ADVERTISEMENT

ಹೊಸ ಎತ್ತರದಲ್ಲಿ ಷೇರುಪೇಟೆ: 18,500 ಅಂಶ ದಾಟಿದ ನಿಫ್ಟಿ

ಪಿಟಿಐ
Published 18 ಅಕ್ಟೋಬರ್ 2021, 6:33 IST
Last Updated 18 ಅಕ್ಟೋಬರ್ 2021, 6:33 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮತ್ತೆ ಖರೀದಿ ಭರಾಟೆ ಶುರುವಾಗಿದ್ದು, ಸೋಮವಾರ ವಹಿವಾಟು ಆರಂಭವಾಗಿ ಕೆಲವು ನಿಮಿಷಗಳಲ್ಲೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 500 ಅಂಶಗಳಷ್ಟು ಏರಿಕೆ ದಾಖಲಿಸಿತು.

ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆಯ 61,894.33 ಅಂಶಗಳನ್ನು ಮುಟ್ಟಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಸಹ 157.40 ಅಂಶಗಳಷ್ಟು ಏರಿಕೆಯಾಗಿ 18,495.95 ತಲುಪಿದೆ.

ಇನ್ಫೊಸಿಸ್‌ ಷೇರು ಬೆಲೆ ಶೇ 2.8ರಷ್ಟು ಹೆಚ್ಚಳವಾಗಿದೆ. ಟಾಟಾ ಸ್ಟೀಲ್‌, ಟೈಟಾನ್‌ ಷೇರುಗಳು ಸಹ ಏರಿಕೆ ಹಾದಿಯಲ್ಲಿವೆ. ಆರಂಭಿಕ ವಹಿವಾಟಿನಲ್ಲಿ ಹೆಚ್ಚಳ ಕಂಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಹಾಗೂ ಇಂಡಸ್‌ಇಂಡ್‌ ಬ್ಯಾಂಕ್‌ ಸೇರಿ ಬ್ಯಾಂಕ್‌ ಷೇರುಗಳಲ್ಲಿ ಏರಿಳಿತ ಕಂಡು ಬಂದಿದೆ.

ADVERTISEMENT

ಏಷಿಯನ್‌ ಪೇಂಟ್ಸ್‌, ಬಜಾಜ್‌ ಆಟೊ, ಡಾ ರೆಡ್ಡೀಸ್‌ ಹಾಗೂ ಎಚ್‌ಸಿಎಲ್‌ ಟೆಕ್‌ ಷೇರುಗಳ ಬೆಲೆ ಕುಸಿತ ಕಂಡಿದೆ.

ಬೆಳಿಗ್ಗೆ 10:50ಕ್ಕೆ ನಿಫ್ಟಿ 178.70 ಅಂಶ ಹೆಚ್ಚಳವಾಗಿ 18,517.25 ಅಂಶಗಳಲ್ಲಿ ವಹಿವಾಟು ನಡೆದಿತ್ತು. ಸೆನ್ಸೆಕ್ಸ್‌ 536.16 ಅಂಶ ಏರಿಕೆಯಾಗಿ 61,842.11 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 61,305.95 ಅಂಶಗಳು ಹಾಗೂ ನಿಫ್ಟಿ 18,338.55 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,681.60 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ದಸರಾ ಪ್ರಯುಕ್ತ ಶುಕ್ರವಾರ ಷೇರುಪೇಟೆ ವಹಿವಾಟಿಗೆ ರಜೆ ಇತ್ತು.

ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 85.77 ಡಾಲರ್‌ಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.