ADVERTISEMENT

ಜನ-ಜಾನುವಾರಿಗೆ ಹನಿ ನೀರಿಗೆ ಹಾಹಾಕಾರ; ಜೀವಜಲಕ್ಕಾಗಿ ಪರಿತಪಿಸುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 12 ಮೇ 2019, 19:45 IST
Last Updated 12 ಮೇ 2019, 19:45 IST
ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ನೀರಿಗಾಗಿ ಟ್ಯಾಂಕರ್ ಗೆ ಮುಗಿ ಬಿದ್ದಿರುವ ಜನತೆ
ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆ ಗ್ರಾಮದಲ್ಲಿ ನೀರಿಗಾಗಿ ಟ್ಯಾಂಕರ್ ಗೆ ಮುಗಿ ಬಿದ್ದಿರುವ ಜನತೆ   

ಕೊಟ್ಟೂರು: ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹನಿ ನೀರಿಗಾಗಿ ಪರದಾಟ ನಡೆಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಸತತ ಬರದ ಹೊಡೆತಕ್ಕೆ ತಾಲ್ಲೂಕಿನಾದ್ಯಂತ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಜನ–ಜಾನುವಾರಿಗೆ ನೀರು ಸಿಗುತ್ತಿಲ್ಲ. ಅನೇಕ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದ್ದು, ಅದೇ ನೀರು ಗತಿಯಾಗಿದೆ.

ಟ್ಯಾಂಕರ್‌ ನೀರು ಪಡೆಯುವುದಕ್ಕಾಗಿಯೇ ಪ್ರತಿ ಮನೆಯಲ್ಲಿ ಇಬ್ಬರು ಮೂವರು ಮೀಸಲಾಗಿದ್ದಾರೆ. ಗಂಡು ಮಕ್ಕಳು ನಿತ್ಯದ ಕಾಯಕಕ್ಕೆ ಹೋದರೆ, ಮನೆಯ ಹೆಣ್ಣು ಮಕ್ಕಳು ಕೊಡಗಳನ್ನು ಹಿಡಿದುಕೊಂಡು ಟ್ಯಾಂಕರ್‌ ನೀರು ಪಡೆಯಲು ಸಾಲಿನಲ್ಲಿ ತಡಹೊತ್ತು ನಿಲ್ಲುತ್ತಿದ್ದಾರೆ. ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಇದು ಅಧಿಕಾರಿಗಳ ತಲೆನೋವು ಹೆಚ್ಚಿಸಿದೆ.

ADVERTISEMENT

ತಾಲ್ಲೂಕಿನ ದೂಪದಹಳ್ಳಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. 2,500 ಜನಸಂಖ್ಯೆ ಇರುವ ಗ್ರಾಮಕ್ಕೆ ಮೂರು ಕೊಳವೆ ಬಾವಿಗಳಲ್ಲಿ ಇರುವ ಅಲ್ಪ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜೀವ–ಜಲಕ್ಕಾಗಿ ಗ್ರಾಮಸ್ಥರು ಇದೇ ರೀತಿ ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಕಾಳಾಪುರ ಗ್ರಾಮದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೆನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿದೆ. ಪೈಪ್‌ಲೈನ್‌ ಒಡೆದು ನೀರು ಪೋಲಾಗುತ್ತಿದ್ದರೂ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಇದರಿಂದ ನಿತ್ಯ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ವಿಳ್ಯೆದೆಲೆ ಉತ್ಪನ್ನಕ್ಕೆ ಹೆಸರಾದ ತಾಲ್ಲೂಕಿನ ಶಿರಬಿ ಗ್ರಾಮದಲ್ಲಿ ಜೀವಜಲಕ್ಕಾಗಿ ಜನರು ದಿನವೂ ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ನಲ್ಲಿಗಳ ಮುಂದೆ ಬಿಂದಿಗೆಗಳ ಜಾತ್ರೆಯೇ ಕಂಡು ಬರುತ್ತಿದೆ. ಮನೆ ಕೆಲಸವನ್ನು ಬದಿಗೊತ್ತಿ ನೀರು ತರುವುದೇ ಗೃಹಿಣಿಯರ ನಿತ್ಯದ ಕಾಯಕವಾಗಿದೆ. ಇದರ ಗೊಡವೆ ಬೇಡವೆಂದು ಕೆಲವರು ಸಮೀಪದ ತೋಟಗಳಿಂದ ಎತ್ತಿನಗಾಡಿ, ಬೈಸಿಕಲ್‍ಗಳಲ್ಲಿ ನೀರು ತರುತ್ತಿದ್ದಾರೆ.

‘ತಾಲ್ಲೂಕಿನ ನಿಂಬಳಗೆರೆ, ಕಾಳಾಪುರ, ಹನುಮನಹಳ್ಳಿ ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಮೂರು ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ಸಮಸ್ಯೆ ಸುಧಾರಿಸಿದೆ. ದೂಪದಹಳ್ಳಿ ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆ ಇಲ್ಲ. ಗ್ರಾಮದ ಹೊರವಲಯದ ರಸ್ತೆ ಬದಿ ಮೂರು ನಲ್ಲಿಗಳಿವೆ. ಅಲ್ಲಿಂದ ತಳ್ಳು ಗಾಡಿಗಳ ಮೂಲಕ ಗ್ರಾಮಕ್ಕೆ ನೀರು ಸಾಗಿಸುವುದರಿಂದ ನೋಡುಗರಿಗೆ ಸಮಸ್ಯೆಯ ತೀವ್ರತೆ ಕಾಣಿಸುತ್ತಿದೆ’ ಎನ್ನುತ್ತಾರೆ ತಹಶೀಲ್ದಾರ್ ಅನಿಲ್ ಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.