ADVERTISEMENT

ಕೊಡಗು | ಶಾಂತಿಯುತವಾಗಿ ನಡೆದ ಜನತಂತ್ರದ ಹಬ್ಬ

ಲೋಕಸಭಾ ಚುನಾವಣೆಯ ಮತದಾನಕ್ಕೆ ಕೊಡಗಿನ ಜನರಿಂದ ಭರಪೂರ ಸ್ಪಂದನೆ

ಕೆ.ಎಸ್.ಗಿರೀಶ್
Published 27 ಏಪ್ರಿಲ್ 2024, 7:03 IST
Last Updated 27 ಏಪ್ರಿಲ್ 2024, 7:03 IST
ಮಡಿಕೇರಿಯ ಹಿಲ್ ರಸ್ತೆಯ ಮತಗಟ್ಟೆಗೆ ಹಿರಿಯ ನಾಗರಿಕರೊಬ್ಬರನ್ನು ಮತದಾನ ಮಾಡಲು ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಬರಲಾಯಿತು
ಮಡಿಕೇರಿಯ ಹಿಲ್ ರಸ್ತೆಯ ಮತಗಟ್ಟೆಗೆ ಹಿರಿಯ ನಾಗರಿಕರೊಬ್ಬರನ್ನು ಮತದಾನ ಮಾಡಲು ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಬರಲಾಯಿತು   

ಮಡಿಕೇರಿ: ‘ಜನತಂತ್ರದ ಹಬ್ಬ’ ಎಂದೇ ಪರಿಗಣಿತವಾದ ಲೋಕಸಭಾ ಚುನಾವಣೆ ಶುಕ್ರವಾರ ಕೊಡಗು ಜಿಲ್ಲೆಯಲ್ಲಿ ಶಾಂತಿಯುತವಾಗಿ ಪೂರ್ಣಗೊಂಡಿತು. ನಕ್ಸಲರ ಕರಿನೆರಳಿನ ಆತಂಕ ಮಧ್ಯೆಯೂ ಪೊಲೀಸರಾದಿಯಾಗಿ ಚುನಾವಣಾ ಸಿಬ್ಬಂದಿ ಯಶಸ್ವಿಯಾಗಿ ಪ್ರಜಾತಂತ್ರದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಬಹುತೇಕ ಮತಗಟ್ಟೆಗಳಿಗೆ ಬೆಳಿಗ್ಗೆಯಿಂದಲೇ ಜನರು ಬರಲಾರಂಭಿಸಿದರು. ಬೆಳಿಗ್ಗೆ ಉಪಾಹಾರದ ಸಮಯ ದಾಟುತ್ತಿದ್ದಂತೆ ಉದ್ದನೆಯ ಸಾಲುಗಳು ಕಂಡು ಬಂದವು. ಮಧ್ಯಾಹ್ನ ನಿಗಿನಿಗಿ ಸುಡುತ್ತಿದ್ದ ಬಿಸಿಲಿಗೂ ಬಸವಳಿಯದ ಮತದಾರರು ಮತಗಟ್ಟೆಗಳತ್ತ ಬಂದರು. ಸಂಜೆಯಾಗುತ್ತಲೇ ಮತದಾನದ ಪ್ರಕ್ರಿಯೆ ಬಹುತೇಕ ಕಡೆ ಪೂರ್ಣಗೊಂಡಿತು.

ಕಾಡಂಚಿನ ಭಾಗಗಳ ಮತಗಟ್ಟೆಗಳಲ್ಲೂ ಬಿರುಸಿನ ಮತದಾನ ನಡೆದಿತ್ತು. ದುಬಾರೆ ಹಾಡಿ, ವಣಚಲು ಗ್ರಾಮ ಸೇರಿದಂತೆ ಹಲವೆಡೆ ಮಧ್ಯಾಹ್ನದ ಹೊತ್ತಿಗೆ ಅರ್ಧದಷ್ಟು ಮಂದಿ ಮತದಾನ ಮಾಡಿದ್ದರು. ಎಲ್ಲೆಡೆ ಶಾಂತಿಯುತವಾಗಿತ್ತು.

