ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ನು ಕರಾವಳಿಯ ಸ್ವಾದ

ಪಿ.ವಿ.ಪ್ರವೀಣ್‌ ಕುಮಾರ್‌
Published 25 ಸೆಪ್ಟೆಂಬರ್ 2023, 6:24 IST
Last Updated 25 ಸೆಪ್ಟೆಂಬರ್ 2023, 6:24 IST
ಮಂಗಳೂರಿನ ಲೇಡಿಗೋಷನ್‌ ಬಳಿಯ ಇಂದಿರಾ ಕ್ಯಾಂಟಿನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಲೇಡಿಗೋಷನ್‌ ಬಳಿಯ ಇಂದಿರಾ ಕ್ಯಾಂಟಿನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: 'ಇಂದಿರಾ ಕ್ಯಾಂಟೀನ್‌ನಲ್ಲಿ ಸ್ಥಳೀಯ ಸ್ವಾದದ ಆಹಾರ ಸಿಗುತ್ತಿಲ್ಲ. ಹಾಗಾಗಿ ಊಟ ಹಾಗೂ ತಿನಿಸುಗಳು ನಮಗೆ ಅಷ್ಟಾಗಿ ರುಚಿಸುತ್ತಿಲ್ಲ...'

ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ತೊಕ್ಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಈಚೆಗೆ ಭೇಟಿ ನೀಡಿ, ಸ್ಥಳೀಯರನ್ನು ವಿಚಾರಿಸಿದಾಗ ಸಿಕ್ಕ ಪ್ರತಿಕ್ರಿಯೆ ಇದು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ಥಳೀಯ ಆಹಾರಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಸ್ವಾದದ ಆಹಾರವನ್ನು ನೀಡಲು ಜಿಲ್ಲಾಡಳಿತವು ಸಿದ್ಧತೆ ನಡೆಸಿದೆ.

'ಆಹಾರದಲ್ಲಿ ಮಧ್ಯಾಹ್ನದ ಊಟಕ್ಕೆ ಕುಚ್ಚಲಕ್ಕಿ ನೀಡಲು ಈಗಾಗಲೇ ಆರಂಭಿಸಲಾಗಿದೆ.  ಉಪಾಹಾರಕ್ಕೆ ಸ್ಥಳೀಯರು ಇಷ್ಟ ಪಡುವ ಪದೆಂಜಿ (ಹೆಸರುಕಾಳು ಉಸುಳಿ), ಸಜ್ಜಿಗೆ ಬಜಿಲ್‌ (ಉಪ್ಪಿಟ್ಟು ಅವಲಕ್ಕಿ), ಪುಂಡಿ ಗಸಿ (ಕಡುಬು ಗಸಿ), ಸೇಮಿಗೆ ತೋವೆ (ಶಾವಿಗೆ ತೋವೆ), ನೀರು ದೋಸೆ– ಚಟ್ನಿ, ಓಡುಪಾಳೆ ಹಾಗೂ ಮಂಗಳೂರು ಬನ್ಸ್‌ನಂತಹ ತಿನಿಸುಗಳನ್ನು ನೀಡಲು ಸಿದ್ಧತೆ ಆರಂಭಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಿತ್ಯವೂ ಇಷ್ಟೊಂದು ವೈವಿಧ್ಯದ ಆಹಾರ ನೀಡಲು ಸಾಧ್ಯವಾಗದು. ಆದರೆ, ಈಗ ನಿಗದಿ ಪಡಿಸಿದ ದರದಲ್ಲಿ ನಿತ್ಯವೂ ಒಂದಾದರೂ ಸ್ಥಳೀಯ ಸ್ವಾದದ ಆಹಾರ ಒದಗಿಸಲಿದ್ದೇವೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ವಿವರಿಸಿದರು. 

ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಸ್ವಾದದ ಆಹಾರ ನೀಡುವ ನಿರ್ಧಾರ ಇಲ್ಲಿನ ಸಿಬ್ಬಂದಿಯೂ ಸ್ವಾಗತಿಸಿದ್ದಾರೆ.

‘ನಮ್ಮಲ್ಲಿ ಉಪಾಹಾರಕ್ಕೆ ಉಪ್ಪಿಟ್ಟು, ಶೀರಾ, ಪಲಾವ್‌ ಮಾತ್ರ ನೀಡುತ್ತಿದ್ದೇವೆ. ಇಲ್ಲಿಗೆ ಬರುವ ಅನೇಕರು ಸ್ಥಳೀಯ ತಿನಿಸುಗಳನ್ನು ಕೇಳುತ್ತಾರೆ. ನೀರು ದೋಸೆ, ಓಡುಪಾಳೆ, ಸೇಮಿಗೆ ತೋವೆಯಂತಹ ಉಪಾಹಾರ ನೀಡಿದರೆ ಕಂಡಿತಾ ಸ್ಥಳೀಯರಿಗೆ ಇಷ್ಟವಾಗುತ್ತದೆ’ ಎಂದು ಲೇಡಿಗೋಷನ್‌ ಬಳಿಯ ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿ ಶ್ರೀಧರ್‌ ಅಭಿಪ್ರಾಯಪಟ್ಟರು.

