ADVERTISEMENT

ಜೆನ್‌ ಝೀಗಳು ಆಲಸಿಗಳಲ್ಲ; ಆದರೆ...ಪಾಡ್‌ಕಾಸ್ಟರ್ ರಾಜ್‌ ಶಮಾನಿ ಪ್ರತಿಪಾದನೆಯೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 11:23 IST
Last Updated 19 ಫೆಬ್ರುವರಿ 2026, 11:23 IST
<div class="paragraphs"><p>ರಾಜ್‌ ಶಮಾನಿ</p></div>

ರಾಜ್‌ ಶಮಾನಿ

   

ಚಿತ್ರ: ಎಕ್ಸ್

ಸದಾ ಸುದ್ದಿಯಲ್ಲಿರುವ ಜೆನ್‌ ಝೀಗಳು ಆಲಸಿಗಳೇ, ಏಕಾಗ್ರತೆಯ ಕೊರತೆಯೇ ಅಥವಾ ವಿಶೇಷ ಸ್ಥಾನಮಾನ ಬಯಸುತ್ತಾರೆಯೇ ಎಂಬಿತ್ಯಾದಿ ಜಗತ್ತಿನ ಕೊಂಕು ಪ್ರಶ್ನೆಗಳಿಗೆ ಪಾಡ್‌ಕಾಸ್ಟರ್‌ ರಾಜ್‌ ಶಮಾನಿ ಅವರು ಜಾಗತಿಕ ವೇದಿಕೆಯಲ್ಲಿ ತಕ್ಕ ಉತ್ತರ ನೀಡಿ ‘ಜೆನ್ ಝೀ’ ತಲೆಮಾರಿನವರನ್ನು ಸಮರ್ಥಿಸಿಕೊಂಡಿದ್ದಾರೆ.

ಸದಾ ಹೊಸತೇನನ್ನೋ ಹುಡುಕುವ, ಕೃತಕ ಬುದ್ಧಿಮತ್ತೆಯ (ಎಐ) ಆಳ ಅಗಲವನ್ನು ತಿಳಿದುಕೊಂಡು ಇನ್ನೇನನ್ನೋ ಮಾಡಬೇಕೆನ್ನುವ ಹುಚ್ಚು ಹಂಬಲದ, ದಿನಕ್ಕೊಂದು ಟ್ರೆಂಡ್ ಸೃಷ್ಟಿಸುವ ಜೆನ್‌ ಝೀಗಳ ಬಗ್ಗೆ ಕೇಳಿ ಬರುವ ದೂರುಗಳು ಅಷ್ಟಿಷ್ಟಲ್ಲ.

ದುಬೈನಲ್ಲಿ ನಡೆದ ‘ವರ್ಲ್ಡ್‌ ಗವರ್ನಮೆಂಟ್ ಸಮ್ಮಿಟ್‌ 2026’ರಲ್ಲಿ 50 ವಿವಿಧ ದೇಶಗಳಿಂದ ಬಂದಿದ್ದ ನಾಯಕರ ನಡುವೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಜೆನ್‌ ಝೀಗಳ ಪರ ಮಾತನಾಡಿದ್ದಾರೆ. 

ಸದ್ಯ ರಾಜ್‌ ಅವರು ಮಾತನಾಡಿರುವ ವಿಚಾರಗಳು ಯುವ ಜನರ ಗಮನ ಸೆಳೆದಿದ್ದು, ವಿಡಿಯೊ ತುಣುಕುಗಳು ಎಲ್ಲೆಡೆ ಹರಿದಾಡುತ್ತಿವೆ.

