ADVERTISEMENT

ಬೀದರ್‌: ಲಿಂಗಾಯತ, ಮರಾಠ ಮುಖಂಡರೊಂದಿಗೆ ಬಿಎಸ್‌ವೈ ಮಾತುಕತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 13:00 IST
Last Updated 25 ಏಪ್ರಿಲ್ 2024, 13:00 IST
   

ಬೀದರ್‌: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಜಿಲ್ಲೆಯಲ್ಲಿ ದಿನವಿಡೀ ಬಿರುಸಿನ ಪ್ರಚಾರ ಕೈಗೊಂಡರು. ಲಿಂಗಾಯತ, ಮರಾಠ ಮುಖಂಡರೊಂದಿಗೆ ಪ್ರತ್ಯೇಕ ಗೌಪ್ಯ ಸಭೆ ನಡೆಸಿದರು.

ಇತ್ತೀಚೆಗೆ ನಿಧನರಾದ ಮಾಜಿಶಾಸಕ ರಮೇಶಕುಮಾರ ಪಾಂಡೆ ಅವರ ಮನೆಗೆ ಭೇಟಿ ಕೊಟ್ಟು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಜಿಲ್ಲೆಯ ಔರಾದ್‌ನಲ್ಲಿ ಪ್ರಚಾರ ಸಭೆ ನಡೆಸಿದ ಅವರು, ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕ ಕಾಂಗ್ರೆಸ್‌ನಲ್ಲಿ ಸಿಗುವುದಿಲ್ಲ ಎಂದು ಹೇಳಿದರು.

ADVERTISEMENT

ಕಾಂಗ್ಸ್‌ನಲ್ಲಿ ಪ್ರಧಾನಿ ಯಾರು ಎಂಬುದು ಅವರಲ್ಲೇ ಗೊಂದಲ ಇದೆ. ಹೀಗಾಗಿ ಕಾಂಗ್ರೆಸ್‌ನವರು ಏನೇ ಅಪಪ್ರಚಾರ ಮಾಡಿದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಇಟ್ಟುಕೊಂಡ ಭರವಸೆ ಹುಸಿಯಾಗಿದೆ. ಎಲ್ಲ ಕಡೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಜನರ ಕೆಲಸ ಒಂದೂ ಆಗುತ್ತಿಲ್ಲ. ದಿವಾಳಿ ಅಂಚಿಗೆ ತಲುಪಿರುವ ಇಂತಹ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ. ಜೆಡಿಎಸ್‌ ಜತೆ ಸೇರಿ ಚುನಾವಣೆ ಎದುರಿಸುತ್ತಿರುವುದರಿಂದ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲುವುದೇ ನಾವೇ ಎಂದರು.

ಔರಾದ್‌ನಿಂದ ಬೀದರ್‌ಗೆ ಮರಳಿದ ಅವರು ಜಿಲ್ಲೆಯ ಮಠಾಧೀಶರು, ಲಿಂಗಾಯತ ಹಾಗೂ ಮರಾಠ ಸಮಾಜದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಗೌಪ್ಯ ಸಭೆ ನಡೆಸಿದರು. ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಿದರು. ಔರಾದ್‌ ಶಾಸಕ ಪ್ರಭು ಚವಾಣ್‌ ಅವರು ಪ್ರಚಾರದಿಂದ ದೂರ ಉಳಿದಿರುವುದರ ಕುರಿತು ಮಾಧ್ಯಮದವರು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದಾಗ, ಸಿಟ್ಟಾಗಿ ಏನೂ ಮಾತಾಡಲಾರದೆ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.