ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಪ್ರಚಾರದ ನಡುವೆಯೇ ಸುಧಾಕರ್‌ಗೆ ದೇವೇಗೌಡ ಕರೆ

ಹಳ್ಳಿಗಳಲ್ಲಿ ಡಾ.ಕೆ.ಸುಧಾಕರ್ ಪ್ರಚಾರ; ಹೋದಲೆಲ್ಲಾ ಮೋದಿ ಮೋದಿ ಘೋಷಣೆ

ಡಿ.ಎಂ.ಕುರ್ಕೆ ಪ್ರಶಾಂತ
Published 23 ಏಪ್ರಿಲ್ 2024, 5:02 IST
Last Updated 23 ಏಪ್ರಿಲ್ 2024, 5:02 IST
ಸೋಮವಾರ ಬಾಗೇಪಲ್ಲಿ ಕ್ಷೇತ್ರದಲ್ಲಿ ನಡೆದ ಬಿಜೆಪಿ ಪ್ರಚಾರ
ಸೋಮವಾರ ಬಾಗೇಪಲ್ಲಿ ಕ್ಷೇತ್ರದಲ್ಲಿ ನಡೆದ ಬಿಜೆಪಿ ಪ್ರಚಾರ   

ಚಿಕ್ಕಬಳ್ಳಾಪುರ: ಮೋದಿ...ಮೋದಿ...ಮೋದಿ– ಬಾಗೇಪಲ್ಲಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಗೂಳೂರು ಗ್ರಾಮದ ಆರಂಭದಿಂದ ಊರ ನಡುವಿನ ವೃತ್ತದವರೆಗೂ ಸೋಮವಾರ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಡೆಸಿದ ರೋಡ್ ಷೋ ವೇಳೆ ಕೇಳಿ ಬಂದ ಘೋಷಣೆಗಳಿವು. ಜೊತೆಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರ ಪರವಾಗಿಯೂ ಘೋಷಣೆಗಳು ಮೊಳಗಿದವು. 

ಜೆಡಿಎಸ್‌ ಬಿಜೆಪಿ ‘ಮೈತ್ರಿ’ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಸೋಮವಾರದ ಪ್ರಚಾರದ ಆರಂಭದ ಕ್ಷಣಗಳು ಇವು.  

ಗೂಳೂರಿನಲ್ಲಿ ಬೆಳಿಗ್ಗೆ 9ಕ್ಕೆ ರೋಡ್ ಷೋ ನಿಗದಿಯಾಗಿತ್ತು. ಪೆರೇಸಂದ್ರದ ಮನೆಯಲ್ಲಿ ಬೆಳಿಗ್ಗೆಯೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಮನೆಯ ಆವರಣದಲ್ಲಿಯೇ ನಿಂತು ಪಕ್ಷದ ಕಾರ್ಯಕರ್ತರ ಜೊತೆ ಉಪ್ಪಿಟ್ಟು ಸವಿದರು. ಪೆರೇಸಂದ್ರದ ಮನೆಯಲ್ಲಿಯೇ ಸಮಯ 10.30 ದಾಟಿತ್ತು. ರೋಡ್ ಷೋನಲ್ಲಿ ಭಾಗಿಯಾಗಬೇಕು ಎನ್ನುವ ಲಗುಬಗೆಯಲ್ಲಿದ್ದ ಅವರು ಮುಖಂಡರು ಮತ್ತು ಕಾರ್ಯಕರ್ತರನ್ನು ಮಾತನಾಡಿಸಿ ಗೂಳೂರಿನತ್ತ ಕಾರು ಏರಿದರು. 

ADVERTISEMENT

ಬಾಗೇಪಲ್ಲಿಯ ಮೇಲ್ಸೇತುವೆಗೆ ಕಾರು ಬರುತ್ತಿದ್ದಂತೆ ಅಲ್ಲಿ ಕಾದಿದ್ದ ಕಾರ್ಯಕರ್ತರು ಜಯಕಾರಗಳನ್ನು ಮೊಳಗಿಸಿದರು. ಹೂ ಮಳೆ ಗರೆದರು. ‘ಸುಧಾಕರ್ ಅಣ್ಣನಿಗೆ ಮತ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಿತ’ ಎಂದು ಜಯಕಾರ ಹಾಕಿದರು. ಅದಾಗಲೇ ಸಮಯ 11 ದಾಟಿತ್ತು. ‘ಸಂಜೆ ಬಾಗೇಪಲ್ಲಿಗೆ ಬರುತ್ತೇವೆ. ಸಿಗುವೆ’ ಎಂದು ಕಾರ್ಯಕರ್ತರಿಗೆ ಕೈ ಮುಗಿದರು ಮೈತ್ರಿ ಅಭ್ಯರ್ಥಿ.

ಹಲವು ಹಳ್ಳಿಗಳನ್ನು ದಾಟಿ ಗೂಳೂರು ತಲುಪುತ್ತಿದ್ದಂತೆ ಕಾಯುತ್ತಿದ್ದ ಕಾರ್ಯಕರ್ತರಲ್ಲಿ ಸಂಭ್ರಮ. ಪಟಾಕಿಗಳ ಸದ್ದು. ಪ್ರಚಾರದ ವಾಹನ ಏರುತ್ತಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮೈಕ್ ಕೆಗೆತ್ತಿಕೊಂಡರು. ಮೋದಿ ಮತ್ತು ದೇವೇಗೌಡ ಅವರ ಹೆಸರಿನಲ್ಲಿ ಘೋಷಣೆ ಕೂಗಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸುಡು ಬಿಸಿಲು ಹೆಚ್ಚುತ್ತಲೇ ಇತ್ತು. ಆ ಬಿಸಿಲಿನ ನಡುವೆಯೂ ಕಾರ್ಯಕರ್ತರು ಉತ್ಸಾಹದಲ್ಲಿ ಮೋದಿ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಲೇ ನಡೆದರು. ಪಕ್ಷದ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ಮುಖಂಡ ಅಮರನಾಥ ರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಮತ್ತಿತರರ ಪ್ರಚಾರದ ವಾಹನದಲ್ಲಿದ್ದರು.

