ADVERTISEMENT

ಭೂಮಿಕ: ಮದುವೆಯ ಈ ಬಂಧ.. ಇವನಲ್ಲ ಅವನು!

ಅರ್ಪಣಾ ಎಚ್‌.ಎಸ್‌.
Published 19 ಜುಲೈ 2025, 2:46 IST
Last Updated 19 ಜುಲೈ 2025, 2:46 IST
   
‘ಮದುವೆಯ ಈ ಬಂಧ ಅನುರಾಗದ ಅನುಬಂಧ, ಏಳೇಳು ಜನುಮದಲೂ ತೀರದ ಸಂಬಂಧ...’ ಎನ್ನುವುದು ಕನ್ನಡದ ಎವರ್‌ಗ್ರೀನ್‌ ಚಿತ್ರಗೀತೆಗಳಲ್ಲಿ ಒಂದು. ಆದರೆ ಅಂತಹದ್ದೊಂದು ‘ಬಂಧ’ಕ್ಕೆ ಒಡ್ಡಿಕೊಳ್ಳುವ ಮುನ್ನವೇ ಪೊಲೀಸರ ‘ಬಂಧನ’ಕ್ಕೆ ಒಳಗಾಗುವಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಕೆಲವು ಹೆಣ್ಣುಮಕ್ಕಳು. ಯಾಕೆ ಹೀಗೆ? ಆ ಮನಃಸ್ಥಿತಿಗೆ ಅವರನ್ನು ತಂದು ನಿಲ್ಲಿಸುವ ಬಲವಾದ ಕಾರಣಗಳಾದರೂ ಏನು ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ ಲೇಖಕಿ ಅರ್ಪಣಾ ಎಚ್‌.ಎಸ್‌.

ಪತ್ರಕರ್ತೆಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಮಹಿಳಾ ವಿಭಾಗಕ್ಕೆ ಕೆಲವು ಬಾರಿ ಭೇಟಿ ನೀಡಿದ್ದೆ. ಆಗೆಲ್ಲಾ ಅಲ್ಲಿನ ಸಿಬ್ಬಂದಿ ಕೆಲವು ಕುಖ್ಯಾತ ಕೇಸುಗಳಿಗೆ ಸಂಬಂಧಿಸಿದ ಕೈದಿಗಳನ್ನು ಮಾಧ್ಯಮದವರಿಗೆ ಪರಿಚಯಿಸುತ್ತಿದ್ದರು- ಕೆಲವೊಮ್ಮೆ ಅವರಿಗೇ ಕಾಣುವಂತೆ, ಕೆಲವೊಮ್ಮೆ ಅವರ ಅರಿವಿಗೆ ಬಾರದಂತೆ. ವಿಶೇಷವೆಂದರೆ, ಪ್ರತಿ ಬಾರಿ ನಾನು ಜೈಲಿಗೆ ಭೇಟಿ ಕೊಟ್ಟಾಗಲೂ ಅಲ್ಲಿನ ಸಿಬ್ಬಂದಿ ಇಬ್ಬರನ್ನು ತಪ್ಪದೇ ತೋರಿಸುತ್ತಿದ್ದರು. ಒಬ್ಬಾಕೆ, ಅಶೋಕ್ ಗುತ್ತೇದಾರ್‌ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಪದ್ಮಾವತಿ ಗುತ್ತೇದಾರ್, ಇನ್ನೊಬ್ಬಾಕೆ, ರಿಂಗ್‌ರೋಡ್‌ ಕೊಲೆ ಕೇಸಿನ ಶುಭಾ.

ಪದ್ಮಾವತಿ ಲವಲವಿಕೆಯಿಂದ ಜೈಲಿನಲ್ಲಿ ಓಡಾಡಿಕೊಂಡು, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದರೆ, ಶುಭಾ ಒಂದೂ ಮಾತಿಲ್ಲದೆ, ಸಣ್ಣ ನಗುವೂ ಇಲ್ಲದೆ, ಗಂಟು ಮುಖ ಹೊತ್ತಿರುತ್ತಿದ್ದಳು. ಆಗ ನನಗೆ ಒಂದು ಪ್ರಶ್ನೆ ಕಾಡುತ್ತಿತ್ತು, ಜೈಲಿನಲ್ಲಿ ಅದಕ್ಕಿಂತ ಹೀನಾಯ ಕೃತ್ಯ ಎಸಗಿದವರು ಇದ್ದರೂ ಇವರಿಬ್ಬರೇ ಏಕೆ ಅಲ್ಲಿ ‘ಪ್ರೇಕ್ಷಣೀಯ ವಸ್ತು’ಗಳಂತೆ ಆಗಿದ್ದಾರೆ ಎಂದು.

