ADVERTISEMENT

Valentines Day | ಅಬ್ಬಬ್ಬಾ!...ಈ ಪ್ರೀತಿ: ಒಲಿದ ಸಂಗೀತಾ ಒಲವಿನ ಸಂಗಾತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 23:30 IST
Last Updated 13 ಫೆಬ್ರುವರಿ 2026, 23:30 IST
<div class="paragraphs"><p><strong>ಸಂಗೀತಾ ಭಟ್‌ ಸುದರ್ಶನ್‌</strong></p></div>

ಸಂಗೀತಾ ಭಟ್‌ ಸುದರ್ಶನ್‌

   
‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಎಂಬ ಕವಿವಾಣಿ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿಯ ಮಹತ್ವವನ್ನು ಮನಗಾಣಿಸುತ್ತದೆ. ‘ಪ್ರೇಮಿಗಳ ದಿನಾಚರಣೆ’ಯ (ಫೆ. 14) ಈ ಹೊತ್ತಿನಲ್ಲಿ, ಎರಡು ಹೃದಯಗಳು ತಮ್ಮ ಸಂಗಾತಿಗಾಗಿ ಬರೆದಿರುವ ಒಲವಿನ ಪತ್ರಗಳು ಇಲ್ಲಿವೆ. ಸುಖಮಯ ದಾಂಪತ್ಯಕ್ಕೆ ಪ್ರೀತಿಯ ಒರತೆ ಬತ್ತದಂತೆ ಸದಾ ಕಾಪಿಟ್ಟುಕೊಳ್ಳಬೇಕಾದ ಅಗತ್ಯವನ್ನು ಎತ್ತಿಹಿಡಿದಿವೆ.

ಸುದರ್ಶನ್‌ ರಂಗಪ್ರಸಾದ್‌ ವೃತ್ತಿಯಿಂದ ಸಾಫ್ಟ್‌ವೇರ್‌ ಎಂಜಿನಿಯರ್‌, ಹವ್ಯಾಸಿ ನಟ. ಕಿರುತೆರೆ–ರಂಗಭೂಮಿ– ಸಿನಿಮಾದಲ್ಲಿ ತ್ರಿಕೋನ ಪಯಣ ಅವರದು. ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದ ನಾಯಕಿ ಸಂಗೀತಾ ಭಟ್‌ ಅವರ ಜೊತೆ ಪ್ರೀತಿ ಚಿಗುರಿ, ಅವರೊಂದಿಗೆ ದಾಂಪತ್ಯದ ಬದುಕಿಗೆ ಅಡಿ ಇಟ್ಟವರು ಅವರು. ತಮ್ಮ ಒಲವಿನ ಮಡದಿಗೆ ಅವರು ಬರೆದಿರುವ ಬಹಿರಂಗ ಪತ್ರ ಇಲ್ಲಿದೆ.

ಪ್ರಿಯ ಸಂಗೀತಾ...

ADVERTISEMENT

ನಿನ್ನನ್ನು ಭೇಟಿ ಮಾಡಿದ ಕ್ಷಣದಿಂದಲೆ, ಪ್ರೀತಿಯ ಬಗ್ಗೆ ನನಗಿದ್ದ ಕಲ್ಪನೆ ಮತ್ತು ವ್ಯಾಖ್ಯಾನಗಳೇ ಬದಲಾದವು. ಪೂರ್ಣಿಮೆಯ ಚಂದ್ರನಂತಹ ನಿನ್ನ ಕಣ್ಣ ಬಿಂಬದಲ್ಲಿ ಇಣುಕುತ್ತಿದ್ದ ಪ್ರೀತಿಯ ನೋಟವು ಅದಕ್ಕೆ ಹೊಸ ರೂಪ, ಲಾವಣ್ಯವನ್ನು ತುಂಬಿತು. 

