ADVERTISEMENT

Friendship Day: ಗೆಳೆತನದ ಬಂಧ ಗಟ್ಟಿಗೊಳಿಸುವ ‘ಫ್ರೆಂಡ್‌ಶಿಪ್ ಬ್ಯಾಂಡ್’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 22:44 IST
Last Updated 2 ಆಗಸ್ಟ್ 2024, 22:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸ್ನೇಹಿತರ ದಿನಾಚರಣೆ ಬಂದರೆ ಸಾಕು, ಇನ್ನೂ ಒಂದು ವಾರವಿರುವಾಗಲೇ ಅಂಗಡಿ ಮುಂಗಟ್ಟುಗಳ ಮುಂದೆ ವಿವಿಧ ರೀತಿಯ ಕಲರ್ ಕಲರ್ 'ಫ್ರೆಂಡ್‌ಶಿಪ್ ಬ್ಯಾಂಡ್‌'ಗಳು ಸ್ನೇಹವನ್ನು ಗಟ್ಟಿಗೊಳಿಸುವ ಸಂಕೇತದಂತೆ ಇಳಿಬಿದ್ದಿರುತ್ತವೆ‌. ಅವುಗಳ ವ್ಯಾಪಾರ, ವಹಿವಾಟು ಕೂಡ ಜೋರೇ ಇರುತ್ತದೆ. 

ನಮ್ಮ ಬಾಲ್ಯದಲ್ಲಿ ಯಾರ ಕೈಯಲ್ಲಿ ಜಾಸ್ತಿ 'ಫ್ರೆಂಡ್‌ಶಿಪ್ ' ಬ್ಯಾಂಡ್ ಇರುತ್ತದೆಯೊ ಅವನಿಗೆ ಜಾಸ್ತಿ ಗೆಳೆಯರು ಇದ್ದಾರೆ ಎಂದರ್ಥ‌. ಯಾರು ಬ್ಯಾಂಡ್ ಕಟ್ಟುತ್ತರೋ ಅವರಷ್ಟೇ ನಮಗೆ ಆಪ್ತ ಸ್ನೇಹಿತರು. ಅದೊಂತರ ಸ್ನೇಹವನ್ನು ಅಧಿಕೃತಗೊಳಿಸುವ ಚಿಹ್ನೆಯೇ ಆಗಿತ್ತು. ಸ್ನೇಹಿತರ ದಿನಾಚರಣೆಗೆ ಒಂದಿಷ್ಟು ದಿನ ಇರುವಾಗಲೇ ಪುಡಿಗಾಸು ಹೊಂದಿಸಿ, ಯಾರು ಯಾರಿಗೆ ಬ್ಯಾಂಡ್ ಕಟ್ಟಬೇಕು ಎಂದು ಒಂದು ವಾರದ ಹಿಂದೆಯೇ ಲೆಕ್ಕ ಹಾಕಿ, ಬ್ಯಾಂಡ್ ಕೊಂಡು ಸ್ನೇಹಿತರ ದಿನಾಚರಣೆ ದಿನ ಅವರಿಗೆ ಕಟ್ಟಿದರೆ, ಇನ್ನೂ ನಮ್ಮ ಸ್ನೇಹ ಅಷ್ಟೇ ಗಟ್ಟಿ. ಆದರೆ ಇದರಲ್ಲೂ ಕೆಲವು ಅತಿ ಬುದ್ದಿವಂತರಿದ್ದರು, ಹೇಗೋ ಎಲ್ಲಾ ಬ್ಯಾಂಡ್ ಒಂದೇ ರೀತಿಯದ್ದಲ್ಲವೇ, ಯಾರಿಗೂ ತಿಳಿಯದಂತೆ ಒಬ್ಬರು ಕಟ್ಟಿದ್ದನ್ನೇ ಬಿಚ್ಚಿ, ಮತ್ತೊಬ್ಬರಿಗೆ ಕಟ್ಟಿಬಿಡುತ್ತಿದ್ದರು. ಕೆಲವೊಮ್ಮೆ ಬ್ಯಾಂಡ್ ಕೊಂಡು ತಂದವನ ಕೈಗೇ ಮತ್ತೆ ಆ ಬ್ಯಾಂಡ್ ಸಿಗುವ ಸಾಧ್ಯತೆ ಕೂಡ ಇತ್ತು!

