ADVERTISEMENT

ಹಬ್ಬಕ್ಕಿರಲಿ ಮಕ್ಕಳಿಗೆ ರಂಗುರಂಗಿನ ಉಡುಪು

ಹಬ್ಬಕ್ಕಿರಲಿ ಮಕ್ಕಳಿಗೆ ರಂಗುರಂಗಿನ ಉಡುಪು

ಮಂಜುಶ್ರೀ ಎಂ.ಕಡಕೋಳ
Published 4 ನವೆಂಬರ್ 2021, 19:30 IST
Last Updated 4 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಣ್ಣಬಣ್ಣದ ಬಟ್ಟೆ ತೊಟ್ಟ ಪುಟ್ಟ ಮಕ್ಕಳು ಮನೆತುಂಬಾ ಓಡಾಡುವುದನ್ನು ನೋಡುವುದೇ ಸಂಭ್ರಮ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಡಗರಕ್ಕೆ ತಮ್ಮ ಮಕ್ಕಳಿಗೆ ಹೊಳೆಯುವ ಬಣ್ಣದ ಬಟ್ಟೆ ಹಾಕಬೇಕೆಂಬ ಆಸೆ ಹಲವು ಪೋಷಕರದ್ದು. ಮಾರುಕಟ್ಟೆಯಲ್ಲಿನ ಥರೇವಾರಿ ವಿನ್ಯಾಸದ ಉಡುಪುಗಳಲ್ಲಿ ತಮ್ಮ ಮಕ್ಕಳಿಗೆ ಯಾವ ವಿನ್ಯಾಸ ಸೂಕ್ತವಾಗುತ್ತದೆ ಎನ್ನುವ ಗೊಂದಲವೂ ಕಾಡದಿರದು.

ಮಕ್ಕಳ ಚರ್ಮ ಸೂಕ್ಷ್ಮವಾಗಿರುವುದರಿಂದ ಅವರಿಗೆ ಕಿರಿಕಿರಿ ಆಗದಿರುವ ಉಡುಪುಗಳ ಆಯ್ಕೆಯ ಸವಾಲೂ ಎದುರಾಗುವುದು ಸಹಜ. ಕೆಲವು ಉಡುಪುಗಳು ಮೇಲ್ನೋಟಕ್ಕೆ ಮಿರಮಿರನೆ ಮಿನುಗುವಂತಿದ್ದರೂ ಒಳಗಡೆ ಹಾಕಿರುವ ಬಟ್ಟೆಯ ಗುಣಮಟ್ಟ ಕಳೆಪಯಾಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಕ್ಕಳ ಉಡುಗೆಗಳನ್ನು ಆಯ್ಕೆ ಮಾಡುವ ಜಾಣತನವೂ ಇರಬೇಕು.

ಪ್ರತಿ ಸಲವೂ ಹಬ್ಬಕ್ಕೆ ಒಂದೇ ಮಾದರಿ, ಬಣ್ಣ, ವಿನ್ಯಾಸ ಖರೀದಿಸುವ ಬದಲು ಭಿನ್ನ ಬಗೆಯ ರೆಡಿಮೇಡ್ ಉಡುಪುಗಳು ಇಲ್ಲವೇ ವಿನ್ಯಾಸ ಮಾಡಿಸಬಹುದು. ಅದಕ್ಕಾಗಿ ಇಲ್ಲಿವೆ ಕೆಲ ಟಿಪ್ಸ್‌.

ADVERTISEMENT

ಸಾಂಪ್ರದಾಯಿಕ ಉಡುಗೆ

ಹಬ್ಬಗಳಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಪುಗಳದ್ದೇ ಮೇಲುಗೈ. ಹಿರಿಯರಿರಲಿ, ಕಿರಿಯರಿರಲಿ ಇಬ್ಬರೂ ಅದೇ ಮಾದರಿಯ ವಿನ್ಯಾಸಕ್ಕೆ ಮೊರೆ ಹೋಗುವುದು ಸಹಜ. ಪುಟ್ಟ ಹೆಣ್ಣುಮಕ್ಕಳಿಗೆ ರೆಡಿಮೇಡ್ ಸೀರೆ, ಲಂಗ– ಜಾಕೀಟು, ಘಾಗ್ರಾ–ಚೋಲಿ, ಲೆಹೆಂಗಾ... ಹೀಗೆ ವಿಭಿನ್ನ ವಿನ್ಯಾಸಗಳು ದೊರೆಯುತ್ತವೆ. ಇಂಥ ಉಡುಪುಗಳು ರೆಡಿಮೇಡ್ ಆಗಿಯೂ ದೊರೆಯುತ್ತವೆ. ಕೆಲವರು ನಿರ್ದಿಷ್ಟ ವಿನ್ಯಾಸದ ಉಡುಪುಗಳನ್ನು ಟೈಲರ್ ಬಳಿ ಹೊಲೆಸುವುದೂ ಉಂಟು.

