ADVERTISEMENT

ಜೀನ್ಸ್ ಮೇಲೆ ಕುರ್ತಾ: ಹಳೆಯ ಫ್ಯಾಷನ್‌ಗೆ ಹೊಸ ಸ್ಪರ್ಶ

ರೇಷ್ಮಾ
Published 7 ಆಗಸ್ಟ್ 2021, 2:24 IST
Last Updated 7 ಆಗಸ್ಟ್ 2021, 2:24 IST
ಟ್ಯೂನಿಕ ಟಾಪ್‌
ಟ್ಯೂನಿಕ ಟಾಪ್‌   

ಕೊರೊನಾ ಒಂದನೇ ಅಲೆ, ಎರಡನೇ ಅಲೆ, ಸತತ ಲಾಕ್‌ಡೌನ್‌, ನಿರಂತರವಾದ ವರ್ಕ್‌ ಫ್ರಂ ಹೋಮ್‌ ನಡುವೆ ಜನರು ಫ್ಯಾಷನ್ ಮೇಲೆ ಒಲವು ತೋರುವುದು ಕಡಿಮೆ ಮಾಡಿದ್ದಾರೆ. ಹೊಸ ಫ್ಯಾಷನ್‌ ಬಂದ ಕೂಡಲೇ ಧರಿಸಿ ಖುಷಿಪಡುತ್ತಿದ್ದ ಹುಡುಗಿಯರೂ ಕೂಡ ಈಗ ವಿವಿಧ ವಿನ್ಯಾಸದ ಉಡುಪುಗಳನ್ನು ಧರಿಸಲು ಮನಸ್ಸು ಮಾಡುತ್ತಿಲ್ಲ. ಹಾಗಂತ ಫ್ಯಾಷನ್ ಲೋಕದ ರಂಗು ಮಾಸಿಲ್ಲ. ಮರುಬಳಕೆ ಹಾಗೂ ಇರುವುದರಲ್ಲೇ ಮಿಕ್ಸ್ ಅಂಡ್ ಮ್ಯಾಚ್‌ ಮಾಡಿಕೊಳ್ಳುವ ಟ್ರೆಂಡ್‌ ಅನ್ನು ಪರಿಚಯಿಸುತ್ತಿದ್ದಾರೆ ಫ್ಯಾಷನ್ ತಜ್ಞರು. ಈ ಮೂಲಕ ಫ್ಯಾಷನ್ ಲೋಕದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

‘ಈಗ ಬಹಳಷ್ಟು ಮಂದಿ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಕೆಲವರು ಕಚೇರಿಗೆ ತೆರಳಲು ಆರಂಭಿಸಿದ್ದಾರೆ. ಇತ್ತೀಚೆಗೆ ಮಹಿಳೆಯರು ಸ್ಟೈಲಿಷ್ ಎನ್ನುವುದಕ್ಕಿಂತ ಆರಾಮದಾಯಕ ಎನ್ನಿಸುವ ಉಡುಪುಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಈಗಿನ ಟ್ರೆಂಡ್ ಎಂದರೆ ಜೀನ್ಸ್ ಮೇಲೆ ಲಾಂಗ್‌ ಅಥವಾ ಶಾರ್ಟ್ ಕುರ್ತಾ, ಚೂಡಿದಾರ್ ಟಾಪ್ ಧರಿಸುವುದು. ಇದು ಇಂದಿನ ಟ್ರೆಂಡ್. ಜೊತೆಗೆ ಧರಿಸಿದರೆ ಸ್ಟೈಲಿಶ್‌ ಆಗಿ ಕಾಣಿಸಬಹುದು. ಜೀನ್ಸ್‌ನೊಂದಿಗೆ ನಿಮ್ಮ ಬಳಿ ಇರುವ ಹಳೆಯ ಚೂಡಿದಾರ್ ಟಾಪ್ ಅನ್ನೇ ಮಿಕ್ಸ್ ಅಂಡ್ ಮ್ಯಾಚ್ ಮಾಡಿಕೊಳ್ಳಬಹುದು. ಇದರಿಂದ ಟ್ರೆಂಡ್‌ಗೆ ತೆರೆದುಕೊಂಡಂತಾಗುವುದಲ್ಲದೇ ಮರುಬಳಕೆಗೂ ಒತ್ತು ನೀಡಿದಂತಾಗುತ್ತದೆ. ಚೂಡಿದಾರ್ ಟಾಪ್‌ನಂತೆ ಇನ್ನೂ ಕೆಲವು ಸರಳ ವಿನ್ಯಾಸದ ಟಾಪ್‌ಗಳನ್ನು ಜೀನ್ಸ್ ಜೊತೆ ತೊಡುವುದರಿಂದ ಸುಂದರವಾಗಿ ಕಾಣಬಹುದು’ ಎನ್ನುತ್ತಾರೆ ವಸ್ತ್ರ ವಿನ್ಯಾಸಕಿ ಶಿಲ್ಪಿ ಚೌಧರಿ.

