ADVERTISEMENT

ಬೇಕಾಗಿದ್ದಾರೆ ನ್ಯಾಯದೇವತೆಯರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 21:00 IST
Last Updated 3 ಅಕ್ಟೋಬರ್ 2025, 21:00 IST
   

ಸಮಾನತೆಯ ತಳಹದಿ ಇಲ್ಲದ ಸಾಮಾಜಿಕ ವ್ಯವಸ್ಥೆಯು ಪಾಲುದಾರರಾಗಿರುವ ಎಲ್ಲರನ್ನೂ ಕ್ರಮೇಣ ಬಾಧಿಸುತ್ತದೆ. ಇದಕ್ಕೆ, ವ್ಯವಸ್ಥೆಯಿಂದ ಲಾಭ ಪಡೆಯುವ ಪುರುಷಪ್ರಧಾನ ಸಮಾಜ, ಜಾತಿ ಪದ್ಧತಿ ಅನುಸರಿಸುವವರೂ ಹೊರತಲ್ಲ. ತುಳಿತಕ್ಕೆ ಒಳಪಡುವವರು ಅವಕಾಶ, ಹಣ ಮತ್ತು ಹಲವು ಸವಲತ್ತುಗಳಿಂದ ವಂಚಿತರಾಗಿ ನೊಂದರೆ, ವ್ಯವಸ್ಥೆಯನ್ನು ವೈಭವೀಕರಿಸುವವರು ಕಠೋರ ನಿಲುವಿನ ಪಾತ್ರಧಾರಿಗಳು ಸೃಷ್ಟಿಸುವ ಸ್ವಾತಂತ್ರ್ಯರಹಿತ ಸ್ಥಿತಿ, ಸಮಾಜದ ನಿರೀಕ್ಷೆಗಳ ಭಾರದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಹಾಗಾಗಿ, ಸಮಾನತೆಯು ಬರೀ ಶೋಷಿತರ ಹಿತಕ್ಕಾಗಿ ಸಾಧಿಸಬೇಕಾದ ಗುರಿಯಲ್ಲ.

ಇಂತಹ ಸಮಾನತೆಯು ದೇಶದ ನ್ಯಾಯ ನಿರ್ಣಯ ಮಾಡುವ ನ್ಯಾಯಮೂರ್ತಿಗಳ ವಿಷಯದಲ್ಲೇ ಕಾಣಸಿಗದಿದ್ದರೆ ಹೇಗೆ? ಈಗ ನಮ್ಮ ಸುಪ್ರೀಂ ಕೋರ್ಟ್‌ನ ಪರಿಸ್ಥಿತಿಯೂ ಇದೇ ಆಗಿದೆ. ಅಲ್ಲಿ ಇರುವ 38 ನ್ಯಾಯಮೂರ್ತಿಗಳ ಪೈಕಿ, ಕರ್ನಾಟಕದಿಂದ ಪದೋನ್ನತಿ ಹೊಂದಿರುವ ಬಿ.ವಿ.ನಾಗರತ್ನ ಏಕೈಕ ಮಹಿಳೆಯಾಗಿದ್ದಾರೆ. ಸುಪ್ರೀಂ ಕೋರ್ಟ್‌ಗೆ 2021ರ ನಂತರ ಮಹಿಳಾ ನ್ಯಾಯಮೂರ್ತಿಗಳ ನೇಮಕವೇ ಆಗಿಲ್ಲ. ಉತ್ತರಾಖಂಡ, ತ್ರಿಪುರಾ, ಮೇಘಾಲಯ ಮತ್ತು ಮಣಿಪುರ ಹೈಕೋರ್ಟ್‌ಗಳಲ್ಲಿ ಮಹಿಳಾ
ನ್ಯಾಯಮೂರ್ತಿಗಳೇ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿಗಳ ಸಂಘ ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ದೇಶದಾದ್ಯಂತ ಹೈಕೋರ್ಟ್‌ಗಳಲ್ಲಿ 670 ಪುರುಷ ನ್ಯಾಯಮೂರ್ತಿಗಳಿದ್ದರೆ, ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 103 ಮಾತ್ರ.