ಸುಮಾರು 22 ವರ್ಷಗಳ ನಂತರ ಇದೇ ಶುಭಾ ಮತ್ತೆ ಬಹಳಷ್ಟು ಜನಕ್ಕೆ ನೆನಪಾಗಿದ್ದಾಳೆ. ಶುಭಾಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮೊನ್ನೆ ಎತ್ತಿಹಿಡಿದ ಸುದ್ದಿ ಬರುವ ಮೊದಲೇ, ಮಾಧ್ಯಮಗಳು ಶುಭಾ ಪ್ರಕರಣವನ್ನು ನೆನೆಪಿಸಿಕೊಂಡಿದ್ದಕ್ಕೆ ಕಾರಣವಿತ್ತು. ಈ ವರ್ಷದ ಆರಂಭದಿಂದಲೇ, ಹೆಂಡತಿಯು ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆ ಮಾಡಿದ ಕೆಲವು ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಸಿಮೆಂಟ್ ಡ್ರಮ್‌ನಲ್ಲಿ ಗಂಡನ ದೇಹ ದೊರಕಿದ್ದರಿಂದ ಹಿಡಿದು ಮೇಘಾಲಯ ಹನಿಮೂನ್‌ ಮರ್ಡರ್‌ವರೆಗೆ ಸಾಕಷ್ಟು ಮದುವೆಗಳು ಕೊಲೆಯಲ್ಲಿ ಕೊನೆಗೊಳ್ಳುತ್ತಿರುವುದು ಸುದ್ದಿಯಾಗುತ್ತಿದೆ.

ADVERTISEMENT

ಒಂದೆಡೆ, ಹೆಂಡತಿಯಿಂದ ಗಂಡ ಎಷ್ಟು ಅಪಾಯದಲ್ಲಿ ಇದ್ದಾನೆಂಬ ಬಗ್ಗೆ ತಮಾಷೆಯ, ವ್ಯಂಗದ ಸಾಲು ಸಾಲು ರೀಲುಗಳು ಬರುತ್ತಿದ್ದರೆ, ಇನ್ನೊಂದೆಡೆ, ಹೆಣ್ಣಿನ ದ್ರೋಹ, ಅನೈತಿಕ ಸಂಬಂಧ, ದೇಶದ ಕಾನೂನು ಹೇಗೆ ಪುರುಷ ವಿರೋಧಿಯಾಗಿದೆ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ಬಹುತೇಕ ಈ ಎಲ್ಲಾ ಪ್ರಕರಣಗಳ ಒಂದು ಸಾಮಾನ್ಯ ಎಳೆಯೆಂದರೆ ಬಲವಂತದ ವಿವಾಹ. ಕುಟುಂಬದ ಒತ್ತಾಯಕ್ಕೆ ಇಷ್ಟವಿಲ್ಲದ ಮದುವೆಗೆ ಒಪ್ಪಿ, ನಂತರ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಪ್ರಕರಣಗಳೇ ಹೆಚ್ಚು. ರಿಂಗ್‌ರೋಡ್‌ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಬಹಳಷ್ಟು ಮಂದಿ ಕೇಳಿದ ಪ್ರಶ್ನೆ ಇದೇ- ‘ಮದುವೆ ಇಷ್ಟವಿಲ್ಲ ಅಂದರೆ ಬೇಡ ಅನ್ನಬಹುದಿತ್ತು, ಕೊಲೆ ಮಾಡಿಸುವ ಅಗತ್ಯ ಏನಿತ್ತು?’ ತೀರಾ ಸರಳವೆನಿಸುವ ಈ ಪ್ರಶ್ನೆಯ ಸಂಕೀರ್ಣತೆ ಎಷ್ಟಿದೆ ಎಂದರೆ, ಅದು ನಮ್ಮ ಸಮಾಜದ ರೀತಿ ರಿವಾಜು, ಸಂಸ್ಕೃತಿ, ಕಾನೂನು ಕಟ್ಟಳೆಗಳ ಅಡಿಪಾಯವನ್ನೇ ಪ್ರಶ್ನಿಸುವಂಥದ್ದು. ‘ನನಗೆ ಈ ಮದುವೆ ಇಷ್ಟವಿಲ್ಲ’ ಎಂದು ಹೇಳುವುದು, ಮದುವೆಯನ್ನು ವಿರೋಧಿಸಿ ನಿಲ್ಲುವುದು ಹೆಣ್ಣಿಗೆ ಏಕೆ ಸಾಧ್ಯವಾಗುವುದಿಲ್ಲ? ಈ ಒಂದು ಮಾತು ಹೇಳುವುದಕ್ಕಿಂತಲೂ ಕೊಲೆ ಮಾಡುವುದೇ ಸುಲಭ ಎನಿಸುವ ಮನಃಸ್ಥಿತಿ ಅಥವಾ ಪರಿಸ್ಥಿತಿ ಇದೆ ಎಂಬುದು ಎಂತಹ ದೊಡ್ಡ ಆಘಾತಕಾರಿ ಸಂಗತಿಯಲ್ಲವೇ?