‘ಈ ಕ್ಯಾಂಟೀನ್‌ನ ಗ್ರಾಹಕರಲ್ಲಿ ಬಸ್‌ ನಿರ್ವಾಹಕರು, ರಿಕ್ಷಾ, ಟೆಂಪೊ ಚಾಲಕರು, ವಿದ್ಯಾರ್ಥಿಗಳು, ಲೇಡಿಗೋಷನ್‌ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಬರುವವರೇ ಜಾಸ್ತಿ’ ಎಂದು ಅವರು ತಿಳಿಸಿದರು.

ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಊಟೋಪಾಹಾರಕ್ಕೆ ಹೆಚ್ಚು ಬೇಡಿಕೆ ಇದೆ. ವಲಸೆ ಕಾರ್ಮಿಕರು, ಬೇರೆ ಬೇರೆ ಜಿಲ್ಲೆಗಳಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಯಾಂಟೀನ್‌ಗಳಿಗೆ ಭೇಟಿ ನೀಡುತ್ತಿದ್ದಾರೆ.

’ನಾನು ಕುಷ್ಟಗಿಯವಳು. ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಪ್ರತಿ ಊರಿನಲ್ಲೂ ಇಂದಿರಾ ಕ್ಯಾಂಟೀನ್‌ ಇದೆ. ಹಾಗಾಗಿ ನಾವು ಪ್ರಯಾಣಿಸುವಾಗಲೆಲ್ಲ ಈ ಕ್ಯಾಂಟೀನ್‌ಗಳಲ್ಲೇ ಆಹಾರ ಸೇವಿಸುತ್ತೇವೆ. ಇದರಿಂದ ನಮ್ಮಂಥ ಬಡವರಿಗೆ ತುಂಬಾ ಅನುಕೂಲವಾಗಿದೆ’ ಎನ್ನುತ್ತಾರೆ ಕೆಂಚಮ್ಮ. 

ದುಡಿಮೆಗಾಗಿ ನಗರಕ್ಕೆ ವಲಸೆ ಬಂದಿರುವ ಅಸ್ಸಾಂನ ಅಬ್ದುಲ್‌ ಅವರೂ ಇಂದಿರಾ ಕ್ಯಾಂಟೀನ್‌ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಮಂಗಳೂರಿನಂತಹ ನಗರದಲ್ಲಿ ನಮ್ಮ ದುಡಿಮೆಯ ಬಹುಪಾಲು ಹಣ ಹೋಟೆಲ್‌ ಆಹಾರಕ್ಕೆ ವೆಚ್ಚವಾಗುತ್ತಿತ್ತು. ಕೆಲವು ತಿಂಗಳುಗಳಿಂದ ಇಂದಿರಾ ಕ್ಯಾಂಟೀನ್‌ನಲ್ಲೇ ನಾವು ಊಟ ಮಾಡುತ್ತಿದ್ದೇವೆ. ನಮಗೆ ಹಣವೂ ಉಳಿತಾಯವಾಗುತ್ತಿದೆ. ಉತ್ತಮ ಆಹಾರವೂ ಸಿಗುತ್ತಿದೆ’ ಎಂದು ಅವರು ತಿಳಿಸಿದರು.

 ಬಿ.ಸಿ.ರೋಡ್‌ನ ಪುರುಷೋತ್ತಮ ಅವರದು ಕೂಲಿ ಕೆಲಸ. ‘ಖಾಸಗಿ ಹೋಟೆಲ್‌ಗಳಲ್ಲಿ ಊಟ– ತಿಂಡಿಗೆ ನಮ್ಮ ದುಡಿಮೆಯಲ್ಲಿ ನಿತ್ಯ ₹ 200 ತೆಗೆದಿಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಮೂರು ಹೊತ್ತಿನ ಊಟೋಪಾಹಾರಕ್ಕೆ ₹ 50 ಕೂಡ ಖರ್ಚಾಗದು. ಕೂಲಿ–ನಾಲಿ ಮಾಡಿಕೊಂಡು ಬದುಕುವ ನಮ್ಮಂತವರಿಗೆ ಇಂದಿರಾ ಕ್ಯಾಂಟೀನ್‌ನಿಂದ ಬಹಳಷ್ಟು ಪ್ರಯೋಜನವಾಗಿದೆ’ ಎಂದು ಅವರು ತಿಳಿಸಿದರು. 