ADVERTISEMENT

ರಕ್ಷಾ ಬಂಧನದ ದಿನ 'ರಾಕಿ' ಕಟ್ಟಿದರೆ ಸಹೋದರ- ಸಹೋದರಿ ಹೇಗೋ, ಸ್ನೇಹಿತರ ದಿನಾಚರಣೆಗೆ ಬ್ಯಾಂಡ್ ಕಟ್ಟಿದ್ದರೇ ಮಾತ್ರವೇ ಅವರು ಸ್ನೇಹಿತರು ಎನ್ನುವ ಅಲಿಖಿತ ನಿಯಮವೊಂದಿತ್ತು. ರಕ್ಷಾ ಬಂಧನದ ದಿನ ಹುಡುಗಿಯರ ಕಣ್ಣಿಗೆ ಬೀಳದ ಹುಡುಗರೂ ಕೂಡ, ‘ಫ್ರೆಂಡ್‌ಶಿಪ್ ಡೇ‘ಯಲ್ಲಿ ಅವಳಿಂದ ಬ್ಯಾಂಡ್ ಕಟ್ಟಿಸಿಕೊಳ್ಳಲೆಂದು ಅವಳ ಕಣ್ಣೆದುರೇ ಸುತ್ತುತ್ತಾ, ಯಾರಿಗೆ ವಿಶ್ ಮಾಡಿದರೂ, ಮಾಡದಿದ್ದರೂ ಅವಳಿಗಂತೂ ವಿಶ್ ಮಾಡೇ ಮಾಡುತ್ತಾರೆ‌. ಅವಳು ಬ್ಯಾಂಡ್ ಕಟ್ಟಿದರಂತೂ ಮುಗಿಯಿತು, ಆಗಲೇ ಮೂರು ಗಂಟು ಕಟ್ಟುವ ಹಗಲು ಗನಸು ಶುರುವಾಗಿರುತ್ತದೆ ಹುಡುಗರ ತಲೆಯಲ್ಲಿ. 

ಸ್ನೇಹಿತರ ದಿನಾಚರಣೆಯಲ್ಲಿ ಗ್ರೀಟಿಂಗ್ ಕಾರ್ಡ್‌ಗಳ ವಿನಿಮಯ, ಗಿಫ್ಟ್‌ಗಳು, ಸ್ನೇಹಿತರು ಸೇರಿಕೊಂಡು ಕೇಕ್ ಕತ್ತರಿಸುವುದು, ಮಿಡ್ ನೈಟ್ ಪಾರ್ಟಿಗಳೂ ಜೋರಾಗೇ ನಡೆಯುತ್ತವೆ‌. ಕಾಲೇಜು ಹುಡುಗರಂತೂ, ತಮ್ಮ ಸ್ನೇಹಿತರೆಲ್ಲಾ ಒಂದೇ ಕಲರ್ ಬಟ್ಟೆ ತೊಟ್ಟು ಕ್ಲಾಸ್ ರೂಮ್‌ನಲ್ಲಿ ಮಿಂಚುತ್ತಾರೆ. ಇನ್ನೂ ಮುಂದೆ ಹೋಗುವ ಕೆಲವರು, ಗೆಳೆತನದ ಕೋಟ್ ಇರುವ ಟೀಶರ್ಟ್ ಧರಿಸಿ ಗಮನಸೆಳೆಯುತ್ತಾರೆ. 'ಫ್ರೆಂಡ್‌ಶಿಪ್ ಡೇ'ನಲ್ಲಿ ಇದೇನೇ ಮಿಸ್ ಆದರೂ, ಬ್ಯಾಂಡ್ ಮಾತ್ರ ಸ್ನೇಹದ ಸಂಕೇತದಂತೆ ಗಟ್ಟಿಯಾಗಿರುತ್ತದೆ. 