ಹಾಗಾದರೆ ಮಹಿಳಾ ನ್ಯಾಯಮೂರ್ತಿಗಳು ಸರಿ ಸಂಖ್ಯೆಯಲ್ಲಿ ನ್ಯಾಯಪೀಠಕ್ಕೆ ಬಂದ ಮಾತ್ರಕ್ಕೆ ಅಸಮಾನತೆ ದೂರವಾಗುವುದೇ? ಇಲ್ಲ, ಮಹಿಳೆಯರೆಲ್ಲರೂ ಯಾವಾಗಲೂ ಲಿಂಗ ಅಸಮಾನತೆ ಯನ್ನು ತೊಡೆದುಹಾಕುವತ್ತ ಗಮನಹರಿಸುತ್ತಾರೆ ಎಂದು ಹೇಳುವುದು ಅಸಾಧ್ಯ. ಕೇರಳದಲ್ಲಿ ಇದ್ದ ಮಾತೃಪ್ರಧಾನ ಕೂಡು ಕುಟುಂಬದ ಪದ್ಧತಿಯನ್ನು ರದ್ದುಗೊಳಿಸಿ ಕಾನೂನು ಹೊರಡಿಸಿದ್ದು ರಾಣಿ ಸೇತು ಲಕ್ಷ್ಮಿಬಾಯಿ. ಬ್ರಿಟಿಷ್ ಶಿಕ್ಷಣ ಪಡೆದಿದ್ದ ರಾಣಿಯ ದೃಷ್ಟಿಯಲ್ಲಿ ಮಾದರಿ ಕುಟುಂಬದ ಪರಿಕಲ್ಪನೆಯು ಮಾತೃಪ್ರಧಾನ ಕುಟುಂಬದ ಪ್ರತೀಕವಾದ ‘ಮರುಮಕ್ಕತಾಯ’ ಪದ್ಧತಿಗಿಂತ ಭಿನ್ನವಾಗಿತ್ತು. ಹಾಗಾಗಿ, ಇಂಗ್ಲಿಷ್ ಶಿಕ್ಷಣ ಪಡೆದ ನಾಯರ್ ಪುರುಷ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಲು ರಾಣಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಜಪಾನ್‌ನಲ್ಲಿ ಮದುವೆಯಾದ ಜೋಡಿಗೆ ಒಂದೇ ಅಡ್ಡ ಹೆಸರಿಡಬೇಕು ಎಂಬ ಕಾನೂನನ್ನು 2015 ಮತ್ತು 2021ರಲ್ಲಿ ಪ್ರಶ್ನೆ ಮಾಡಲಾಗಿತ್ತು. ಆ ಕಾನೂನನ್ನು ಎತ್ತಿ ಹಿಡಿದವರಲ್ಲಿ ಮಹಿಳಾ ನ್ಯಾಯಮೂರ್ತಿಗಳೂ ಇದ್ದರು.

ADVERTISEMENT

ಭಾರತದಲ್ಲಿ ಶಬರಿಮಲೆ ದೇವಸ್ಥಾನಕ್ಕೆ, ಋತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಪ್ರವೇಶದ ಹಕ್ಕಿಲ್ಲ ಎಂದು ತೀರ್ಪಿತ್ತು, ಪ್ರವೇಶದ ಪರವಾಗಿ ನಿಂತ ಬಹುಮತದ ತೀರ್ಪಿನ ವಿರುದ್ಧ ವಿಧಿ ಬರೆದ ಏಕಮಾತ್ರ ನ್ಯಾಯಮೂರ್ತಿ ಇಂದು ಮಲ್ಹೋತ್ರಾ. ಹುಡುಕುತ್ತಾ ಹೋದರೆ ಇಂತಹ ಅವೆಷ್ಟೋ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಹೀಗಾಗುವುದಕ್ಕೆ ಕಾರಣಗಳು ಹಲವು.

