ಎಚ್.ಎಸ್. ಶ್ರೀಮತಿ
ಚಿತ್ರ: ಪಿ.ಎಸ್. ಕೃಷ್ಣಕುಮಾರ್
ಬೆಂಗಳೂರಿನಲ್ಲಿ ಇಂದು–ನಾಳೆ ನಡೆಯಲಿರುವ ಎಂಟನೆಯ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಎಚ್.ಎಸ್. ಶ್ರೀಮತಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. ಸ್ತ್ರೀವಾದ, ಪ್ರಚಲಿತ ಸಾಹಿತ್ಯ ಹಾಗೂ ಸಮಾನತೆಯ ಮುಂದಿರುವ ಹಾದಿ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ...
ಕನ್ನಡದಲ್ಲಿ ಸ್ತ್ರೀವಾದದ ತಾತ್ವಿಕ ಚೌಕಟ್ಟನ್ನು ರೂಪಿಸಬೇಕು ಅಂತ ಅನಿಸಿದ್ದೇಕೆ?
ಸ್ತ್ರೀವಾದಕ್ಕೆ ನಾನು ಪ್ರವೇಶ ಪಡೆದದ್ದೇ ಆಕಸ್ಮಿಕವಾಗಿ, ಅದೂ ನನ್ನ 50ನೇ ವಯಸ್ಸಿನ ನಂತರ. ಹಂಪಿ ಕನ್ನಡ ವಿ.ವಿಯ ಮಹಿಳಾ ಅಧ್ಯಯನದ ಮುಖ್ಯಸ್ಥೆಯಾದ ಮೇಲೆ ಪಠ್ಯ ರೂಪಿಸುವಾಗ ಸ್ತ್ರೀವಾದದ ತಾತ್ವಿಕ ಚೌಕಟ್ಟು ಕಟ್ಟಿಕೊಡುವ ಅವಕಾಶ ಒದಗಿಬಂತು. ಇದು ನನ್ನ ಆಸಕ್ತಿಯೂ ಆಗಿತ್ತು. ಆದರೆ, ಇದನ್ನು ರೂಪಿಸುವಾಗ ಸಮುದ್ರದಲ್ಲಿ ಒಂದು ಬೊಗಸೆಯಷ್ಟನ್ನೂ ನನ್ನ ಕೈಲಿ ಹಿಡಿದುಕೊಳ್ಳಲಾಗಿಲ್ಲ ಎಂಬುದು ವಾಸ್ತವ.
ಅನೇಕ ಪಾಶ್ಚಾತ್ಯ ಸ್ತ್ರೀವಾದಿಗಳ ಚಿಂತನೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೀರಿ. ಕನ್ನಡ ಸಾಹಿತ್ಯದಲ್ಲೇ ಮೂಲವಾಗಿ ಇಂಥ ಚಿಂತನೆಗಳನ್ನು ರೂಪಿಸಬಹುದಿತ್ತಲ್ಲ?
ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ವಿಮರ್ಶೆಯಾಚೆಗೆ ಫೆಮಿನಿಸಂ ಹೆಚ್ಚು ಚಿಂತನೆ ಮಾಡಿದ್ದು ಕಾಣಲಿಲ್ಲ. ಸ್ತ್ರೀವಾದ ವ್ಯಕ್ತಿಕೇಂದ್ರಿತವಲ್ಲ, ಒಟ್ಟಾರೆ ಹೆಣ್ಣು ಬದುಕಿನ ಕ್ರಮದ ಸಮುದಾಯದ ಚಿಂತನೆ. ಹಾಗಾಗಿ, ನಾನು ಇಂಗ್ಲಿಷಿನ ಮೊರೆ ಹೋಗಬೇಕಾಯಿತು. ಮಹಿಳಾ ಅಧ್ಯಯನದ ವಿದ್ಯಾರ್ಥಿಗಳಿಗೆ ಪಠ್ಯ ರೂಪಿಸುವಾಗ ಅನೇಕ ಕ್ಲಾಸಿಕ್ಸ್ ಅನುವಾದಿಸತೊಡಗಿದೆ. ಅದೀಗ ಬೆಲ್‌ಹುಕ್ಸ್‌ವರೆಗೆ ಬಂದಿದೆ. ಚಿಂತನೆ ಅಲ್ಲಿನದಾಗಿರಬಹುದು, ಇಲ್ಲಿನದಾಗಿರಬಹುದು. ಯಾವುದೇ ಚಿಂತನೆಗಳನ್ನು ನಮ್ಮ ಬದುಕಿಗೆ ಅನ್ವಯಿಸಿ, ಅರ್ಥೈಸಿಕೊಂಡಾಗ ಮಾತ್ರ ಅವು ನಮ್ಮದಾಗುತ್ತವೆ.
