ADVERTISEMENT

ಮೊಟ್ಟೆ ತಿಂದು ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ: ಗೃಹಸಚಿವರ ರಾಜೀನಾಮೆಗೆ ಒತ್ತಾಯ

ಆ.26ರಂದು ಕೊಡಗು ಚಲೋ ಹೋರಾಟಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 13:14 IST
Last Updated 19 ಆಗಸ್ಟ್ 2022, 13:14 IST
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗು ಜಿಲ್ಲೆಯಲ್ಲಿ ಮೊಟ್ಟೆ ಎಸೆದ ಕ್ರಮ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗು ಜಿಲ್ಲೆಯಲ್ಲಿ ಮೊಟ್ಟೆ ಎಸೆದ ಕ್ರಮ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗು ಜಿಲ್ಲೆಯಲ್ಲಿ ಮೊಟ್ಟೆ ಎಸೆದ ಕ್ರಮ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮೊಟ್ಟೆ ತಿಂದು ಪ್ರತಿಭಟನೆ ನಡೆಸಿದರು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ಸೇರಿದ ಮುಖಂಡರು ಬಿಜೆಪಿ ಮುಖಂಡ ಅಮಿತ್ ಶಾ ಭಾವಚಿತ್ರಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಎಲ್ಲರೂ ಮೊಟ್ಟೆ ಸೇವನೆ ಮಾಡಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕೊಡಲು ಜಿಲ್ಲೆಯಲ್ಲಿ ನೆರೆ ಹಾವಳಿ, ಪರಿಹಾರ ಕ್ರಮಗಳ ಪರಿಶೀಲನೆಗೆ ತೆರಳಿದ್ದ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸದಸ್ಯರು ಮೊಟ್ಟೆ ಎಸೆದು ಹೇಡಿತನ ಪ್ರದರ್ಶನ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರಿಗೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ತೆರಳಿದ್ದಾಗ ಪ್ರತಿಭಟನೆ ನೆಪದಲ್ಲಿ ನೀಚತನ ಪ್ರದರ್ಶನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೊಟ್ಟೆ ಎಸೆದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ವಿಪಕ್ಷ ನಾಯಕರು ಬಂದಾಗ ಮಡಿಕೇರಿ ಪೊಲೀಸರು ಸೂಕ್ತ ಭದ್ರತೆ ನೀಡಬೇಕಾಗಿತ್ತು. ಗುಪ್ತಚರ ಇಲಾಖೆಯ ಮಾಹಿತಿ ಇದ್ದರೂ ಅದನ್ನು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಬಿಜೆಪಿ ಮುಖಂಡರ ಅಣತಿಯಂತೆ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡ ಎಂ.ಎಸ್.ಆತ್ಮಾನಂದ, ಗಣಿಗ ರವಿಕುಮಾರ್, ಎಂ.ಎಸ್. ಚಿದಂಬರ್, ಹಾಲಹಳ್ಳಿ ಅಶೋಕ್, ಅಮರಾವತಿ ಚಂದ್ರಶೇಖರ್‌, ಸಿ.ಎಂ. ದ್ಯಾವಪ್ಪ, ಬಿ.ಸಿ.ಶಿವಾನಂದ ಇದ್ದರು.

ಆ.26 ರಂದು ಕೊಡಗು ಚಲೋ: ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ‘ಬಿಜೆಪಿ ಕುಮ್ಮಕ್ಕಿನಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ದಾಳಿ ನಡೆದಿದೆ, ಇದನ್ನು ವಿರೋಧಿಸಿ ಆ.26 ರಂದು ಕೊಡಗು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ರೀತಿ ಸಣ್ಣತನದಿಂದ ನಡೆದುಕೊಳ್ಳುವುದು ಸರಿಯಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಸಂಪೂರ್ಣವಾಗಿ ವಿಫಲವಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರದ ವೈಫಲ್ಯವನ್ನು ತೆರೆದಿಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು, ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಮೊಟ್ಟೆ ದಾಳಿಯಂತಹ ಕೆಲಸ ಮಾಡಿದೆ’ ಎಂದು ಆರೋಪಿಸಿದರು.

‘ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾದ ಗೃಹ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಉಪಾಧ್ಯಕ್ಷ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಸಿದ್ದರಾಮೇಗೌಡ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.