ADVERTISEMENT

ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ: ಬಿ.ವೈ.ವಿಜಯೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:00 IST
Last Updated 3 ಮೇ 2024, 14:00 IST
ಲಿಂಗಸುಗೂರಲ್ಲಿ ನಡೆದ ಪ್ರಚಾರ ಸಭೆಯನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು
ಲಿಂಗಸುಗೂರಲ್ಲಿ ನಡೆದ ಪ್ರಚಾರ ಸಭೆಯನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು   

ಲಿಂಗಸುಗೂರು: ‘ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗಿದೆ. ಹಣಕಾಸು ಮುಗ್ಗಟ್ಟು ಎದುರಾಗಿದೆ. ಕ್ಷೇತ್ರಗಳ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಲಿಂಗಸುಗೂರಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಗರೀಬಿ ಹಠಾವೋ, ಆರ್ಥಿಕ ಸ್ವಾವಲಂಬನೆ ಹೆಸರಲ್ಲಿ ಐದೂವರೆ ದಶಕ ರಾಜ್ಯ, ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‍ ಮಾಡಿದ್ದೇನು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳ ಅನುದಾನ ಕಡಿತಗೊಳಿಸಿ ಗ್ಯಾರಂಟಿ ಹೆಸರಲ್ಲಿ ಬಡವರ ಉದ್ಧಾರಕ್ಕೆ ಮುಂದಾಗಿದೆ. ಇದರಿಂದ ಯೋಜನೆಗಳ ಅನುಷ್ಠಾನ ವಿಫಲಗೊಂಡಿದೆ’ ಎಂದರು.

‘ಗ್ಯಾರಂಟಿ ನೆಪದಲ್ಲಿ ರಾಜ್ಯದ ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ತೆರಿಗೆ ಹೆಚ್ಚಿಸಿದೆ. ಬಸ್‍ ದರ ಹೆಚ್ಚಳ, ನೋಂದಣಿ ಕಚೇರಿ ಶುಲ್ಕ ದುಪ್ಪಟ್ಟು ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ಲೋಕಸಭಾ ಚುನಾವಣೆ ಮುಗಿದಾ ತಕ್ಷಣ ಗ್ಯಾರಂಟಿ ಕೊನೆಗೊಳ್ಳಲಿದೆ. ಮತ್ತೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗಲು ರಾಜಾ ಅಮರೇಶ್ವರ ನಾಯಕ ಅವರಿಗೆ ಮತ ನೀಡಿ ಗೆಲ್ಲಿಸಿರಿ’ ಎಂದು ಮನವಿ ಮಾಡಿದರು.

ADVERTISEMENT

ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಮಾತನಾಡಿ, ‘ಕಾಂಗ್ರೆಸ್‍ ಮುಖಂಡರು ಪ್ರಧಾನಿ ಮೋದಿ ವರ್ಚಸ್ಸು ಸಹಿಸದೆ ಏಕವಚನದಲ್ಲಿ ಟೀಕೆ ಮಾಡುತ್ತಿರುವುದು ನೋವಿನ ಸಂಗತಿ. ಪ್ರಧಾನಿ ನರೇಂದ್ರ ಮೋದಿ ವಿಶ್ವಮಟ್ಟದಲ್ಲಿ ಛಾಪು ಮೂಡಿಸುವ ಮೂಲಕ ದೇಶದ ಸೈನಿಕರು ಮತ್ತು ರೈತರ, ಮಹಿಳೆಯರ ಹಿತ ಕಾಪಾಡಿದ್ದಾರೆ’ ಎಂದರು.

ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದಶಕದ ಅವಧಿಯಲ್ಲಿ ಬೇರಾವ ಸರ್ಕಾರಗಳೂ ಮಾಡದಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ‍್ಯಕ್ಷ ಅಯ್ಯಪ್ಪ ಮಾಳೂರು ಹಾಗೂ ನಿಕಟಪೂರ್ವ ಅಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿದರು.

ಮುಖಂಡರಾದ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಹುಲ್ಲೇಶ ನಾಯಕ, ಶರಣಪ್ಪ ಮೇಟಿ, ಆರ್. ರುದ್ರಯ್ಯ, ಬಸಣ್ಣ ಮೇಟಿ, ಶರಣು ತಳ‍್ಳಿಗೇರಿ, ಹನುಮಂತಪ್ಪ ಕಂದಗಲ್ಲ, ಗಿರಿಮಲ್ಲನಗೌಡ ಕರಡಕಲ್ಲ, ಜಗನ್ನಾಥ ಕುಲಕರ್ಣಿ, ಜೂವಲೆಪ್ಪ ನಾಯ್ಕ, ನಾರಾಯಣಪ್ಪ ನಾಯ್ಕ, ಶಂಕರಗೌಡ ಬಳಗಾನೂರು, ಬಾಬಣ್ಣ ಆನ್ವರಿ, ಮಹಾಂತಗೌಡ, ಬಸಮ್ಮ ಯಾದವ, ಸುನಿತಾ ಪರಶುರಾಮ, ಜಯಶ್ರೀ ಸಕ್ರಿ, ಶರಣಪ್ಪ ನಿಲೋಗಲ್‍, ಶಂಭುಲಿಂಗಪ್ಪ ಫೂಲಭಾವಿ, ತಿಪ್ಪಣ್ಣ ಮೇಗಳಮನಿ ಹಾಜರಿದ್ದರು.

ತಪ್ಪು ಮಾಡಿದವರಿಗೆ ಶಿಕ್ಷೆ
ಲಿಂಗಸುಗೂರು: ‘ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಏನನ್ನೂ ಹೇಳುವುದಿಲ್ಲ. ತನಿಖೆಯಲ್ಲಿ ತಪ್ಪು ಮಾಡಿದ್ದು ಸಾಬೀತಾದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಈ ಹಿಂದೆ ರಾಜ್ಯದಲ್ಲಿ ಬಿ.ಎಸ್‍.ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳ ಕಾರಣಕ್ಕೆ ಜನ ಮತ್ತೊಂದು ಅವಧಿಗೆ ಬಿಜೆಪಿಗೆ ಆಶೀರ್ವಾದ ಮಾಡಲು ಸಿದ್ಧರಾಗಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದೇವೆ’ ಎಂದರು. ಯುವಕ ಯುವತಿಯರು ಸೆಲ್ಫಿ ತೆಗೆಯಿಸಿಕೊಳ್ಳಲು ನೂಕು ನುಗ್ಗಲು ನಡೆಸಿದಾಗ ಬಿ.ವೈ.ವಿಜಯೇಂದ್ರ ಅವರೇ ಮೊಬೈಲ್‍ ಪಡೆದು ಎಲ್ಲರೊಂದಿಗೆ ಸೆಲ್ಫಿ ತೆಗೆದಿದ್ದು ಗಮನ ಸೆಳೆಯಿತು. ಯುವಕರು ವಿಜಯೇಂದ್ರ ಪರ ಘೋಷಣೆ ಹಾಕಿ ಕುಣಿದು ಕುಪ್ಪಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.