ADVERTISEMENT

ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು: ಗೀತಾ ಗೋಪಿನಾಥ್ ಪೋಷಕರ ಸಂಭ್ರಮ

ಐಎಂಎಫ್ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕಗೊಂಡಿರುವ ಗೀತಾ ಗೋಪಿನಾಥ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 20:14 IST
Last Updated 2 ಅಕ್ಟೋಬರ್ 2018, 20:14 IST
ಗೀತಾ
ಗೀತಾ   

ಮೈಸೂರು: ‘ಪುತ್ರಿಯ ಬೆಳವಣಿಗೆ ಹಾದಿಯನ್ನು ಗಮನಿಸಿಕೊಂಡು ಬಂದಿದ್ದ ನಮಗೆ ಉನ್ನತ ಸ್ಥಾನಕ್ಕೆ ಏರುತ್ತಾಳೆ ಎಂಬ ಅಚಲ ವಿಶ್ವಾಸವಿತ್ತು. ಅದೀಗ ಈಡೇರಿದೆ. ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ. ಹೆತ್ತವರಿಗೆ ಇದಕ್ಕಿಂತ ಸಂತೋಷದ ವಿಚಾರ ಯಾವುದಿದೆ ಹೇಳಿ?

– ಹೀಗೆ ಪ್ರತಿಕ್ರಿಯೆ ನೀಡಿದ್ದು ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಅವರ ತಾಯಿ ವಿಜಯಲಕ್ಷ್ಮಿ.

ಮೈಸೂರಿನಲ್ಲಿ ನೆಲೆಸಿರುವ ಟಿ.ವಿ.ಗೋಪಿನಾಥ್‌ ಹಾಗೂ ವಿಜಯಲಕ್ಷ್ಮಿ ದಂಪತಿ ಪುತ್ರಿ ಗೀತಾ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್‌) ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿದ್ದಾರೆ.

ADVERTISEMENT

ಕೇರಳದ ಕಣ್ಣೂರು ಜಿಲ್ಲೆಯ ಟಿ.ವಿ.ಗೋಪಿನಾಥ್‌ 35 ವರ್ಷಗಳ ಹಿಂದೆ ಮೈಸೂರಿಗೆ ಬಂದು ನಂಜನಗೂಡಿನಲ್ಲಿ ಸ್ವಂತ ಕಂಪನಿ ಸ್ಥಾಪಿಸಿದ್ದರು. ಪ್ರಸ್ತುತ ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿ ಜಮೀನು ಖರೀದಿಸಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. 'ರೈತ ಮಿತ್ರ' ರೈತರ ಉತ್ಪಾದಕ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆ. ಅದಕ್ಕೂ ಮುನ್ನ ಅವರು ದೆಹಲಿ, ಕೋಲ್ಕತ್ತದಲ್ಲಿ ಉದ್ಯೋಗದಲ್ಲಿದ್ದರು. ವಿಜಯಲಕ್ಷ್ಮಿ ಅವರು ಕುವೆಂಪುನಗರದಲ್ಲಿ ಸುಮಾರು 35 ವರ್ಷ ‘ಪ್ಲೇ ಹೌಸ್‌’ ನರ್ಸರಿ ಶಾಲೆ ನಡೆಸಿದ್ದಾರೆ.

ಗೀತಾ ಜನಿಸಿದ್ದು ಕೋಲ್ಕತ್ತದಲ್ಲಿ. ಮೈಸೂರಿಗೆ ಬಂದ ಮೇಲೆ ವಿ.ವಿ ಮೊಹಲ್ಲಾದಲ್ಲಿರುವ ನಿರ್ಮಲಾ ಕಾನ್ವೆಂಟ್‌ನಲ್ಲಿ 4ರಿಂದ 10ನೇ ತರಗತಿ ವರೆಗೆ ಓದಿದರು. ಬಳಿಕ ಮಹಾಜನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಪಿಯುನಲ್ಲಿ ವಿಜ್ಞಾನ ವಿಷಯ ಓದಿದ್ದ ಅವರು ಬಳಿಕ ಆರ್ಥಿಕ ವಿಷಯದಲ್ಲಿ ಒಲವು ಬೆಳೆಸಿಕೊಂಡರು.