ADVERTISEMENT

ಹೆರೂರು ಗ್ರಾಮದ ಸಾಂಪ್ರದಾಯಿಕ ಮತಗಟ್ಟೆ ಹಾಗೂ ನಾಗರಹೊಳೆಯ ಆಶ್ರಮಶಾಲೆಯ ಮತಗಟ್ಟೆಗೆ ಬಂದ ಬುಡಕಟ್ಟು ಜನರು ಮತದಾನ ಮಾಡಿ ಸಂಭ್ರಮಿಸಿದ್ದು ವಿಶೇಷ ಎನಿಸಿತು. ಪೊನ್ನಂಪೇಟೆಯ ಸಖಿ ಮತಗಟ್ಟೆ, ಮಾಯಮುಡಿಯ ಮತಗಟ್ಟೆಗಳಲ್ಲಿ ಮಹಿಳೆಯರು ಮತದಾನ ಮಾಡಿ ಸೆಲ್ಫಿ ತೆಗೆದುಕೊಂಡರು. ‘ನಾನು ಮತ ಚಲಾಯಿಸಿದ್ದೇನೆ. ನಾನೂ ಕೂಡ ಚಾಂಪಿಯನ್’ ಎಂಬ ಫಲಕದೊಳಗೆ ನಿಂತು ಫೋಟೊ ತೆಗೆಸಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಖುಷಿಪಟ್ಟರು.

ಕುಶಾಲನಗರದ ಮುಳ್ಳುಸೋಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ‘ಸಖಿ ಮತಗಟ್ಟೆ’ಗೆ ಬಂದ ಸಾರ್ವಜನಿಕರು ಮತ ಚಲಾಯಿಸಿ ಫಲಕದೊಳಗೆ ಮತದಾನ ಮಾಡಿ ಎಂದು ಪ್ರೇರೇಪಣೆ ನೀಡುವ ಮಾತುಗಳನ್ನಾಡಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚುರಪಡಿಸಿದರು. ಈ ಮೂಲಕ ಇತರರೂ ಮತದಾನ ಮಾಡಲು ಪ್ರೇರೇಪಣೆ ನೀಡಿದರು.

ಕಾಡಂಚಿನ ಜನರಿಗೆ ರಕ್ಷಣೆ ನೀಡಲು ಪೊಲೀಸರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಇದ್ದರು. ವಣಚಲು, ಕಡಮಕಲ್ಲು ಭಾಗದಲ್ಲಿ ನಕ್ಸಲರು ಸುಳಿಯಬಹುದೆಂಬ ಸಂಶಯದಿಂದ ನಕ್ಸಲ್ ನಿಗ್ರಹ ಪಡೆಯ ಯೋಧರು ಕಾಡಿನೊಳಗೆ ಗಸ್ತುಕಾರ್ಯ ನಡೆಸಿದರು. ಇಂತಹ ಮತಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೆದಕಲ್, ಶಾಂತಳ್ಳಿ ಸೇರಿದಂತೆ ಕೆಲವು ಮತಯಂತ್ರಗಳಲ್ಲಿ ಕೆಲ ಸಮಯ ತಾಂತ್ರಿಕ ದೋಷಗಳು ಕಂಡು ಬಂದಿದ್ದರಿಂದ ಮತದಾನ ನಿಧಾನಗತಿಯಲ್ಲಿ ನಡೆಯಿತು. ಕೆಲವೆಡೆ ಸ್ಥಗಿತಗೊಂಡಾದ ಕೂಡಲೇ ಚುನಾವಣಾ ಸಿಬ್ಬಂದಿ ಸ್ಪಂದಿಸಿದರು.

ಸಂಜೆಯ ನಂತರ ಹೆಚ್ಚು ಜನರು ಬಂದ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಿಕೊಟ್ಟು, ಬೇಗನೇ ಮತದಾನದ ಪ್ರಕ್ರಿಯೆ ಮುಗಿಯುವಂತೆ ಮಾಡಲು ಜಿಲ್ಲಾಡಳಿತ ಶ್ರಮಿಸಿತು.

ಮೊದಲ ಎರಡು ಗಂಟೆಯಲ್ಲೇ ಶೇ 12ಕ್ಕೂ ಅಧಿಕ ಮತದಾನ!

ಮತದಾನ ಆರಂಭವಾದ ಮೊದಲ ಎರಡು ಗಂಟೆಗಳಲ್ಲೇ ಶೇ 12ಕ್ಕೂ ಅಧಿಕ ಮತದಾನವಾಗಿತ್ತು. ನಂತರ, ಬೆಳಿಗ್ಗೆ 11ರ ಹೊತ್ತಿಗೆ ಶೇ 29.90, ಮಧ್ಯಾಹ್ನ 1ಕ್ಕೆ ಶೇ 47.96,  ಮಧ್ಯಾಹ್ನ 3ರ ವೇಳೆಗೆ ಶೇ 57.62, ಸಂಜೆ 5 ಗಂಟೆ ವೇಳೆಗೆ ಶೇ 70.40 ರಷ್ಟು ಮತದಾನ ದಾಖಲಾಗಿತ್ತು.