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಐದು ಇಂದಿರಾ ಕ್ಯಾಂಟೀನ್‌ಗಳಿವೆ. ಅವುಗಳಲ್ಲಿ ಪಂಪ್‌ವೆಲ್‌ ಹಾಗೂ ಕಾವೂರಿನ ಇಂದಿರಾ ಕ್ಯಾಂಟೀನ್‌ಗಳಿಗೆ ಅಷ್ಟಾಗಿ ಗ್ರಾಹಕರು ಬರುತ್ತಿಲ್ಲ. ಲೇಡಿಗೋಷನ್‌, ಉರ್ವ ಸ್ಟೋರ್ ಹಾಗೂ ಸುರತ್ಕಲ್‌ ಮಾರುಕಟ್ಟೆ ಬಳಿಯ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು ಇದೆ.

ನಗರದ ಖಾಸಗಿ ಬಸ್‌ ನಿಲ್ದಾಣ ಹಾಗೂ ಲೇಡಿಗೋಷನ್‌ ಆಸ್ಪತ್ರೆ ಬಳಿ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ ಸಂಜೆ ಹಾಗೂ ರಾತ್ರಿ ಸೇರಿ ಒಟ್ಟು 1050ಕ್ಕೂ ಹೆಚ್ಚು ಮಂದಿ ಆಹಾರ ಖರೀದಿಸುತ್ತಿದ್ದಾರೆ. ಪುತ್ತೂರಿನ ಕ್ಯಾಂಟೀನ್‌ನಲ್ಲೂ ನಿತ್ಯ ಸರಾಸರಿ ಸಾವಿರಕ್ಕೂ ಹೆಚ್ಚು ಮಂದಿ ಆಹಾರ ಸೇವಿಸುತ್ತಿದ್ದಾರೆ. ಸುಳ್ಯದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ 200 ಮಂದಿ ಊಟ ಮಾಡುತ್ತಾರೆ. ಬಂಟ್ವಾಳದಲ್ಲಿ 600ಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಾರೆ. ರಾತ್ರಿ ವೇಳೆ ಬೇಡಿಕೆ ಕಡಿಮೆ ಇರುವ ಕಾರಣ ಊಟ ಉಳಿಯುತ್ತಿದೆ. 

‘ಜನ ನಿಬಿಡ ಪ್ರದೇಶದಲ್ಲಿ ಇರುವ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆಯೂ ಹೆಚ್ಚು. ಹಾಗಾಗಿ ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸಲು ಜನರ ಓಡಾಟ ಜಾಸ್ತಿ ಇರುವಂತಹ ಸ್ಥಳಗಳನ್ನು ಹುಡುಕಿದ್ದೇವೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶುಚಿತ್ವದ ಕೊರತೆ: ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿತ್ತು. ಆಹಾರ ಚೆಲ್ಲಿರುವುದು ಕಂಡು ಬಂತು. ಲೇಡಿಗೋಷನ್‌ ಬಳಿಯ ಕ್ಯಾಂಟೀನ್‌ ಪಕ್ಕದಲ್ಲೇ ಮಳೆ ನೀರು ನಿಲ್ಲುತ್ತದೆ. ಸಮೀಪದಲ್ಲೇ ಕೋಳಿ ಮಾಂಸ ಮಾರಾಟ ಮಳಿಗೆಗಳಿದ್ದು, ಈ ಪ್ರದೇಶ ದುರ್ವಾಸನೆಯಿಂದ ಕೂಡಿದೆ. 

ಲೇಡಿಗೋಷನ್‌ ಬಳಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಖರೀದಿಸುತ್ತಿರುವ ಗ್ರಾಹಕರು

‘ಕೇವಲ ₹ 5ಕ್ಕೆ ಉಪಾಹಾರ ಹಾಗೂ ₹ 10ಕ್ಕೆ ಊಟ ನೀಡುವುದರಿಂದ ಖಂಡಿತಾ ನಮ್ಮಂಥ ಮಧ್ಯಮ ವರ್ಗದವರಿಗೆ ಅನುಕೂಲವೇ. ಆಹಾರದ ಗುಣಮಟ್ಟದ ಬಗ್ಗೆ ನಮಗೆ ತಕರಾರು ಇಲ್ಲ. ಕ್ಯಾಂಟೀನ್‌ ಒಳಗೆ ಹಾಗೂ ಹೊರಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದವರೊಬ್ಬರು ಸಲಹೆ ನೀಡಿದರು.Quote - ಇಂದಿರಾ ಕ್ಯಾಂಟೀನ್‌ ಇರುವುದರಿಂದ ನಮ್ಮಲ್ಲಿ ಹೆಚ್ಚು ಹಣ ಇಲ್ಲದಿದ್ದರೂ ಹೊಟ್ಟೆ ತುಂಬಾ ಊಟಕ್ಕೆ ಕೊರತೆ ಇಲ್ಲ. ಇದು ಉತ್ತಮ ಯೋಜನೆ ಕೆಂಚಮ್ಮ ಗ್ರಾಹಕಿ