ಕಲೆಯ ಒಲವು ನಮ್ಮ ಬದುಕಿನ ಕ್ಯಾಮೆರಾ ಕಣ್ಣಿನಲ್ಲಿ ಒಂದಾಗಿ ಬೆಸೆದು ನಮ್ಮನ್ನು ಸೆರೆ ಹಿಡಿಯಿತು. ಚಿತ್ರೀಕರಣಕ್ಕೆ ಎಂದು ಬಂದ ನಮ್ಮ ನಡುವೆ, ಆ ಸಂದರ್ಭದಲ್ಲೇ ಪ್ರೇಮ ಹುಟ್ಟಿದ್ದು ಕಥೆಯಂತೆಯೇ ಇದೆ, ಅಲ್ಲವೆ? ಎಂತಹ ಕಾಕತಾಳೀಯ... ನಮ್ಮ ಒಲವಿನಂತೆಯೆ ನಿಲುವೂ ಒಂದೇ ಆಗಿದ್ದರಿಂದ ಪ್ರೀತಿ ಮತ್ತಷ್ಟು, ಇನ್ನಷ್ಟು ಹೆಚ್ಚಲು ಕಾರಣವಾಯಿತು. ನಾವಿಬ್ಬರೂ ಪರಸ್ಪರ ಇಷ್ಟಪಟ್ಟ ಆ ದಿನಗಳು ಒಮ್ಮೆ ನೆನಪಾದರೆ ಸಾಕು, ಈಗಲೂ ಏನೋ ಒಂದು ಬಗೆಯ ರೋಮಾಂಚನ ಹುಟ್ಟುತ್ತದೆ. ಆಗ ಪುಳಕದಲ್ಲಿ ಹುಟ್ಟುತ್ತಿದ್ದದ್ದು ಮಾತು, ಮಾತು,  ಬರೀ ಮಾತು... ನಿರಂತರ ಝರಿಯ ವರತೆಯಂತೆ ಆ ಮಾತು ಸರಾಗವಾಗಿ ಜುಳು ಜುಳು ಹರಿಯುತ್ತಿತ್ತು. ಅದರ ನಿನಾದ ಈಗಲೂ ಕಿವಿಯಲ್ಲಿ ಪ್ರೇಮಗೀತೆಯೊಂದನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಅದೇ ಸಂಗೀತಾ... ಅಲ್ಲವೇ...? 

ಮಾತು ಮಾತಿನ ನಡುವಿನ ಮೌನವೂ ಕೃತಕವಲ್ಲದ ನಗುವನ್ನು ಎಷ್ಟು ಸಹಜವಾಗಿ ಸೂಸುತ್ತಿತ್ತು. ಅದು ಬಿರು ಬೇಸಿಗೆಯ ಸಂಜೆಯಲ್ಲಿ ದುಂಡು ಮಲ್ಲಿಗೆಯ ಕಂಪನ್ನು ಹೊಮ್ಮಿಸಿದ ಸಹಜ ಸೊಬಗಿನಂತೆಯೇ ಇತ್ತು ಬಿಡು. ನಾವು ಒಬ್ಬರನ್ನೊಬ್ಬರು ಹೇಗೆ ನೋಡುತ್ತಿದ್ದೆವು, ಹೇಗೆ ಮಾತನಾಡುತ್ತಿದ್ದೆವು... ಅದೇ ಪ್ರೀತಿ ಪಾಠದ ಮೊದಲ ಅಧ್ಯಾಯ ಇರಬಹುದೇ ಎಂದು ಈಗಲೂ ಅನ್ನಿಸುತ್ತದೆ. ನಮ್ಮ ಆ ಗೆಳೆತನದ, ಹೊಸತನದ ಆಕರ್ಷಣೆ, ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತಿದ್ದ ತವಕದ ಕ್ಷಣಗಳು ಈಗಲೂ ನನ್ನೊಳಗೆ ಉತ್ಸಾಹವನ್ನು ತುಂಬುತ್ತವೆ. 