ಸ್ನೇಹಿತರ ದಿನಾಚರಣೆಯಲ್ಲಿ ಬ್ಯಾಂಡ್‌ಗಳಿಗೂ ಅಷ್ಟೇ ದೊಡ್ಡ ಇತಿಹಾಸವಿದೆ. ಗೆಳೆತನದ ಕುರುವಾಗಿ ವರ್ಷಗಳಿಂದ ಇವು ಉಳಿದುಕೊಂಡಿವೆ. ಗ್ರೀಟಿಂಗ್ ಕಾರ್ಡ್ ಇಂಡಸ್ಟ್ರಿಗಳು ಆರಂಭಿಸಿದ ಈ ಟ್ರೆಂಡ್ ಹೆಚ್ಚಾಗಿದ್ದು, 90ರ ದಶಕದ ಬಾಲಿವುಡ್ ಸಿನಿಮಾಗಳಿಂದ. ಹೌದು, ಸಿನಿಮಾದಲ್ಲಿ ಬಂದಿದ್ದನೆಲ್ಲಾ ಜನರು ಅನುಸರಿಸಿತೊಡಗಿದಾಗ, ಫ್ರೆಂಡ್‌ಶಿಪ್ ಬ್ಯಾಂಡ್‌ನ ಟ್ರೆಂಡ್ ಕೂಡ ಶುರುವಾಯ್ತು. ಸಿನಿಮಾದಲ್ಲಿ ಹೀರೋ, ತನ್ನ ಗೆಳೆಯನಿಗೆ ರಿಬ್ಬನ್ ಬ್ಯಾಂಡ್ ಕಟ್ಟಿದ್ದೇ, ಜನರೂ ಸ್ನೇಹದ ನೆನಪಿನ ಗುರುತಾಗಿ ಬ್ಯಾಂಡ್ ಕಟ್ಟಲು ಶುರು ಮಾಡಿದರು. ಇದರ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಯೂ ಸಾಕಷ್ಟಿದೆ. ಸ್ನೇಹಿತರ ದಿನಾಚರಣೆಯ ದಿನ ಸೋಷಿಯಲ್ ಮೀಡಿಯಾಗಳಲ್ಲೂ ಈ ಬ್ಯಾಂಡ್‌ಗಳು ಬ್ಯಾಂಡ್ ಬಜಾಯಿಸುತ್ತಿರುತ್ತವೆ. ಈಗಂತೂ ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಲ್ಲೂ 'ಫ್ರೆಂಡ್‌ಶಿಪ್ ಡೇ'ಗಾಗಿ ರಿಬ್ಬನ್ ಬ್ಯಾಂಡ್, ಕಡಗಗಳು, ಡಿಸೈನ್ ಡಿಸೈನ್ ನೂಲಿನ ದಾರಗಳು ಮಾರಾಟಕ್ಕಿದೆ. ಇದೊಂತರ ಗೆಳೆತನದ ನೆನಪಿನ ಚಿನ್ನೆಯಾಗಿ ಬದಲಾಗಿಬಿಟ್ಟಿದೆ‌. 

ಹಳೆಯ ಸ್ನೇಹಿತರು ಮತ್ತೆ ಸಿಗಲು, ಈಗಿರುವ ಗೆಳತವನ್ನು ಹಂಚಿಕೊಳ್ಳಲು, ಸಂಭ್ರಮಿಸಲು ಇದೊಂದು ನೆಪವಷ್ಟೇ. ಇದು ಸ್ನೇಹಿತರು ಮತ್ತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಡುತ್ತದೆ. 

ಕೈಗೆ ಕಟ್ಟಿದ ಫ್ರೆಂಡ್‌ಶಿಪ್ ಡೇ ಬ್ಯಾಂಡ್‌ನ ಹಿಂದೆ ಬೆಲೆ ಕಟ್ಟಲಾಗದ ಸ್ನೇಹವೊಂದಿರುತ್ತದೆ. ಹಲವು ನೆನಪುಗಳು, ಸಿಹಿ ಕ್ಷಣಗಳು ಅದರಲ್ಲಿ ಬಂಧಿಯಾಗಿರುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.