ನ್ಯಾಯಮೂರ್ತಿಯು ಮಹಿಳೆಯೇ ಆಗಿದ್ದರೂ ಅವರು ಸವಲತ್ತು, ಅಧಿಕಾರ, ಮೇಲ್ವರ್ಗದ ಹಿನ್ನೆಲೆಯವರಾಗಿದ್ದರೆ, ಅವರ ಮೇಲೆ ಈ ಸಂಗತಿಗಳು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇಂಗ್ಲೆಂಡಿನ ವಲಸಿಗ ಮಹಿಳಾ ನ್ಯಾಯಮೂರ್ತಿಯೊಬ್ಬರು, ‘ಎಲ್ಲಿ ನಾನು ಪಕ್ಷಪಾತಿಯಾಗಿ ವರ್ತಿಸಿಬಿಡುತ್ತೇನೆಯೋ ಎಂಬ ಚಿಂತೆಯಿಂದ ಕೆಲವೊಮ್ಮೆ ನಾನು ಶ್ವೇತವರ್ಣದ ಇತರ ನ್ಯಾಯಮೂರ್ತಿಗಳಿಗಿಂತಲೂ ಕಠೋರವಾಗಿ ವರ್ತಿಸುತ್ತೇನೆ’ ಎಂದು ಹೇಳಿದ್ದನ್ನು ಕ್ವೀನ್ ಮೇರಿ ವಿಶ್ವವಿದ್ಯಾಲಯದ ಪ್ರೊಫೆಸರ್ ರೋಸ್ಮೇರಿ ಹಂಟರ್ ತಮ್ಮ ಬರಹವೊಂದರಲ್ಲಿ ಪ್ರಸ್ತಾಪಿಸಿದ್ದಾರೆ.  ಹೆಣ್ಣು
ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ, ಮಹಿಳಾ ಪಕ್ಷಪಾತಿ ಎಂಬ ಟೀಕೆಗೆ ಗುರಿಯಾಗಬಹುದು ಎಂಬ ಆತಂಕದಿಂದ ಮಹಿಳಾ ನ್ಯಾಯವಾದಿಗಳ ಬಳಿ ಒರಟಾಗಿ ನಡೆದುಕೊಳ್ಳುವ ಮಹಿಳಾ ನ್ಯಾಯಮೂರ್ತಿಗಳನ್ನು ನಾನೂ ನೋಡಿದ್ದೇನೆ. ಅಷ್ಟೇ ಅಲ್ಲದೆ, ಕಾನೂನಿನ ಮಾದರಿಗಳು ಎಂದಿಗೂ ಸಾಕ್ಷಿಗಳು, ಮುಂಚಿನ ತೀರ್ಪುಗಳನ್ನು ಅವಲಂಬಿಸಿರುತ್ತವೆ, ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಇರುತ್ತವೆ. ಹೀಗಾಗಿ, ಇವುಗಳನ್ನು ಮಹಿಳಾವಾದದ ದೃಷ್ಟಿಕೋನದಿಂದ
ನೋಡಿ, ವ್ಯವಸ್ಥೆಯನ್ನು ಕೆಡವಿ ಕಟ್ಟುವಂತಹ ಮಹತ್ತರ
ಮಾರ್ಪಾಡುಗಳನ್ನು ತರುವುದು ಕಷ್ಟವೇ ಸರಿ. ಹಾಗಾಗಿ, ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯ ವ್ಯವಸ್ಥೆಗೆ ಕರೆತಂದ ಮಾತ್ರಕ್ಕೆ ಸಮಾನತೆ ಬರುವುದಿಲ್ಲ.

ಆದರೆ, ಪ್ರಾತಿನಿಧ್ಯ ಮತ್ತು ವೈವಿಧ್ಯವು ಮೇಲ್ನೋಟಕ್ಕೆ ಪೂರಕವಾದ ಮೌಲ್ಯಗಳ ರೀತಿಯಲ್ಲಿ ಕಂಡರೂ ಅವೆರಡನ್ನೂ ಒಂದೇ ಎಂಬಂತೆ ನೋಡಲಾಗದು. ಪ್ರಾತಿನಿಧ್ಯವನ್ನು ಲಿಂಗ ಅಸಮಾನತೆ, ಜಾತಿ ತಾರತಮ್ಯವನ್ನು ಅಳಿಸಿಹಾಕುವ ದಾರಿಯಾಗಿ ನೋಡಬಾರದು. ಅವನ್ನು ಬೇರೆ ಬೇರೆಯಾಗಿ ಮತ್ತು ಸಮಾನಾಂತರವಾಗಿ ತರುವ ಪ್ರಯತ್ನಗಳು ನಡೆದಾಗಲೇ ನಿಜವಾದ ಅರ್ಥದಲ್ಲಿ ಸಮಾನತೆಯನ್ನು ಹೊಂದುವುದು ಸಾಧ್ಯವಾಗುತ್ತದೆ. ಆ ದಿಸೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೋರ್ಟುಗಳಲ್ಲಿ ಇರಬೇಕಾದದ್ದು ಅಗತ್ಯವಾಗಿದೆ.

