ADVERTISEMENT

ಅಪ್ಪಂದಿರ ದಿನ: ಮಗುವೊಂದು ಅಮ್ಮ ಎನ್ನುವ ಮೊದಲೇ ಅಪ್ಪ ಎಂದಿರುತ್ತದೆ!

ಡಾ.ಸಿದ್ಧರಾಜು ಎಂ ಎನ್
Published 20 ಜೂನ್ 2021, 1:41 IST
Last Updated 20 ಜೂನ್ 2021, 1:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಪ್ಪ- ಆ ಪದದಲ್ಲೇ ಒಂದು ರೀತಿಯ ಗಾಂಭೀರ್ಯ ಮತ್ತು ಒಂದು ಗೌರವವಿದೆ. ಪ್ರೀತಿ ಎಂಬುದು ಅಮ್ಮನ ಮುಂದೆ ಸಲುಗೆ, ಶಬ್ದ ರೂಪದಲ್ಲಿ ವ್ಯಕ್ತವಾದರೆ, ಅಪ್ಪನ ಮುಂದೆ ಅದು ಗೌರವ ಮತ್ತು ಭಯದ ರೂಪದಲ್ಲಿ ಅಭಿವ್ಯಕ್ತವಾಗುತ್ತದೆಯಂತೆ. ಅಮ್ಮನ ಮಮತೆ, ವಾಕ್ಜರಿ ಮತ್ತು ಅತಿ ಕಾಳಜಿ ಯಲ್ಲಿ ಹೊಮ್ಮಿದರೆ, ಅಪ್ಪನ ವಾತ್ಸಲ್ಯ ಗಾಂಭೀರ್ಯ ಮತ್ತು ಕರ್ತವ್ಯದ ರೂಪದಲ್ಲಿ ಹೊರಹೊಮ್ಮುತ್ತದೆ.

ಇತ್ತೀಚಿಗಿನ ಕೆಲ ವರ್ಷಗಳನ್ನು ಬಿಟ್ಟರೆ ನನ್ನ 30 ವರ್ಷದ ಬದುಕಿನಲ್ಲಿ ಒಮ್ಮೆಯೂ ನಾನು ನಮ್ಮಪ್ಪನ ಜೊತೆ 3 ನಿಮಿಷಕ್ಕಿಂತ ಹೆಚ್ಚು ಮಾತಾಡಿಲ್ಲ. ಹಾಗೆಯೇ ಸರಾಸರಿ ವರ್ಷಕ್ಕೆ 10-12 ಸಲವಷ್ಟೇ ಮಾತನಾಡಿರಬಹುದು, ಉಳಿದಷ್ಟೂ ದಿನ ಮೌನದ ಮಹಾಯಾನ. ಆದರೆ ಇಂದಿಗೂ ಅಮ್ಮನಷ್ಟೇ ಪ್ರೀತಿ ಅಪ್ಪನ ಮೇಲಿದೆ.ಬಹುಷಃ'ಇಷ್ಟ'ವನ್ನಳೆಯುವ ಅಂಚುಪಟ್ಟಿಯೊಂದಿದ್ದರೆ ಅದು ಅಪ್ಪನ ಕಡೆಗೆ ಕೊಂಚ ಹೆಚ್ಚೇ ವಾಲುತ್ತಿತ್ತೇನೋ.

5 ವರ್ಷದ ಹಿಂದೆ ಅಮೇರಿಕಾದ ಮೇರಿಲ್ಯಾಂಡ್‌ನಲ್ಲಿ ನನ್ನ ಮಗನನ್ನು ಮೊದಲ ಬಾರಿಗೆ ಡೇ ಕೇರ್‌ಗೆ ಬಿಡಲು ನನ್ನ ಮಡದಿ ಹೋದಾಗ, ಸುಮಾರು ಒಂದು ತಾಸು ನಾನು ಹೊರಗೆ ಕಾರಲ್ಲಿಯೇ ಕಾಯುತ್ತಾ ಕುಳಿತಿದ್ದೆ. ಬಾಗಿಲು ತೆಗೆದು ಮಿಸ್ ಗೊಂದು ವಿಶ್ ಮಾಡಿ ಮಗನನ್ನು ಬಿಟ್ಟು ಬರಲು 3 ನಿಮಿಷ ಸಾಕು ಆದರೆ ಅವಳು ಒಂದು ತಾಸಿನ ನಂತರ ಕಣ್ಣು ಒದ್ದೆ ಮಾಡಿಕೊಂಡು ಬಂದಳು, ನನಗೋ ಭಾರೀ ಸಿಟ್ಟು ಬಂದಿತ್ತು, ಅದಾಗಲೇ ಆಫೀಸಿಗೆ ಲೇಟ್ ಆಗಿದೆ, ಇವಳು ಮಗನನ್ನು ಬಿಡಲು 2 ಗಂಟೆ ತಗೋತಾಳೆ, ನಾಳೆಯಿಂದ ನಾನೇ ಬಿಟ್ ಬರ್ತೀನಿ ಅಂತ ಗೊಣಗುತ್ತಾ ಹೊರಟೆ.