ಜೀನ್ಸ್ ಜೊತೆ ಬಟನ್‌ ಡೌನ್‌ ಶರ್ಟ್‌

ADVERTISEMENT

ಜೀನ್ಸ್ ಮೇಲೆ ಉದ್ದನೆಯ ಶರ್ಟ್ ರೂಪದ ಟಾಪ್‌ ಧರಿಸಬಹುದು. ಸಾಮಾನ್ಯವಾಗಿ ಗಂಡಸರ ಶರ್ಟ್‌ನಂತೆ ಹೋಲುವ ಈ ಟಾಪ್‌ ದೊಡ್ಡ ದೊಡ್ಡ ಬಟನ್‌ಗಳನ್ನು ಹೊಂದಿರುತ್ತದೆ. ಮುಂದೆ ಗಿಡ್ಡವಾಗಿದ್ದು, ಹಿಂದೆ ಉದ್ದವಾಗಿರುವ ಈ ಟಾಪ್‌ ಜೀನ್ಸ್ ಮೇಲೆ ಹೆಚ್ಚು ಹೊಂದುತ್ತದೆ. ಕಡುನೀಲಿ ಬಣ್ಣದ ಜೀನ್ಸ್ ಜೊತೆಗೆ ತಿಳಿ ಆಕಾಶನೀಲಿ, ತಿಳಿ ಗುಲಾಬಿಯಂತಹ ಶರ್ಟ್‌ಗಳು ಹೆಚ್ಚು ಹೊಂದುತ್ತವೆ. ಶರ್ಟ್‌ ರೀತಿಯ ಈ ಡ್ರೆಸ್‌ಗಳು ಕೊಂಚ ಸಡಿಲವಾಗಿದ್ದು ದಪ್ಪ ಇರುವವರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಎಲ್ಲಾ ಕಾಲದಲ್ಲೂ ಸಲ್ಲುವಂತಿದ್ದು ಟ್ರೆಂಡಿ ಆಗಿಯೂ ಕಾಣಿಸುತ್ತದೆ.

