ADVERTISEMENT

Mothers Day: ಅಮ್ಮಂದಿರ ದಿನಕ್ಕೆ ಬಿಪಾಶಾ ಸ್ವರಾ ಪಾಠ

​ಪ್ರಜಾವಾಣಿ ವಾರ್ತೆ
Published 9 ಮೇ 2025, 23:42 IST
Last Updated 9 ಮೇ 2025, 23:42 IST
ಬಿಪಾಶಾ ಬಸು ಮಗಳು ದೇವಿಯೊಂದಿಗೆ.  
ಬಿಪಾಶಾ ಬಸು ಮಗಳು ದೇವಿಯೊಂದಿಗೆ.     

ಅಮ್ಮಂದಿರ ದಿನದ ಹೊಸ್ತಿಲಲ್ಲಿ ಸಿನಿಮಾ ನಟಿಯರಾದ ಬಿಪಾಶಾ ಬಸು ಮತ್ತು ಸ್ವರಾ ಭಾಸ್ಕರ್‌ ತಮ್ಮ ತಾಯ್ತನದ ಗಳಿಗೆಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಗೋವಾ ಪ್ರವಾಸ ಕೈಗೊಂಡಿದ್ದ ಬಿಪಾಶಾ, ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವುದರ ಲಾಭಗಳನ್ನು ಕಿರಣ್‌ ಗ್ರೋವರ್‌ ಅವರೊಂದಿಗೆ ಚರ್ಚಿಸಿ ಎನ್‌ಡಿ ಟೀವಿಯೊಂದಿಗೆ ಹಂಚಿಕೊಂಡಿದ್ದಾರೆ. 

ಹೆಚ್ಚುವ ಆತ್ಮವಿಶ್ವಾಸ: ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೆಯ ಪರಿಚಿತ ಪರಿಸರದಿಂದ ದೂರ, ಅಪರಿಚಿತ ಊರುಗಳಲ್ಲಿ ತಾತ್ಕಾಲಿಕವಾಗಿ ವಾಸವಾಗುವ ಸಂತೋಷದ ಜೊತೆಗೆ ಹೊಂದಿಕೊಳ್ಳುವ ಪಾಠ ಸಿಗುತ್ತದೆ.

ADVERTISEMENT

ಸಭ್ಯತೆ, ಸೌಜನ್ಯ: ಮಕ್ಕಳು ಉಳಿದವರೊಂದಿಗೆ ಹೇಗೆ ವರ್ತಿಸಬೇಕು, ಅಪರಿಚಿತರ ನಡುವೆ ಹೇಗೆ ಇರಬೇಕು, ಯಾರೊಂದಿಗೆ ಬೆರೆಯಬೇಕು, ಹೇಗೆ ನಡೆದುಕೊಳ್ಳಬೇಕು ಇವೆಲ್ಲವನ್ನೂ ಪ್ರವಾಸದಿಂದ ಕಲಿಯುತ್ತಾರೆ. 

ಬಾಂಧವ್ಯ ಗಟ್ಟಗೊಳ್ಳುತ್ತದೆ: ಮಗುವಿನೊಂದಿಗೆ ಪ್ರತಿದಿನ 20 ನಿಮಿಷ ಸಮಯ ಕಳೆಯುವುದರಿಂದ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಪ್ರವಾಸದಲ್ಲಿ ಅವರೊಂದಿಗೆ ಇಡೀದಿನ ರಾತ್ರಿಗಳನ್ನು ಕಳೆಯುವುದರಿಂದ ಅವರನ್ನು ಅರ್ಥ ಮಾಡಿಕೊಳ್ಳುವುದು, ಮಕ್ಕಳಿಗೆ ಬೆಚ್ಚಗಿನ ಭಾವ ನೀಡುವುದು ಸಾಧ್ಯವಾಗುತ್ತದೆ. 

ಊಟದ ಶಿಸ್ತು: ಮನೆಯಲ್ಲಿ ಅದು ಬೇಡ, ಇದು ಬೇಡ ಎಂದೆಲ್ಲ ಹಟ ಮಾಡುವ ಮಕ್ಕಳು, ಪ್ರವಾಸದಲ್ಲಿ ಎಲ್ಲವನ್ನೂ ಉಣ್ಣುವ ಶಿಸ್ತು ರೂಢಿಸಿಕೊಳ್ಳುತ್ತಾರೆ. ಬಹು ಆಯ್ಕೆಗಳಿದ್ದಾಗ ತಮ್ಮ ನೆಚ್ಚಿನದನ್ನು ಆಯ್ಕೆ ಮಾಡಿಕೊಳ್ಳುವ ವಿವೇಚನೆ ಕಲಿಯುತ್ತಾರೆ.