‘ತುಂಬಾ ಚೂಟಿ ಹುಡುಗಿ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದೆ ಇದ್ದಳು. ಆಗ ಏಳನೇ ತರಗತಿಗೂ ಎಸ್ಸೆಸ್ಸೆಲ್ಸಿ ರೀತಿ ಪಬ್ಲಿಕ್‌ ಪರೀಕ್ಷೆ ಇತ್ತು. ಅದರಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದಳು. ಈಗಿನ ಸಾಧನೆ ಕಂಡು ತುಂಬಾ ಖುಷಿ ಆಗುತ್ತಿದೆ. ಎಷ್ಟೇ ಆಗಲಿ ಆಕೆ ನನ್ನ ವಿದ್ಯಾರ್ಥಿ’ ಎಂದು ನೆನಪಿಸಿಕೊಂಡಿದ್ದು ನಿರ್ಮಲಾ ಕಾನ್ವೆಂಟ್‌ನ ನಿವೃತ್ತ ಮುಖ್ಯ ಶಿಕ್ಷಕಿ ವಿಕ್ಟೋರಿನ್‌.

ಗೀತಾ ಅವರ ಪತಿ ಇಕ್ಬಾಲ್‌ ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿ ಆಗಿದ್ದರು. ಹುದ್ದೆಗೆ ರಾಜೀನಾಮೆ ನೀಡಿ ಈಗ ಪತ್ನಿ ಜೊತೆ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ.

‘ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸುಲಭವಾಗಲಿ ಎಂಬ ಉದ್ದೇಶದಿಂದ ಪುತ್ರಿಯನ್ನು ನವದೆಹಲಿಯ ಲೇಡಿ ಶ್ರೀರಾಮ್‌ ಕಾಲೇಜಿಗೆ ಸೇರಿಸಿದೆ. ಅರ್ಥಶಾಸ್ತ್ರದಲ್ಲಿ ಬಿ.ಎ (ಆನರ್ಸ್‌) ಓದಿದಳು. ಅಗ್ರಸ್ಥಾನ ಪಡೆದ ಅವಳಿಗೆ ದೆಹಲಿ ಸ್ಕೂಲ್‌ ಆಫ್‌ ಎಕಾನಮಿಕ್ಸ್‌ನಲ್ಲಿ ಪ್ರವೇಶ ಸಿಕ್ಕಿತು. ಬಳಿಕ ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿ, ಪ್ರಿನ್ಸ್‌ಟನ್‌ ವಿ.ವಿಯಲ್ಲಿ ಪಿಎಚ್.ಡಿ ಪದವಿ ಪಡೆದಳು. ಸದ್ಯ ಹಾರ್ವರ್ಡ್‌ ವಿ.ವಿಯಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ’ ಎಂದು ತಂದೆ ಟಿ.ವಿ.ಗೋಪಿನಾಥ್‌ ವಿವರಿಸಿದರು.

*****

ದೇಶವೇ ಮೆಚ್ಚುವ ಸಾಧನೆ ಮಾಡಿರುವ ಗೀತಾ ಈಗ ಸಮಾಜದ ದೃಷ್ಟಿಯಲ್ಲಿ ಗಣ್ಯ ವ್ಯಕ್ತಿ. ಆದರೆ, ನನ್ನ ಪಾಲಿಗೆ ಮುದ್ದು ಕಂದ. ಸಾಧನೆಗೆ ಕೊನೆ ಇಲ್ಲ.
ವಿಜಯಲಕ್ಷ್ಮಿ, ಗೀತಾ ಅವರ ತಾಯಿ

*

ಕಠಿಣ ಶ್ರಮದಿಂದ ಈ ಮಟ್ಟಕ್ಕೆ ಏರಿದ್ದಾಳೆ. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಳು. ಈಗಲೂ ಕ್ರಿಕೆಟ್ ಎಂದರೆ ಆಕೆಗೆ ಪಂಚಪ್ರಾಣ
ಟಿ.ವಿ.ಗೋಪಿನಾಥ್‌, ಗೀತಾ ಅವರ ತಂದೆ

*

ನಮ್ಮ ಶಾಲೆಯಲ್ಲಿ ಓದುವಾಗ ಆಕೆ ಪುಟ್ಟ ಬಾಲಕಿ. ಕ್ಲಾಸಿನಲ್ಲಿ ಸುಮ್ಮನೇ ಕೂರುತ್ತಿರಲಿಲ್ಲ. ಏನಾದರೂ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದಳು. ಈಗ ಎತ್ತರಕ್ಕೇರಿದ್ದಾಳೆ
ಗೀತಾ ಅವರ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.