2010– 20ರ ಅವಧಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಅಷ್ಟೇ ಏಕೆ ಪಾಕಿಸ್ತಾನ ಮತ್ತು 2018ರಲ್ಲಿ ಭಾರತ ಸಹ ‘ಫೆಮಿನಿಸ್ಟ್ ಜಡ್ಜ್‌ಮೆಂಟ್ಸ್‌ ಪ್ರಾಜೆಕ್ಟ್’ (ಮಹಿಳಾವಾದಿ ತೀರ್ಪುಗಳ ಯೋಜನೆ) ಎಂಬ ಹೊಸ ಪರಿಕಲ್ಪನೆಯನ್ನು ಸೃಷ್ಟಿಸಿದ್ದವು. ಈ ಯೋಜನೆಯು ನ್ಯಾಯಾಲಯಗಳು ಹೊರಡಿಸಿದ ತೀರ್ಪುಗಳನ್ನು ಆಯ್ಕೆ ಮಾಡಿಕೊಂಡು, ಅವುಗಳಿಗೆ ಪರ್ಯಾಯವಾದ ತೀರ್ಪನ್ನು ಮಹಿಳಾವಾದದ ಕನ್ನಡಿಯಲ್ಲಿ ನೋಡಿ ಬರೆಯುವುದಾಗಿತ್ತು. ಮಹಿಳೆಯರ ದೃಷ್ಟಿಕೋನವು ತೀರ್ಪುಗಳನ್ನು ಹೇಗೆ ಪ್ರಭಾವಿಸಬಹುದು ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿತ್ತು. ಇಂತಹ ಪ್ರಯತ್ನಗಳು ಇನ್ನಷ್ಟು ನಡೆಯಬೇಕಾಗಿದೆ. ಅಲ್ಲದೆ, ನ್ಯಾಯವ್ಯವಸ್ಥೆಯಲ್ಲಿ ಎಲ್ಲ ಗುಂಪುಗಳನ್ನೂ ಒಳಗೊಳ್ಳುವ ಸಲುವಾಗಿ 2006ರಿಂದ 14ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಹಲವು ಸಮಿತಿಗಳನ್ನೂ ಸಂಸ್ಥೆಗಳನ್ನೂ ರಚಿಸಿ, ಬಿರುಸಾಗಿ ಬದಲಾವಣೆಗಳನ್ನು ತರಲು ಮಾಡಿದ ಪ್ರಯತ್ನಗಳು ನಮಗೂ ಮಾದರಿಯಾಗಬಹುದು.

ಅಸಮಾನತೆಯನ್ನು ತೊಡೆದುಹಾಕಲು ಹಲವು ದೇಶಗಳು ಮಾಡಿರುವ ಪ್ರಯತ್ನಗಳಲ್ಲಿ ಅನುಭವದ ಪಾಠಗಳು ಬಹಳಷ್ಟಿವೆ. ನಮ್ಮ ವ್ಯವಸ್ಥೆಯನ್ನೂ ಈ ಅನುಭವಗಳ ಸಾಣೆಗೆ ಒಡ್ಡಿ ತೀಕ್ಷ್ಣವಾಗಿಸುವುದು ಇಂದು ಹಿಂದೆಂದಿಗಿಂತಲೂ ಅನಿವಾರ್ಯವಾಗಿದೆ.

