ADVERTISEMENT

ಅತಿ ಸೂಕ್ಷ್ಮ ಈ ಅನುಬಂಧ.. ಪ್ರೇಮವಲ್ಲ, ಇದು ಸ್ನೇಹಕಿಂತ ಹೆಚ್ಚು!

ಪ್ರೀತಿಯೂ ಅಲ್ಲದ, ಒಲವೆನ್ನಲಾಗದ, ಸ್ನೇಹದ ಸಾಮೀಪ್ಯವನ್ನೂ ಮೀರಿದ ಈ ಅಪರೂಪದ ಅನುಬಂಧದ ಹೊಸ ಪರಿಭಾಷೆಯೇ ‘ಭಾವನಾತ್ಮಕ ಬಂಧ’

ಸುಶೀಲಾ ಡೋಣೂರ
Published 6 ಡಿಸೆಂಬರ್ 2024, 22:30 IST
Last Updated 6 ಡಿಸೆಂಬರ್ 2024, 22:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರೀತಿಯೂ ಅಲ್ಲದ, ಒಲವೆನ್ನಲಾಗದ, ಸ್ನೇಹದ ಸಾಮೀಪ್ಯವನ್ನೂ ಮೀರಿದ ಈ ಅಪರೂಪದ ಅನುಬಂಧದ ಹೊಸ ಪರಿಭಾಷೆಯೇ  ‘ಭಾವನಾತ್ಮಕ ಬಂಧ’ ( ‘ಎಮೋಷನಲ್ ಅಫೇರ್’.) ಆದರೆ, ಮನುಷ್ಯನ ಸಾಂಘಿಕ ಪ್ರವೃತ್ತಿಯ ಪ್ರತಿಫಲನವಾದ ಈ ವಿಶೇಷ ಅನುಬಂಧ ಸಾಮಾಜಿಕ-ಕೌಟುಂಬಿಕ ಬಿಕ್ಕಟ್ಟಿಗೆ ಕಾರಣವಾಗದಂತೆ ಮುನ್ನಡೆಸಿಕೊಂಡು ಹೋಗುವುದು ಈ ಕಾಲದ ಸವಾಲು ಎನ್ನುತ್ತಾರೆ ಮನೋಚಿಕಿತ್ಸಕರು..

****

ADVERTISEMENT

ಸ್ನೇಹಕಿಂತ ಹೆಚ್ಚು, ಆದರೆ ಒಲವಲ್ಲ. ಈ ಅನುಬಂಧಕ್ಕೊಂದು ಹೆಸರು ಅಂತಲೇ ಇಲ್ಲ. ಇರುವ ಹೆಸರುಗಳ್ಯಾವೂ ಇದಕ್ಕೆ ಸಾಕಾಗಲ್ಲ. ಬದುಕಿನ ಯಾವುದೇ ಘಟ್ಟದಲ್ಲಿ ಜೊತೆ ಬಂದು ನಿಲ್ಲುವ, ಯಾರಲ್ಲೂ ಬಿಚ್ಚಿಕೊಳ್ಳಲಾಗದ ಅಂತರಾಳದ ಒಳಗುಟ್ಟುಗಳನ್ನೂ ಹಂಚಿಕೊಳ್ಳಬಲ್ಲ ಈ ‘ಸ್ಪೆಷಲ್ ಪರ್ಸನ್’ ಭಾವಕೋಶದೊಳಗೆ ಯಾವತ್ತೂ ವಿಶೇಷವೇ. ಒಬ್ಬರಿಗೊಬ್ಬರು ಅಚ್ಚುಮೆಚ್ಚು, ಮುಚ್ಚುಮರೆ ಏನಿಲ್ಲ. ಏನೇ ಆದರೂ ಮೊದಲು ನೆನಪಾಗುವುದೇ ಅವಳು/ಅವನು. ಹೆಚ್ಚೇನೂ ಅಲ್ಲದ ನಾಲ್ಕು ಹೆಜ್ಜೆಯ ನಡಿಗೆ, ಅರ್ಧರ್ದ ಲೋಟ ಕಾಫಿಯಾದರೂ ಸರಿ, ಸಮಯವಿದ್ದರೆ ಊಟಕ್ಕೆ ಕುಳಿತು ಉದ್ದುದ್ದ ಮಾತು ಪೋಣಿಸಲೂ ಸೈ.