ಬಹುತೇಕ ಹೆಣ್ಣುಮಕ್ಕಳಿಗೆ ಸಂಗಾತಿಯ ಆಯ್ಕೆಯ ಅವಕಾಶ ಸಿಗುತ್ತಿರುವುದೇ ಇತ್ತೀಚಿನ ದಶಕಗಳಲ್ಲಿ. ಅಂದರೆ, ಅದು ಖುದ್ದಾಗಿ ನೋಡಿ ಆಯ್ಕೆ ಮಾಡುವ ಪೂರ್ಣ ಪ್ರಮಾಣದ ಸ್ವಾತಂತ್ರ್ಯವಲ್ಲ. ‘ಒಪ್ಪಿಗೆ ಇದೆಯೇನಮ್ಮಾ?’ ಎಂಬ ಪ್ರಶ್ನೆಗೆ ಉತ್ತರಿಸುವ ಅರೆ ಸ್ವಾತಂತ್ರ್ಯ ಮಾತ್ರ. ಹಿಂದಿನ ಶತಮಾನದಲ್ಲಿ ಆ ಪ್ರಶ್ನೆ ಕೂಡ ಕೇಳುತ್ತಿರಲಿಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ. ಈಗ ಹೆಣ್ಣು ಓದಿಗಾಗಿ, ಕೆಲಸಕ್ಕಾಗಿ ಮನೆ ಬಿಟ್ಟು ಹೊರಗೆ ಅಡಿ ಇಡುತ್ತಿದ್ದಾಳೆ, ಗಂಡುಮಕ್ಕಳೊಂದಿಗೆ ಹೆಚ್ಚು ವ್ಯವಹರಿಸುತ್ತಿದ್ದಾಳೆ. ಪ್ರೇಮಾಂಕುರದ ಅವಕಾಶಗಳು, ಸಂದರ್ಭಗಳು ಹೆಚ್ಚಾಗುತ್ತಿವೆ. ಆದರೆ, ತಾನು ಒಲಿದವನನ್ನು ಧೈರ್ಯವಾಗಿ ವರಿಸುವ ಸಾಧ್ಯತೆ ಮಾತ್ರ ಇನ್ನೂ ಕಡಿಮೆಯೇ ಇದೆ. ಮೇಲಿನ ಬಹಳಷ್ಟು ಪ್ರಕರಣಗಳಲ್ಲಿ ಕುಟುಂಬಸ್ಥರಿಗೆ ಹೆಣ್ಣಿನ ಪ್ರೇಮ ಪ್ರಕರಣಗಳ ಅರಿವಿತ್ತು ಎಂಬುದು ಈ ಸಂಗತಿಯನ್ನು ಸಾರಿ ಹೇಳುತ್ತದೆ. ಹೆಣ್ಣು ಪ್ರೇಮಿಸಿರುವುದು ಗೊತ್ತಾದಾಗ, ಬೇಗ ಮದುವೆ ಮಾಡಿ ‘ಮರ್ಯಾದೆ’ ಉಳಿಸಿಕೊಳ್ಳುವ ಮನಃಸ್ಥಿತಿಯಲ್ಲೇ ಬಹುತೇಕ ಕುಟುಂಬಗಳು ಈಗಲೂ ಇವೆ.