ಖಣದ ಫ್ಯಾಷನ್‌

ಇತ್ತೀಚೆಗೆ ಇಳಕಲ್ ಖಣದಲ್ಲಿ ಹೆಣ್ಣುಮಕ್ಕಳಿಗೆ ಲಂಗ–ಜಾಕೀಟು, ಫ್ರಾಕ್, ಗೌನ್, ಚೂಡಿದಾರ್ ಮಾದರಿಯ ಉಡುಪುಗಳನ್ನು ಹೊಲೆಸುವುದು ಟ್ರೆಂಡ್ ಆಗಿದೆ. ಇಳಕಲ್ ಖಣದಲ್ಲಿ ಬಾರ್ಡರ್ ಇರುವುದರಿಂದ ಲಂಗ–ಜಾಕೀಟ್‌ಗೆ ಹೇಳಿ ಮಾಡಿಸಿದ ಮೆಟಿರೀಯಲ್ ಇದು. ಖಣದ ಬಟ್ಟೆಯಲ್ಲಿ ರೇಷ್ಮೆ, ಕಾಟನ್ ಮೆಟಿರೀಯಲ್ ಕೂಡಾ ಲಭ್ಯವಿದೆ. ಖಣದ ಬಟ್ಟೆಗೆ ಒಳಗೆ ಕಾಟನ್ ಬಟ್ಟೆಯ ಲೈನಿಂಗ್ ಕೊಡುವುದರಿಂದ ಮಕ್ಕಳಿಗೆ ಧರಿಸಲೂ ಆರಾಮದಾಯಕವಾಗಿರುತ್ತದೆ. ಗಾಢ ಬಣ್ಣದ ಖಣದಲ್ಲಿ ವಿನ್ಯಾಸ ಮಾಡಿಸಿದ ಉಡುಪುಗಳು ಶ್ರೀಮಂತ ನೋಟ ನೀಡುತ್ತವೆ. ಬಟ್ಟೆಯೂ ಹಗುರವಾಗಿರುವುದರಿಂದ ಮಕ್ಕಳಿಗೂ ಕಿರಿಕಿರಿ ಅನಿಸದು. ದೇಶಿಯ ಉಡುಪಿನ ಸೊಬಗೂ ಮೇಳೈಸುತ್ತದೆ.

ಗೌನ್‌

ಗೌನ್ ವಿನ್ಯಾಸದ ಉಡುಪು ಇತ್ತೀಚಿನ ಫ್ಯಾಷನ್‌ನಲ್ಲಿ ಮುಂಚೂಣಿಯಲ್ಲಿರುವಂಥದ್ದು. ಉದ್ದನೆಯ ಲಂಗದ ಮಾದರಿ ಎನಿಸಿದರೂ ಮಕ್ಕಳು ಬೇಗನೆ ಬೆಳೆಯುವುದರಿಂದ ಗೌನ್ ಕೊಳ್ಳುವುದು ಉತ್ತಮ ಆಯ್ಕೆ. ಮೈಕಟ್ಟು ತೆಳ್ಳಗಿರುವವರು ಸೇರಿದಂತೆ ತುಸು ದಪ್ಪ ಎನಿಸುವ ಮಕ್ಕಳಿಗೂ ಗೌನ್ ಸೂಕ್ತ. ಹಬ್ಬ ಮಾತ್ರವಲ್ಲದೇ ಇತರ ಸಮಾರಂಭಗಳಿಗೂ ಗೌನ್ ಧರಿಸಬಹುದು. ಇವುಗಳಲ್ಲಿ ನಾನಾ ವಿನ್ಯಾಸಗಳೂ ದೊರೆಯುತ್ತವೆ.

