ADVERTISEMENT

ಹಾಲು, ತರಕಾರಿ ತಂದು ಕೊಡುವ ರೋಬೊ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 19:30 IST
Last Updated 28 ಫೆಬ್ರುವರಿ 2017, 19:30 IST
ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ನಡೆದ ‘ವಾಹನ ಮೇಳ’ದಲ್ಲಿ ಪ್ರದರ್ಶಿಸಲಾಗಿದ್ದ ರೋಬೊ
ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ನಡೆದ ‘ವಾಹನ ಮೇಳ’ದಲ್ಲಿ ಪ್ರದರ್ಶಿಸಲಾಗಿದ್ದ ರೋಬೊ   
ರೋಬೊ (ಯಂತ್ರ ಮಾನವ) ಇಂದು ಮನುಷ್ಯರ ಕೆಲಸಗಳನ್ನು ಸುಲಭವಾಗಿಸುತ್ತಿವೆ. ವರದಿ ಬರೆಯಲೂ ರೋಬೊ ಬಳಕೆಯಾಗುತ್ತಿದೆ. ಈಗ ಇದರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ರೊಬೊ ರಸ್ತೆಯಲ್ಲಿ ಸಾಗುತ್ತದೆ. ಅಗತ್ಯ ವಸ್ತುಗಳನ್ನು ಅದರಲ್ಲಿಟ್ಟು ಸಾಗಿಸಬಹುದು. ಅಮೆರಿಕದ ಸ್ಟಾರ್ಟ್‌ಅಪ್‌ ಸ್ಟಾರ್‌ಶಿಪ್‌ ಟೆಕ್ನಾಲಜೀಸ್‌ ಈ ರೊಬೊ ಅನ್ವೇಷಣೆ ಮಾಡಿದೆ.
ಪಾರ್ಸೆಲ್‌, ದಿನಸಿ ಸಾಮಾನು, ಸಿದ್ಧ ಆಹಾರವನ್ನು ತ್ವರಿತವಾಗಿ ಸಾಗಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಅಮೆರಿಕದ ವಾಷಿಂಗ್ಟನ್‌ ನಗರದಲ್ಲಿ ಈ ತಿಂಗಳಲ್ಲಿ ಇದು ರಸ್ತೆಗಿಳಿಯಲಿದೆ. ಇದೇ ರೀತಿ ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದಲ್ಲಿಯೂ ಬಳಕೆಯಾಗಲಿದೆ. ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂದರೆ ಆಂಬುಲನ್ಸ್‌ ಸಾಗದಿದ್ದರೂ ಫಿಜ್ಜಾ ಡೆಲಿವರಿ ಬಾಯ್‌ ಸಾಗುತ್ತಾನೆ ಎನ್ನಲಾಗುತ್ತದೆ. ಇನ್ನು ಮುಂದೆ ಫಿಜ್ಜಾ, ಹಾಲು ಮೊಟ್ಟೆ ಮುಂತಾದವನ್ನು ರೋಬೊ ಮೂಲಕ ತರಿಸಿಕೊಳ್ಳಬಹುದು.
ಈ ರೋಬೊವನ್ನು ಸ್ಕೈಪ್‌ ಟೆಕ್ನಾಲಜೀಸ್ ಸ್ಥಾಪಕರಾದ ಅಹಿತಿ ಹೆನ್ಲಾ ಮತ್ತು ಜಾನುಸ್‌ ಫ್ರಿಸ್‌ ಅವರು ಕಂಡುಹಿಡಿದಿದ್ದಾರೆ. 3 ಕಿ.ಮೀ ವ್ಯಾಪ್ತಿಯ ಒಳಗೆ ಈ ರೋಬೊ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬಲ್ಲದು. ರಸ್ತೆಯ ಬದಿಯಲ್ಲಿ ಸಾಗುವ ಇದು ವಸ್ತುಗಳನ್ನು ಆರ್ಡರ್‌ ಮಾಡಿದ ವ್ಯಕ್ತಿಗಳ ಮೊಬೈಲ್‌ಗೆ ಮೊದಲೇ ಸಂದೇಶಗಳನ್ನು ಕಳುಹಿಸುತ್ತದೆ.