ಇಂಥದ್ದೊಂದು ಮಧುರ ಬಾಂಧವ್ಯಕ್ಕಿರುವ ನವಯುಗದ ಹೆಸರೇ ‘ಎಮೋಷನಲ್ ಅಫೇರ್‌’ ‘ಭಾವಬಂಧ’. ದೈಹಿಕ ವಾಂಛೆಯನ್ನೂ ಮೀರಿದ್ದು. ಇಲ್ಲಿ ಭಾವನೆಯೇ ಪ್ರಧಾನ. ವಿವಾಹದಾಚೆಗಿನ ಸ್ನೇಹ ಅನ್ನಬಹುದೇ? ಇದು ವೈವಾಹಿಕ ಸಂಬಂಧಕ್ಕೆ ಅಡ್ಡಿಯನ್ನುಂಟು ಮಾಡಬಹುದೇ? ತನ್ನ ಸಂಗಾತಿಗೆ ಮಾಡುವ ವಂಚನೆಯಲ್ಲವೆ? ದೈಹಿಕವಾಗಿ ಮತ್ತೊಬ್ಬರನ್ನು ಬಯಸುವುದು ದಾಂಪತ್ಯ ವಂಚನೆಯಾಗಬಹುದು ಅಂತಾದರೆ ಮಾನಸಿಕವಾಗಿ ಇನ್ನೊಬ್ಬರನ್ನು ಅವಲಂಬಿಸುವುದು ವಂಚನೆಯಲ್ಲವೆ? ಪ್ರಶ್ನೆಗಳು ಹಲವಾರಿವೆ. ಉತ್ತರಗಳಿನ್ನೂ ಸಿದ್ಧಗೊಂಡಿಲ್ಲ. ಏಕೆಂದರೆ ಇದೊಂದು ಹೊಸ ಸಂಘರ್ಷವೇ ಆದ್ದರಿಂದ ಹೊಸ ವ್ಯಾಖ್ಯಾನವೇ ಸಿದ್ಧಗೊಳ್ಳಬೇಕು.

ಎಲ್ಲವನ್ನೂ ಸಂಗಾತಿ ಎದುರು ಹೇಳಲಾಗದು. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು? ಹೂಂ ಹುಂ... ಅಲ್ಲೂ ಒಂದು ಮಿತಿ ಇದೆ. ಸ್ನೇಹಿತರು? ಕೆಲ ವಿಚಾರಗಳು ಅಲ್ಲೂ ವ್ಯಕ್ತವಾಗಲಾರವು... ಅಂದಾಗೆಲ್ಲ ಬದುಕಿನಲ್ಲಿ ಇರಬಹುದಾದ ಆ ವಿಶೇಷ ವ್ಯಕ್ತಿ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಯಾವ ತರ್ಕಕ್ಕೂ ಸಿಗದ, ಯಾವ ಸಿದ್ಧಾಂತಕ್ಕೂ ಒಳಪಡದ, ಯಾವ ಸಂಬಂಧದಲ್ಲೂ ತೂರಿಕೊಳ್ಳ ಬಯಸದ ಈ ನಿಷ್ಕಾಮ ಸ್ನೇಹವನ್ನು ಉಳಿಸಿಕೊಳ್ಳುವುದೂ ಸುಲಭವಲ್ಲ.

ಇತ್ತೀಚಿನ ದಿನಗಳಲ್ಲಿ, ಮೆಟ್ರೊ ನಗರಗಳಲ್ಲಿ, ಅದರಲ್ಲೂ ದುಡಿಯುವ ವರ್ಗದಲ್ಲಿ ‘ಎಮೋಷನಲ್‌ ಅಫೇರ್‌’, ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಅವಲಂಬಿಸುವುದು ಹೆಚ್ಚು ಸಾಮಾನ್ಯವೂ ಮತ್ತು ಹೆಚ್ಚು ವ್ಯಾಪಕವೂ ಆಗುತ್ತಿರುವ ವಿದ್ಯಮಾನವಾಗುತ್ತಿದೆ ಎನ್ನುತ್ತವೆ ಕೆಲ ಅಧ್ಯಯನಗಳು.

