಸಿದಂತೆ. ಅಂಥ ಸಂದರ್ಭಗಳಲ್ಲಿ ಅಮ್ಮ, ಅತ್ತೆ ನನಗೆ ಪ್ರೇರೆಪಿಸುತ್ತಿದ್ದರು. ಮತ್ತೆ ಮುನ್ನುಗ್ಗುತ್ತಿದ್ದೆ. ಈಗ  ಭರತನಾಟ್ಯದಲ್ಲಿ ಎಂ.ಎ ಮಾಡುತ್ತಿದ್ದೇನೆ. ಅದಕ್ಕಾಗಿ ಗುರುಕುಲದಲ್ಲಿ ಬೆಳಗಿನ ಸಮಯ ಹೊಂದಿಸಿಕೊಂಡಿದ್ದೇನೆ’ ಎಂದು ಚೈತನ್ಯಾ ಹೇಳಿದರು.

ಭರತನಾಟ್ಯದ ಕಲಿಕೆ ನಂತರ ಚೈತನ್ಯಾ ಹೊಸ ಚೈತನ್ಯವನ್ನೇ ಹುಟ್ಟುಹಾಕಿದೆ. ಅವರಲ್ಲಿ ಆರೋಗ್ಯ ಇನ್ನಷ್ಟು ವೃದ್ಧಿಸಿದೆ. ಕುತ್ತಿಗೆ ನೋವು, ಋತುಬಂಧದ ಸಮಸ್ಯೆಗಳು ಗೌಣವೆನಿಸಿದವು. ವೇದಿಕೆಯ ಭಯ ಮರೆಯಾಗಿದೆ. ಆತ್ಮವಿಶ್ವಾಸ ಮೂಡಿದೆ. ಮಗಳು ಸನ್ನಿಧಿ ಕೂಡ ಕಲಿಕೆಯಲ್ಲಿ ಮೊದಲ ರ‍್ಯಾಂಕ್‌ ಬಿಟ್ಟುಕೊಟ್ಟಿಲ್ಲ.

ಗುರು ಮಾತು

‘ಭರತನಾಟ್ಯವನ್ನು ಎಲ್ಲ ವಯಸ್ಸಿನವರೂ ಕಲಿಯಬಹುದು. ಆದರೆ ಕೆಲವು ವಿಚಾರದಲ್ಲಿ ಕಲಿಕೆ ವೇಳೆ ಮಧ್ಯ ವಯಸ್ಸು ಅಡ್ಡಿಯನ್ನುಂಟು ಮಾಡಲಿದೆ. ದೇಹ ಸುಲಭವಾಗಿ ಬಾಗದು. ನೆನಪಿನ ಕೊರತೆ, ಎಲುಬಿನ ಸಾಂದ್ರತೆ ಕಡಿಮೆಯಾಗಿ ನಿರಂತರ ನೃತ್ಯಕ್ಕೆ ಸುಸ್ತು ಕಾಡಲಿದೆ. ರಂಗಪ್ರವೇಶದಲ್ಲಿ ಎರಡೂವರೆ ತಾಸು ಕಾಲ ನೃತ್ಯ ಮಾಡಬೇಕಿರುವುದರಿಂದ ದೇಹ ಕೂಡ ಅದಕ್ಕೆ ಸಹಕರಿಸಬೇಕು. ಅದರಲ್ಲೂ ಇಲ್ಲಿ ಮಗಳ ನೃತ್ಯಕ್ಕೆ ಸರಿಸಮಾನವಾಗಿ ಅಮ್ಮನ ಹಾವಭಾವವೂ ಜೊತೆಯಾಗಬೇಕು. ಅದಕ್ಕಾಗಿ ಅಷ್ಟೇ ಕಠಿಣ ಪ್ರಾಕ್ಟೀಸ್‌ ಮಾಡುವುದು ತೀರಾ ಅಗತ್ಯ. ಅದನ್ನು ಸವಾಲಾಗಿ ಸ್ವೀಕರಿಸಿ ಚೈತನ್ಯಾ ಉಪಾಧ್ಯಾಯ ಅವರು ಯಶಸ್ಸು ಕಂಡಿದ್ದಾರೆ’
ಸುಜಯ್‌ ಶಾನಭಾಗ, ಕಲಾಸುಜಯದ ನೃತ್ಯಗುರು

ಅಮ್ಮ ಚೈತನ್ಯಾ ಉಪಾಧ್ಯಾಯ–ಮಗಳು ಸನ್ನಿಧಿ ರಾವ್‌ 

ಗುರು ವಿದ್ವಾನ್‌ ಸುಜಯ್ ಶಾನಭಾಗ ಅವರೊಂದಿಗೆ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.