ಅಂತರ್ಜಾಲಕ್ಕೆ ಸಂಪರ್ಕ ಹೊಂದಿರುವ ಈ ರೋಬೊ 3ಜಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಇದರಿಂದಲೇ ಇದು ವಿಲೆವಾರಿ ಮಾಡಬೇಕಾದ ವಿಳಾಸವನ್ನು ಕಂಡುಹಿಡಿಯುತ್ತದೆ.
ಆನ್‌ಲೈನ್‌ನಲ್ಲಿ ವಸ್ತುಗಳ ಮಾರಾಟ ಕಂಪೆನಿ ಈಗಾಗಲೇ ಡ್ರೋನ್‌ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸುವ ಪ್ರಯೋಗ ಮಾಡಿದೆ. ಇದಕ್ಕಿಂತ ರಸ್ತೆಯಲ್ಲಿ ಸಂಚರಿಸುವ ರೋಬೊ ಹೆಚ್ಚು ದಕ್ಷತೆ ಹೊಂದಿದೆ ಎನ್ನುತ್ತಾರೆ ಜಾನುಸ್‌ ಫ್ರಿಸ್‌.
ಡ್ರೋನ್‌ಗಳು ಕುಗ್ರಾಮಗಳಿಗೆ ಹೆಚ್ಚು ಸೂಕ್ತವಾಗುತ್ತವೆ. ಆದರೆ ಸ್ಟಾರ್‌ಶಿಪ್‌ ರೊಬೊಗಳು ನಗರಗಳು ಅದರಲ್ಲೂ ರಸ್ತೆ ಚೆನ್ನಾಗಿರುವ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ.
**
ರೋಬೊ ವಿಶೇಷಗಳು
* ವೃದ್ಧರು ಮತ್ತು ಅಂಗವಿಕಲರಿಗೆ ಅಗತ್ಯ ವಸ್ತು ವಿತರಣೆಗೆ ಆದ್ಯತೆ
* ಕೇವಲ ಒಂದೂವರೆಯಿಂದ ಎರಡು ಅಡಿ ಎತ್ತರ
* ಡ್ರೋನ್‌ ಮೂಲಕ ಸರಬರಾಜು ಮಾಡುವುದಕ್ಕಿಂತ ಈ ರೋಬೊ ಕಡಿಮೆ ವೆಚ್ಚದಾಯಕ
* ಕಡಿಮೆ ಅವಧಿಯಲ್ಲಿ ಪೂರೈಸುವ ಕಾರಣ ಆಹಾರ ಪದಾರ್ಥ ಬಿಸಿ ಮಾಡುವ ಇಲ್ಲವೇ ತಣ್ಣಗಿರಿಸುವ ತಂತ್ರಜ್ಞಾ ಅಗತ್ಯವಿಲ್ಲ
* ಅತ್ಯಾಧುನಿಕ ಪ್ಲಾಸ್ಟಿಕ್‌ ಕೂಲರ್‌ಗಳು
**
ರೋಬೊಗೆ ಇರುವ ಚಕ್ರಗಳು:6
20 ಪೌಂಡ್‌: ಈ ರೋಬೊ ಸಾಗಿಸುವ ಸರಕುಗಳ ಭಾರ
30ನಿಮಿಷ: ಸರಕು ಸರಬರಾಜಿಗೆ ತೆಗೆದುಕೊಳ್ಳುವ ಅವಧಿ
6ಕಿ.ಮೀ: ಪ್ರತಿ ಗಂಟೆಗೆ ರೋಬೊ ಸಾಗುವ ದೂರ
**
ಸ್ಥಳೀಯ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಯುರೋಪ್‌ನ ಹಲವು ನಗರಗಳಲ್ಲಿ ಈ ರೋಬೊ ಪ್ರಯೋಗ ಮಾಡಲಾಗಿದೆ.
–ಜಾನುಸ್‌ ಫ್ರಿಸ್‌,ರೋಬೊ ಅನ್ವೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.