ಹೊಸತನದ ಪರಿಚಯ: ಹೊಸ ಊರು, ಹೊಸ ಭಾಷೆ, ಹೊಸ ಸಂಸ್ಕೃತಿಯೊಂದಿಗೆ ಮಕ್ಕಳು ಮುಖಾಮುಖಿಯಾಗುತ್ತಾರೆ. ಮುಂಬೈನಲ್ಲಿಯೂ ಸಮುದ್ರ ಇದೆ. ಗೋವಾದಲ್ಲಿಯೂ. ಆದರೆ ಎರಡೂ ಕರಾವಳಿಗಳ ಆಹಾರ ಪದ್ಧತಿ ಬೇರೆಯೇ ಆಗಿದೆ. ಈಗಾಗಲೇ ಬಹುಸಂಸ್ಕೃತಿಯೊಂದಿಗೆ ಹೊಂದಿಕೊಳ್ಳುತ್ತಿರುವ ಮಗು, ಪ್ರವಾಸದಿಂದಾಗಿ ಬೇರೆ ಸಂಸ್ಕೃತಿಯ ಪರಿಚಯವನ್ನೂ ಮಾಡಿಕೊಳ್ಳುತ್ತಾರೆ. 

ಹೆಚ್ಚು ಪ್ರವಾಸ ಕೈಗೊಳ್ಳಿ. ಮಕ್ಕಳೊಡನೆ ಮಕ್ಕಳಾಗಿ ಎನ್ನುತ್ತ ಬಿಪಾಶಾ ಬೀಚ್‌ ಬದಿಯ ರೆಸಾರ್ಟಿನಲ್ಲಿ ಮಗಳೊಂದಿಗೆ ಹೆಜ್ಜೆ ಹಾಕುತ್ತಾರೆ.

ಸ್ವರಾ ಭಾಸ್ಕರ್‌ ತಮ್ಮ ಮಗಳು ರಾಬಿಯಾಳನ್ನು ಎಲ್ಲ ಧಾರ್ಮಿಕ ಪದ್ಧತಿಗಳನ್ನೂ ಕಲಿಸುತ್ತ ಬೆಳೆಸುತ್ತಿದ್ದೇನೆ ಎಂದು ಖಾಸಗಿ ಪಾಡ್‌ಕಾಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಯಾವ ಧರ್ಮವೂ ಕೆಡುಕನ್ನು ಬೋಧಿಸುವುದಿಲ್ಲ. ಒಳಿತನ್ನು ಎಲ್ಲ ಧರ್ಮದಿಂದಲೂ ಕಲಿಸಿದರೆ ನಮ್ಮ ಮಕ್ಕಳನ್ನು ನಾವು ಧರ್ಮಾಂಧತೆಯಿಂದ ರಕ್ಷಿಸಬಹುದು ಎಂಬುದು ಸ್ವರಾ ಅಭಿಪ್ರಾಯವಾಗಿದೆ. ಫವಾದ್‌ ಅಹ್ಮದ್‌ ಅವರನ್ನು ಮದುವೆಯಾಗಿರುವ ಸ್ವರಾ ಮನೆಯಲ್ಲಿ ಈಗಾಗಲೇ ಹಿಂದು ಮತ್ತು ಇಸ್ಲಾಂ ಎರಡೂ ಧರ್ಮಗಳ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದರೊಂದಿಗೆ ವಿಶ್ವದ ಎಲ್ಲ ಧರ್ಮಗಳನ್ನೂ ಪರಿಚಯಿಸುವ ಉಮ್ಮೇದು ತಮಗಿದೆ ಎಂದು ಅವರು ಹೇಳಿದ್ದಾರೆ.

ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ ತಮ್ಮ ಹೆಣ್ಣುಮಕ್ಕಳೊಂದಿಗೆ ಈ ಇಬ್ಬರೂ ನಟಿಯರು ತಾಯ್ತನವನ್ನು ಪೂರ್ತಿಯಾಗಿ ಅನುಭವಿಸುತ್ತಲೇ ಬೆಚ್ಚನೆಯ ಭಾವ ಮಕ್ಕಳಿಗೆ ಹೇಗೆ ನೀಡುವುದಂದು ವಿವರಿಸಿದ್ದಾರೆ.

ಸ್ವರಾ ಭಾಸ್ಕರ್ ಮಗಳು ರಾಬಿಯಾಳೊಂದಿಗೆ
ಬಿಪಾಶಾ ಬಸು ಮಗಳು ದೇವಿಯೊಂದಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.