ಪ್ರೇಮದಲ್ಲಿರುವ ಹೆಣ್ಣು ಏನು ಮಾಡಬಹುದು? ಮನೆಯಲ್ಲಿ ಒಪ್ಪದಿದ್ದಾಗ ಓಡಿಹೋಗಿ ಮದುವೆಯಾಗಬಹುದು. ಆದರೆ, ಮರ್ಯಾದೆಗೇಡು ಹತ್ಯೆಗಳ ಸಂಖ್ಯೆಯೇನು ಕಡಿಮೆಯೇ ನಮ್ಮ ದೇಶದಲ್ಲಿ? ಹೀಗಾಗಿ, ಬಹುತೇಕ ಹೆಣ್ಣುಮಕ್ಕಳು ತಾವು ಬಯಸಿದವನೊಂದಿಗೆ ಬದುಕುವ ಮಾರ್ಗದಲ್ಲಿ ತಾವೇ ಬಲಿಯಾಗುವ ಬದಲು, ಇನ್ನೊಬ್ಬರ ಬಲಿ ತೆಗೆದುಕೊಳ್ಳಲು ಸಿದ್ಧರಾಗುತ್ತಿದ್ದಾರೆಯೇ? ಮದುವೆಗೆ ಮೊದಲು, ಪ್ರೀತಿಸಿದ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಹೇಳುವಷ್ಟು ಧೈರ್ಯವೇ ಇಲ್ಲದಿರುವಾಗ, ಮದುವೆಯ ನಂತರದಲ್ಲಿ ಗಂಡನಿಂದ ಬೇರಾಗಿ ಮರು ಮದುವೆಯಾಗುತ್ತೇನೆ ಎಂದು ಹೇಳುವ ಧೈರ್ಯ ತೋರಿಯಾಳೇ? ಸಮಾಜದ, ಕುಟುಂಬಸ್ಥರ ಬಗೆಗೆ ಇರುವ ಈ ಭಯಕ್ಕೆ, ಅದರಿಂದ ಹುಟ್ಟುವ ಪಿತೂರಿಗೆ ಗಂಡಂದಿರು ಬಲಿಯಾಗುತ್ತಿರುವುದು ಮಾತ್ರ ವಿಪರ್ಯಾಸ.