ಮಹಿಳಾಪರ ಮಾತನಾಡುವವರನ್ನು ಪುರುಷ ದ್ವೇಷಿಗಳಂತೆ ನೋಡಲಾಗುತ್ತಿದೆಯಲ್ಲ?
ಸ್ತ್ರೀವಾದದ ಕುರಿತು ಮಾತನಾಡುವವರ ವಿರುದ್ಧ ಭಯ ಹುಟ್ಟಿಸುವುದೇ ಅಧಿಕಾರಷಾಹಿ ವ್ಯವಸ್ಥೆಯ ಲಕ್ಷಣ. ಈ ವ್ಯವಸ್ಥೆ ತನ್ನ ವಿರುದ್ಧ ಹೋದವರ ಬಗ್ಗೆ ಜನಸಾಮಾನ್ಯರಲ್ಲಿ ಭಯವನ್ನು ಬಿತ್ತುತ್ತದೆ. ಆ ಮೂಲಕ ಏಟು ಕೊಡುತ್ತಾ ಹೋಗುತ್ತದೆ. ಏಕೆಂದರೆ ಸ್ತ್ರೀವಾದ ಪ್ರಶ್ನಿಸುವುದನ್ನು ಕಲಿಸುತ್ತದೆ. ಹೆಣ್ಣು ತಾನು ಎಲ್ಲಿದ್ದಾಳೆ ಎಂಬ ಅರಿವನ್ನು ಮೂಡಿಸುತ್ತದೆ. ಇಂಥ ಅರಿವು, ಪ್ರಶ್ನೆಯನ್ನು ಪುರುಷಪ್ರಧಾನ ಸಮಾಜ ಸಹಜವಾಗಿಯೇ ಎದುರಿಸಲಾಗದು. ಹಾಗಾಗಿ, ಸ್ತ್ರೀವಾದ, ಸ್ತ್ರೀವಾದಿಗಳು ಪುರುಷದ್ವೇಷಿಗಳಂತೆ ಕಾಣುತ್ತಾರೆ.
ಪುರುಷಕೇಂದ್ರಿತ ಅಧಿಕಾರ ಮತ್ತು ಅಧೀನತೆಯ ನೆಲೆಯನ್ನು ಮೀರುವುದು ಹೇಗೆ?
ಪುರುಷಪ್ರಧಾನ ಸಮಾಜವು ‘ನೀನು ಹೆಂಗಸು, ನೀನು ಗಂಡಸು, ನೀನು ಭಿನ್ನ ಲಿಂಗಿ’ ಎಂದು ನಮ್ಮ ನಡುವೆಯೇ ಕಂದಕ ರೂಪಿಸಿ, ನಮ್ಮನ್ನು ಬೇರ್ಪಡಿಸಿದೆ. ಕೆಲವೇ ಕೆಲವು ಜನರಲ್ಲಿ ಅಧಿಕಾರ ಉಳಿಯಬೇಕು, ಮಿಕ್ಕವರು ಅವರಿಗೆ ಅಧೀನರಾಗಬೇಕೆಂಬುದೇ ಇದರ ಉದ್ದೇಶ. ಇದನ್ನು ಅರ್ಥೈಸಿಕೊಂಡು ಅಧಿಕಾರ ಮತ್ತು ಅಧೀನತೆಯ ನೆಲೆಯನ್ನು ಒಡೆಯಬೇಕಿದೆ. ನಮ್ಮೆಲ್ಲರ ಮಾತುಕತೆ, ನಡವಳಿಕೆ ಪ್ರತಿಯೊಂದರಲ್ಲೂ ಪುರುಷಪ್ರಧಾನತೆಯ ಪ್ರಭಾವ ಇದೆ. ಇದನ್ನು ಗಂಡು, ಹೆಣ್ಣು ಒಟ್ಟಾರೆ ನಾವೆಲ್ಲರೂ ಪ್ರಜ್ಞಾಪೂರ್ವಕವಾಗಿ ಮೀರಬೇಕಿದೆ. ಈ ಮೀರುವಿಕೆಯ ಅರಿವಿನ ಹಾದಿ ಸ್ತ್ರೀವಾದದಲ್ಲಿದೆ.
ಇಂದಿನ ಮಹಿಳಾ ಸಾಹಿತ್ಯ ಹೇಗಿದೆ?
ಈ ಹಿಂದೆ ಕೆಲವು ವರ್ಗದ ಮಹಿಳೆಯರಿಗಷ್ಟೇ ಬರವಣಿಗೆಗೆ ಅವಕಾಶಗಳಿದ್ದವು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ, ಬದಲಾಗಿದೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಯುವಲೇಖಕಿಯರು ಹೆಚ್ಚಿನ ಸಂಖ್ಯೆಯಲ್ಲಿ ವಿಭಿನ್ನ ಆಲೋಚನಾ ನೆಲೆಯಲ್ಲಿ ಬರೆಯುತ್ತಿರುವುದು ಆಶಾದಾಯಕವಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರೂ ಸಮಾನತೆಯ ಹಾದಿ ಇನ್ನೂ ದೂರವಿದೆಯೇ?
ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದಾಳೆ ನಿಜ. ಇವರ ಪ್ರಮಾಣ ಎಷ್ಟಿದೆ? ಎಲ್ಲೋ ಕೆಲವರ ಸಾಧನೆ ಇಟ್ಟುಕೊಂಡು ಸಾಮಾನ್ಯೀಕರಣ ಮಾಡಲಾಗದು. ಯಾವುದೇ ಹೆಣ್ಣಿಗೆ ಸಾಂದರ್ಭಿಕವಾಗಿ ಕೆಲ ಅನುಕೂಲ ದಕ್ಕಿರಬಹುದು. ಆದರೆ ಅದು ಇಡೀ ಸಮುದಾಯಕ್ಕೆ ಸಲ್ಲುತ್ತದೆಯೇ? ಎಷ್ಟು ಉದ್ಯೋಗಸ್ಥೆಯರು ಮದುವೆ ಬಳಿಕ ವೃತ್ತಿಜೀವನ ಮುಂದುವರಿಸಿದ್ದಾರೆ? ‘ನಾನು ನನ್ನ ಬದುಕನ್ನು ನಡೆಸಬಲ್ಲೆ’ ಅನ್ನುವಂಥ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಬಲ್ಲ ಹೆಂಗಸರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ನೋಡಿದರೆ ನಾವಿನ್ನೂ ಸಮಾನತೆಯ ಹಾದಿ ಮುಟ್ಟಿಲ್ಲ ಎಂದರ್ಥ.
ಇವತ್ತಿನ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಮಹತ್ವವನ್ನು ಹೇಗೆ ಮನಗಾಣಿಸುವಿರಿ?
ಸಾಮಾನ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆ ಏಕೆ ಅಧ್ಯಕ್ಷೆಯಾಗುವುದಿಲ್ಲ, ಆಕೆಗೆ ಏಕೆ ಪ್ರಾತಿನಿಧ್ಯ ಸಿಗುವುದಿಲ್ಲ.. ಇವೆಲ್ಲವನ್ನು ಪ್ರಶ್ನಿಸುವ ಸಲುವಾಗಿಯೇ ‘we are here’ ಎಂಬುದನ್ನು ಸಾಬೀತು ಮಾಡಲೆಂದೇ ಲೇಖಕಿಯರ ಸಾಹಿತ್ಯ ಸಮ್ಮೇಳನಗಳು ನಡೆಯಬೇಕಿವೆ. ಇದೊಂದು ರೀತಿಯಲ್ಲಿ ಪ್ರಬಲರ ಎದುರು ಅಂಚಿನವರಿದ್ದಂತೆ. ವ್ಯವಸ್ಥೆಗೆ ನಮ್ಮ ಧ್ವನಿಯನ್ನು ಕೇಳಿಸುವ ಹಾಗೆ ಮಾಡಬೇಕಿದೆ. ಆಗ ಇಂಥ ಸಮ್ಮೇಳನಗಳು ಬೇಕು. ನಾವೆಲ್ಲಿದ್ದೇವೆ ಎಂಬುದನ್ನು ಪ್ರಬಲರಿಗೆ ಕೇಳಿಸಬೇಕಿದೆ, ಕಾಣಿಸಬೇಕಿದೆ, ಮನಗಾಣಿಸಬೇಕಿದೆ.
ಇಂದಿನ ಯುವಜನರ ಆಲೋಚನಾ ಕ್ರಮದ ಬಗ್ಗೆ ಹೇಗನ್ನಿಸುತ್ತೆ?
ಇಂದಿನ ಯುವಜನರ ಆಲೋಚನಾ ಧಾಟಿ ಸಕಾರಾತ್ಮಕವಾಗಿದೆ. ಓದು, ಬರಹ, ಸ್ತ್ರೀವಾದ ಇತ್ಯಾದಿಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಪ್ರೀತಿ, ತ್ಯಾಗ, ಸಂಯಮ, ಸೇವೆ ಎಲ್ಲವೂ ಪರಸ್ಪರರ ಸಹಬಾಳ್ವೆಯ ತತ್ವದಲ್ಲಿ ಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಹಿರಿಯರು ತಮ್ಮ ಅನುಭವದ ಹಾದಿಯಲ್ಲಿ ಕಂಡುಕೊಂಡ ಸರಿ–ತಪ್ಪುಗಳ ಬಗ್ಗೆ ಯುವಜನರೊಂದಿಗೆ ಹಂಚಿಕೊಳ್ಳುವುದೂ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.