‘ಫಿಸಿಕಲ್‌ ಅಫೇರ್‌’ನಂತೆ ಈ ಭಾವನಾತ್ಮಕ ಅನುಬಂಧ ಅಪಾಯಕಾರಿಯಾದುದೇನಲ್ಲ. ಆದರೆ, ಇಂಥದ್ದೊಂದು ತೀರಾ ಆಪ್ತವೂ, ತುಸು ವೈಯಕ್ತಿಕವೂ ಆದ, ಯಾವ ವಿವರಣೆಗೂ, ವಿಮರ್ಶೆಗೂ, ವಿಶ್ಲೇಷಣೆಗೂ ಒಳಪಡದ ಈ ಸ್ನೇಹ ದಾಂಪತ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ಊಹಿಸಲಾಗದು. ಹೆಣ್ಣು–ಹೆಣ್ಣಿನ ನಡುವೆ, ಗಂಡು–ಗಂಡಿನ ನಡುವೆ ಇಂಥದ್ದೊಂದು ಆತ್ಮೀಯತೆ ಏರ್ಪಟ್ಟಾಗ ಸಮರ್ಥನೆಯ ಅಗತ್ಯ ಬೀಳದು. ವಿಮರ್ಶೆಯ ನಾಲಿಗೆಗೆ ಸಿಗುವುದೇ ಹೆಣ್ಣು–ಗಂಡಿನ ನಡುವೆ ಇಂತದ್ದೊಂದು ಭಾವಬಂಧ ಬೆಸೆದಾಗ ಮಾತ್ರ.

ವಂಚನೆಯಲ್ಲ; ಸಂಘರ್ಷ

ಭಾವನಾತ್ಮಕ ಸಾಂಗತ್ಯಕ್ಕೆ ಮತ್ತೊಬ್ಬರ ಅವಲಂಬನೆ ಹೆಚ್ಚುತ್ತಿರುವ ಮತ್ತು ಇಂತದ್ದೇ ಕಾರಣಗಳಿಂದ ದಾಂಪತ್ಯದಲ್ಲಿ ಸಂಘರ್ಷ ಏರ್ಪಡುತ್ತಿರುವ ಈ ಕಾಲದ ತಲ್ಲಣಗಳ ಬಗ್ಗೆ ಅಮೆರಿಕದ ಖ್ಯಾತ ಮನೋಚಿಕಿತ್ಸಕಿ ಈಸ್ಟರ್ ಪೆರೆಲ್ ತಮ್ಮ The State of Affairs: Rethinking Infidelityಯಲ್ಲಿ ಉಲ್ಲೇಖಿಸಿದ್ದಾರೆ. ತಪ್ಪಲ್ಲದ, ಆದರೆ ಸರಿ ಎಂದೂ ವಾದಿಸಲಾಗದ ಈ ಅನುಬಂಧಗಳು ತರುವ ತಾಕಲಾಟಗಳ ಬಗ್ಗೆ ಅವರು ಅನೇಕ ಕಡೆ ಚರ್ಚಿಸಿದ್ದಾರೆ. ವಿವಾಹೇತರ ಭಾವನಾತ್ಮಕ ಸಂಬಂಧಗಳು ದಾಂಪತ್ಯದಲ್ಲಿನ ಬಿಕ್ಕಟ್ಟಿನ ಕಾರಣಗಳಾಗುತ್ತವೆ ಎನ್ನುವುದನ್ನು ಲೇಖಕಿ ಒಪ್ಪುತ್ತಾರೆ. ಹಾಗೆ ಈ ಸಂಬಂಧ ವೈಯಕ್ತಿಕ-ಸಾಂಸಾರಿಕ ಗೊಂದಲಗಳನ್ನು ಸೃಷ್ಟಿಸದಂತೆ ವಹಿಸಬೇಕಾದ ಎಚ್ಚರಿಕೆಗಳ ಬಗೆಗೂ ಅವರು ವಿವರಿಸುತ್ತಾರೆ.

‘ಪ್ರೀತಿಯೇ ಗೊಂದಲಮಯ; ಅದರಲ್ಲೂ ವಿವಾಹೇತರ ಸಂಬಂಧಗಳು ಇನ್ನಷ್ಟು ಜಿಗುಟು, ಇದು ಪ್ರೀತಿಯಲ್ಲ, ಸ್ನೇಹ... ಆದ್ರೆ, ಸ್ನೇಹಕ್ಕಿಂತಲೂ ಹೆಚ್ಚು ಎನ್ನುವ ಭಾವವೇ ಮತ್ತೂ ಗೊಂದಲಮಯ! ಇದೊಂದು ಮಧುರ ಅನುಬಂಧ ಎನ್ನುವುದಾದರೆ, ಆ ಮಾಧುರ್ಯ ಸಾಂಸಾರಿಕ ಕಹಿಗೆ ಕಾರಣವಾಗದಂತೆ ನೋಡಿಕೊಂಡಾಗ ಮಾತ್ರ ಸಾಧ್ಯ ಎನ್ನುತ್ತಾರೆ ಮನೋಚಿಕಿತ್ಸಕಿ ಡಾ. ಅರುಣಾ ಯಡಿಯಾಳ.