ಟ್ಯೂನಿಕ್ ಟಾಪ್‌

ಸಾದಾ ಟ್ಯೂನಿಕ್ ಟಾಪ್‌ ಅನ್ನು ಕೂಡ ಜೀನ್ಸ್ ಜೊತೆ ಮ್ಯಾಚಿಂಗ್ ಮಾಡಿಕೊಳ್ಳಬಹುದು. ಮೊಣಕಾಲಿಗಿಂತ ಉದ್ದ ಅಥವಾ ಗಿಡ್ಡವಿರುವ ಯಾವುದೇ ಟ್ಯೂನಿಕ್ ಟಾಪ್‌ ಅನ್ನು ಕೂಡ ಜೀನ್ಸ್ ಜೊತೆ ಧರಿಸಬಹುದು. ಸಾಮಾನ್ಯವಾಗಿ ಪ್ರಿಂಟ್‌ ಇಲ್ಲದ ವಿವಿಧ ಬಣ್ಣದ ಟ್ಯೂನಿಕ್‌ ಟಾಪ್‌ಗಳು ಜೀನ್ಸ್‌ಗೆ ಹೆಚ್ಚು ಹೊಂದುತ್ತವೆ. ಇದರೊಂದಿಗೆ ಹೂವಿನ ಚಿತ್ತಾರದ, ಟೈ ಅಂಡ್ ಡೈ ಚಿತ್ತಾರದ ಉದ್ದನೆಯ ಟಾಪ್‌ ಕೂಡ ಜೀನ್ಸ್ ಜೊತೆ ಧರಿಸಲು ಆರಾಮದಾಯಕ ಎನ್ನಿಸುತ್ತದೆ. ಗಿಡ್ಡನೆಯ ಟ್ಯೂನಿಕ್ ಟಾಪ್ ಮೇಲೆ ಬೆಂಗಾಲಿ ಶೈಲಿಯ ‘ಕಾಂತ ಕಸೂತಿ’ ಇರುವ ಟಾಪ್‌ ಸುಂದರವಾಗಿ ಕಾಣುತ್ತದೆ. ಇದನ್ನು ಶಾಪಿಂಗ್‌, ಸಣ್ಣ ಪುಟ್ಟ ಪಾರ್ಟಿ, ಕಾರ್ಯಕ್ರಮಗಳಿಗೂ ಧರಿಸಬಹುದು. ಜೀನ್ಸ್ ಜೊತೆ ಇದನ್ನು ಧರಿಸಿದಾಗ ಶೂ, ಚಪ್ಪಲಿ ಯಾವುದನ್ನು ಬೇಕಾದರೂ ಧರಿಸಬಹುದು.

ಬಯಾಸ್ ಕಟ್ ಟಾಪ್‌

ಎರಡೂ ಬದಿಯಲ್ಲಿ ಗಿಡ್ಡವಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಉದ್ದಕ್ಕೆ ಇಳಿ ಬಿಟ್ಟುಕೊಂಡಿರುವ ಡ್ರೆಸ್‌ಗೆ ಬಯಾಸ್ ಕಟ್ ಟಾಪ್ ಎನ್ನುತ್ತಾರೆ. ಸಾಮಾನ್ಯವಾಗಿ ಲೆಗ್ಗಿಂಗ್ಸ್ ಅಥವಾ ಜೀನ್ಸ್ ಜೊತೆ ಹೆಚ್ಚು ಹೊಂದುತ್ತದೆ. ಜೀನ್ಸ್ ಜೊತೆ ಹೊಂದಿಕೊಳ್ಳುವ ಈ ಹೊಸ ಟ್ರೆಂಡ್‌ನ ಟಾಪ್‌ ಎರಡೂ ಕಡೆ ಪೊಕೆಟ್ ಹೊಂದಿರುತ್ತದೆ. ಪೂರ್ವ ಏಷ್ಯಾ ಭಾಗದಲ್ಲಿ ಈ ಡ್ರೆಸ್‌ನ ಬಳಕೆ ಹೆಚ್ಚಿದೆ. ಸ್ಟೈಲಿಶ್‌ ನೋಟ ಇಷ್ಟಪಡುವ ಹೆಣ್ಣುಮಕ್ಕಳು ಈ ಡ್ರೆಸ್‌ ಅನ್ನು ಧರಿಸುವುದರಿಂದ ಇನ್ನಷ್ಟು ಸ್ಟೈಲಿಶ್ ಆಗಿ ಕಾಣಬಹುದು.

ಚಿತ್ರ: ಪ್ರಶಾಂತ್ ಎಚ್. ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.