ಮಡಿಕೇರಿಯ ಶಾಂತಿ ಚರ್ಚ್ ಎದುರಿನ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ಹಿರಿಯ ನಾಗರಿಕರೊಬ್ಬರನ್ನು ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಬರಲಾಯಿತು
ಮಡಿಕೇರಿಯ ಸಂತ ಮೈಕಲರ ಚರ್ಚ್‌ನ ಮತಗಟ್ಟೆಯಲ್ಲಿ ಶುಕ್ರವಾರ ಮತದಾನ ಮಾಡಲು ಉದ್ದನೆಯ ಸಾಲುಗಳಲ್ಲಿ ಜನರು ನಿಂತಿದ್ದರು
ಹೇರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬಂದ ಬುಡಕಟ್ಟು ಜನರು ಮತದಾನ ಮಾಡಿ ಸಂ‌ಭ್ರಮಿಸಿದ್ದು ಹೀಗೆ
ಮಾಯಮುಡಿಯ ಮತಗಟ್ಟೆಯಲ್ಲಿ ಹಾಕಲಾಗಿದ್ದ ಸೆಲ್ಫೀ ಜ್ಹೋನ್‌ನಲ್ಲಿ ಮತದಾನ ಮಾಡಿದ ಮಹಿಳೆಯರು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು
ಮತದಾನ  ಮಾಡಿದ ನಂತರ ಮಡಿಕೇರಿಯ ರಾಜಾಸೀಟ್ ಉದ್ಯಾನದ ಮುಂದೆ ಅಳವಡಿಸಲಾಗಿದ್ದ ‘ನಾನು ಮತ ಚಲಾಯಿಸಿದ್ದೇನೆ’ ಎಂಬ ಸಂದೇಶದ ಫಲಕದ ಮುಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಹಾಗೂ ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಫೋಟೊ ತೆಗೆಸಿಕೊಂಡರು
ಸಂಜಿತಾ ಮೊದಲ ಮತದಾರರು

- ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲೂ ಬಿರುಸು ಪಡೆದ ಮತದಾನ ಉದ್ದನೆಯ ಸಾಲುಗಳಲ್ಲಿ ನಿಂತ ಜನರು ಶಾಂತಿಯುತವಾಗಿ ನಡೆದ ಪ್ರಕ್ರಿಯೆ

ಮೊದಲ ಬಾರಿಗೆ ಮತದಾನ ಮಾಡಿ ನನಗೆ ಖುಷಿಯಾಗಿದೆ. ಎಲ್ಲರೂ ಮತದಾನ ಮಾಡಿ ಎಂದು ನಾನು ಹೇಳುತ್ತೇನೆ

-ಸಂಜೀತಾ ಮೊದಲ ಮತದಾರರು ದುಬಾರೆ ಹಾಡಿ ನಿವಾಸಿ.

ಜಿಲ್ಲಾಧಿಕಾರಿಯ ಜಾಗೃತಿ ಮುಖ್ಯ ಚುನಾವಣಾಧಿಕಾರಿ ಫೇಸ್‌ಬುಕ್‌ ಪುಟದಲ್ಲಿ! ಮತದಾನದ ದಿನವೂ ಕೊಡಗು ಜಿಲ್ಲಾಡಳಿತ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿತು. ನಗರದ ಪ್ರವಾಸಿ ಸ್ಥಳ ರಾಜಾಸೀಟ್ ಉದ್ಯಾನದ ಮುಂದೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮತ್ತು ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಅವರು ‘ನಾನು ಮತ ಚಲಾಯಿಸಿದ್ದೇನೆ’ ಎಂಬ ಸಂದೇಶದ ಫಲಕದ ಮುಂದೆ ಫೋಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದರು. ಈ ಚಿತ್ರವನ್ನು ಮುಖ್ಯ ಚುನಾವಣಾಧಿಕಾರಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲೂ ಹಂಚಿಕೊಂಡಿದ್ದು ವಿಶೇಷ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.