ಒಬ್ಬ ವ್ಯಕ್ತಿ ತನ್ನ ಭಾವನಾತ್ಮಕ ಶಕ್ತಿಯನ್ನೆಲ್ಲ ತನ್ನ ಸಂಗಾತಿಯನ್ನಲ್ಲದೇ, ಸ್ನೇಹಿತ–ಸ್ನೇಹಿತೆಯ ಮೇಲೆ ಹಾಕುವುದು, ಅವರಿಗಾಗಿಯೇ ಮಿಡಿಯುವುದು, ಅವರೊಂದಿಗೇ ಬೆರೆಯುವುದು, ಅದೇ ತೆರನಾದ ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಪಡೆಯುವುದು ಯಾವುದೇ ಸಂಗಾತಿಗೂ ತುಸು ಇರಿಸು ಮುರಿಸು ಉಂಟುಮಾಡಬಹುದಾದ ವಿಚಾರವೇ. ಸಂಗಾತಿ ಈ ಸ್ನೇಹವನ್ನು ದಾಂಪತ್ಯ ದ್ರೋಹ ಎಂದೇ ಪರಿಗಣಿಸುವ ಅಪಾಯ ಇದ್ದೇ ಇರುತ್ತದೆ. ಇದು ವಂಚನೆಯಲ್ಲ, ಭಾವನಾತ್ಮಕ ಸ್ನೇಹ ಎನ್ನುವುದನ್ನು ಸಮರ್ಥಿಸುವುದೂ ಸವಾಲೇ. ಹಾಗಾಗಿ ಇಂತಹ ಸ್ನೇಹ ದಾಂಪತ್ಯ ವಿರಸಕ್ಕೆ ಎಡೆಮಾಡಿಕೊಡದಂತೆ ಸೂಕ್ಷ್ಮವಾಗಿ ನಿರ್ವಹಿಸುವುದು ಬಹಳ ಮುಖ್ಯ ಎನ್ನುತ್ತಾರೆ ಅವರು.

ಈ ಬಿಕ್ಕಟ್ಟುಗಳು ದಂಪತಿಗಳನ್ನು ಅವರವರ ಸಂಬಂಧದ ಮೂಲ ಅಥವಾ ಸಾರಕ್ಕೆ ಕೊಂಡೊಯ್ಯುತ್ತವೆ. ಅಷ್ಟು ವರ್ಷಗಳ ದಾಂಪತ್ಯದಲ್ಲಿ ತಪ್ಪಿಸಿತೆಗೆದ ಅದೆಷ್ಟೋ ಸಂವಾದಗಳು ಮೇಲೆ ಬರುತ್ತವೆ. ನೀಗಿರದ, ನೀಗಲಾರದ, ಅದೆಷ್ಟೋ ತವಕಗಳು, ಹಂಬಲಗಳು, ಹಾತೊರೆಯುವಿಕೆಗಳು, ಬೇಕು ಬೇಡಗಳು, ಹತಾಶೆಗಳು, ಏಕಾಂಗಿತನ- ಇವೆಲ್ಲವೂ ಮುನ್ನೆಲೆಗೆ ಬಂದು ನಿಲ್ಲುತ್ತವೆ. ಹಿನ್ನೋಟದಲ್ಲಿ, ಈ ರೀತಿಯ ವಿಷಯಗಳನ್ನು ಮೊದಲೇ ಮುಕ್ತವಾಗಿ ಸಂವಾದಿಸುವಷ್ಟು ಪ್ರೀತಿ, ಒಲವು, ಸಲಿಗೆ ದಂಪತಿಯ ನಡುವೆ ಇದ್ದಿದ್ದರೆ, ಈ ಭಾವನಾತ್ಮಕ ಸಂಭಂದದ ಪ್ರಮೇಯವೇ ಬರುತಿರಲಿಲ್ಲ ಎಂಬ ಅರಿವೂ ಕೂಡ ಮೂಡಬಹುದು. ಕೆಲ ಸಂಬಂಧಗಳಲ್ಲಿ ಇಂತಹ ಸ್ನೇಹವನ್ನು ಗೌರವ ಹಾಗೂ ಆದರಗಳಿಂದ ಕಾಣುವಂತಹ ಮನಸ್ಥಿತಿಯವರೂ ಇರಬಹುದು.