ಫ್ರಾಕ್‌

ಫ್ರಾಕ್‌ಗಳಿಗಂತೂ ಫ್ಯಾಷನ್ ಲೋಕದಲ್ಲಿ ಸದಾ ಬೇಡಿಕೆ. ಸಿಂಡ್ರೆಲಾ ಫ್ರಾಕ್, ಅಂಬ್ರೆಲಾ ಫ್ರಾಕ್, ವೆಲ್ವೆಟ್ ಫ್ರಾಕ್ ಹೀಗೆ ವಿವಿಧ ಬಗೆಯ ಫ್ರಾಕ್‌ಗಳೂ ಲಭ್ಯ. ಕಾರ್ಟೂನ್‌ಗಳಲ್ಲಿ ಬರುವ ಪಾತ್ರಗಳ ಉಡುಪುಗಳು ಮಕ್ಕಳ ಗಮನ ಸೆಳೆಯುವುದರಿಂದ ಹಿಂದೆ ಬಿದ್ದಿಲ್ಲ. ಇವೆಲ್ಲದರ ನಡುವೆ ಶರಾರ, ತ್ರಿಪೀಸ್ ಕುರ್ತಾ, ಪೈಲಾಜೊ– ದುಪಟ್ಟಾ, ಮಿನಿ ಸ್ಕರ್ಟ್, ಮಿಡ್ಡಿ.... ಹೀಗೆ ಹತ್ತು ಹಲವು ವಿನ್ಯಾಸಗಳಿಗೆ ಕೊರತೆಯಿಲ್ಲ.

ಧೋತಿ –ಕುರ್ತಾ, ಶರ್ಟ್–ಪಂಚೆ

ಹೆಣ್ಣುಮಕ್ಕಳಷ್ಟು ವೈವಿಧ್ಯಮಯ ಉಡುಪುಗಳು ಗಂಡುಮಕ್ಕಳಿಗಿಲ್ಲವಾದರೂ, ಇತ್ತೀಚೆಗೆ ಪುಟ್ಟ ಮಕ್ಕಳಿಗೂ ಸಿಲ್ಕ್ ಪಂಚೆ– ಶರ್ಟ್–ಶಲ್ಯ ಗಮನ ಸೆಳೆಯುತ್ತಿದೆ. ಇದರ ಜತೆಗೆ ಸದಾ ಕಾಲಕ್ಕೂ ಪ್ರಸ್ತುತವಾಗುವ ಧೋತಿ–ಕುರ್ತಾ– ಅದರ ಮೇಲೊಂದು ಕೋಟು ಆಕರ್ಷಕ ನೋಟ ನೀಡುತ್ತದೆ. 2 ಪೀಸ್ ಸೂಟ್ ಸೆಟ್, ಪ್ಯಾಂಟು–ಶರ್ಟು, ವೆಯಿಸ್ಟ್ ಕೋಟ್ ಸೂಟ್ ಸೆಟ್, ಧೋತಿ–ಶೇರ್ವಾನಿ, ಶ್ರಗ್ ಪ್ಯಾಂಟ್–ಶರ್ಟ್ ವಿನ್ಯಾಸ ಉಡುಪುಗಳೂ ಆಕರ್ಷಕ ನೋಟ ನೀಡುತ್ತವೆ.

ಸುರಕ್ಷತೆ ಆದ್ಯತೆಯಾಗಿರಲಿ

ವಿನ್ಯಾಸ ಯಾವುದೇ ಇರಲಿ, ಮಕ್ಕಳ ಚರ್ಮಕ್ಕೆ ಆರಾಮದಾಯಕ ಮತ್ತು ಧರಿಸಲು ಅನುಕೂಲವಾಗಿರುವಂಥದ್ದನ್ನು ಆಯ್ಕೆ ಮಾಡುವುದು ಒಳಿತು. ಉದ್ದನೆಯ ಲಂಗ, ಗೌನ್ ಹಾಕುವಾಗ ತೀರಾ ನೆಲಕ್ಕೆ ತಾಕುವಂತೆ ಹಾಕದೇ ತುಸು ಮೇಲೆಯೇ ಹಾಕುವುದರಿಂದ ನಡೆಯಲು ಅನುಕೂಲ. ಅಲ್ಲಿ–ಇಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಭವವನ್ನೂ ತಪ್ಪಿಸಬಹುದು. ಹಬ್ಬಕ್ಕೆ ಹಾಕುವ ಬಟ್ಟೆಗಳು ಮಕ್ಕಳ ಆಟೋಟ ಚಟುಟಿಕೆಗಳಿಗೆ ತೊಂದರೆಯಾಗದಂತೆ ಇರುವುದೂ ಅವಶ್ಯಕ. ಪಟಾಕಿ ಹಚ್ಚುವಂಥ ಸಂದರ್ಭಗಳಲ್ಲಿ ಹತ್ತಿಯ ಉಡುಪುಗಳಿಗೇ ಆದ್ಯತೆ ಇರಲಿ. ನೆಟ್ಟೆಂಡ್ ಮಾದರಿಯ ಉಡುಪುಗಳಿಗೆ ಬೆಂಕಿಯ ಕಿಡಿಗಳು ಸುಲಭವಾಗಿ ಹತ್ತಿಕೊಳ್ಳುತ್ತವೆ. ಹಾಗಾಗಿ, ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.