ಎರಡನೇ ದಿನ ಅವಳನ್ನು ಕಾರಲ್ಲಿ ಬಿಟ್ಟು ನಾನೇ ಮಗನನ್ನು ಕರೆದುಕೊಂಡು ಒಳಗೆ ಹೋದೆ. ಅವನೋ, ನಾ ಬೈಯುವೆನೆಂಬ ಭಯದಲ್ಲಿ ಅಳುವನ್ನು ತಡೆಯುತ್ತಾ ಬಿಕ್ಕಳಿಸುತ್ತ ಒಳಹೋಗಿ ಕುಳಿತ. ಸರಿ ಸ್ವಲ್ಪ ಹೊತ್ತು ಸುಮ್ಮನಾಗುತ್ತನೆ ಎಂದುಕೊಳ್ಳುತ್ತ ಹೊರಬಂದೆ. ಅದೇನೋ ಒಂದು ಮನಸು ಹಿಂತಿರುಗಿ ನೋಡು ಎನ್ನಿಸಿ ಹಿಂತಿರುಗಿದೆ.

ADVERTISEMENT

ಗ್ಲಾಸ್ ಡೋರ್ ಹಿಂದೆ ಕೈಗಳೆರಡನ್ನು ಮೇಲೆತ್ತಿ ಅಳುವನ್ನು ತಡೆವ ಯತ್ನದಲಿ ದೈನ್ಯತೆಯಿಂದ ಆನಿಸಿ ಅಪ್ಪರಿದು ನಿಂತ ನನ್ನ ಮಗನ ಪಿಳಿ ಪಿಳಿ ಕಣ್ಣುಗಳಲ್ಲಿ ಅಶ್ರುಧಾರೆ ಕಂಡು ಬೆಚ್ಚಿಹೊದೆ.

ಅವನು ಅತ್ತಿದ್ದು ಇದೇ ಮೊದಲೇನಲ್ಲ ಹಲವಾರು ಸಲ ನಾನು ಗಮನಿಸಿಯೂ ಗಮನಿಸದಂತೆ ಸುಮ್ಮನಿದ್ದಿದಿದೆ ಆದರೆ ಇಂದೇಕೋ ತುಂಬಾ ಕದಲಿಹೊದೆ. ನಾ ಹಿಂತಿರುಗಿದ್ದು ನೋಡಿ ಆತ ಬಿಕ್ಕಳಿಸಿ "ಅಪ್ಪ" ಎಂದು ಬಾಯ್ತೆರೆದಾಗ, ಆ ಪದ ಸೌಂಡ್ ಪ್ರೂಫ್ ಬಾಗಿಲನ್ನೂ ದಾಟಿ ನೇರವಾಗಿ ಹೃದಯಕ್ಕೆ ನಾಟಿತ್ತು. ಇನ್ನು ಸುಮ್ಮನಿರಲಾಗಲಿಲ್ಲ. ಭಾವಕ್ಕಿಂತ ಮಿಗಿಲೇನಲ್ಲ ಕೆಲಸ ಎಂದೆನಿಸಿ ನನ್ನ ಕೆಲಸಕ್ಕೆ ರಜೆ ಹಾಕಿ ನನ್ನವಳನ್ನು ಆಫೀಸ್ ಗೆ ಡ್ರಾಪ್ ಮಾಡಿ ಮಗನನ್ನು ಮನೆಗೆ ಕರೆದೊಯ್ದೆ. ಅವಳು ಒಳಗೊಳಗೆ ಮುಸಿನಗುತ್ತಾ ಹೋದಳು.

ಮಗನ ವಿಷಯದಲ್ಲಿ ಅಮ್ಮನಿಗಿಂತ ಅಪ್ಪನ ಹೃದಯವೇ ಹೆಚ್ಚು ಮಿಡಿಯುತ್ತೇನೋ ಅಥವಾ ಮಗುವ ಸಂತೈಸುವಲ್ಲಿ ಅಪ್ಪ ತುಸು ಸೋಲುತ್ತಾನೇನೋ!

ಬೈ ದಿ ಬೈ,ಕನ್ನಡ ವರ್ಣಮಾಲೆಯಲ್ಲಿ ಅಕ್ಷರ ಜೋಡಣೆ ತುಂಬಾ ವೈಜ್ಞಾನಿಕವಾಗಿ ಮಾಡಲಾಗಿದೆ. 'ಅ' ಇಂದ ಶುರುವಾಗಿ 'ನ' ವರೆಗಿನ ಸ್ವರಾಕ್ಷರ/ವ್ಯಂಜನಾಕ್ಷರದ ಯಾವ ಉಚ್ಚಾರಣೆಯಲ್ಲೂ ತುಟಿಗಳು ಒಂದನ್ನೊಂದು ತಾಗುವುದಿಲ್ಲ ('ಅಂ' ಬಿಟ್ಟು, ಅದಕ್ಕೆ ಅದನ್ನು ಅನುಸ್ವರ ಎನ್ನೋದು).