ಸಾಂಗತ್ಯದ ಬದುಕಿನ ಪಲ್ಲವಿಗೆ ಮದುವೆ ಮುನ್ನುಡಿ ಬರೆಯಿತು. ನಂತರ, ಕುಟುಂಬದ ಜವಾಬ್ದಾರಿಗಳು, ವೃತ್ತಿಜೀವನ, ಬದುಕಿನ ಒತ್ತಡಗಳು, ಆರೋಗ್ಯ ಮತ್ತು ಆರ್ಥಿಕ ಏರುಪೇರು ಒಡ್ಡುತ್ತಿದ್ದ ಸವಾಲುಗಳು ನಮ್ಮ ಪ್ರೀತಿಯನ್ನು ಮತ್ತಷ್ಟು ಹೃದಯದಾಳಕ್ಕೆ ಇಳಿಸಿ ಮಗದಷ್ಟು ಗಾಢಗೊಳಿಸಿದವು. ಯಾವತ್ತೂ ನಮ್ಮ ಪ್ರೀತಿಗೆ ಉಡುಗೊರೆ, ಪ್ರವಾಸ, ಸಂತೋಷಕೂಟದಂತಹವು ಮುಖ್ಯ ಆಗಲೇ ಇಲ್ಲ. ಎಂತಹ ಕಷ್ಟದ ದಿನಗಳಲ್ಲಿಯೂ ನಿನ್ನ ಸಾಂತ್ವನ ಮತ್ತು ಗಟ್ಟಿ ನಿಲುವಿನ ಬೆಂಬಲ ನನಗೆ ಆತ್ಮಸ್ಥೈರ್ಯವನ್ನು ತುಂಬಿದೆ. ಅದು ಪರಸ್ಪರರ ಗೆಲುವಿಗೆ ಸಹಕಾರಿ ಆಗಿದೆ. ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಂಡಿದ್ದರಲ್ಲಿ ಎಂತಹ ಅದೃಷ್ಟವಂತರು ನಾವು ಎಂದು ಯಾವಾಗಲೂ ಅನ್ನಿಸುತ್ತದೆ. ನಿಜಕ್ಕೂ ನಾನಂತೂ ಆ ವಿಷಯದಲ್ಲಿ ಭಾಗ್ಯಶಾಲಿ. ನನ್ನ ಬದುಕ ಆಸರೆಯಾಗಿರುವ ನಿನ್ನ ಬಗ್ಗೆ ಯಾವತ್ತೂ ನನಗೆ ಹೆಮ್ಮೆ ಅನ್ನಿಸುತ್ತದೆ. 

ಸಂಗೀತಾ ಭಟ್‌ ಸುದರ್ಶನ್‌

ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ನಿನ್ನ ಪ್ರೀತಿ ಕಿಂಚಿತ್ತೂ ಕಡಿಮೆ ಆಗಲಿಲ್ಲ. ನನ್ನ ಸೋಲು, ನೋವಿನ ಸಂದರ್ಭಗಳಲ್ಲಿ ಅದುವೇ ಸ್ಫೂರ್ತಿಯನ್ನು ನೀಡಿದೆ, ಬದುಕಿಗೆ ಭರವಸೆ, ಉತ್ಸಾಹವನ್ನು ತುಂಬಿದೆ. ನಿನ್ನ ಆ ಬದ್ಧತೆ, ವಿಶ್ವಾಸಕ್ಕೆ ಕೃತಜ್ಞತೆಯ ಮಾತು ತೀರಾ ಚಿಕ್ಕದಾಗುತ್ತದೆ. ಒಂದು ಹಂತದಲ್ಲಿ, ‘ನೀನು ಮತ್ತು ನಾನು’ ಆಗಿದ್ದೆವು, ಈಗ ‘ನಾವು’ ಆದೆವು. ಅದು, ಒಟ್ಟಂದದಲ್ಲಿ ಬದುಕನ್ನು ಚಂದಗೊಳಿಸಿದೆ. 

ನಿನ್ನನ್ನು ನಾನು ಪ್ರೀತಿಸುವುದು ಅದು ‘ನೀನು’ ಎಂಬುದಕ್ಕಷ್ಟೇ ಅಲ್ಲ; ನಮ್ಮಿಬ್ಬರ ಸುಂದರ ಬದುಕಿಗೊಂದು ಅರ್ಥವೇ ಅದರಲ್ಲಿದೆ ಎನ್ನುವುದಕ್ಕೆ... 

'ಹ್ಯಾಪಿ ವ್ಯಾಲೆಂಟೈನ್ಸ್‌ ಡೇ ಡಿಯರ್‌ ಸಂಗೀತಾ'

ಎಂದಿಗೂ ನಿನ್ನವನು –ಸುದರ್ಶನ

ನಿರೂಪಣೆ: ರಾಘವೇಂದ್ರ ಕೆ. ತೊಗರ್ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.