ಗಂಡು ಮದುವೆಯ ನಂತರವೂ ಹೊರಗೊಂದು ಸಂಬಂಧ ಇಟ್ಟುಕೊಂಡು ನಿಭಾಯಿಸುವುದನ್ನು ಈಗಲೂ ಸಮಾಜ ಹೆಚ್ಚೇನೂ ಪ್ರಶ್ನಿಸುವುದಿಲ್ಲ. ಎಷ್ಟೋ ಬಾರಿ ಹೆಂಡತಿಯೂ ಅದನ್ನು ಒಪ್ಪಿ ಸುಮ್ಮನಾಗಿ ಬಿಡುತ್ತಾಳೆ. ಹೀಗಾಗಿ, ಗಂಡನ ಅನೈತಿಕ ಸಂಬಂಧ ಕೊಲೆಯಲ್ಲಿ ಕೊನೆಗೊಳ್ಳುವುದು ಕಡಿಮೆ. ಆದರೆ, ಹೆಂಡತಿಯ ಅನೈತಿಕ ಸಂಬಂಧ ಬಹುತೇಕ ಕ್ರೈಂ ನ್ಯೂಸ್‌ ಆಗಿಯೇ ಪರ್ಯವಸಾನ ಕಾಣುತ್ತದೆ. ಹೆಂಡತಿಯ ಅಕ್ರಮ ಸಂಬಂಧ ಗಂಡಿಗೆ ತೀವ್ರ ಅಪಮಾನದ ಸಂಗತಿ, ‘ಗಂಡಸ್ಥನದ ಪ್ರಶ್ನೆ’. ಹೀಗಾಗಿ, ಗಂಡ ತನ್ನ ಹೆಂಡತಿಯನ್ನು, ಆಕೆಯ ಪ್ರಿಯಕರನನ್ನು ಅಥವಾ ಇಬ್ಬರನ್ನೂ ಕೊಲೆ ಮಾಡುವ ಸುದ್ದಿಗಳು ಮೊದಲಿನಿಂದಲೂ ನಾವು ಕೇಳುತ್ತಿದ್ದವೇ. ಈಗ ಹೆಣ್ಣು ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲ್ಲುವ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ವ್ಯತ್ಯಾಸವೆಂದರೆ, ಗಂಡು ಅನೈತಿಕ ಸಂಬಂಧದ ಪ್ರಕರಣಗಳಲ್ಲಿ ಮಾಡುವ ಕೊಲೆಗಳು ಆ ಕ್ಷಣದ ರೋಷದಿಂದ ಸಂಭವಿಸುವುದೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಹೆಂಡತಿಯಿಂದ ಮೋಸಕ್ಕೊಳಗಾದ ಗಂಡಿಗೆ– ಕೊಲೆಗಾರನಾದರೂ– ಸಮಾಜದ ಸಹಾನುಭೂತಿ ಸಿಗುವುದು ಕೂಡ ಸಾಮಾನ್ಯ. ಆದರೆ, ಹೆಣ್ಣು ಮಾಡುವ ಕೊಲೆಗಳು ಬಹುತೇಕ ಕೋಲ್ಡ್ ಬ್ಲಡೆಡ್‌. ಇಲ್ಲಿ ಹೆಣ್ಣಿಗೆ ಕೊಲೆಯಿಂದ ಪಾರಾಗಿ, ಒಲಿದವನೊಂದಿಗೆ ಬದುಕು ಕಟ್ಟಿಕೊಳ್ಳುವ ಬಯಕೆ ಇರುವುದರಿಂದ, ಇವೆಲ್ಲಾ ಪೂರ್ವಯೋಜಿತವೇ. ಹೀಗಾಗಿ, ಇದು ಮತ್ತಷ್ಟು ಭೀಕರ ಎನಿಸುವಂಥದ್ದು.

ಮದುವೆ ಇಬ್ಬರು ವ್ಯಕ್ತಿಗಳ ನಡುವಣ ವೈಯಕ್ತಿಕ ಸಂಬಂಧಕ್ಕಿಂತ ಹೆಚ್ಚಾಗಿ ಕುಟುಂಬಗಳ ಪ್ರತಿಷ್ಠೆಯ ವಿಷಯವಾಗಿರುವುದು, ಎಂತಹ ಸನ್ನಿವೇಶವೇ ಇರಲಿ, ವಿಚ್ಛೇದನವೆಂದರೆ ಅದು ನಾಚಿಕೆಗೇಡಿನ ಸಂಗತಿ ಎಂಬ ಭಾವನೆ ಇರುವುದು ಇಂತಹ ವಿಷಮ ಪರಿಸ್ಥಿತಿಗಳಿಗೆ, ಹೀನಾಯ ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ?

ಒಂದು ಹೆಣ್ಣಿಗೆ, ತನ್ನವರ ಬಳಿ ‘ನನಗೆ ಈ ಮದುವೆ ಬೇಡ’ ಎಂದು ಹೇಳುವುದಕ್ಕಿಂತ, ಒಬ್ಬ ಅಮಾಯಕ ವ್ಯಕ್ತಿಯ ಕೊಲೆ ಮಾಡುವುದೇ ಹೆಚ್ಚು ಸುಲಭ ಎನಿಸುತ್ತದೆ ಎಂದಾದರೆ, ನಮ್ಮ ಸಾಮಾಜಿಕ ವ್ಯವಸ್ಥೆಯ ಅಡಿಪಾಯ ಎಷ್ಟು ಕೊಳೆತಿದೆ ಎಂಬ ಬಗ್ಗೆ ಯೋಚಿಸಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.