ಈ ರೀತಿಯ ಸಂಬಂಧಗಳನ್ನು ದ್ರೋಹ, ಮೋಸ, ವಂಚನೆ ಅಂತ ಹೀಗಳೆಯುವುದು ಸುಲಭ. ಆದರೆ, ಎಲ್ಲದರಾಚೆಗೆ, ಮುಖ್ಯವಾಗುವುದು ಆ ಭಾವನಾತ್ಮಕ ಅವಲಂಬನೆಯಲ್ಲಿರುವ ಜೋಡಿಗಳು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ, ಹೇಗೆ ಪ್ರಕಟಿಸುತ್ತಾರೆ, ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದೇ ಆಗಿರುತ್ತದೆ ಎನ್ನುತ್ತಾರೆ ಅರುಣಾ.

ಅದಕ್ಕಾಗಿ ಕೆಲವು ಸ್ಪಷ್ಟತೆಗಳನ್ನು, ಗಡಿಗಳನ್ನು ನಿರ್ಮಿಸಿಕೊಳ್ಳಬೇಕು. ನಿಮ್ಮಿಬ್ಬರ ಸ್ನೇಹದ ಮಿತಿ ನಿಮಗೆ ಸ್ಪಷ್ಟವಾಗಿರಬೇಕು. ಇಬ್ಬರ ನಡುವಿನ ಸ್ನೇಹ ನಿಚ್ಚಳವಾಗಿದ್ದಾಗ, ಮಾತು–ಚರ್ಚೆ–ಸಂವಾದ ಸ್ಪಷ್ಟವಾಗಿರಲಿ

ಮೊಬೈಲ್‌ ಸ್ಕ್ರೀನ್‌ ಲಾಕ್‌, ವಾಟ್ಸ್‌ಆ್ಯಪ್‌ ಲಾಕ್‌, ಫೇಸ್‌ಬುಕ್‌ ಲಾಕ್‌ ಇಡುವ ಮೂಲಕ ಸಂಗಾತಿಯ ಸಂಶಯಕ್ಕೆ ಪುಷ್ಟಿ ನೀಡುವುದು ಬೇಡ. ಸ್ನೇಹದ ಕಾರಣ ಸಂಗಾತಿಗೆ ನೀಡುವ ಸಮಯ, ಆದ್ಯತೆ ಕಡಿಮೆಯಾಗದಿರಲಿ. ನಿಮ್ಮ ಸ್ನೇಹ ಕುಟುಂಬಕ್ಕೆ ಹತ್ತಿರವಾದರೆ ಗೊಂದಲಕ್ಕೆ ಆಸ್ಪದವಿರದು. ಸಂಗಾತಿಯೊಂದಿಗೆ ಅನ್ಯೋನ್ಯತೆಯಲ್ಲಿ ಆಸಕ್ತಿಯ ಕೊರತೆ ಕಾಣದಿರಲಿ. ಆತ್ಮೀಯ ಸ್ನೇಹವಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುವುದು, ಹೆಚ್ಚು ಸಮಯ ಕಳೆಯುವುದು, ಹೆಚ್ಚು ಒಡನಾಡುವುದು ಸಹಜವೇ. ಆದರೆ ಇದು ಮುಕ್ತವಾಗಿದ್ದರೆ, ನಿಮ್ಮ ಸಂಗಾತಿಗೆ ಈ ವಿಚಾರ ತಿಳಿದಿದ್ದರೆ ಅದು ಅಪಾರ್ಥಕ್ಕೆ ತಿರುಗುವ ಅಪಾಯ ಕಡಿಮೆ. ಕಟ್ಟಕಡೆಗೆ ನಿಮ್ಮ ಮಧುರ ಬಾಂದವ್ಯ ಬದುಕಿನಲ್ಲಿ ಹುಳಿಯಾಗಿ ಪರಿಣಮಿಸದಂತೆ ನೋಡಿಕೊಳ್ಳುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.