ತುಟಿಗಳು ಅಂಟುವುದು 'ಪ' ಎಂಬ ಮೊದಲ ಅಕ್ಷರದಿಂದಲೇ (ಬೇಕಾದರೆ ಪ್ರಯತ್ನಿಸಿ). ಮ ಬರುವುದು ಪ ಫ ಬ ಭ ನಂತರ, ಹಾಗೆಯೇ ಮಗುವಿನ ಉಚ್ಚಾರಣೆಯು ಅನುಸರಿತ.

ಸಾಧಾರಣವಾಗಿ ಮಗುವೊಂದು ‘ಅಮ್ಮ’ ಎಂದು ಕರೆಯುವ ಮೊದಲೇ ‘ಅಪ್ಪ’ ಎಂದು ಕರೆದಿರುತ್ತದೆ ಆದರೆ ನಮ್ಮ ಪ್ರೀಕನ್ಸೀವ್ಡ್ ಮೈಂಡ್ ಅದನ್ನು ಗಮನಿಸಲು ಬಿಡೋಲ್ಲ

ನಾನು 6ನೇ ತರಗತಿಯಲ್ಲಿ ನವೋದಯ ಶಾಲೆಗೆ ಸೇರಿದಾಗ, ನನ್ನಪ್ಪಮ್ಮ ಪ್ರಥಮಬಾರಿಗೆ ನನ್ನನ್ನು ಆ ವಸತಿ ಶಾಲೆಗೆ ಬಿಟ್ಟು ಬರಲು ಬಂದಾಗ ಅಮ್ಮ ಅಲ್ಲಿಯ ಪ್ರಾಂಶುಪಾಲರ ಜೊತೆ ನನ್ನ ಕ್ಷೇಮ ಮತ್ತು ಕಾಳಜಿಯ ಬಗೆ ತುಂಬಾ ಮಾತಾಡುತ್ತಿದ್ದರೆ ಅಪ್ಪ ಮಾತ್ರ ಅರ್ಧಕ್ಕೆ ಎದ್ದು ಬಂದು ಮೌನದಿಂದ ಹೊರಗೆ ಕಾಯುತ್ತಿದ್ದರು. ಯಾಕೆ ಅಪ್ಪ ನನ್ನ ಬಗ್ಗೆ ಏನು ಕೇಳುತ್ತಿಲ್ಲ. ಯಾಕಿಷ್ಟು ಮೌನ? ಯಾಕಿಷ್ಟು ನಿರಾಸಕ್ತಿ?ಅಪ್ಪನ ಅಂದಿನ ಮೌನದ ಅರ್ಥ, ನಾ 'ಅಪ್ಪ' ನಾಗಿ ನನ್ನ ಮಗನನ್ನು ಶಾಲೆಗೆ ಬಿಡುವಾಗ ಅರಿವಾಯ್ತು. ಅಪ್ಪಾ.. ನೀನೇ ನನ್ನ ಹೆಮ್ಮೆ ಹಾಗು ಅಹಂ.



ಅಪ್ಪ
ಅಪ್ಪ ಎಂದರೆ ಗಟ್ಟಿ
ಕೋಪದ ಮಹಾ ರೂಪ
ಅಪ್ಪ ಎಂದರೆ
ಎಂದಿಗೂ ಎದೆಗುಂದದ
ಗಂಡೆದೆಯ ಭೂಪ

ಅಪ್ಪ ಅಂದರೆ ಭಯದ ನೋಟ
ಅಪ್ಪ ಎಂದರೆ ಅಭಯದ ಪೀಠ
ಅಪ್ಪ ಎಂದರೆ ನೆರಳಿನ ಆಲ
ಅಪ್ಪ ಎಂದರೆ ಸಂಪತ್ತಿನ ಚೀಲ

ಸರಕಾರಿ ನೌಕರಿಯ ಸಂಬಳವಿರದೆ
ಅಲ್ಲೆಲ್ಲೋ ಅವಿತಿಟ್ಟ ಗಿಂಬಳವಿರದೆ
ಗಟ್ಟಿ ರೆಟ್ಟೆಯ ನಂಬಿ
ಸಿಟ್ಟು ಸೆಡವುಗಳ ನುಂಗಿ
ಕಡ ತಂದು ಕೆಡದಂತೆ ಸಲುಹಿದ
ಬಲು ನಿ-ಸ್ವಾರ್ಥಿ ನೀನು

ನಿನ ನಿಷ್ಠೆಯಯಲಿ ಅರ್ಧದಷ್ಟು
ಸಾಲ ನೀಡೋ ನನ್ನಪ್ಪ
ನನ ಮಗನ ಬೆಳೆಸಬೇಕಿದೆ
ನೀ ನೆಟ್ಟ ಗಿಡದಂತೆ
ಅವನೂ ನೆಟ್ಟಗಿರಲಿ ಸದಾ
- ಮಾನಸ

(ಲೇಖಕರು ಮಂಗಳೂರುವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರಾಧ್ಯಾಪಕರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.