ADVERTISEMENT

ಷೇರುಪೇಟೆ: 55 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ
Published 13 ಆಗಸ್ಟ್ 2021, 15:29 IST
Last Updated 13 ಆಗಸ್ಟ್ 2021, 15:29 IST
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ   

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 55 ಸಾವಿರದ ಗಡಿ ದಾಟಿ ವಹಿವಾಟು ಪೂರ್ಣಗೊಳಿಸಿದೆ. ಗುರುವಾರ ಮತ್ತು ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕದ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ₹ 3.48 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಶುಕ್ರವಾರ ಸೆನ್ಸೆಕ್ಸ್ 593 ಅಂಶ ಏರಿಕೆ ಕಂಡಿತು. ದಿನದ ಅಂತ್ಯಕ್ಕೆ 55,437 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನದ ನಡುವಿನಲ್ಲಿ ಸೂಚ್ಯಂಕವು 643 ಅಂಶ ಏರಿಕೆ ಕಂಡಿತ್ತು. ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕವು 318 ಅಂಶ ಏರಿಕೆ ದಾಖಲಿಸಿತ್ತು.

ಈಗ ಬಿಎಸ್‌ಇಯಲ್ಲಿ ನೋಂದಾಯಿತ ಆಗಿರುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ₹ 240 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟ. ‘ಸಣ್ಣ ಹೂಡಿಕೆದಾರರು ಬಹಳ ಉತ್ಸಾಹದಿಂದ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಷೇರುಪೇಟೆಯಲ್ಲಿ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದಿರುವ ಉತ್ತಮ ವಹಿವಾಟು ಕೂಡ ಈ ಏರಿಕೆಗೆ ಕಾರಣವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ADVERTISEMENT

ಟಿಸಿಎಸ್, ಆರ್‌ಐಎಲ್‌, ಇನ್ಫೊಸಿಸ್ ಮತ್ತು ಎಚ್‌ಡಿಎಫ್‌ಸಿ ಷೇರುಗಳ ಖರೀದಿ ಜೋರಾಗಿ ನಡೆಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 164 ಅಂಶ ಏರಿಕೆ ಕಂಡು, 16,529 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ‘ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಇಳಿಕೆ ಕಂಡಿದ್ದು ಕೂಡ ಸಣ್ಣ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿತು’ ಎಂದು ಜಿಯೋಜಿತ್ ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.