ವಿವರವಾದ ಅವಲೋಕನ

2021ರಲ್ಲಿ ನಾಲ್ವರು ಮಹಿಳಾ ನ್ಯಾಯಮೂರ್ತಿಗಳಿದ್ದ ನಮ್ಮ ಸುಪ್ರೀಂ ಕೋರ್ಟ್‌ನಲ್ಲಿ ಆ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಈ ವಿಚಾರದಲ್ಲಿ ಮೆಲಿಸಾ ಕ್ರಾಚ್ ಅವರು ಸಂಕಲನ ಮಾಡಿದ ‘ವಿಮೆನ್ ಆ್ಯಂಡ್ ಜುಡಿಷಿಯರಿ ಇನ್ ದ ಏಷ್ಯಾ ಪೆಸಿಫಿಕ್’ ಎಂಬ ಪುಸ್ತಕ ಗಮನಾರ್ಹ.

ಭಾರತ, ಇಂಡೊನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್‌ ಮತ್ತು ಫಿಲಿಪ್ಪೀನ್ಸ್‌ ದೇಶಗಳಲ್ಲಿನ ನ್ಯಾಯ ವ್ಯವಸ್ಥೆಯನ್ನು ಮತ್ತು ಅವುಗಳಲ್ಲಿ ಮಹಿಳೆಯರ ಪಾತ್ರವನ್ನು ಈ ಪುಸ್ತಕದಲ್ಲಿ ಬಹಳ ವಿವರವಾಗಿ ಅವಲೋಕನ ಮಾಡಲಾಗಿದೆ.

ಕೊರತೆ ಇಂದಿಗೂ ಪ್ರಸ್ತುತ!

ಮಹಿಳಾ ನ್ಯಾಯಮೂರ್ತಿಗಳ ಕೊರತೆಗೆ ಸಂಬಂಧಿಸಿದಂತೆ 2019ರಲ್ಲಿ ನಾನು ಇದೇ ಪತ್ರಿಕೆಯಲ್ಲಿ ಬರೆದಿದ್ದ ಬರಹ ತಾತ್ವಿಕವಾಗಿ ಇಂದಿಗೂ ಪ್ರಸ್ತುತವೇ ಆಗಿರುವುದು ನೋವಿನ ಸಂಗತಿ. ಅದರ ನಂತರ ನೆರೆಯ ದೇಶಗಳಲ್ಲಿ ಮತ್ತು ನಮ್ಮಲ್ಲಿ ಒಂದಿಷ್ಟು ಮೊದಲುಗಳು ಸಂಭವಿಸಿವೆಯಾದರೂ ಸನ್ನಿವೇಶದಲ್ಲಿ ದೊಡ್ಡದಾದ ಬದಲಾವಣೆಯೇನೂ ಆಗಿಲ್ಲ. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ನ್ಯಾಯಪೀಠದಲ್ಲಿ ಸದ್ಯಕ್ಕೆ ಇರುವ ನ್ಯಾಯಮೂರ್ತಿಗಳ ಪೈಕಿ 11 ಮಂದಿ ಮಹಿಳೆಯರು ಮತ್ತು ಏಳು ಪುರುಷರು. ಥಾಯ್ಲೆಂಡ್‌ ಸುಪ್ರೀಂ ಕೋರ್ಟ್‌ನಲ್ಲಿ 2020ರ ನಂತರ ನಾಲ್ವರು ಮಹಿಳಾ ನ್ಯಾಯಮೂರ್ತಿಗಳ ನೇಮಕವಾಗಿದೆ.

ಇಂಡೊನೇಷ್ಯಾದ ಸಿವಿಲ್ ನ್ಯಾಯಾಲಯಗಳಲ್ಲಿ ಈ ಸಂಖ್ಯೆ ಶೇಕಡ 29ಕ್ಕೆ ಏರಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ 2021- 22ರ ಅವಧಿಯಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ನೇಮಕ ಆಗಿದೆ. ಆದರೆ ಆ ಬಳಿಕ ಈ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. 2021- 23ರ ಅವಧಿಯಲ್ಲಿ ಈ ವಿಷಯದಲ್ಲಿ ಸುಧಾರಣೆ ಕಂಡುಬಂದಿದ್ದ ಜಪಾನ್, ತೈವಾನ್ ಮತ್ತು ಮಂಗೋಲಿಯಾ ದೇಶಗಳಲ್ಲಿ ನಂತರ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಲೇಖಕಿ: ವಕೀಲೆ, ಕೇರಳ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.