‘ಜೆನ್‌ ಝೀಗಳು ಆಲಸಿಗಳಲ್ಲ, ವಿಚಲಿತರಾಗುವುದಿಲ್ಲ. ಬದಲಾಗಿ ಅರ್ಥವಿಲ್ಲದ ಕೆಲಸಗಳನ್ನು ಮಾಡುವುದೆಂದರೆ ಅವರಿಗೆ ಅಲರ್ಜಿಯಂತೆ. ಜೆನ್‌ ಝೀಗಳು ಪ್ರಯತ್ನ ಅಥವಾ ಶ್ರಮವನ್ನು ವಿರೋಧಿಸುವುದಿಲ್ಲ ಬದಲಾಗಿ ಉದ್ದೇಶವಿಲ್ಲದೆ ವಿಧೇಯತೆಯನ್ನು ಬೇಡುವ ಹಳೆಯ ವ್ಯವಸ್ಥೆಗಳನ್ನು ದ್ವೇಷಿಸುತ್ತಾರೆ’ ಎಂದಿದ್ದಾರೆ.

‘ಅಧಿಕಾರದಲ್ಲಿರುವ ಜನರನ್ನು ನೋಡಿ ಹೇಳಲು ಧೈರ್ಯ ಬೇಕು. ಹೀಗಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿದ್ದನ್ನು ಒಪ್ಪಿಕೊಳ್ಳದೇ ಬೇರೆ ಮಾರ್ಗವಿರುವುದಿಲ್ಲ. ಸಮಸ್ಯೆ ಇರುವುದು ಹೊಸ ಪೀಳಿಗೆಯದ್ದಲ್ಲ, ಬಹುಷಃ ಹಿಂದಿನ ತಲೆಮಾರಿನವರು ನಿರ್ಮಿಸಿದ ರಚನೆಗಳು ನಮ್ಮ ಹೊಸ ಪೀಳಿಗೆಗೆ ಅನುಗುಣವಾಗಿ ವಿಕಸನಗೊಳ್ಳುತ್ತಿಲ್ಲ’ ಎಂದು ವಿವರಿಸಿದ್ದಾರೆ.

‘ಯುವ ಸಮೂಹ ಇಂದು ದೊಡ್ಡದನ್ನು ಸಾಧಿಸಲು, ನಿರ್ಮಿಸಲು ಬಯಸುತ್ತದೆ. ಆದರೆ ಹಳೆಯ ವಿಧಾನಗಳ ಮೂಲಕ ಅಲ್ಲ. ಜೆನ್‌ ಝೀಗಳು ಹೊಂದಿಕೊಳ್ಳಲು, ಅರ್ಥಪೂರ್ಣವಾಗಿ ಇರಲು, ಪ್ರಾಮಾಣಿಕತೆಯಿಂದ ಇರಲು ಬಯಸುತ್ತಾರೆ. ಆದರೆ ಯಾವಾಗ ತಾವು ಕೆಲಸ ಮಾಡುವ ಸಂಸ್ಥೆಗಳು ಅಥವಾ ತಮ್ಮೊಂದಿಗಿರುವವರು ನಂಬಿಕಾರ್ಹರಲ್ಲ ಎಂದು ಎನ್ನಿಸುತ್ತದೆಯೋ ಆಗ ನಂಬಿಕೆ ನಿಧಾನವಾಗಿ ಮುರಿಯುತ್ತದೆ. ಅದಕ್ಕಾಗಿಯೇ ಬಹಳಷ್ಟು ಯುವ ಜನರು ಸಂಬಂಧಗಳಿಂದ, ಸಂಪರ್ಕಗಳಿಂದ ದೂರವಿರಲು ಬಯಸುತ್ತಾರೆ. ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಲ್ಲ. ಒಂದು ಕಡೆ ಸ್ಥಿರವಾಗಿ ನೆಲೆನಿಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿರುತ್ತಾರೆ’ ಎಂದಿದ್ದಾರೆ.

ಇಂತಹ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಹೊತ್ತು ಬಂದಿದ್ದೇನೆ, ಹೀಗಾಗಿ ನನ್ನ ಬಗ್ಗೆ ಅಲ್ಲ, ಯುವಜನರ ಧ್ವನಿಯಾಗಿ ಅವರ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯವಾಗಿತ್ತು ಎಂದೂ ರಾಜ್, ಜೆನ್‌ ಝೀ ಪೀಳಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.