ಮುಖಂಡರೆಲ್ಲ ಮಾತನಾಡಿ ಮುಗಿಯಿತು. ಇನ್ನೇನು ಡಾ.ಕೆ.ಸುಧಾಕರ್ ಮಾತನಾಡಬೇಕು ಎನ್ನುವಷ್ಟರಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಸುಧಾಕರ್ ಅವರಿಗೆ ಕರೆ ಮಾಡಿದರು. ಕ್ಷಣ ಕಾಲ ಎಲ್ಲರೂ ಸ್ತಬ್ಧ. ವಾಹನದಲ್ಲಿಯೇ ನಿಂತು ದೇವೇಗೌಡರ ಕರೆಗೆ ಪ್ರತಿಕ್ರಿಯಿಸಿದರು.  

‘ದೇವೇಗೌಡರು ಫೋನ್ ಮಾಡಿದ್ದರು. ಪ್ರಚಾರದ ಬಗ್ಗೆ ವಿಚಾರಿಸಿದರು’ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

‘ಗೂಳೂರು ದೇವಮೂಲೆ. ದೈವಿ ಶಕ್ತಿ ಇದೆ. ಚಿಕ್ಕಬಳ್ಳಾಪುರದಲ್ಲಿ ದೇವೇಗೌಡರು ಹೇಗೆ ಮಾತನಾಡಿದರು ನೋಡಿದರಾ’ ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿ ಹುರುಪು ತುಂಬಿದರು. ಮೋದಿ ಅವರನ್ನು ಗೆಲ್ಲಿಸಬೇಕು. ಪ್ರಧಾನಿ ಮಾಡಬೇಕು. ಆದ್ದರಿಂದ ನನಗೆ ಮತ ಹಾಕಿ ಗೆಲ್ಲಿಸಿ’ ಎಂದು ಕೋರಿದರು. 

ದೇವಮೂಲೆಯ ಇಲ್ಲಿ ದೇವರ ಅಭಿಷೇಕಕ್ಕೂ ನೀರಿನ ಸಮಸ್ಯೆ ಇದೆ. ನಾನು ಸಚಿವನಾಗಿದ್ದ ವೇಳೆ ಬಾಗೇಪಲ್ಲಿಗೆ ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆ ವಿಸ್ತರಿಸಿದೆ. ನಾನು ಸಂಸದನಾದರೆ ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವೆ. ಕೈಗಾರಿಕೆಗಳನ್ನು ತರುವೆ. ಇದು ನನ್ನ ವಾಗ್ದಾನ’ ಎಂದು ಘೋಷಿಸಿದರು.

ನಂತರ ಡಾ.ಕೆ.ಸುಧಾಕರ್ ಹೊರಟಿದ್ದು ಅಲ್ಲಿಂದ ಸುಮಾರು 30 ಕಿ.ಮೀ ದೂರದ ಚೇಳೂರು ತಾಲ್ಲೂಕು ಕೇಂದ್ರಕ್ಕೆ. ಚೇಳೂರು ಗ್ರಾಮದ ಆರಂಭದಲ್ಲಿಯೇ ಅಪಾರ ಸಂಖ್ಯೆಯ ಕಾರ್ಯಕರ್ತರು ಬಿಜೆಪಿ ಬಾವುಟಗಳನ್ನು ಹಿಡಿದು ಕಾದಿದ್ದರು. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಬಿಜೆಪಿ ಬಾವುಟಗಳು. ನರೇಂದ್ರ ಮೋದಿ ಅವರ ಕಟೌಟ್‌ಗಳು ಇದ್ದವು. 

ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ರೋಡ್ ಷೋನಲ್ಲಿ ಭಾಗಿಯಾದರು. ಪೂರ್ಣಕುಂಭ ಸ್ವಾಗತ ನೀಡಿದರು. ಚೇಳೂರಿನ ಎಂ.ಜಿ ವೃತ್ತದಲ್ಲಿ ಕ್ರೇನ್ ಮೂಲಕ ದೊಡ್ಡ ಹೂವಿನ ಹಾರ ಹಾಕಲಾಯಿತು. ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿಸಿದರು.

ನಂತರ ಪಾತಪಾಳ್ಯ ಹೋಬಳಿ, ತೋಳಪಲ್ಲಿ ಪಂಚಾಯಿತಿಯ ನಲ್ಲಚೆರುವು ಗ್ರಾಮ, ಮಿಟ್ಟೇಮರಿ ಗ್ರಾಮದಲ್ಲಿ ರೋಡ್ ಷೋ ನಡೆಸಿದರು. ಸೋಮನಹಳ್ಳಿ, ಗುಡಿಬಂಡೆಗೆ ಬರುವ ವೇಳೆಗೆ ಕತ್ತಲಾಗಿತ್ತು. ಇಲ್ಲಿಯೂ ರೋಡ್ ಷೋ ಮುಗಿಸಿದರು. ಬಾಗೇಪಲ್ಲಿಯಲ್ಲಿ ಪ್ರಚಾರದ ಮೂಲಕ ಸೋಮವಾರದ ಪ್ರಚಾರವನ್ನು ಸಮಾಪ್ತಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.