ಇಂದಿರಾ ಕ್ಯಾಂಟೀನ್‌ ಆರಂಭವಾದಂದಿನಿಂದಲೂ ಆಗಾಗ ಊಟಕ್ಕೆ ಬರುತ್ತಿದ್ದೇನೆ. ದುಡಿದು ಉಣ್ಣುವ ನಮ್ಮಂತಹವರಿಗೆ ಈ ಕ್ಯಾಂಟೀನ್‌ನಲ್ಲಿ ಕಡಿಮೆ ಖರ್ಚಿನಲ್ಲ ಉತ್ತಮ ಊಟ ಸಿಗುತ್ತಿದೆ
– ಪುರುಷೋತ್ತಮ, ಗ್ರಾಹಕ
ಇಂದಿರಾ ಕ್ಯಾಂಟೀನ್‌ನ ಆಹಾರವು ಗುಣಮಟ್ಟದಲ್ಲಿ ಯಾವುದೇ ಕೊರತೆ ಕಾಣದು. ಈ ಕ್ಯಾಂಟೀನ್‌ನಿಂದ ನಮ್ಮಂತಹ ಬಡವರಿಗೆ ಬಹಳ ಅನುಕೂಲ
– ಅಬ್ದುಲ್‌, ಗ್ರಾಹಕ
ಇಂದಿರಾ ಕ್ಯಾಂಟೀನ್‌ ಇರುವುದರಿಂದ ನಮ್ಮಲ್ಲಿ ಹೆಚ್ಚು ಹಣ ಇಲ್ಲದಿದ್ದರೂ ಹೊಟ್ಟೆ ತುಂಬಾ ಊಟಕ್ಕೆ ಕೊರತೆ ಇಲ್ಲ. ಇದು ಉತ್ತಮ ಯೋಜನೆ
–ಕೆಂಚಮ್ಮ, ಗ್ರಾಹಕಿ
ದುರಸ್ತಿಗೆ ₹ 79 ಲಕ್ಷ ಪ್ರಸ್ತಾವ
ಜಿಲ್ಲೆಯಲ್ಲಿ ಆರಂಭವಾದ ಕೆಲವು ಇಂದಿರಾ ಕ್ಯಾಂಟೀನ್‌ಗಳಿಗೆ ಆರು ವರ್ಷಗಳು ಕಳೆದಿವೆ. ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂಲಸೌಕರ್ಯ ನಿರ್ವಹಣೆ ಸರಿಯಾಗಿಲ್ಲ. ಲೋಟ ಪ್ಲೇಟುಗಳು ಹಳತಾಗಿವೆ. ಲೇಡಿಗೋಷನ್‌ ಬಳಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮೆರಾ ಕಳವಾಗಿದೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದನ್ನು ಗಮನಿಸಿರುವ ಸರ್ಕಾರ ಇವುಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದೆ. ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಸ್ಪರ್ಶ ನೀಡಲು ಜಿಲ್ಲಾಡಳಿತ ₹ 79 ಲಕ್ಷದ ಪ್ರಸ್ತಾವ ಸಿದ್ಧಪಡಿಸಿದೆ. ‘ಪಾಲಿಕೆ ವ್ಯಾಪ್ತಿಯಲ್ಲಿರುವ ಐದು ಹಾಗೂ ಬೇರೆ ಕಡೆಗಳಲ್ಲಿರುವ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿಗೆ ಏನೇನು ಅಗತ್ಯಗಳಿವೆ ಎಂಬುದನ್ನು ಪಟ್ಟಿ ಮಾಡಿದ್ದೇವೆ. ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳನ್ನು ₹ 30 ಲಕ್ಷ ಹಾಗೂ ಉಳಿದ ಕಡೆಯ ಇಂದಿರಾ ಕ್ಯಾಂಟೀನ್‌ಗಳನ್ನು  ₹ 49 ಲಕ್ಷ ವೆಚ್ಚದಲ್ಲಿ ದುರಸ್ತಿಪಡಿಸುವ ಪ್ರಸ್ತಾವ ಸಿದ್ಧಪಡಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.